ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ರಮೇಶ್ ಡೇನಿಯಲ್, ಬೆಂಗಳೂರು
ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ ನಂತರ ನನ್ನ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ಬಂದ ಹಣಕ್ಕೆ ತೆರಿಗೆ ಕಟ್ಟಬೇಕಾಗುತ್ತದೆಯೇ
ಉತ್ತರ:
₹ 500–1000 ನೋಟುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಉದ್ದೇಶ ಕಪ್ಪು ಹಣ ನಿಯಂತ್ರಿಸಲು ಹಾಗೂ ಖೋಟಾ ನೋಟು ಚಲಾವಣೆಯಿಂದ ಹೊರಹಾಕಲು ಎನ್ನುವ ಮೂಲತತ್ವ ಹಲವರಿಗೆ ತಿಳಿದಿರಲಿಕ್ಕಿಲ್ಲ. ನಿಮ್ಮ ಪಿತ್ರಾರ್ಜಿತ ಆಸ್ತಿಗೂ, ನೋಟು ರದ್ದತಿಗೂ ಯಾವ ಸಂಬಂಧವಿರುವುದಿಲ್ಲ. ಪಿತ್ರಾರ್ಜಿತ ಆಸ್ತಿ ಕೃಷಿ ಜಮೀನಾದಲ್ಲಿ  ಕ್ಯಾಪಿಟಲ್‌ ಗೇನ್ ಸೆಕ್ಷನ್ 40 ಆಧಾರದ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿದೆ. ಭೂ ಪರಿವರ್ತನೆಯಾದಲ್ಲಿ (Converted to non Agriculture) ಕ್ಯಾಪಿಟನ್ ಗೇನ್ ಟ್ಯಾಕ್ಸ್ ಬರುತ್ತದೆ. ನೀವು ಈ ವಿಚಾರ ಮನಗಂಡು, ತೆರಿಗೆ ವಿಚಾರದಲ್ಲಿ ಭಯಪಡುವ ಅವಶ್ಯವಿಲ್ಲ. ಮಾರಾಟ ಮಾಡುವ ಸಂದರ್ಭದಲ್ಲಿ ಹಣವನ್ನು ಡಿಮ್ಯಾಂಡ್‌ ಡ್ರಾಫ್ಟ್‌–ಪೇ ಆರ್ಡರ್ (Bankers cheque) ಮುಖಾಂತರವೇ ಸ್ವೀಕರಿಸಿರಿ.

**

ಅರ್ಚನಾ, ಉಡುಪಿ
ನಾನು ಗೃಹಿಣಿ. ಇತ್ತೀಚೆಗೆ ಒಂದು ಚಿಕ್ಕ ನಿವೇಶನದಲ್ಲಿ ಮನೆ ಕಟ್ಟಿದ್ದೇವೆ. ಮನೆ ನನ್ನ ಹೆಸರಿನಲ್ಲಿದೆ. ಮನೆಯ ಕೆಳಭಾಗದಲ್ಲಿ ಒಂದು ಪುಟ್ಟ ಅಂಗಡಿ ಮಾಡಿ, ಬಾಡಿಗೆಗೆ ಕೊಟ್ಟಿದ್ದೇವೆ. ಅದರಿಂದ ಬರುವ ಆದಾಯ ನಮ್ಮ ಯಜಮಾನರ ಆದಾಯಕ್ಕೆ ಬರುವುದೇ. ಅದಕ್ಕಾಗಿ ಅವರು ತೆರಿಗೆ ಪಾವತಿಸಬೇಕೆ ಅಥವಾ ಇದನ್ನು ನನ್ನ ಆದಾಯವೆಂದು ಪರಿಗಣಿಸಿ ನಾನು ಐ.ಟಿ. ರಿಟರ್ನ್ ಫೈಲ್ ಮಾಡಬೇಕೇ?
ಉತ್ತರ:
ಈ ಪ್ರಶ್ನೋತ್ತರ ಅಂಕಣ ಜನಸಾಮಾನ್ಯರ ಹಣಕಾಸಿನ ಸಮಸ್ಯೆ ಬಗೆಹರಿಸಲೆಂದೇ ಪ್ರಜಾವಾಣಿ ಪ್ರಾರಂಭಿಸಿದೆ. ನಿಮ್ಮ ಅಭಿಮಾನಕ್ಕೆ ವಂದನೆಗಳು. ನಿವೇಶನ ಹಾಗೂ ಮನೆ ನಿಮ್ಮ ಹೆಸರಿನಲ್ಲಿ ಇರುವುದರಿಂದ, ಇಲ್ಲಿ ಯಾವುದೇ ಆದಾಯವಿದ್ದರೂ, ಅವುಗಳು ಕಾನೂನಿನಂತೆ ನಿಮಗೇ ಸೇರತಕ್ಕದ್ದಾಗಿದೆ. ನಿಮ್ಮ ಮನೆಯ ಕೆಳ ಭಾಗದಲ್ಲಿ ನಿರ್ಮಿಸಿದ ಅಂಗಡಿ ಬಾಡಿಗೆ ಎಷ್ಟು ಬಂದರೂ, ಆ ಆದಾಯ ನಿಮ್ಮ ಪತಿಯ ಆದಾಯಕ್ಕೆ ಎಂದಿಗೂ ಸೇರಿಸುವ ಅವಶ್ಯವಿಲ್ಲ ಹಾಗೂ ಅವರು ಈ ಮೊತ್ತಕ್ಕೆ ತೆರಿಗೆ ಕೊಡುವ ಅವಶ್ಯವೂ ಇಲ್ಲ. ನೀವು ಗೃಹಿಣಿಯಾಗಿದ್ದರಿಂದ ನಿಮಗೆ ಈ ರೀತಿ ಬರುವ ಬಾಡಿಗೆ ಹೊರತುಪಡಿಸಿ ಬೇರಾವ ಆದಾಯ ಇರಲಾರದು ಎಂದು ಭಾವಿಸುತ್ತೇನೆ.

ಇದೇ ವೇಳೆ ನೀವು ಪಡೆಯುವ ಬಾಡಿಗೆ ಹಣ ಹಾಗೂ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ, ವಾರ್ಷಿಕವಾಗಿ ₹ 2.50 ಲಕ್ಷ ದಾಟುವುದಾದಲ್ಲಿ (ಹಿರಿಯ ನಾಗರಿಕರಾದಲ್ಲಿ ವಾರ್ಷಿಕ ₹ 3 ಲಕ್ಷ) ಹಾಗೆ ಹೆಚ್ಚುವರಿ ಇರುವ ಆದಾಯಕ್ಕೆ ಶೇ 10 ಆದಾಯ ತೆರಿಗೆ ಕೊಡಬೇಕಾಗುತ್ತದೆ ಮತ್ತು ಐ.ಟಿ. ರಿಟರ್ನ್ ಸಲ್ಲಿಸಬೇಕಾಗುತ್ತದೆ. ಇಲ್ಲಿ ಕೂಡಾ ಹೆಚ್ಚುವರಿ ಮೊತ್ತವನ್ನು 5 ವರ್ಷಗಳ ತೆರಿಗೆಗೋಸ್ಕರ ಸಾದರಪಡಿಸಿದ (Tax Shield) ಬ್ಯಾಂಕ್ ಠೇವಣಿಯಲ್ಲಿ ಇರಿಸಿ (ಗರಿಷ್ಠ ಮೊತ್ತ ₹ 1.50ಲಕ್ಷ) ತೆರಿಗೆ ವಿನಾಯಿತಿ ಪಡೆ ಯಬಹುದು. ನಿಮ್ಮ ಪತ್ರ ಓದಿದಾಗ, ನನ್ನ ಅನಿಸಿಕೆ, ನೀವು ತೆರಿಗೆಗೆ ಒಳಗಾಗುವುದೂ ಇಲ್ಲ, ರಿಟರ್ನ್ ತುಂಬುವ ಅವಶ್ಯವೂ ಇಲ್ಲ . ತೆರಿಗೆ ಭಯದಿಂದ ಹೊರಬಂದು ನೆಮ್ಮದಿಯಿಂದ ಇರಿ.

ವಿಶೇಷ ಸೂಚನೆ: ಅಂಗಡಿ ಬಾಡಿಗೆ ಹಣದಲ್ಲಿ ಕನಿಷ್ಠ ಶೇ 50 ರಷ್ಟು 5 ವರ್ಷಗಳ ಆರ್.ಡಿ. ಮಾಡಿರಿ.

**

ಚಂದ್ರಶೇಖರ್ (ಹೆಸರು ಬದಲಾಯಿಸಿದೆ), ಬೆಂಗಳೂರು
ನನಗೆ ಕೆಂಪೇಗೌಡ ಲೇಔಟ್‌ನಲ್ಲಿ 60X40 ಬಿಡಿಎ ನಿವೇಶನ ಮಂಜೂರಾಗಿದೆ. ಅದಕ್ಕೆ ₹ 52 ಲಕ್ಷ ಕಟ್ಟಬೇಕಾಗಿದೆ. ಅದರ ಖರೀದಿ ಲಾಭದಾಯಕವಲ್ಲ ಎಂಬುದು ಗೆಳೆಯರ ಅಭಿಪ್ರಾಯ. ನಿಮ್ಮ ಅಭಿಪ್ರಾಯ ತಿಳಿಸಿರಿ. ಖರೀದಿಸುವುದಾದಲ್ಲಿ, ನನ್ನ ವೇತನದಲ್ಲಿ ಉಳಿತಾಯದೊಂದಿಗೆ ತಂದೆಯವರಿಂದ ಕೊಡುಗೆ ಹಾಗೂ ಸಹೋದರರಿಂದ ಸಾಲ ಪಡೆಯಬೇಕೆಂದಿರುವೆ. ಉಳಿದ 25–30 ಲಕ್ಷದಷ್ಟು ಬ್ಯಾಂಕ್ ಸಾಲ ಪಡೆಯುವ ಯೋಚನೆ ಇದೆ. ಬಿಡಿಎ ನಿವೇಶನ ಖರೀದಿಸಲು ಯಾವ ಬ್ಯಾಂಕ್ ಸಾಲ ಕೊಡುತ್ತದೆ. ಬಡ್ಡಿದರ ಎಷ್ಟು, ಸಾಲಕ್ಕೆ ಆದಾಯ ತೆರಿಗೆ ಇದೆಯೇ ತಿಳಿಸಿರಿ. ನಾನು ಸರ್ಕಾರಿ ನೌಕರ, ಸಂಬಳ ₹ 72,000, ಇನ್ನೂ 20 ವರ್ಷ ಸೇವಾವಧಿ ಇದೆ?

ಉತ್ತರ: ಸ್ಥಿರ ಆಸ್ತಿ ಹೂಡಿಕೆ ಒಂದು ದೀರ್ಘಾವಧಿ ಹೂಡಿಕೆ. ಬಿಡಿಎ ನಿವೇಶನದಲ್ಲಿ ಕಾಗದ ಪತ್ರಗಳು ಸ್ವಚ್ಛವಾಗಿರುತ್ತವೆ. ಅದರಲ್ಲೂ ನೀವು ಪ್ರಥಮ ಖರೀದಿದಾರ ಆಗಿರುವುದರಿಂದ, ಇಲ್ಲಿ ಕಾನೂನಿನ ವಿಚಾರದಲ್ಲಿ ಯಾರನ್ನೂ ವಿಚಾರಿಸುವ ಅವಶ್ಯವಿಲ್ಲ. ಬೆಂಗ ಳೂರಿನ ಯಾವುದೇ ಭಾಗ ದಲ್ಲಿ ಇದಕ್ಕೂ ಕಡಿಮೆ ಮೊತ್ತಕ್ಕೆ 60X40 ನಿವೇಶನ ಸಿಗಲಾರದು. ಒಂದು ವೇಳೆ ಸಿಕ್ಕಿದರೂ, ಅವುಗಳಲ್ಲಿ ಒಂದಲ್ಲಾ ಒಂದು ತೊಡಕು ಇದ್ದೇ ಇರುತ್ತದೆ. (No clear Title) ಎಲ್ಲಕ್ಕೂ ಮುಖ್ಯವಾಗಿ ಇನ್ನೊಮ್ಮೆ ಬಿಡಿಎ ನಿವೇಶನ ದೊರಕಬಹುದು ಎನ್ನುವುದು ಕೂಡಾ ಕಷ್ಟದ ವಿಚಾರ.

ನೀವು ಸಿಕ್ಕಿರುವ ಅವಕಾಶ ಕಳೆದುಕೊಳ್ಳಬಾರದು ಎನ್ನು ವುದು ನನ್ನ ವೈಯಕ್ತಿಕ ವಿಚಾರ. ನಿಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಹಾಗೂ ನಿಮ್ಮ ಪತ್ನಿಯನ್ನು ಕೇಳಿ ವಿಚಾರ ಮುಂದುವರೆಸಿರಿ. ಹೆಚ್ಚಿನ ಬ್ಯಾಂಕುಗಳು ಸಾಲ ಕೊಡುತ್ತದೆ. ಆದರೆ, ಅಲ್ಲಿ ಮನೆ ಕಟ್ಟಲೇಬೇಕು ಎನ್ನುವ ಷರತ್ತು ಹಾಕುತ್ತಾರೆ. ಆದರೆ ಕೆನರಾ ಬ್ಯಾಂಕ್ ಬಿಡಿಎ ನಿವೇಶನ ಕೊಳ್ಳುವವರಿಗೆ ಸಹಾಯವಾಗಲೆಂದು ಈ ತೊಡಕುಗಳಿಗೆ ದೀರ್ಘಾವಧಿ ಸಾಲ ನೀಡುತ್ತದೆ. ಬಡ್ಡಿದರ ಶೇ 9.25 ಇದ್ದು, ಈ ಸಾಲ ಗ್ರಾಹಕ ಮಿತ್ರವಾಗಿದೆ. ಈ ಸಾಲ ನಿವೇಶನ ಸಾಲವಾಗಿದ್ದು, ಗೃಹಸಾಲಗಳಿಗೆ ಸಿಗುವ ತೆರಿಗೆ ವಿನಾಯಿತಿ ಇರುವುದಿಲ್ಲ.

**

ಹೆಸರು ಬೇಡ, ಬೆಂಗಳೂರು
ಐ.ಟಿ. ಕಂಪನಿಯಲ್ಲಿ ಕೆಲಸ. ಸಂಬಳ ₹ 45,560, ಬಾಡಿಗೆ ₹ 12,000, ಮನೆ ಖರ್ಚು ₹ 18,000, ವಾರ್ಷಿಕ ಎಲ್.ಐ.ಸಿ. ಪ್ರೀಮಿಯಂ ಹಣ ₹ 28,000, ಉತ್ತಮ ಹೂಡಿಕೆ, ವರಮಾನ ಹಾಗೂ ತೆರಿಗೆ ಉಳಿ ತಾಯಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿರಿ?
ಉತ್ತರ:
ನೀವು ಆದಾಯ ತೆರಿಗೆಗೆ ಒಳಗಾಗುವುದರಿಂದ ಸೆಕ್ಷನ್ 80ಸಿ, ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸಲೇಬೇಕು. ಹೀಗೆ ಉಳಿತಾಯ ಮಾಡದಿರುವಲ್ಲಿ ನೀವು ಬಹಳಷ್ಟು ಆದಾಯ ತೆರಿಗೆ ಪ್ರತೀ ವರ್ಷ ಕೊಡಬೇಕಾಗುತ್ತದೆ. ಸೆಕ್ಷನ್ 80ಸಿ ಆಧಾರದ ಮೇಲೆ ಉಳಿತಾಯ ಮಾಡುವುದರಿಂದ ಕಡ್ಡಾಯವಾಗಿ ಉಳಿತಾಯಕ್ಕೆ ನಾಂದಿಯಾಗುತ್ತದೆ. ಜೊತೆಗೆ ತೆರಿಗೆಯ ಸಿಂಹಪಾಲು ಕಾನೂನಿನಂತೆ ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ನಿಮ್ಮ ಸಂಬಳದಲ್ಲಿ ಮನೆ ಬಾಡಿಗೆ, ಮನೆ ಖರ್ಚು ಹಾಗೂ ಎಲ್.ಐ.ಸಿ. ಪ್ರೀಮಿಯಂ ಎಲ್ಲವನ್ನೂ ಕಳೆದಾಗ ಗರಿಷ್ಠ ₹ 13,000 ನೀವು ತಿಂಗಳಿಗೆ ಉಳಿಸಬಹುದು.

ನೀವು ಕಟ್ಟಿರುವ ವಿಮಾ ಕಂತು ಹಾಗೂ ಗರಿಷ್ಠ ಉಳಿಸಬೇಕಾದ (ಸೆಕ್ಷನ್ 80ಸಿ ಅಲ್ಲ) ಮೊತ್ತ, ಇವೆರಡರ ಅಂತರ ₹ 1.22 ಲಕ್ಷವಿದ್ದು, ಈ ಹಣವನ್ನು ಪಿ.ಪಿ.ಎಫ್.ನಲ್ಲಿ ವಾರ್ಷಿಕವಾಗಿ ತುಂಬಿ, ತೆರಿಗೆ ಕಡಿಮೆ ಮಾಡಿಕೊಳ್ಳಿ. ಪಿ.ಪಿ.ಎಫ್. ದೀರ್ಘಾವಧಿ ಹೂಡಿಕೆ ಯಾಗಿದ್ದು, ಅಲ್ಲಿ  ಬರುವ ಬಡ್ಡಿಗೆ ಕೂಡಾ ಸೆಕ್ಷನ್ 10 (11) ಆಧಾರದ ಮೇಲೆ ತೆರಿಗೆ ಸಂಪೂರ್ಣ ವಿನಾಯಿತಿ ಇದೆ. ಇದೊಂದು 15 ವರ್ಷಗಳ ಯೋಜನೆ ಹಾಗೂ ಪ್ರಾರಂಭಿಸಿದ 7 ವರ್ಷಗಳ ನಂತರ, ಹಿಂದೆ ಕಟ್ಟಿದ ಹಣದ ಶೇ 50 ರಷ್ಟು  ವಾಪಸ್‌ ಪಡೆಯುವ ಸೌಲತ್ತು ಇದೆ.

**

ಆರ್. ಪ್ರಸನ್ನಕುಮಾರ್, ಗುಬ್ಬಿ
ನಾನು ನಿವೃತ್ತ ನೌಕರ. 2015–16ನೇ ಹಣಕಾಸು ವರ್ಷದಲ್ಲಿ ನನ್ನ ಆದಾಯ ಹಾಗೂ ಉಳಿತಾಯ ಖಾತೆಗೆ ಬಂದ ಬಡ್ಡಿ ಸೇರಿ ₹ 30,4863 ಬಂದಿದೆ. ಸಹಕಾರಿ ಬ್ಯಾಂಕಿನಲ್ಲಿ ನನ್ನ ಹಾಗೂ ನನ್ನ ಹೆಂಡತಿ ಹೆಸರಿನಲ್ಲಿ ₹ 8 ಲಕ್ಷ ಠೇವಣಿ ಇರಿಸಿ, 15ಎಚ್ ನಮೂನೆ ಫಾರಂ ಕೊಟ್ಟಿದ್ದೇನೆ. ಅಂಚೆ ಕಚೇರಿಯಲ್ಲಿ ₹ 3 ಲಕ್ಷ, ಠೇವಣಿ ಇರಿಸಿ ಮಾಸಿಕ ₹ 2000 ಪಡೆಯುತ್ತಿದ್ದೇನೆ. ನನ್ನ ಹಾಗೂ ನನ್ನ ಹೆಂಡತಿ ಹೆಸರಿನಲ್ಲಿ ಕ್ರಮವಾಗಿ ₹ 1000 ಹಾಗೂ ₹ 2000 ಆರ್.ಡಿ. ಇದೆ. ನಾವು ಆದಾಯ ತೆರಿಗೆ ಸಲ್ಲಿಸಬೇಕೇ, ರಿಟರ್ನ್ ತುಂಬಬೇಕೆ?.

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ ದಾಟಿರುವುದರಿಂದ ಆದಾಯ ತೆರಿಗೆಗೆ ಒಳಗಾಗುತ್ತೀರಿ. ನೀವು ಹಿರಿಯ ನಾಗರಿಕ ರಾದ್ದರಿಂದ ₹ 3 ಲಕ್ಷಗಳ ತನಕ ಆದಾಯ ತೆರಿಗೆ ಇರುವುದಿಲ್ಲ. ನಿಮ್ಮ ಪಿಂಚಣಿ ಅಥವಾ ಇತರೆ ಆದಾಯ, ಬ್ಯಾಂಕ್ ಠೇವಣಿ ಬಡ್ಡಿ ಲೆಕ್ಕ ಹಾಕಿ, ₹ 3 ಲಕ್ಷ ದಾಟಿದ ಮೊತ್ತಕ್ಕೆ ಶೇ 10 ಆದಾಯ ತೆರಿಗೆ ಬರುತ್ತದೆ ಹಾಗೂ ತೆರಿಗೆಯ ಮೇಲೆ ಶೇ 3 ಎಜುಕೇಷನ್ ಸೆಸ್ ಕೊಡಬೇಕಾಗುತ್ತದೆ. ಸೆಕ್ಷನ್ 80ಟಿಟಿಎ ಆಧಾರದ ಮೇಲೆ ಉಳಿತಾಯ ಖಾತೆಯಲ್ಲಿ ಬರುವ ಗರಿಷ್ಠ ಮೊತ್ತ ₹ 10,000ಕ್ಕೆ ತೆರಿಗೆ ಇರುವುದಿಲ್ಲ.

**

ಹೆಸರು ಬೇಡ: ವೀರಾಜಪೇಟೆ, ಕೊಡಗು
ನಮಗೆ ಮೂರು ಎಕರೆ ಕಾಫಿತೋಟ, 5 ಎಕರೆ ಕೃಷಿ ಭೂಮಿ ಇದೆ. ಕಳೆದ 5 ವರ್ಷಗಳಿಂದ ಬಂದ ಕೃಷಿ ಆದಾಯ ಸುಮಾರು ₹ 28 ಲಕ್ಷ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದೇನೆ. ನಮ್ಮದು ಅವಿಭಕ್ತ ಕುಟುಂಬ. ಮೈಸೂರಿನಲ್ಲಿ ಒಂದು ನಿವೇಶನ ಕೊಳ್ಳಲು ಯೋಚನೆ ಇದ್ದು, ಈ ಬ್ಯಾಂಕ್ ಠೇವಣಿ ನಿವೇಶನ ಖರೀದಿಸಲು ಉಪಯೋಗಿಸಿದರೆ ತೆರಿಗೆ ಬರುತ್ತದೆಯೇ?
ಉತ್ತರ:
ಆಸ್ತಿ ಕೊಳ್ಳುವಾಗ ಆದಾಯ ತೆರಿಗೆ ಪ್ರಶ್ನೆ ಉದ್ಭವಿಸುವುದಿಲ್ಲ. ಈ ವ್ಯವಹಾರದಲ್ಲಿ ನಿಮಗೆ ಹಣ ಬರುವುದಿಲ್ಲ ಹಾಗೂ ನೀವೇ ಹಣ ಕೊಟ್ಟು ನಿವೇಶನ ಕೊಳ್ಳುವಾಗ, ಇದು ಆದಾಯವೆಂದು ಪರಿಗಣಿಸಲಾಗುವುದಿಲ್ಲ. ಇದೇ ವೇಳೆ ನಿಮಗೆ ನಿವೇಶನ ಕೊಡುವವರು ಅವರಿಗೆ ಬಂದಿರುವ ಲಾಭಕ್ಕೆ ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ಅದೇ ರೀತಿ ನೀವು ಇಂದು ₹ 28 ಲಕ್ಷಕ್ಕೆ ಕೊಂಡ ಆಸ್ತಿ ಮುಂದೆ ಮಾರಾಟ ಮಾಡುವ ಸಂದರ್ಭದಲ್ಲಿ ₹ 28 ಲಕ್ಷ ದಾಟಿದ ಮೊತ್ತಕ್ಕೆ ಶೇ 20 ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಯಾವ ತೆರಿಗೆ ಬರುವುದಿಲ್ಲ. ಧೈರ್ಯ ಮಾಡಿ ಮೈಸೂರಿನಲ್ಲಿ ತಕ್ಷಣ ನಿವೇಶನ ಕೊಂಡುಕೊಳ್ಳಿ.

ವಿಶೇಷ ಸೂಚನೆ: ನಿಮಗೆ 5 ಎಕರೆ ಕಾಫಿ ತೋಟ ಹಾಗೂ 5 ಎಕರೆ ಕೃಷಿ ಜಮೀನು ಇದ್ದು, 5 ವರ್ಷಗಳಿಂದ ಕೃಷಿ ಆಧಾರಿತ ಆದಾಯ ₹ 28 ಲಕ್ಷದಿಂದ ನಿವೇಶನ ಕೊಳ್ಳುವಾಗ ಯಾವುದೇ ಬಗೆಯಲ್ಲಿ ಭಯ ಪಡುವ ಅವಶ್ಯವಿಲ್ಲ.

**

ಜ.ಬಿ. ಗುಡ್ಡದ, ವಿಜಯಪುರ
 ನಾನು ಬ್ಯಾಂಕ್ ನೌಕರ. ನನ್ನ ಪ್ರಶ್ನೆ: ಓರ್ವ ವ್ಯಕ್ತಿ ಆದಾಯ ತೆರಿಗೆಗೆ ಒಳಗಾಗದೇ ಎಷ್ಟು ಹಣ ನಗದನ್ನು ಪ್ರತೀ ದಿವಸ ಖಾತೆಯಿಂದ ತೆಗೆಯಬಹುದು. ಈಗ ₹ 2 ಲಕ್ಷ ಅಥವಾ ಹೆಚ್ಚಿಗೆ ತೆಗೆದರೆ ತೆರಿಗೆ ಕೊಡಬೇಕಾಗುತ್ತದೆ. ಈ ಕಾನೂನು ಅಂದರೆ ₹ 2 ಲಕ್ಷ ಮಿತಿ, ಪ್ರತಿ ದಿವಸಕ್ಕೆ, ಪ್ರತೀ ಚೆಕ್ ಅಥವಾ ಸ್ವಂತ ಚೆಕ್‌ಗೆ ಅನ್ವಯಿಸುತ್ತದೆಯೇ?
ಉತ್ತರ:
₹ 2 ಲಕ್ಷಕ್ಕಿಂತ ಹೆಚ್ಚಿಗೆ ಹಣ ನಗದಾಗಿ ಬ್ಯಾಂಕ್ ಖಾತೆಯಿಂದ ಪಡೆಯಬಾರದು ಎನ್ನುವ ಅಧಿಸೂಚನೆ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆದಾಯ ತೆರಿಗೆ ಇಲಾಖೆಯವರು, ಯಾವುದೇ ಬ್ಯಾಂಕ್‌ಗೆ ಕಳಿಸಿಲ್ಲ. ಒಟ್ಟಿನಲ್ಲಿ ₹ 2 ಲಕ್ಷಕ್ಕಿಂತ ಹೆಚ್ಚಿನ ಹಣ ಪ್ರತೀ ದಿವಸವೂ ಪಡೆಯಬಹುದು. ಅದೇ ರೀತಿ ಎಟಿಎಂನಲ್ಲಿ, ಆಯಾಯ ಬ್ಯಾಂಕುಗಳು, ಕಾಲ ಕಾಲಕ್ಕೆ ನಿಗದಿಪಡಿಸಿದ ಮಿತಿಯಲ್ಲಿ ಹಣ ಪಡೆಯಬಹುದು.

ಇಂತಹ ವ್ಯವಹಾರಕ್ಕೆ ಸದ್ಯದ ಕಾನೂನಿನಲ್ಲಿ ಯಾವ ತರಹದ ತೆರಿಗೆಯೂ ಇರುವುದಿಲ್ಲ. ನೀವು ತಿಳಿಸಿದಂತೆ ₹ 2 ಲಕ್ಷ ಅಥವಾ ಹೆಚ್ಚಿನ ಹಣ, ಒಂದು ದಿವಸದಲ್ಲಿ ನಗದು ಪಡೆದಲ್ಲಿ ಆದಾಯ ತೆರಿಗೆ ಕೊಡಬೇಕಾಗುತ್ತದೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದ ವಿಚಾರ. ಇದೇ ವೇಳೆ ಯಾವುದೇ ವ್ಯಕ್ತಿ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಸಾಮಾನು, ವಸ್ತುಗಳು, ಬೆಲೆ ಬಾಳುವ ವಸ್ತುಗಳು (ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ) ಅಥವಾ ಸ್ಥಿರ ಆಸ್ತಿ ಕೊಳ್ಳುವಾಗ ₹ 2 ಲಕ್ಷಕ್ಕೂ ಹೆಚ್ಚಿನ ನಗದು ವ್ಯವಹಾರ ಮಾಡಲಿಕ್ಕಿಲ್ಲ. ನಿಮ್ಮ ಸಂಶಯ ಹಲವರಿಗೆ ಉತ್ತರ ನೀಡಿದಂತಾಗಿದೆ.

**

ಭೀಮನ ಗೌಡ.ಎಸ್.ಕೆ., ಹುಬ್ಬಳ್ಳಿ
ಮ್ಯೂಚುವಲ್ ಫಂಡ್, ಸಿಪ್, ಎಫ್‌ಡಿ ಇವುಗಳಲ್ಲಿ ಯಾವುದು ಉತ್ತಮ ಹಾಗೂ ಹೆಚ್ಚಿನ ವರಮಾನ ಪಡೆಯಬಹುದೆ?
ಉತ್ತರ
: ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆಯ ಇನ್ನೊಂದು ಮುಖ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಅಸಾಧ್ಯವಾದ ವ್ಯಕ್ತಿಗಳು ಮ್ಯೂಚುವಲ್ ಫಂಡ್ ಮೊರೆ ಹೋಗುತ್ತಾರೆ. ಜನರಿಂದ ಸಂಗ್ರಹಿಸಿದ ಹಣವನ್ನು ಮ್ಯೂಚುವಲ್ ಫಂಡ್ ಕಂಪೆನಿಗಳು, ಕಂಪೆನಿ ಷೇರುಗಳಲ್ಲಿ ತೊಡಗಿಸುತ್ತವೆ. ನಿಮಗೆ, ನಿಮ್ಮ ಹೂಡಿಕೆಯನ್ನು ₹ 10 ರಂತೆ ಒಂದು ಯೂನಿಟ್ ಆಗಿ ಪರಿಗಣಿಸಿ ಲೆಕ್ಕ ಹಾಕುತ್ತಾರೆ. ಉದಾಹರಣೆಗೆ ನೀವು ₹ 2000 ಇಲ್ಲಿ ಹೂಡಿದಾಗ 200 ಯುನಿಟ್‌ಗಳನ್ನು ಕೊಂಡಂತಾಗುತ್ತದೆ.

ಮ್ಯೂಚುವಲ್ ಫಂಡ್‌ನಲ್ಲಿ ಬರುವ ಲಾಭ, ನಷ್ಟ, ಷೇರು ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗುತ್ತದೆ. ಈ ಕಾರಣದಿಂದ ಮ್ಯೂಚುವಲ್ ಫಂಡ್ ಕೊಡುಗೆ ಪತ್ರದಲ್ಲಿ (Offer document ನಲ್ಲಿ Mutual Fund Investments are Subject of Market Risk) ಎಂಬುದಾಗಿ ಸ್ಪಷ್ಟಪಡಿಸುತ್ತಾರೆ. ಇಲ್ಲಿ ಹೂಡಿಕೆ ಕೂಡಾ ಒಂದೇ ವಿಧವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT