ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಕೃಷಿ ಸಾಲಮನ್ನಾಕ್ಕೆ ಆಗ್ರಹ

Last Updated 4 ಜುಲೈ 2017, 7:11 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ಕಬಿನಿ ಜಲಾಶಯ ದಿಂದ ನದಿಗೆ ಬಿಟ್ಟಿರುವ ನೀರನ್ನು ನಿಲ್ಲಿಸುವಂತೆ ಹಾಗೂ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸೋಮವಾರ ಮಿನಿವಿಧಾನ ಸೌಧದ ಮುಂಭಾಗ ಕಬ್ಬು ಬೆಳೆಗಾರರ ಸಂಘ ಮತ್ತು ತಾಲ್ಲೂಕು ರೈತ ಸಂಘಟನೆ ಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಜಲಾಶಯ ಸಂಪೂರ್ಣ ತುಂಬದಿದ್ದರೂ ಐದಾರು ದಿನಗಳಿಂದ ನೀರನ್ನು ನದಿಗೆ ಬಿಡುವ ಮೂಲಕ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕೆಲವು ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಅದನ್ನು ಮರೆತು ಸಚಿವ ವೆಂಕಯ್ಯ ನಾಯ್ಡು ಕೃಷಿ ಸಾಲ ಮನ್ನಾ ಮಾಡು ವುದು ಫ್ಯಾಷನ್‌ ಎಂದು ಹೇಳಿ ರೈತರನ್ನು ಅವಮಾನಿಸಿದ್ದಾರೆ ಎಂದು ಹರಿಹಾಯ್ದರು.

ಪ್ರಧಾನಮಂತ್ರಿ  ಫಸಲ್‌ ಬಿಮಾ ಯೋಜನೆ ಪರಿಷ್ಕರಿಸಬೇಕು. ಕಬ್ಬು , ಅಡಿಕೆ, ರೇಷ್ಮೆ ಹಾಗೂ ತಂಬಾಕು ಬೆಳೆಗಳಿಗೂ ಬೆಳೆ ವಿಮೆ ಕಲ್ಪಿಸಬೇಕು ಹಾಗೂ ಎಲ್ಲ ಪ್ರದೇಶದ ಬೆಳೆಗಳನ್ನೂ  ವಿಮೆ ವ್ಯಾಪ್ತಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮದ ಮೇಲೆ ನಿಯಂತ್ರಣ ಹೇರುವುದು ಸರ್ಕಾರಕ್ಕೆ ಶೋಭೆ ತರುವಂತದಲ್ಲ. ಇಬ್ಬರು ಪತ್ರಕರ್ತರಿಗೆ ಶಿಕ್ಷೆ ವಿಧಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜೊತೆಗೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಎಂ.ನಂಜುಂಡಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ
ತಿ.ನರಸೀಪುರ: ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಸೇರಿದ ರೈತರು ನಂಜನಗೂಡು ರಸ್ತೆಯ ಮಾರ್ಗವಾಗಿ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ನಡೆಸಿ, ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಮಹಾರಾಷ್ಟ್ರ ಹಾಗೂ ಪಂಜಾಬ್‌ ಸರ್ಕಾರಗಳು ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ₹1.50 ಲಕ್ಷದಿಂದ ₹2 ಲಕ್ಷವರೆಗೂ ಸಾಲ ಮನ್ನಾ ಮಾಡಿವೆ. ನಮ್ಮ ಸರ್ಕಾರ ಷರತ್ತುಗಳನ್ನು ವಿಧಿಸಿ ಕೇವಲ ₹50 ಸಾವಿರ ಮನ್ನಾ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಪುನರ್‌ ಪರಿಶೀಲಿಸಿ  ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮಾತನಾಡಿ,  ಅಚ್ಚುಕಟ್ಟು ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ತುಂಬಿಸಿ ನಾಲೆಗಳ ಮೂಲಕ ನೀರು ಹರಿಸದೆ ಕೆಆರ್ಎಸ್, ಕಬಿನಿ ಜಲಾಶಯಗಳು ಭರ್ತಿಯಾಗುವ ಮುನ್ನವೇ ನದಿ ಮೂಲಕ ತಮಿಳು ನಾಡಿಗೆ ನೀರು ಬಿಡುತ್ತಿರುವುದನ್ನು ಸಂಘಟನೆ ಖಂಡಿಸುತ್ತದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಬನ್ನೂರು ನಾರಾಯಣ್‌ ಮಾತನಾಡಿದರು. ರೈತ ಮುಖಂಡರಾದ ಪರಶಿವ ಮೂರ್ತಿ, ಬಸಪ್ಪ ಪಟೇಲ್‌, ಪರಮೇಶ್, ಪ್ರಸಾದ್, ಪುಟ್ಟರಾಜು, ಕೆ. ಜಿ. ಗುರುಸ್ವಾಮಿ, ಸುರೇಶ್, ಕುಮಾರ್, ಸಿದ್ದರಾಜು, ಮಹಾದೇವ, ಶಿವಮೂರ್ತಿ, ಸ್ವಾಮಿ, ಶಾಂತರಾಜು ಇದ್ದರು.

ನಾಲೆಗೆ ನೀರು ಹರಿಸಿ
ನಂಜನಗೂಡು: ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸೋಮವಾರ ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಮುಖಂಡ ಕಪಿಲೇಶ್ ಮಾತನಾಡಿ, ಎರಡು ವರ್ಷ ಸತತ ಬರಗಾಲದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ರೈತರ ಕಷ್ಟವನ್ನು ಅರಿತು ಅವರು ಸಹಕಾರ ಸಂಘಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ಭಾಗದ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ನಾಲೆಗಳಿಗೆ ನೀರು ಹರಿಸಬೇಕು, ಸರ್ಕಾರ ಕಬ್ಬು ಖರೀದಿ ಮಂಡಳಿ ಸಭೆ ಕರೆದು ಕಬ್ಬಿಗೆ ಎಸ್.ಎ.ಪಿ. ಧರ ನಿಗದಿ ಮಾಡಬೇಕು, ತಹಶೀಲ್ದಾರ್ ಕಚೇರಿಯಲ್ಲಿ ರೈತರಿಗೆ ಅಗತ್ಯ ದಾಖಲೆಗಳು ಸುಲಭವಾಗಿ ದೊರೆಯುವಂತೆ ಕ್ರಮಕೈಗೊಳ್ಳಬೇಕು ಹಾಗೂ ಸದನ ಸಮಿತಿ ರಾಜ್ಯದ ಇಬ್ಬರು ಪತ್ರಕರ್ತರ ಮೇಲೆ ವಿಧಿಸಿರುವ ಶಿಕ್ಷೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹಾಡ್ಯ ರವಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿಂಧುವಳ್ಳಿ ಬಸವಣ್ಣ, ಸೋಮಶೇಖರ್, ಗಿರೀಶ್, ಸಿದ್ದಲಿಂಗಪ್ಪ, ಮಂಜುನಾಥ್, ಮಹದೇವಪ್ಪ, ರಾಜಣ್ಣ, ಸಂಗಮೇಶ್, ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT