ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಬದಲಾವಣೆ: ಬಿಜೆಪಿ ಆಕ್ರೋಶ

Last Updated 5 ಜುಲೈ 2017, 8:43 IST
ಅಕ್ಷರ ಗಾತ್ರ

ಮಡಿಕೇರಿ: ಮೂರನೇ ಹಂತದ ನಗರೋತ್ಥಾನ ಅನುದಾನದಲ್ಲಿ ನಿಗದಿತ ಕಾಮಗಾರಿ ಕೈಗೊಳ್ಳದೇ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಬೇರೆ ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರಸಭಾ ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ‘ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಗೆ ₹ 30 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ನಡೆಸಬೇಕಾದ ಕಾಮಗಾರಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಾರ್ಡ್‌ಗಳಿಗೆ ಅನುದಾನ ಹಂಚಿಕೆಯನ್ನು ಅಧ್ಯಕ್ಷರ ಸಮ್ಮುಖದಲ್ಲೇ ನಡೆಸಲಾಗಿತ್ತು.

ಸಭೆಯಲ್ಲಿ ಎಲ್ಲ ವಾರ್ಡ್‌ ಸದಸ್ಯರೂ ಪಾಲ್ಗೊಂಡಿದ್ದರು. ನಂತರ, ಅಧ್ಯಕ್ಷರು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಕಾಮಗಾರಿ ಬದಲಾವಣೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉಸ್ತುವಾರಿ ಸಚಿವರ ಗಮನಕ್ಕೂ ತಂದಿಲ್ಲ. ಆಗಲೇ ಸಂಬಂಧಪಟ್ಟ ಇಲಾಖೆಗೆ ಕಾಮಗಾರಿಗಳ ಪಟ್ಟಿಯನ್ನು ಹಸ್ತಾಂತರಿಸಿದ್ದಾರೆ. ಜನರಿಗೆ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಅಧ್ಯಕ್ಷರು ಸಂಪೂರ್ಣ ವಿಫಲರಾಗಿದ್ದಾರೆ. ಇದೇ ರೀತಿಯ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡರೆ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್‌, ‘ಮೂರನೇ ಹಂತದ ನಗರೋತ್ಥಾನದ ಅನುದಾನದಲ್ಲಿ ₹ 10 ಕೋಟಿಯನ್ನು ವಿವಿಧ ವಾರ್ಡ್‌ಗಳ ಕುಡಿಯುವ ನೀರು ಯೋಜನೆಗೆ ಬಳಕೆ ಮಾಡಲು ತೀರ್ಮಾನಿಸಲಾಗಿತ್ತು. ವಾರ್ಡ್‌ ಸದಸ್ಯರೂ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದ್ದರು. ಅಧ್ಯಕ್ಷರು ಕ್ರಿಯಾ ಯೋಜನೆಯನ್ನೇ ಬದಲಾವಣೆ ಮಾಡಿದ್ದಾರೆ.

ಇಳಿಜಾರು ಪ್ರದೇಶಗಳಿಗೆ ಕಾಂಕ್ರೀಟ್‌ ಹಾಕುವುದು, ತಡೆಗೋಡೆ ನಿರ್ಮಾಣ ಅಗತ್ಯವಾಗಿ ನಡೆಯಬೇಕು. ಆದರೆ, ಅಧ್ಯಕ್ಷರು ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ದೂರಿದರು. ‘ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರು ಮಧ್ಯಪ್ರವೇಶಿಸಿ ಗೊಂದಲ ಹಾಗೂ ಕಾಮಗಾರಿ ಬದಲಾವಣೆ ಮಾಡಿರುವ ಕ್ರಮವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಇದೇ ವೇಳೆ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಉನ್ನೀಕೃಷ್ಣ, ಸಂಗೀತಾ ಪ್ರಸನ್ನ, ಜುಲೇಕಾಬಿ, ಸವಿತಾ ರಾಕೇಶ್, ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT