ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ಗೂ ಮೀರಿದ ಸರ್ಚ್‌ ಎಂಜಿನ್‌ಗಳು

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ನಮಗೆ ನಿರ್ದಿಷ್ಟ ಜಾಲತಾಣದ ವೆಬ್‌ ವಿಳಾಸ ಗೊತ್ತಿದ್ದರೂ (ವೆಬ್‌ ಲಿಂಕ್‌) ಗೂಗಲ್‌ ಸರ್ಚ್‌ಎಂಜಿನ್‌ ತೆರೆದು ಅದರಲ್ಲಿ ವೆಬ್‌ಲಿಂಕ್‌ ಹಾಕಿ ಹುಡುಕುತ್ತೇವೆ. ಅಷ್ಟರ ಮಟ್ಟಿಗೆ ಗೂಗಲ್ ಜನಪ್ರಿಯವಾಗಿದೆ. ಆದರೆ ಗೂಗಲ್‌ನಲ್ಲೂ ಸಿಗದ ಕೆಲವು ನಿರ್ದಿಷ್ಟ ಮಾಹಿತಿ ನೀಡುವ ಇತರ ಕೆಲವು ಸರ್ಚ್‌ ಎಂಜಿನ್‌ಗಳೂ ಈಗ ಲಭ್ಯವಿವೆ. ಮಾಹಿತಿ ಶೋಧನೆಗೆ ಮತ್ತು ಅಂತರ್ಜಾಲ ಬಳಸಲು ಇವು ಹೆಚ್ಚು ಉಪಯುಕ್ತವಾಗಿವೆ. ಅಂತಹ ಕೆಲವು ಉಪಯುಕ್ತ ಸರ್ಚ್‌ ಎಂಜಿನ್‌ಗಳ ಮಾಹಿತಿ ಇಲ್ಲಿದೆ.

ದಾಖಲಾಗುವುದಿಲ್ಲ
ಗೂಗಲ್ ಸರ್ಚ್‌ ಎಂಜಿನ್‌ನಲ್ಲಿ ಯಾವುದಾದರೂ ವಿಷಯದ ಕುರಿತು ಹುಡುಕಿದ ನಂತರ ಬೇರೆ ವೆಬ್‌ಸೈಟ್‌ಗಳನ್ನು ತೆರೆದರೆ ಹಿಂದೆ ನೀವು ಹುಡುಕಿದ್ದ ವಿಷಯದ ಕುರಿತ ಪ್ರಕಟಣೆಗಳೇ ಬರುತ್ತವೆ. ಸರ್ಚ್‌ ಎಂಜಿನ್‌ ಯುಸೇಜ್‌ ಅನ್ನು ಗೂಗಲ್‌ ಆಗಾಗ್ಗೆ ಮಾನಿಟರ್‌ ಮಾಡುವುದರಿಂದ ಈ ರೀತಿ ಆಗುತ್ತದೆ. ಈ ರೀತಿ ಟ್ರ್ಯಾಕಿಂಗ್‌ ಸಮಸ್ಯೆ ಇಲ್ಲದ ಹಲವು ಸರ್ಚ್‌ಎಂಜಿನ್‌ಗಳು ಈಗ ಲಭ್ಯ ಇವೆ. ಅಂತಹುಗಳಲ್ಲಿ ಕ್ವಾಂಟ್‌ (Qwant) ಸಹ ಒಂದು. ಇದರಲ್ಲಿ ನಾವು ಹುಡುಕುವ ಮಾಹಿತಿಯನ್ನು ಸರ್ಚ್‌ ಎಂಜಿನ್‌ ದಾಖಲಿಸಿಕೊಳ್ಳುವುದಿಲ್ಲ. ಇದರಲ್ಲಿ ಖಾತೆ ತೆರೆದು ಬುಕ್‌ ಮಾರ್ಕ್ಸ್‌ ಅನ್ನೂ ಸಹ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ಭಾಷೆ ಕಲಿಯಲು
ಈ ಪದವನ್ನು ಇಲ್ಲಿ ಬಳಸಬಹುದೇ? ಈ ವಾಕ್ಯವನ್ನು ಹೀಗೆ ಬರೆಯಬಹುದೇ? ಈ ಪದದ ಅರ್ಥವೇನು?... ಹೊಸ ಭಾಷೆ ಕಲಿಯುತ್ತಿರುವವರಿಗೆ ಕಾಡುವ ಸಾಮಾನ್ಯ ಸಂದೇಹಗಳಿವು.ಇಂತಹವರಿಗೆಂದೇ ಸೂಕ್ತ ಸಲಹೆಗಳನ್ನು ನೀಡಲು ಲಡ್‌ವಿಗ್‌(Ludwig) ಎಂಬ ಸರ್ಚ್‌ ಎಂಜಿನ್‌ ಲಭ್ಯ ಇದೆ. ಇದರ ಸರ್ಚ್‌ಬಾರ್‌ನಲ್ಲಿ ಯಾವುದಾದರೂ ಪದವನ್ನು ಟೈಪ್‌ ಮಾಡಿದರೆ ಸಾಕು, ಅದರ್ ಅರ್ಥ, ಬಳಸುವ ವಿಧಾನ, ಅದನ್ನು ಬಳಸಿ ಮಾಡಬಹುದಾದ ವಾಕ್ಯ ರಚನೆ ಇತ್ಯಾದಿ ವಿವರಗಳು ಸಿಗುತ್ತವೆ. ಈ ಸೌಲಭ್ಯ ಗೂಗಲ್‌ನ ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲೂ ಸಿಗುತ್ತದೆ. ಆದರೆ ಇದು ಅದಕ್ಕಿಂತ ಸ್ವಲ್ಪ ಭಿನ್ನ. ನೀವು ಹುಡುಕಿದ ಪದವನ್ನು ಪ್ರಮುಖ ಪತ್ರಿಕೆಗಳು, ಜಾಲತಾಣಗಳು ಯಾವ ಸಂದರ್ಭದಲ್ಲಿ ಹೇಗೆ ಬಳಸಿವೆ ಎಂಬ ವಿವರಗಳು ಇಲ್ಲಿ ಸಿಗುತ್ತವೆ.

ಎಲ್ಲರಿಗೂ ಮಾಹಿತಿ ಸಿಗುತ್ತದೆ
ಸ್ನೇಹಿತರೆಲ್ಲರೂ ಸೇರಿ ವಾರಂತ್ಯದಲ್ಲಿ ಎಲ್ಲಿಗಾದರೂ ವಿಹಾರ ಯಾತ್ರೆಗೆ ಹೋಗಬೇಕು ಎಂದು ನಿರ್ಧರಿಸಿದರೆ, ಯಾವ ಸ್ಥಳವಾದರೆ ಸೂಕ್ತ? ಅಲ್ಲಿ ಕನಿಷ್ಠ ಸೌಲಭ್ಯಗಳು ಇವೆಯೇ. ಅಲ್ಲಿಎದುರಾಗಲಿರುವ ಸಮಸ್ಯೆಗಳು ಏನು ಎನ್ನುವ ಪ್ರಶ್ನೆಗಳು ಕಾಡುವುದು ಸಹಜ. ಇದಕ್ಕಾಗಿ ಎಲ್ಲರೂ ಸೇರಿ ಅಂತರ್ಜಾಲದಲ್ಲಿ ಹುಡುಕಿದರೆ ಎಲ್ಲರ ಸಮಯ ವ್ಯರ್ಥವಾಗುತ್ತದೆ. ಇದರ ಬದಲು ಒಬ್ಬರೆ ಹುಡುಕಿದರೆ. ಆ ಮಾಹಿತಿ ಎಲ್ಲರಿಗೂ ನೋಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ. ಇದು ಸರ್ಚ್‌ ಟೀಮ್‌(Search Team) ಸರ್ಚ್‌ಎಂಜಿನ್‌ನಲ್ಲಿ ಸಾಧ್ಯವಾಗುತ್ತದೆ. ಇದರಲ್ಲಿ ಖಾತೆ ತೆರೆದು, ಸಮಾಚಾರ ಹುಡುಕುವವರ ವಿವರಗಳನ್ನು ದಾಖಲಿಸಬೇಕು. ಆಗ ಗುಂಪಿನ ಒಬ್ಬ ಸದಸ್ಯರು ಮಾಹಿತಿ ಹುಡುಕಿದರೂ ಉಳಿದವರೆಲ್ಲರಿಗೂ ಆ ಮಾಹಿತಿ ಹಂಚಿಕೆ ಆಗುತ್ತದೆ.

ಟ್ಯಾಗ್ಸ್‌ ಪ್ರಕಾರ
ಸರ್ಚ್‌ ಎಂಜಿನ್‌ಗಳಲ್ಲಿ ನಾವು ಹುಡುಕುವ ಮಾಹಿತಿ ಟ್ಯಾಗ್ಸ್‌ (ಆ ವಿಷಯದ ಮಾಹಿತಿಗಾಗಿ ಬರೆದಿರುವ ಸಂಕ್ಷಿಪ್ತ ಪದಗಳ ಆಧಾರ) ಪ್ರಕಾರ ಸಿಗುತ್ತದೆ. ಉದಾಹರಣೆಗೆ ನಾವು 'ಪ್ರಜಾವಾಣಿ' ಎಂದು ಟೈಪ್ ಮಾಡಿದರೆ ಇದಕ್ಕೆ ಅನುಗುಣವಾಗಿ ಇರುವ ವೆಬ್‌ಸೈಟ್‌, ವಿಡಿಯೊ, ಚಿತ್ರಗಳು ಇತ್ಯಾದಿ ವಿವರಗಳು ಸಿಗುತ್ತವೆ. ಆದರೆ ಇದರಲ್ಲಿ ಬಳಸಿರುವ ಟ್ಯಾಗ್ಸ್‌ ಗೋಚರಿಸುವುದಿಲ್ಲ. ಆದರೆ ಯಿಪ್ಪಿ(Yippy) ಸರ್ಚ್‌ ಎಂಜಿನ್‌ನಲ್ಲಿ ಟ್ಯಾಗ್‌ಗಳನ್ನು ನೋಡಬಹುದು. ಇದರಲ್ಲಿ ನೀವು ಹುಡುಕುವ ಮಾಹಿತಿಗೆ ಸಂಬಂಧಿಸಿದಂತೆ ಯಾವ ಟ್ಯಾಗ್‌ಗಳನ್ನು ಬಳಸಲಾಗಿದೆಯೋ ಅದರ ಪ್ರಕಾರವಾಗಿಯೇ ಸಿಗುತ್ತದೆ. ಹೀಗಾಗಿ ಮಾಹಿತಿ ಬೇಗ ಸಿಗುತ್ತದೆ. ಮಾಹಿತಿಗೆ ಸಂಬಂಧಿಸಿದಂತೆ ವಿವಿಧ ಅಂತರ್ಜಾಲ ತಾಣಗಳ ವಿವರವೂ ಸಿಗುತ್ತದೆ. ಇದು ಎಲ್ಲ ವಯೋಮಾನದವರೂ  ಬಳಸಲು ಉಪಯುಕ್ತವಾದ ಮತ್ತು ಸುರಕ್ಷಿತವಾದ ಸರ್ಚ್‌ ಎಂಜಿನ್‌ವಾಗಿದೆ.

ವಿಡಿಯೊಗಳ ಖಜಾನೆ
ಯಾವುದಾದರೂ ಸಿನಿಮಾದ ಟ್ರೈಲರ್‌ ಅಥವಾ ವಿಡಿಯೊಗಳಿಗಾಗಿ ಗೂಗಲ್‌ನಲ್ಲಿ ಹುಡುಕಿದರೆ, ವಿಡಿಯೊ ಅಷ್ಟೇ ಅಲ್ಲದೆ ಆ ಸಿನಿಮಾಕ್ಕೆ ಸಂಬಂಧಿಸಿದ ಇತರ ಮಾಹಿತಿಯೂ ಸಿಗುತ್ತದೆ. ಜಸ್ಟ್‌ ವಾಚ್‌ನಲ್ಲಿ (Just watch) ಈ ಸಮಸ್ಯೆ ಇರುವುದಿಲ್ಲ. ಇದರಲ್ಲಿ ವಿಶ್ವದ ಪ್ರಮುಖ ವೆಬ್‌ ಚಾನೆಲ್ಸ್‌, ಆನ್‌ಲೈನ್‌ ವಿಡಿಯೊ ಸ್ಕ್ರೀಮಿಂಗ್‌, ವೆಬ್‌ಸೈಟ್‌ಗಳಲ್ಲಿರುವ ವಿಡಿಯೊ ವಿವರ ಇರುತ್ತದೆ. ಅವುಗಳನ್ನು ಆಯ್ಕೆ ಮಾಡಿಕೊಂಡು ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ವಿಡಿಯೊಗಳನ್ನು ಹುಡುಕಬಹುದು. ಇದರಲ್ಲಿ ಕೇವಲ ಸಿನಿಮಾ ವಿಡಿಯೋಗಳಷ್ಟೇ ಅಲ್ಲದೆ, ಪ್ರಮುಖ ಟಿವಿ ಕಾರ್ಯಕ್ರಮಗಳೂ ಸಿಗುತ್ತವೆ.

ನಾಸಾ ಸಮಾಚಾರಕ್ಕಾಗಿ
ವಾತಾವರಣದಲ್ಲಿ ಆಗುವ ಬದಲಾವಣೆ, ಹೊಸ ಗ್ರಹಗಳು, ಆಕಾಶಕಾಯಗಳು, ಜೀವರಾಶಿಯ ಕುರುಹು, ಇಂತಹ ಮಾಹಿತಿಯನ್ನು ನಾಸಾ ನೀಡುತ್ತದೆ. ಆದರೆ ನಾಸಾ ನೀಡುವ ಇಂತಹ ಉಪಯುಕ್ತ ಮಾಹಿತಿಗಾಗಿ ಗೂಗಲ್‌ ಅಥವಾ ಇತರೆ ಜಾಲತಾಣಗಳಲ್ಲಿ ಹುಡುಕುತ್ತೇವೆ. ಇನ್ನು ಮುಂದೆ ಹೀಗೆ ಮಾಡದೆ ನೇರವಾಗಿ ನಾಸಾದವರೇ ಅಭಿವೃದ್ಧಿಪಡಿಸಿರುವ ನಾಸಾ ಇಮೇಜಸ್‌ (Nasa imagaes)  ಸರ್ಚ್‌ ಎಂಜಿನ್‌ನಲ್ಲಿ ಹುಡುಕಬಹುದು. ಇದರಲ್ಲಿ ನಾಸಾದ ಕಾರ್ಯಕ್ರಮಗಳು, ಪ್ರಾಜೆಕ್ಟ್‌ಗಳು, ಹೊಸ ಚಿತ್ರಗಳು, ವಿಡಿಯೊಗಳು, ವಿಶೇಷ ಸುದ್ದಿಗಳು ಸಿಗುತ್ತವೆ. ಈಗಾಗಲೇ ಇದರಲ್ಲಿ 1,40,000 ಚಿತ್ರಗಳು, ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಶಬ್ದಗಳ ಡಬ್ಬಿ
ವೇಗವಾಗಿ ಓಡುತ್ತಿರುವ ರೈಲಿನ ಶಬ್ದ, ಕಾರ್‌ ಹಾರನ್ ಶಬ್ದ, ಆನೆ ಘೀಳಿಡುವುದು, ಸಿಂಹ ಗರ್ಜನೆಯನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಕೇಳಬಹುದು. ಈ ರೀತಿಯ ವಿವಿಧ ಬಗೆಯ ಶಬ್ದಗಳು  ಫೈಂಡ್‌ ಸೌಂಡ್ಸ್‌ (Find Sounds) ಸರ್ಚ್‌ ಎಂಜಿನ್‌ನಲ್ಲಿ  ಸಿಗುತ್ತವೆ. ನೀವು ಕೇಳಲು ಇಚ್ಛಿಸುವ ಶಬ್ದದ ಕುರಿತು ವಿವರಗಳನ್ನು ಇದರ ಸರ್ಚ್‌ ಎಂಜಿನ್‌ನಲ್ಲಿ ಟೈಪ್‌ ಮಾಡಿದರೆ ಸಾಕು, ರೆಸಲ್ಯೂಷನ್‌,  ಫಾರ್ಮೇಟ್‌ ಹೀಗೆ ವಿವಿಧ ಆಯ್ಕೆಗಳೊಂದಿಗೆ ಶಬ್ದ ಸಿಗುತ್ತದೆ.

**

ವೆಬ್‌ಸೈಟ್‌ ಅಭಿವೃದ್ಧಿಪಡಿಸುವವರಿಗಾಗಿ
ವೆಬ್‌ಸೈಟ್‌ ಡಿಸೈನರ್ಸ್‌ ಅಥವಾ ವೆಬ್‌ ಡೆವಲಪರ್ಸ್‌ಗಾಗಿ ನೆರವಾಗಲೆಂದೇ ಲೈಬ್ರರೀಸ್‌.ಐ.ಒ (Libraries.i.o) ಎಂಬ ವಿಶೇಷ ಜಾಲತಾಣ ಲಭ್ಯವಿದೆ.  ಇದರಲ್ಲಿ ವೆಬ್‌ಸೈಟ್‌ಗಳು ಮತ್ತು ಕಿರುತಂತ್ರಾಂಶ ಅಭಿವೃದ್ಧಿಪಡಿಸಲು ಬೇಕಾಗುವ ತಂತ್ರಜ್ಞಾನದ ಮಾಹಿತಿ ಸಿಗುತ್ತದೆ. ಅಲ್ಲದೆ, ಡೆವಲಪರ್ಸ್‌ಗೆ ಉಪಯೋಗವಾಗುವ ಲೈಬ್ರರಿ, ಮಾಡ್ಯುಲ್ಸ್‌, ಫ್ರೇಮ್‌ ವರ್ಕ್ಸ್‌ ಇರುತ್ತವೆ. ಅಲ್ಲದೆ 33 ಪ್ಯಾಕೇಜ್‌ಗಳನ್ನು ಅಳವಡಿಸಲಾಗಿದ್ದು ಇದರಲ್ಲಿ 22,85, 392 ಓಪನ್ ಸೋರ್ಸ್‌ ಲೈಬ್ರರಿಗಳು ಲಭ್ಯವಿವೆ. ವೆಬ್‌ಸೈಟ್‌ ಮತ್ತು ಕಿರುತಂತ್ರಾಂಶಗಳಿಗಾಗಿ ಪ್ರೋಗ್ರಾಮ್ಸ್‌ ಸೂತ್ರಗಳನ್ನು ಬರೆಯುವವರಿಗೆ Search codes ಎಂಬ ಸರ್ಚ್‌ ಎಂಜಿನ್‌ ಸಹ ಲಭ್ಯವಿದೆ. ಇದರಲ್ಲಿ 70 ಲಕ್ಷ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದ  ಮಾಹಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT