ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹಂಚಿಕೆಯಲ್ಲಿ ವಂಚನೆಯೇಕೆ?

ದೇವರಾಜ ಅರಸು ತೋರಿದ್ದ ಎದೆಗಾರಿಕೆಯನ್ನು ಇಂದಿನ ಸರ್ಕಾರ ತೋರಿಸುವುದೇ?
Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಇಂದು ನಮ್ಮ ಬಹುತೇಕ ಜಿಲ್ಲಾಧಿಕಾರಿ ಕಚೇರಿಗಳು ಊರಿನಿಂದ ದೂರ ಬಹುದೂರ. ಹೊಸದಾಗಿ ಆರಂಭಗೊಂಡ ಜಿಲ್ಲೆಗಳಲ್ಲಂತೂ ಜಿಲ್ಲಾಧಿಕಾರಿ ಕಚೇರಿಗಳು ರಹದಾರಿ ದೂರ.  ಹುಡುಕಿಕೊಂಡು ಹೋದರೆ ದೊಡ್ಡ ಆವರಣದ ಸುತ್ತ ಕಬ್ಬಿಣದ ಬೇಲಿ, ಕಾವಲಿಗೆ ಪೊಲೀಸರು. ಅಧಿಕಾರಿಗಳು ಯಾರಿಗೆ ಹೆದರುತ್ತಾರೋ?! ಶಾಂತಿಯುತ ಸತ್ಯಾಗ್ರಹಕ್ಕೋ, ಬಿಡದೆ ಕೇಳುವ ಹಕ್ಕೊತ್ತಾಯಕ್ಕೋ?

ರಾಮನಗರದ ಕಚೇರಿಯನ್ನು ನೋಡಬೇಕು. ವಿಧಾನಸೌಧವೇ ಸರಿ. ಹೊರಗೆ ವಿಶಾಲವಾದ ಆವರಣ, ಆದರಿಲ್ಲಿ ಜನಸಾಮಾನ್ಯರ ಹಕ್ಕೊತ್ತಾಯಕ್ಕೆ ಕೂಡಲು ಅವಕಾಶವಿಲ್ಲ. ಸತ್ಯಾಗ್ರಹಿಗಳಿಗೆ ಜಾಗವಿಲ್ಲ. ನಮ್ಮದೇ ಜನರ ಗುಂಪುಗಳು ಕೂಡುವಂತಿಲ್ಲ. ಅವರು ದೂರ, ರಸ್ತೆಯ ಆಚೆ ಬೀದಿಯಲ್ಲಿ ಕೂಡಲಿ ಬೇಕಾದರೆ. ರಾಮನಗರ, ಬನ್ನೇರುಘಟ್ಟ, ಕನಕಪುರಗಳ ಇರುಳಿಗರು ‘ನಮ್ಮ ಭೂಮಿಯ ಹಕ್ಕುಪತ್ರ ಕೊಡಿ’ ಎಂದು ಶಾಂತಿಯುತವಾಗಿ ಆಗ್ರಹಿಸುತ್ತ ಅಲ್ಲಿ ಕುಳಿತು ಒಂದು ತಿಂಗಳೇ ಕಳೆದಿದೆ. 

ಇರುಳಿಗರು ದಕ್ಷಿಣ ಭಾರತದ ಮೂಲ ನಿವಾಸಿಗಳು. ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಕಾಣಬರುವ ಇವರು ಮೂಲತಃ ಗುಹಾವಾಸಿಗಳು. ತಮಿಳುನಾಡಿನಲ್ಲಿ ಇಂದಿಗೂ ಮೂಲನಿವಾಸಿಗಳೆಂದು ಕರೆಸಿಕೊಳ್ಳುವ ಇರುಳಿಗರನ್ನು ಕರ್ನಾಟಕ ಸರ್ಕಾರ, ಬುಡಕಟ್ಟು ಜನ ಎಂದೇ ಒಪ್ಪಿಕೊಂಡಿಲ್ಲ. ಜೇನುಕುರುಬ, ಸೋಲಿಗರು ಮತ್ತು ಇರುಳಿಗರು ಮೂಲತಃ ಒಂದೇ ಕುಟುಂಬದಿಂದ ಹೊಮ್ಮಿದ ಶಾಖೆಗಳು ಎನ್ನುವ ಇರುಳಿಗರಿಗೆ ದೇವರು ಮದ್ದೂರಮ್ಮ.

ಮದುವೆ, ಹಬ್ಬ, ಸಾವಿನ ದಿನಗಳಂದು ಹಾಡಿಯವರೆಲ್ಲ ಸೇರಿ ಹಾಡುತ್ತ ನರ್ತಿಸುವುದು ಇಂದಿಗೂ ರೂಢಿಯಲ್ಲಿದೆ. ಹಾಡಿಯಲ್ಲಿ ಯಾರಾದರೂ ಸತ್ತರೆ ಕಾಡಿನೊಳಗೆ ಹಿಂದೆ ಅವರಿದ್ದ ಪ್ರದೇಶದಲ್ಲಿ ಅವರ ವಂಶಜರಿಗೆಂದೇ ಇರುವ ಜಾಗದಲ್ಲಿ ಕಲ್ಲುಗಳ ಮಧ್ಯೆ ಹೆಣವನ್ನು ಕೂಡಿಸಿ ಪೂಜೆ ಮಾಡಿ ಬರುತ್ತಾರೆ. ಉಳಿದ ಕೆಲಸ ನಿಸರ್ಗದ್ದು. ಕಲ್ಲಸವೆ ಎಂದು ಅದಕ್ಕೆ ಕರೆಯುತ್ತಾರೆ. ಒಂದು ಕುಟುಂಬದ ಕಲ್ಲಸವೆ ಆ ಕುಟುಂಬಕ್ಕೆ ಮಾತ್ರ. ಇದು ಅವರ ಪರಂಪರೆ.

ಕಾಡಿನಲ್ಲಿ ಕೃಷಿ ಮಾಡಿಕೊಂಡು, ಜೇನು, ಬರಲು, ಮೇಣ ಇವನ್ನು ಕಾಡಿನಿಂದ ಹೆಕ್ಕಿ ತೆಗೆದು ಹೊರಜಗತ್ತಿಗೆ ಮಾರಿ ಬದುಕಿದವರು. ಹಗಲು ಕೃಷಿಯಲ್ಲಿ ದುಡಿಯುವ ಜನರು ಇರುಳ ಕತ್ತಲಲ್ಲಿ ಇಲಿಗಳ ಬೇಟೆಗೆ ಸನ್ನದ್ಧರಾಗುತ್ತಾರೆ. ಗಡ್ಡೆಗೆಣಸು, ಸೊಪ್ಪು ಮತ್ತು ಇಲಿಗಳು ಇವರ ಆಹಾರ. ಬಿಲದೊಳಗಿನ ಇಲಿ ಸಂಸಾರವನ್ನೇ ಬೆಂಕಿಯಿಟ್ಟು ಗೆಣಸಿನಂತೆ ಬೇಯಿಸಿ ತೆಗೆದು ತಿನ್ನುವ ಇರುಳಿಗರು ಬಿದಿರಿನ ದಸಿ ಬಳಸಿ ಉದ್ದುದ್ದನೆಯ ಗಡ್ಡೆಗೆಣಸುಗಳನ್ನು ಅಗೆದು ತೆಗೆದು ತಿನ್ನುತ್ತಾರೆ. ಸುಮಾರು 15 ಜಾತಿಯ ಗಡ್ಡೆಗೆಣಸುಗಳು, 50 ಜಾತಿಯ ಸೊಪ್ಪು, 5 ಜಾತಿಯ ಜೇನಿನ ಜ್ಞಾನ ಈ ಜನಾಂಗದಲ್ಲಿದೆ. ಅಳಿವಿನಂಚಿನಲ್ಲಿರುವ ಈ ಜನಪದದೊಳಗಿನ ಅನುಭವ, ಜ್ಞಾನ ನಾಶವಾಗಲು ಜನಾಂಗ ನಾಶವಾಗಬೇಕೆಂದಿಲ್ಲ, ಅವರ ಬದುಕಿನ ಬೇರನ್ನು ನಿಧಾನವಾಗಿ ಕಿತ್ತರಾಯಿತು.

ಕರ್ನಾಟಕದಲ್ಲಿ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ ತಾಲ್ಲೂಕುಗಳಲ್ಲಿ ಸುಮಾರು 2000 ಕುಟುಂಬಗಳು ಹರಡಿಕೊಂಡಿರುವ ಇರುಳಿಗರು ಇಂದು ಕಾಡಿನಂಚಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನದೊಳಗೆ 11 ಹಳ್ಳಿಗಳಲ್ಲಿ ಇವರಿದ್ದರು. ಕನಕಪುರ ತಾಲ್ಲೂಕಿನ ಹೆಂಚಲವಾಡಿ ಪಂಚಾಯಿತಿಯ ವ್ಯಾಪ್ತಿಯಲ್ಲಿ 100 ಕುಟುಂಬಗಳು, ರಾಮನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿನ ರಾಮದೇವರ ಬೆಟ್ಟದಲ್ಲಿ ಇಂದಿಗೂ 75 ಮನೆತನಗಳು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ವಾಸಿಸುತ್ತಿವೆ. ತಟ್ಟಿಗೆರೆ ಮಾದೇಶ್ವರ ಅರಣ್ಯದಲ್ಲಿ 45 ಕುಟುಂಬಗಳಿಗೆ ಸಾಗುವಳಿ ಹಕ್ಕುಪತ್ರ ಇದ್ದೂ ಜನರನ್ನು ಅರಣ್ಯದಿಂದ ಹೊರ ಹಾಕಲಾಗಿದೆ.

1980ರಲ್ಲಿ ಅರಣ್ಯ ಸಂರಕ್ಷಣಾ ಕಾನೂನು ಬರುವವರೆಗೂ ತಮ್ಮ ಜೀವನ ಪದ್ಧತಿಯನ್ನೇ ಮುನ್ನಡೆಸುತ್ತ ತಮ್ಮಷ್ಟಕ್ಕೆ ತಾವಿದ್ದರು ಇರುಳಿಗರು. ಆದರೆ ಅರಣ್ಯ ರಕ್ಷಣಾ ಕಾಯ್ದೆ ಬಂದು ಕಾಡಿನೊಳಗಿರುವ ಮನುಜರೆಲ್ಲ ಕಾಡಿನ ನಾಶಕರು ಎಂದು ಸರ್ಕಾರ ಅಂದುಕೊಂಡಿದ್ದೇ, ಇರುಳಿಗರನ್ನೆಲ್ಲ ಕಾಡಿನಿಂದ ಹೊರ ದಬ್ಬಲಾಯಿತು. ರಾಮನಗರದ ಅರಣ್ಯ, ಬನ್ನೇರುಘಟ್ಟ, ಕನಕಪುರ ತಾಲ್ಲೂಕಿನ ಅಂಚೇನಹಳ್ಳಿ, ವಾಡೆಕುಂಚೇನಹಳ್ಳಿ ಮುಂತಾದ ಹತ್ತಾರು ಕಾಡುಗಳಿಂದ ಹೊರನೂಕಿಸಿಕೊಂಡ ಇರುಳಿಗರು ಅಂದಿನಿಂದ ಇಂದಿನವರೆಗೂ ತಮ್ಮ ಮೂಲನಿವಾಸದ ಕನಸುಗಳನ್ನು ಕಣ್ಣಲ್ಲಿ ತುಂಬಿಟ್ಟುಕೊಂಡು ಕಾಡಿನಂಚಿನಲ್ಲಿ ಬದುಕಿದ್ದಾರೆ.

1980ರ ಅರಣ್ಯ ಸಂರಕ್ಷಣಾ ನೀತಿಯು ಅನೇಕ ಆದಿವಾಸಿಗಳನ್ನು ಕಾಡಿನಿಂದ ಹೊರಹಾಕಿತು. ನಮ್ಮ ಅರಣ್ಯ ನೀತಿಗಳಲ್ಲಿ ಅದೆಷ್ಟು ಹೊಸ ನೀತಿಗಳು ಬಂದರೂ ಅವೆಲ್ಲ ಮೂಲ ಬ್ರಿಟಿಷ್ ಕಾಲದ 1854ರ ಕಾನೂನಿನ ಮೂಲ ಸ್ವರೂಪವನ್ನು ಕಳೆದುಕೊಂಡಿಲ್ಲ. ರಾಷ್ಟ್ರೀಯ ಅಭಯಾರಣ್ಯ ನೀತಿ, ಹುಲಿ ಸಂರಕ್ಷಿತ ಪ್ರದೇಶ, ಕರಡಿ ರಕ್ಷಿತ ಪ್ರದೇಶ ಎಂದೆಲ್ಲ ರಕ್ಷಣಾ ಪ್ರದೇಶಗಳನ್ನು ಮಾಡಿ ಅಲ್ಲಿಂದ ಆದಿವಾಸಿಗಳನ್ನು ಹೊರ ಹಾಕುತ್ತಲೇ ಇದೆ. ಮುಂದೆ 1988ರಲ್ಲಿ ಜಂಟಿ ಅರಣ್ಯ ಕಾಯ್ದೆಯು ಬಂದು ಅರಣ್ಯ ರಕ್ಷಣೆಯಲ್ಲಿ ಕಾಡಿನಂಚಿನಲ್ಲಿರುವ ಜನರ ಸಹಭಾಗಿತ್ವವನ್ನು ಇಲಾಖೆ ಬಯಸಿತಾದರೂ ನೀತಿಯೊಳಗಿದ್ದ ಉದಾತ್ತ ಭಾವ ಅಧಿಕಾರಿಗಳಲ್ಲಿ ಬಾರದೆ ಕಾನೂನಿನೊಳಗಿನ ಗ್ರಾಮ ಅರಣ್ಯ ಸಮಿತಿಗಳು, ಜಂಟಿ ಅರಣ್ಯ ಸಂಘಗಳು ಬರಿಯ ಕಾಗದದಲ್ಲಿ ಉಳಿಯುವಂತಾಯಿತು.

ತದನಂತರ ಬಂದದ್ದು 2006ರ ಅರಣ್ಯ ಹಕ್ಕು ಕಾಯ್ದೆ. ಕಾಡನ್ನು ನಂಬಿಕೊಂಡಿದ್ದ ಜನರಿಗೆ ಜೀವ ತಂದುಕೊಟ್ಟ ಕಾಯ್ದೆಯಿದು. ಕಾಯ್ದೆಯ 3 (1) (ಎಂ) ನಲ್ಲಿ ‘ಕಾಡಿನಿಂದ ನಿರ್ವಸಿತರಾದವರಿಗೆ ಸರಿಯಾದ ಪುನರ್ವಸತಿಯನ್ನು ಮಾಡಲಾಗಲಿಲ್ಲವೆಂದರೆ ಅಂಥ ಸಮುದಾಯಗಳಿಗೆ, ಜನಾಂಗಕ್ಕೆ ಪುನಃ ಅವರ ಆವಾಸ ಸ್ಥಾನವನ್ನು ಮರಳಿಸಬೇಕು ಅಥವಾ ಕಂದಾಯ ಭೂಮಿಯನ್ನು ಕೊಡಬೇಕು’ ಎಂದು ಬಹಳ ಸ್ಪಷ್ಟವಾಗಿ ಬರೆದಿದೆ.

ಜಂಟಿ ಅರಣ್ಯ ಕಾಯ್ದೆಯಲ್ಲಿ ಜನರ ಸಹಭಾಗಿತ್ವವನ್ನು ಪಡೆದು ಬಂದ ಗಳಿಕೆಯಲ್ಲಿ ಅವರಿಗೂ ಸಮಭಾಗವನ್ನು ಕೊಟ್ಟು ಅರಣ್ಯ ಸಂರಕ್ಷಣೆ ಮಾಡಬೇಕು ಎಂದಿತ್ತು.  ನಿರ್ವಸಿತರಾದ ಬುಡಕಟ್ಟು ಜನರಿಗೆ ಅವರ ಆವಾಸವನ್ನು ಮರಳಿಸಬೇಕೆಂದಿತ್ತು ಅರಣ್ಯ ಹಕ್ಕು ಕಾಯ್ದೆಯಲ್ಲಿ. ಆದರೆ ಒಣ ಕಾಗದದ ಮೇಲಿರುವ ನೀತಿ ಆರ್ದ್ರ ಹೃದಯದಲ್ಲಿ ಇಳಿಯದ ಕಾರಣ ಅವೊಂದೂ ಜಾರಿಗೆ ಬಾರದೆ ಇಂದು ಆದಿವಾಸಿಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ.

ಸಂಘಟನೆಯಿರುವಲ್ಲಿ ಮಾತ್ರ ಬಹಳ ಕಷ್ಟದಿಂದ ಹಕ್ಕನ್ನು ಕಿತ್ತುಕೊಳ್ಳಬೇಕಾದ ಪರಿಸ್ಥಿತಿ ನಮ್ಮದು. ಇರುಳಿಗರ ಸ್ಥಿತಿಯೂ ಇದೇಯೇ. ಅರಣ್ಯ ನೀತಿ ಬದಲಾದ ದಿನದಿಂದಲೂ ಇವರು ತಮ್ಮ ಭೂಮಿಯನ್ನು ತಮಗೆ ಮರಳಿಸಿ ಎಂದು ಸರ್ಕಾರವನ್ನು ಕೇಳುತ್ತಲೇ ಇದ್ದಾರೆ.  ಜಾಮದಾರ ಅವರು ಜಿಲ್ಲಾಧಿಕಾರಿಗಳಾಗಿದ್ದ ಕಾಲದಲ್ಲಿ ಜನರ ಬೇಡಿಕೆಗೆ ಮನ್ನಣೆ ಕೊಟ್ಟು ಅರಣ್ಯ ಹಕ್ಕು ಗ್ರಾಮ ಸಭೆಗಳ ನಿರ್ಧಾರದಂತೆಯೇ ಈ ಬುಡಕಟ್ಟು ಜನರ ಆವಾಸ ಪ್ರದೇಶಗಳನ್ನು ಸರ್ವೆ ಮಾಡಿಸಿದರು.

30 ವರ್ಷಗಳ ಹಿಂದೆ ತಾವು ಬದುಕಿದ್ದ ಹಳ್ಳಿಗಳ ಕುರುಹುಗಳನ್ನು ಜನರು ತೋರಿಸಿದ್ದಾರೆ. ಪೂರ್ತಿ ಬಿದ್ದು ಹೋಗಿರುವ ಮನೆಗಳ ಅಳಿದುಳಿದ ಗೋಡೆಗಳು, ಇಂದಿಗೂ ಹೋಗಿ ಪೂಜೆ ಮಾಡಿಬರುವ ತಮ್ಮ ದೇವರ ಜಾಗ, ಹಿಂದೆ ಗುಹೆಗಳಲ್ಲಿ ಹಿರಿಯರ ದೇಹವನ್ನು ಬಿಟ್ಟು ಬರುತ್ತಿದ್ದುದರ ಕುರುಹಾಗಿ ಇದ್ದ ಬುರುಡೆಗಳು, ಕಲ್ಲಸವೆಗಳಲ್ಲಿ ಪೇರಿಸಿಟ್ಟ ಕಲ್ಲುಗಳ ರಾಶಿ, ಒರಳು ಹೀಗೆ ಹತ್ತು ಹಲವು ಕುರುಹುಗಳನ್ನು ತೋರಿಸಿದ್ದಾರೆ, ತಾವೂ ಕೂಡ ದಾಖಲಿಸಿಕೊಂಡಿದ್ದಾರೆ. ಸಾವನದುರ್ಗ ಕಾಡಿನಲ್ಲಿ ಜೋಡಿಗಟ್ಟೆ ಇಂದಿಗೂ ಇದೆ. ಸರ್ವೆಯಲ್ಲಿ ಅದು ಇವರಿದ್ದುದೇ ಜಾಗವೆಂದು ಸಾಬೀತಾಗಿದೆ. ಅದನ್ನು ಸರ್ಕಾರವೂ ಒಪ್ಪಿಕೊಂಡಿದೆ. ಆದರೆ ಹಕ್ಕುಪತ್ರ ಕೊಡಲು ಯಾವುದೇ ಅಧಿಕಾರಿ ಒಪ್ಪಿಗೆ ಕೊಟ್ಟ ಹೇಳಿಕೆಗಳು ಪ್ರಕಟವಾಗುತ್ತಲೇ ಕಾಣದ ಕೈ ಅವರನ್ನಲ್ಲಿಂದ ಎತ್ತಂಗಡಿ ಮಾಡಿಬಿಡುತ್ತದೆ.

ಇಂದು ಜನರ ಬೇಡಿಕೆ ಒಂದೇ: ‘ಕಾನೂನು ಅವರಿಗೆ ಕಾಡಿಗೆ ಹಿಂದಿರುಗಲು ಅವಕಾಶ ಕೊಟ್ಟಿದೆ, ಒಂದಷ್ಟು ಸರ್ವೆಗಳಾಗಿ ಅವರಿದ್ದ ಜಾಗಗಳನ್ನು ದಾಖಲಿಸಿಯಾಗಿದೆ, ಅವರಿಗೆಲ್ಲ ಹಕ್ಕುಪತ್ರಗಳನ್ನು ಕೊಡಿ. ಇನ್ನುಳಿದ ಕುಟುಂಬಗಳದ್ದೂ ಸರ್ವೆ ಮಾಡಿಸಿ ಹಕ್ಕುಪತ್ರಗಳನ್ನು ಕೊಡಿ’. ಒಂದು ತಿಂಗಳು ಕಳೆದು ಹೋಯಿತು ಜಿಲ್ಲಾಧಿಕಾರಿ ಕಚೇರಿ ಎದುರು ಜನರು ಧರಣಿ ಕುಳಿತು. ತಲೆನೋವು ದೂರವೇ ಇರಲಿ ಎಂದು ರಸ್ತೆಯಾಚೆ ಕೂಡ್ರಿಸಲಾಗಿದೆ. ಅಲ್ಲಿ ನೀರಿನ ವ್ಯವಸ್ಥೆಯನ್ನು ತಾವೇ ಮಾಡಿಕೊಂಡು ಮರದ ನೆರಳಲ್ಲಿ ಕುಳಿತಿದ್ದಾರೆ ನಮ್ಮ ಜನ. ಮಹಿಳೆಯರಿದ್ದಾರೆ, ಗರ್ಭಿಣಿಯರಿದ್ದಾರೆ ಆದರೆ ಒಂದು ಶೌಚಾಲಯದ ವ್ಯವಸ್ಥೆ ಕೂಡ ಇಲ್ಲ.

ಕಾಡಿನ ಹಕ್ಕಿದ್ದೂ ಪಡೆಯಲಾಗದೆ ಅಲೆದಾಡುತ್ತಿರುವ ಜನ ಅವರಾದರೆ ನಾಡೊಳಗೇ ಇದ್ದು, ಎಲ್ಲರಂತೆ ಭೂಮಿಯನ್ನು ಹೊಂದಲಾಗದ, ವಸತಿಗಾಗಿ ಹಿಡಿಯಗಲ ನೆಲವನ್ನು ಪಡೆಯಲಾಗದ ಜನರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ ನಮ್ಮ ನಾಡಿನಲ್ಲಿ.  ಸೈಟುಗಳ ಮೇಲೆ ಸೈಟು ಖರೀದಿಸುವ, ಮನೆ ಮೇಲೆ ಮನೆ ಕಟ್ಟಿಸುವ, ಕಾಫಿ ತೋಟ, ಮಾವಿನ ತೋಪು, ಕಬ್ಬಿನ ಗದ್ದೆಗಳ ಯಜಮಾನರಾಗಿರುವಂಥವರು ಸುತ್ತೆಲ್ಲ ಕಾಣುತ್ತಿರುವ ಈ ನಾಡಿನಲ್ಲಿ ಅಂಗೈ ಅಗಲದ ಭೂಮಿಯೂ ಇಲ್ಲದ, ಉಳುವ ಭೂಮಿಯ ಹಕ್ಕೂ ಇಲ್ಲದ ಜನ ನಾಡಿನ ಉದ್ದಗಲಕ್ಕೂ ಇದ್ದಾರೆಂದರೆ ನಂಬಲು ಕಷ್ಟವಾದರೂ ಸತ್ಯ.
ಭೂಮಿಯ ನ್ಯಾಯಯುತ ಹಂಚಿಕೆಯಾಗಿದ್ದು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ.

ಕರ್ನಾಟಕದಲ್ಲಿ ದೇವರಾಜ ಅರಸರು ಮುಖ್ಯ ಮಂತ್ರಿಯಾದಾಗ ಚಾರಿತ್ರಿಕವಾದ ‘ಉಳುವವನೇ ಭೂಮಿ ಒಡೆಯ’ ಮತ್ತು ‘ಭೂ ಪರಿಮಿತಿ ಕಾಯ್ದೆ’ಗಳನ್ನು ತಂದರೂ, ವಂಚಿತರ ಸಂಘಟನೆಯನ್ನು ಬೇರೆ ಬೇರೆ ಜನ, ಸಂಸ್ಥೆಗಳು ಮಾಡುತ್ತ ಸರ್ಕಾರಕ್ಕೆ ಅಹವಾಲನ್ನು ಸಲ್ಲಿಸುತ್ತಲೇ ಇದ್ದರೂ ಕಾನೂನು ಜಾರಿಯಾಗಿದ್ದು ಕೇವಲ ಶೇ 5 ಮಾತ್ರ. ತಾವು ಇರುವಂಥ ನೆಲ, ಉಳುವಂಥ ಭೂಮಿಯ ಹಕ್ಕನ್ನು ತಮಗೆ ಕೊಡಿ ಎಂದು ಆಯಾ ಜಿಲ್ಲಾಧಿಕಾರಿ ಬಳಿಗೆ ಮನವಿ ಹಿಡಿದು ಓಡಾಡಿ ಜನರ ಕಾಲುಗಳು ಸವೆದಿವೆ. ಜನುಮ ಕಳೆದಿದೆ.

ಕಾಗೋಡು ಸತ್ಯಾಗ್ರಹದ ಹಿನ್ನೆಲೆಯ ತಿಮ್ಮಪ್ಪನವರು ಕಂದಾಯ ಮಂತ್ರಿಯಾದಾಗ ಭೂಮಿ ವಂಚಿತರ ಕನಸು ಮತ್ತೆ ಚಿಗುರಿತು. ದೇವರಾಜ ಅರಸರ ಶತಮಾನೋತ್ಸವ ಆಚರಣೆಯಲ್ಲಿ ಭೂಮಿ ಮತ್ತು ವಸತಿ ವಂಚಿತ ಹೋರಾಟಗಳು ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ನೇತೃತ್ವದಲ್ಲಿ ಒಂದಾಗಿ ಬೆಂಗಳೂರಿನಲ್ಲಿ 10 ಸಾವಿರ ಜನ ಸೇರಿದರು. ಹೋರಾಟಕ್ಕೆ ಸ್ಪಂದಿಸಿದ ಕಾಗೋಡು, ತಾನು ಭೂ ವಂಚಿತರಿಗೆ ನ್ಯಾಯ ಒದಗಿಸುವುದಾಗಿ ಮಾತಿತ್ತರು.
ಮಂತ್ರಿಗಳು ಮಾತು ಕೊಟ್ಟರೂ ಜಾರಿಗೊಳ್ಳದಿದ್ದಾಗ ಸರ್ಕಾರಿ ಭೂಮಿಯಲ್ಲಿ ವಾಸಿಸುವವರಿಗೆ ನಿವೇಶನದ ಹಕ್ಕು, ಉಳುತ್ತಿರುವವರಿಗೆ ಕನಿಷ್ಠ ಎರಡು ಎಕರೆ ಭೂಮಿ ಕೊಡಬೇಕೆಂಬ ಬೇಡಿಕೆಗಳನ್ನಿಟ್ಟುಕೊಂಡ ಸತ್ಯಾಗ್ರಹವೊಂದಕ್ಕೆ ಇತ್ತೀಚೆಗೆ ಬೆಂಗಳೂರು ಸಾಕ್ಷಿಯಾಯಿತು.

ಮಂತ್ರಿಗಳು ಮಾತು ಕೊಟ್ಟರೂ ‘ಇದರಲ್ಲಿ ಮುಕ್ಕಾಲು ಪಾಲು ಅರ್ಜಿಗಳು ಸುಳ್ಳು’ ಎಂದು ಅಧಿಕಾರಿಗಳ ವಾದ. ಸಂಘಟನೆಯ ಮುಂಚೂಣಿಯಲ್ಲಿದ್ದವರು ರಾಜ್ಯದಾದ್ಯಂತ ಸುತ್ತಾಡಿ ಜಿಲ್ಲಾ ಮಟ್ಟದಲ್ಲಿ ಬಂದ ಅರ್ಜಿಗಳ ಪರಿಶೀಲನೆ ಮಾಡಿದ್ದಾರೆ. ಒಂದೇ ವಾರದ ತಿರುಗಾಟದಲ್ಲಿ 176 ಪ್ರಕರಣಗಳು ಒಟ್ಟಾದವು. ಬೇರೆ ಬೇರೆ ರೀತಿಯ ಭೂಪ್ರಕರಣಗಳವು. ಉಳಲು ಬಯಸುವ ಎಲ್ಲರಿಗೂ ಎರಡು ಎಕರೆ ಭೂಮಿ ಎಂಬ ದೊರೆಸ್ವಾಮಿಯವರ ಬೇಡಿಕೆಗೂ, ಅಷ್ಟು ಭೂಮಿ ಎಲ್ಲಿದೆ ಎಂದು ಅಧಿಕಾರಿಗಳ ಪ್ರತಿಪ್ರಶ್ನೆ.

ಭೂಮಿ ಇದೆಯೋ ಇಲ್ಲವೋ ತೀರ್ಮಾನಿಸಲು ಭೂ ಆಡಿಟ್ ಮಾಡಿಸಬೇಕಲ್ಲವೇ? ಶಾಸಕರು ಅಧ್ಯಕ್ಷರಾಗಿರುವ ತಾಲ್ಲೂಕು ಮಟ್ಟದ ಲ್ಯಾಂಡ್ ಗ್ರ್ಯಾಂಟ್ ಸಮಿತಿಗಳ ಸಭೆಗಳಾಗದೆ ವರ್ಷಗಳೇ ಕಳೆದು ಹೋಗಿವೆ. ಬೇನಾಮಿ ಭೂಮಿ ಎಷ್ಟಿದೆ? ಭೂಮಿ ಯಾರ ಹೆಸರಲ್ಲಿದೆ? ಭೂಮಿಯನ್ನು ಒತ್ತುವರಿ ಮಾಡಿಟ್ಟುಕೊಂಡ, ಸೈಟುಗಳನ್ನಾಗಿ ಮಾರಲಿಟ್ಟ, ಕಾಡನ್ನು ನುಂಗಿರುವ ಪ್ರಕರಣಗಳೆಲ್ಲವೂ ಪರಿಶೋಧನೆಯಾದರೆ ಉಳುವವನಿಗೆ ಹಂಚಲು ಭೂಮಿ ಇದೆಯೋ ಇಲ್ಲವೋ ಎನ್ನುವುದು ಸರ್ಕಾರಕ್ಕೂ ತಿಳಿಯುತ್ತದೆ, ಜನರಿಗೂ ಅರ್ಥವಾಗುತ್ತದೆ. ಅಂದು ಅರಸರು ತೋರಿದ್ದ ಎದೆಗಾರಿಕೆಯನ್ನು ಇಂದಿನ ಸರ್ಕಾರ ತೋರಿಸಿ ‘ವಾಸಿಸುವವಳೇ ಮನೆಯೊಡತಿ’, ‘ಉಳುತ್ತಿದ್ದವನಿಗೇ ಆ ಭೂಮಿ’ ಎಂದು ಕಾನೂನನ್ನು ಪುನರ್ ವ್ಯಾಖ್ಯಾನ ಮಾಡಬೇಕಿದೆ. ಕಾನೂನನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT