ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೂ ಬೇಕು ಆಹಾರ

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಆಹಾರ, ಆರೋಗ್ಯ - ಇವೆರಡರ ನಂಟು ಬಲು ಗಟ್ಟಿ. ಕುಡಿಯುವ ನೀರು, ತಿನ್ನುವ ಆಹಾರ, ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ ಅನುಮಾನಿಸುವ ಹಂತದಲ್ಲಿ ನಗರವಾಸಿಗಳಿದ್ದಾರೆ. ಇನ್ನೊಂದೆಡೆ ‘ಸಾವಯವ’ ಎಂಬ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ – ಎಲ್ಲದಕ್ಕೂ ನಗರಗಳಲ್ಲಿ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ ಸಾಲು ಸಾಲು!

ಆರೋಗ್ಯದ ಬಗ್ಗೆ ತಮ್ಮ ಕಾಳಜಿಯನ್ನು ಹಲವು ರೂಪದಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ. ಆಹಾರದಲ್ಲಿ ಪಥ್ಯಕ್ರಮವನ್ನು ಕಷ್ಟಪಟ್ಟು ಅನುಸರಿಸುವವರು ಕೆಲವರು. ವಾಕಿಂಗ್, ರನ್ನಿಂಗ್, ವ್ಯಾಯಮ, ಜಿಮ್, ಆಫೀಸ್‌ಗೆ ಸೈಕಲ್ ತುಳಿಯುತ್ತಹೋಗುವ ಮೂಲಕ ದೇಹವನ್ನು ದಂಡಿಸುವವರು ಮತ್ತೆ ಕೆಲವರು. ಒಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿರುತ್ತಾರೆ.

ಇದೆಲ್ಲ ಸರಿ! ‘ಆರೋಗ್ಯ’ ಎಂದರೆ ಏನು? ಈ ಚಿಕ್ಕ ಪ್ರಶ್ನೆ ಮನಸ್ಸಿನಲ್ಲಿ ಆಗಾಗ ಮೂಡುತ್ತಿರುತ್ತದೆ. ಶರೀರದ ಸರಿಯಾದ ತೂಕ, ವೈದ್ಯಕೀಯ ರಿಪೋರ್ಟ್ಸ್ ‘ನಾರ್ಮಲ್’ ಆಗಿದ್ದ ಮಾತ್ರಕ್ಕೆ ನಾವು ಆರೋಗ್ಯವಂತರು ಎಂದರ್ಥವೇ? ಒಂದರ್ಥದಲ್ಲಿ ‘ಹೌದು’; ಇನ್ನೊಂದು ಅರ್ಥದಲ್ಲಿ ‘ಅಲ್ಲ’!

ನಮ್ಮೊಳಗೆ ದೃಷ್ಟಿಗೆ ಸಿಲುಕದ, ಸ್ಪರ್ಶಕ್ಕೆ ದೊರಕದ, ಆದರೆ ಅವರವರ ಅರಿವಿನ ವ್ಯಾಪ್ತಿಯೊಳಗೆ ಮಾತ್ರ ಬರುವ ‘ಮನಸ್ಸು’ ಎಂಬುದೊಂದಿದೆ. ಅದು ಎಷ್ಟರ ಮಟ್ಟಿಗೆ ಆರೋಗ್ಯಕರವಾಗಿದೆ ಎಂಬುದಕ್ಕೆ ಎಷ್ಟೋ ಬಾರಿ ನಾವು ತಿಲಮಾತ್ರವೂ ಬೆಲೆ ಕೊಡುವುದಿಲ್ಲ. ಮನಸ್ಸಿನ ಆರೋಗ್ಯವನ್ನು ಕಡೆಗಣಿಸಿದ್ದಷ್ಟೂ ಅದು ಶರೀರದೊಂದಿಗಿನ ತನ್ನ ಅಸಹಕಾರವನ್ನೇ ಮುಂದುವರೆಸುತ್ತಿರುತ್ತದೆ.

ಉದಾಹರಣೆಗೆ, ಶಾರೀರಿಕ ಆರೋಗ್ಯಕ್ಕಾಗಿ ಕಠಿಣ ವ್ಯಾಯಾಮ, ಪಥ್ಯಗಳನ್ನು ಶುರುಹಚ್ಚಿಕೊಂಡು ಕೆಲವೇ ಕೆಲವು ದಿನ/ವಾರಗಳಿಗಿಂತ ಹೆಚ್ಚು ಕಾಲ ಅವನ್ನು ಮುಂದುವರೆಸಲು ಆಗುವುದಿಲ್ಲ; ಉದಾಸೀನದಿಂದ ನಿಲ್ಲಿಸಿಬಿಡುತ್ತೇವೆ. ಆಗ ‘ಮನಸ್ಸು’ ನಮ್ಮೊಂದಿಗೆ ಸಹಕರಿಸಿ, ಅವನ್ನು ಮುಂದುವರೆಸಲು ಅನುವು ಮಾಡಿಕೊಡುತ್ತಿಲ್ಲವೆಂದೇ ಅರ್ಥ. ಶರೀರ ಮತ್ತು ಮನಸ್ಸು – ಎರಡೂ ಒಮ್ಮತದಿಂದ ಸಹಕರಿಸಿದರೆ ಮಾತ್ರ ಮನುಷ್ಯ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ. ಇದಕ್ಕಾಗಿ ಜೀವನದಲ್ಲಿ ಕೆಲವು ನಿಯಮಗಳು, ಆರೋಗ್ಯಕರ ಆಹಾರಕ್ರಮ, ಸಾತ್ವಿಕ ರೀತಿ, ನಡೆ–ನುಡಿ, ಧ್ಯಾನ – ಇವೆಲ್ಲವೂ ಅವಶ್ಯ.

‘ಆಹಾರ’ದ ವಿಷಯವನ್ನು ಕುರಿತು ಆಲೋಚಿಸಿದರೆ ನಮಗೆ ಗೊತ್ತಾಗುವಂಥದ್ದು, ಆಹಾರದಲ್ಲಿ ಎರಡು ವಿಧ. ಒಂದು: ಶಾರೀರಿಕ ಆಹಾರ; ಮತ್ತೊಂದು: ಮಾನಸಿಕ ಆಹಾರ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಯಿಯ ಮೂಲಕ ಸೇವಿಸುವಂಥ ‘ಶಾರೀರಿಕ ಆಹಾರ’ ಎಷ್ಟು ಮುಖ್ಯವೋ, ಮನಸ್ಸಿನ ಮೂಲಕ ಸೇವಿಸುವ ‘ಮಾನಸಿಕ ಆಹಾರ’ವೂ ಅಷ್ಟೇ ಅತ್ಯವಶ್ಯಕ. ಸರಿ! ಏನಿದು ಮಾನಸಿಕ ಆಹಾರ?

ಶರೀರ–ಮನಸ್ಸುಗಳನ್ನು ಒಂದು ದಾರಿಯಲ್ಲಿ ಕೊಂಡೊಯ್ಯಲು ಸಹಾಯವಾಗುವಂಥ ಧನಾತ್ಮಕ ಅಂಶಗಳನ್ನು ಮನಸ್ಸಿಗೆ ಉಣಬಡಿಸುವುದನ್ನೇ ‘ಮಾನಸಿಕ ಆಹಾರ’ ಎಂದು ಕರೆಯಬಹುದು. ಶಬ್ದವಿರಲಿ, ದೃಶ್ಯವಿರಲಿ, ಸ್ಪರ್ಶವಿರಲಿ, ವಾಸನೆಯಿರಲಿ, ಅಥವಾ ರುಚಿಯ ರೂಪದಲ್ಲೇ ಇರಲಿ – ಅದು ಮನಸ್ಸಿನಲ್ಲಿ ಧನಾತ್ಮಕತೆಯನ್ನು ಉಂಟು ಮಾಡಿದಾಗ ಮನಸ್ಸಿಗೆ ಆಹ್ಲಾದವುಂಟಾಗುತ್ತದೆ, ಅದು ಶಾರೀರಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ನೋಡುವ ದೃಶ್ಯಗಳು, ಕೇಳುವ ಮಾತು, ಸುತ್ತಲಿನ ಪರಿಸರ, ನಮ್ಮ ನಡೆ-ನುಡಿ – ಪ್ರತಿಯೊಂದೂ ಸತತವಾಗಿ ನಮ್ಮ ಮೇಲೆ ನಮಗರಿವಿಲ್ಲದೆಯೇ ಪರಿಣಾಮವನ್ನುಂಟುಮಾಡುತ್ತಿರುತ್ತದೆ.

ಮಾತಿನಲ್ಲಿ ಶಬ್ದಗಳ ಬಳಕೆ, ಪ್ರತಿಯೊಬ್ಬರನ್ನೂ ಗೌರವದಿಂದ ನೋಡುವ ಪರಿ, ಪರಿಸರದ ಸ್ವಚ್ಛತೆ, ಮನೆ-ಮನಗಳ ಸ್ವಚ್ಛತೆ, ಕೇಳುವ ಸಂಗೀತ – ಹೀಗೆ ಎಲ್ಲದರಲ್ಲೂ ಧನಾತ್ಮಕತೆಯನ್ನು ತುಂಬಿಸಿಕೊಂಡು ನಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುವುದೇ ಒಂದು ಯೋಗಸಾಧನೆ.

-ಶ್ರುತಿ ಶರ್ಮಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT