ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಹಿತೆಯ ಚೌಕಟ್ಟು ಮೀರುವುದು ಸಲ್ಲ’

Last Updated 5 ಜುಲೈ 2017, 8:26 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪತ್ರಿಕೋದ್ಯಮ ಎಂದೆಂದಿಗೂ ಉದ್ಯಮವೇ. ಆದರೆ ಈ ಉದ್ಯಮವು ನೀತಿ, ನಿಯತ್ತು ಹಾಗೂ ಸಂಹಿತೆಯ ಚೌಕಟ್ಟು ಮೀರಬಾರದು’ ಎಂದು ‘ಪ್ರಜಾವಾಣಿ’ ಸಂಪಾದಕ ಕೆ.ಎನ್. ಶಾಂತಕುಮಾರ್‌ ಅಭಿಪ್ರಾಯಪಟ್ಟರು. ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಪತ್ರಿಕೋದ್ಯಮ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.

‘ಪತ್ರಿಕೋದ್ಯಮವು ಓದುಗರನ್ನು ಹಾಗೂ ಜಾಹೀರಾತು ಆದಾಯವನ್ನು ನೆಚ್ಚಿಕೊಂಡಿದೆ. ಹಿಂದೆಲ್ಲಾ ಎರಡೂ ಕಡೆಯ ಪಾಲು ಸಮನಾಗಿತ್ತು. ಆದರೆ ಈಗ ಪತ್ರಿಕೆಗಳ ಮುಖಬೆಲೆ ಬಹಳ ಕಡಿಮೆ ಇರುವ ಕಾರಣ ಜಾಹೀರಾತಿನ ಅವಲಂಬನೆ ಶೇ 75ಕ್ಕೆ ಏರಿಕೆಯಾಗಿದೆ. ಹಾಗಾಗಿ ಜಾಹೀರಾತುದಾರರ ಬಗ್ಗೆ ಅನಿವಾರ್ಯವಾಗಿ ಕಾಳಜಿ ತೋರಬೇಕಾಗುತ್ತದೆ.

ಅವರ ಮನಸ್ಸು ನೋಯದಂತೆ ನೋಡಿಕೊಳ್ಳಬೇಕಿದೆ. ಇದು ಅಪಾಯಕಾರಿ ಬೆಳವಣಿಗೆ. ಇದು ವರದಿಗಾರಿಕೆ ಮೇಲೆ ಪರಿಣಾಮ ಬೀರಿ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತದೆ’ ಎಂದರು.

ವಿದ್ಯಾರ್ಥಿಗಳಿಗೆ ಕಿವಿಮಾತು: ‘ಪತ್ರಿಕೋದ್ಯಮ ಎಂದರೆ ಕಥೆ ಹೇಳುವುದು. ಆದರೆ ಇದು ಸಾಮಾನ್ಯ ಕಥನ ಶೈಲಿಗಿಂತ ವಿಭಿನ್ನವಾಗಿದೆ. ಇಲ್ಲಿ ಭಾಷೆಯ ದುಡಿಸಿಕೊಳ್ಳುವ ಮತ್ತು ಕಥೆ ನೇಯುವ ಕೌಶಲ ಮುಖ್ಯವಾಗುತ್ತದೆ.

ಆದರೆ ಇಂದು ಯುವ ಪತ್ರಕರ್ತರಲ್ಲಿ ಭಾಷಾ ಕೌಶಲ್ಯ  ಕಾಣುತ್ತಿಲ್ಲ. ಅವರು ಪಡೆಯುವ ಪ್ರಾಥಮಿಕ ಶಿಕ್ಷಣದಿಂದಲೇ ಈ ಸಮಸ್ಯೆ ಶುರುವಾಗಿದೆ. ಪತ್ರಕರ್ತರ ಜ್ಞಾನಕೋಶ ಜೀವಂತವಾಗಿರಲು ನಿರಂತರ ಓದು ಮತ್ತು ಗ್ರಹಿಕೆ ಬಹಳ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ವೈವಿಧ್ಯಮಯ ಓದಿಗೆ ತೆರೆದುಕೊಳ್ಳಬೇಕು’ ಎಂದು ಹೇಳಿದರು.

ಕ್ಷಿಪ್ರವಾಗಿ ಬೆಳೆಯುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನೇ ಪತ್ರಕರ್ತ ಎಲ್ಲವನ್ನೂ ಮಾಡಬೇಕಿದ್ದು, ಬಹು ಮಾಧ್ಯಮ (ಮಲ್ಟಿ ಮೀಡಿಯಾ) ಬಳಕೆಯ ಜ್ಞಾನ ಅಗತ್ಯ ಎಂದರು.
ಮಹಿಳಾ ಪತ್ರಕರ್ತರ ಸುರಕ್ಷತೆ ಬಗ್ಗೆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಶಾಂತಕುಮಾರ್‌, ನಮ್ಮ ಸಂಸ್ಥೆಯಲ್ಲಿ 80ರ ದಶಕದಿಂದಲೂ ‘ರಾತ್ರಿ ಪಾಳಿ’ಯಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ.

ಅವರ ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಕೆಲಸ ಮುಗಿದ ನಂತರ ಮನೆ ಬಾಗಲಿಗೆ ತಲುಪಿಸಿ ಬರುತ್ತೇವೆ. ಮಹಿಳೆಯರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿದ್ದು ಪ್ರಜಾವಾಣಿ.  ಮಹಿಳೆಯರು ಪತ್ರಿಕೋದ್ಯಮದ ಮುಖ್ಯವಾಹಿನಿಗೆ ಬರಲು ಹಿಂಜರಿಯಬಾರದು ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ಸ್ಥಿತ್ಯಂತರ ಗಳಾದರೂ ‘ಪ್ರಜಾವಾಣಿ’ ಯಾವುದೇ ಕಾಲದಲ್ಲೂ ಜನಮನ್ನಣೆ ಕಳೆದುಕೊಂಡಿಲ್ಲ.

ಓದುಗರ ನಂಬಿಕೆಗೆ ಚ್ಯುತಿಯಾಗದಂತೆ ಬದ್ಧತೆ ಉಳಿಸಿ ಕೊಂಡು ಸಾಗಿದೆ’ ಎಂದು ಶ್ಲಾಘಿಸಿದರು. ಬಿ.ವಿ.ವಿ ಸಂಘದ ಗೌರವ ಕಾರ್ಯ ದರ್ಶಿ ಮಹೇಶ ಎನ್.ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ, ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಸಹಾಯಕ ಪ್ರಾಧ್ಯಾಪಕ ಡಾ.ವೀರೇಶ ಹಿರೇಮಠ ಹಾಜರಿದ್ದರು.

‘ಸತ್ಯ  ಹೇಳುವುದು  ಪತ್ರಿಕಾ  ಧರ್ಮ’
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ವೇಳೆ ತರಹೇವಾರಿ ಪ್ರಶ್ನೆಗಳು ತೂರಿಬಂದವು. ಪತ್ರಿಕಾ ಧರ್ಮ ಎಂದರೇನು? ಎಂದು ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಕೇಳಿದ ಪ್ರಶ್ನೆಗೆ ‘ಸತ್ಯ ಹೇಳುವುದು’ ಎಂದು ಕೆ.ಎನ್‌. ಶಾಂತಕುಮಾರ್‌ ಪ್ರತಿಕ್ರಿಯಿಸಿದರು.

‘ಸಮಾಜದ ಬೇರೆ ಬೇರೆ ರಂಗಗಳಲ್ಲಿ ಮೌಲ್ಯ ಕುಸಿದಿರುವ ರೀತಿ ಮಾಧ್ಯಮ ಕ್ಷೇತ್ರದಲ್ಲೂ ಭ್ರಷ್ಟಾಚಾರ ಇದೆ. ಆದರೆ ಆಯಾ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಅದನ್ನು ಗಮನಿಸಿ ನಿಯಂತ್ರಣ ಮಾಡಬೇಕು. ಬಿಗಿ ಕ್ರಮಕ್ಕೆ ಮುಂದಾಗಬೇಕು ಎಂದರು. ‘ಪ್ರಜಾವಾಣಿ’ಯಲ್ಲೂ ಸಿಬ್ಬಂದಿ ಮೇಲಿನ ಭ್ರಷ್ಟಾಚಾರ ಆರೋಪವನ್ನು ಗಂಭೀರವಾಗಿ ಪರಿಗಣಿಸ ಲಾಗುತ್ತದೆ. ಸತ್ಯಾಸತ್ಯತೆ ಪರಿಶೀಲಿಸಿ ಕೆಲವರನ್ನು ಕೆಲಸದಿಂದಲೂ ತೆಗೆದಿದ್ದೇವೆ’ ಎಂದು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರದಿಗಾರಿಕೆಯಲ್ಲಿ ಕೆಲ ವೊಂದು ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ ಹಾಗೂ ತಿಳಿವಳಿಕೆ ಹೆಂಗಸರಿಗೆ ಇರುವಷ್ಟು ಗಂಡಸರಿಗೆ ಇರುವುದಿಲ್ಲ. ಹಾಗಾಗಿ ಮಾಧ್ಯಮ ಕ್ಷೇತ್ರದಲ್ಲಿ ಶೇ 50ರಷ್ಟು ಮಹಿಳೆಯರು ಇರಬೇಕು’ ಎಂದು ಅಭಿಪ್ರಾಯಪಟ್ಟರು.

* * 

ಉ.ಕ.ದಲ್ಲಿ ವೀರಶೈವ ಮಠಗಳು ಹಾಗೂ ಶಿಕ್ಷಣ ಸಂಸ್ಥೆ ಗಳ ಕೊಡುಗೆ ಮಹತ್ವದ್ದು. ಇದರ ಲಾಭ ಪಡೆದ ಸಾವಿರಾರು ಬಡ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ.
ಕೆ.ಎನ್.ಶಾಂತಕುಮಾರ್
‘ಪ್ರಜಾವಾಣಿ’ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT