ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಮುಚ್ಚಿಸಿ ಮಾನಿನಿಯರ ಪ್ರತಿಭಟನೆ

Last Updated 5 ಜುಲೈ 2017, 9:44 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಮಹಾವೀರ ರಸ್ತೆಯಲ್ಲಿ ಮದ್ಯದಂಗಡಿ ನಡೆಸಬಾರದು ಎಂದು ಸ್ಥಳೀಯರು ಮಂಗಳವಾರ ತೀವ್ರ ಪ್ರತಿ ಭಟನೆ ನಡೆಸಿ ಅಂಗಡಿ ಮುಚ್ಚಿಸಿದರು. ಮಹಾವೀರ ರಸ್ತೆಯಲ್ಲಿ ಮದ್ಯದ ಅಂಗಡಿಗೆ ಪರವಾನಗಿ ಸಿಕ್ಕಿದೆ ಎಂಬ ವದಂತಿಯಿಂದ ಗ್ರಾಮಸ್ಥರು ಸೋಮ ವಾರವೇ ದಿನವಿಡೀ ಗುಂಪು ಗುಂಪಾಗಿ ನೆರೆದು ವಿರೋಧಿಸಲು ಸಿದ್ಧತೆ ನಡೆ ಸಿದ್ದರು. ರಾತ್ರಿ ಅಂಗಡಿ ತೆರೆದಾಗ ಸ್ಥಳೀಯರು ಭಾರಿ ವಿರೋಧ ವ್ಯಕ್ತ ಪಡಿಸಿದರು. ಆಗ ಅಂಗಡಿ ಮಾಲೀಕರು ಪೊಲೀಸ್‌ ಭದ್ರತೆಯಲ್ಲಿ ಅಂಗಡಿ ತೆರೆದು ವ್ಯಾಪಾರ ನಡೆಸಿದರು.

ಮಂಗಳವಾರ ಬೆಳಿಗ್ಗೆ ವ್ಯವಸ್ಥಿತವಾಗಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಬೆಳಿಗ್ಗೆ ಅಂಗಡಿ ತೆರೆಯುತ್ತಿದ್ದಂತೆ ಮಹಿಳೆಯರು ಗುಂಪು ಗುಂಪಾಗಿ ನೆರೆದು ಅಂಗಡಿ ಮುಚ್ಚುವಂತೆ ಒತ್ತಡ ಹೇರಿದರು. ಮಹಾವೀರ ರಸ್ತೆಯಲ್ಲಿ ಶಾಲೆ, ಆಸ್ಪತ್ರೆ, ಮಸೀದಿ ಆವರಣ ಮತ್ತು ಆಂಜನೇಯ ದೇವಸ್ಥಾನದ ಆವರಣ ಇದ್ದರೂ ನಿಯಮ ಉಲ್ಲಂಘಿಸಿ ಪರ ವಾನಗಿ ನೀಡಲಾಗಿದೆ ಎಂದು ಸ್ಥಳೀಯರು ಅಬಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮತ್ತೆ ಮಸೀದಿಯಿಂದ ಇರುವ ಅಂತರ ಅಳೆಯಬೇಕು ಎಂದು ಅಬ್ದುಲ್‌ ಶುಕೂರ್‌ ಆಗ್ರಹಿಸಿದರು. ಸ್ಥಳೀಯರ ಕೋರಿಕೆಯ ಮೇರೆಗೆ ಜಿಲ್ಲಾ ಪಂಚಾ ಯಿತಿ ಸದಸ್ಯ ಕೆ. ಆರ್.ಪ್ರಭಾಕರ್‌ ಸ್ಥಳಕ್ಕೆ ಭೇಟಿ ನೀಡಿದರು.

‘ಜನರಿಗೆ ಬೇಡವಾಗಿದ್ದು ನಮಗೂ ಬೇಡ’ ಎಂದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತಿ ಮಾತನಾಡಿ, ‘ಸಾರ್ವಜನಿಕರ ತೀವ್ರ ವಿರೋಧ ಇರುವುದರಿಂದ ಈ ಅಂಗಡಿಗೆ ಪರವಾನಗಿ ನೀಡುವುದಿಲ್ಲ’ ಎಂದರು.

‘ಎರಡು ಮದ್ಯದ ಅಂಗಡಿಗಳಿಗೆ ಪಂಚಾಯಿತಿ ಪರವಾನಗಿಗೆ ಅರ್ಜಿ ಬಂದಿದೆ. ಆದರೆ ನಾವು ಎರಡನ್ನೂ ತಿರಸ್ಕರಿಸಿದ್ದೇವೆ’ ಎಂದು ಸದಸ್ಯ ಎಂ.ಬಿ. ಸಂತೋಷ್‌ ಮಾಹಿತಿ ನೀಡಿದರು. ಈ ಮದ್ಯದ ಅಂಗಡಿಯ ಪರವಾನಗಿ ರದ್ದು ಗೊಳಿಸುವಂತೆ ಕಂದಾಯ ನಿರೀಕ್ಷಕ ಕೀರ್ತಿ ಜೈನ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆಗೆ ಮುಚ್ಚಿದ್ದ ಅಂಗಡಿಯನ್ನು ಮತ್ತೆ ತೆರೆಯದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯರು ಪೊಲೀಸರಿಗೆ ತಾಕೀತು ಮಾಡಿದರು. ಮುಖಂಡರಾದ ಶ್ರೇಣಿಕ, ಕೆ.ಸಿ.ಧರಣೇಂದ್ರ ಭಾಗವಹಿಸಿ ಸ್ಥಳೀಯರ ಹೋರಾಟಕ್ಕೆ ಬೆಂಬಲ ನೀಡಿದರು. ರತ್ನವರ್ಮ, ಆ್ಯಂಟೋನಿ, ಶಾಂತಿ ರಾಜ್‌, ವೀರೇಂದ್ರ, ಸತ್ಯೇಂದ್ರ, ಅನಿಲ್‌. ಸುನೀಲ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹರಿಹರಪುರ : ಮದ್ಯದಂಗಡಿ ತೆರವುಗೊಳಿಸದಿರಲು ಆಗ್ರಹ
ಕೊಪ್ಪ : ತಾಲ್ಲೂಕಿನ ಹರಿಹರಪುರ ಪೇಟೆ ಯಿಂದ ಸಮೀಪದ ಶಕ್ತಿನಗರಕ್ಕೆ ಭಾನು ವಾರ ಸ್ಥಳಾಂತರಗೊಂಡಿದ್ದ ಮದ್ಯ ದಂಗಡಿಯನ್ನು   ಅಲ್ಲಿಂದ ತೆರವುಗೊಳಿ ಸದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋಮವಾರ ಗ್ರಾಮ ಪಂಚಾಯಿತಿ ಎದುರು ಜಮಾಯಿಸಿದ ಸಾರ್ವಜನಿಕರು ಪಂಚಾಯಿತಿ ಪಿಡಿಒ, ತಾಲ್ಲೂಕು ಪಂಚಾ ಯಿತಿ ಹಾಗೂ ಅಬಕಾರಿ ಇಲಾಖೆ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ, ಸುಪ್ರೀಂ ಕೋರ್ಟ್‌ ಆದೇಶದಂತೆ ಹರಿಹರಪುರ ಪೇಟೆಯಲ್ಲಿದ್ದ ‘ಪ್ರವೀಣ ಬಾರ್ ಆಂಡ್ ರೆಸ್ಟೋರೆಂಟ್’ ಅನ್ನು ಸರ್ಕಾರದ ನಿಯಮಾವಳಿ ಅನುಸಾರವೇ ಶಕ್ತಿ ನಗರದ ಸಿ.ಕೆ.ಸತೀಶ್ ಒಡೆತನದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದರೂ, ಸ್ಥಳೀಯ ಕೆಲ ವರು ವಿರೋಧ ವ್ಯಕ್ತಪಡಿಸಿರುವುದು ದುರುದ್ದೇಶ ದಿಂದ ಕೂಡಿದೆ’ ಎಂದರು.

‘ಹರಿಹರಪುರ ಸುತ್ತಮುತ್ತ ಇರುವ ಏಕೈಕ ಮದ್ಯದಂಗಡಿ ಇದಾಗಿದ್ದು, ಶಾಲಾ ಕಾಲೇಜುಗಳಿಂದ 220 ಮೀಟರ್‌ ಗಿಂತಲೂ ಹೆಚ್ಚು ದೂರದಲ್ಲಿದೆ. ಸ್ಥಳೀಯ ಕೆಲವು ಪೆಟ್ಟಿಗೆ ಅಂಗಡಿ ಮಾಲೀಕರು ಅನಧಿಕೃತವಾಗಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ನಡೆಸುತ್ತಿದ್ದು, ಈ ಅಧಿಕೃತ ಮದ್ಯದಂಗಡಿ ಇರುವುದರಿಂದ ನಮಗೆ ಅನುಕೂಲವಾಗುತ್ತಿದೆ.

ಇದನ್ನು ತೆರವು ಗೊಳಿಸಿದಲ್ಲಿ ಗ್ರಾಹಕರು ಮದ್ಯಕ್ಕಾಗಿ 10 ಕಿ.ಮೀ. ದೂರದ ಕೊಪ್ಪ ಪಟ್ಟಣಕ್ಕೆ ಅಥವಾ 18 ಕಿ.ಮೀ. ದೂರದ ಶೃಂಗೇರಿಗೆ ಹೋಗಿ ಬರಲು ದುಬಾರಿ ಹಣ ಮತ್ತು ಅಧಿಕ ಸಮಯ ವ್ಯಯ ಮಾಡಬೇಕಾಗುತ್ತದೆ. ಇರುವ ಸ್ಥಳದಲ್ಲಿಯೇ ಮದ್ಯದಂಗಡಿ ಯನ್ನು ಮುಂದು ವರೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಮನವಿಯನ್ನು ಪಂಚಾಯಿತಿ ಪಿಡಿಒ ಪ್ರಸನ್ನ ಮತ್ತು ಅಬಕಾರಿ ಸಬ್‍ ಇನ್ಸ್‌ ಪೆಕ್ಟರ್‌ ಪೃಥ್ವಿ ಅವರಿಗೆ ಸಲ್ಲಿಸ ಲಾಯಿತು. ಹರಿಹರಪುರ ಆಟೊ ಚಾಲಕರ ಸಂಘದ ಅಧ್ಯಕ್ಷ ವಿಜೇಂದ್ರ, ಸರ್ಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಮುಖಂಡರಾದ ಕೋಟೆ ರಮೇಶ್, ಮಾಕಾರು ಮೋಹನ್, ಬಿ. ಎನ್. ಸುರೇಶ್, ಗಣೇಶ್, ಹರ್ಷ, ಕಾಡಪ್ಪ, ಪ್ರಶಾಂತ್, ಸೀತಾರಾಮ್, ಮಂಜು ನಾಥ್, ಗಿರೀಶ್, ನಾಗರಾಜ್ ಇದ್ದರು.

ಜಿಲ್ಲಾಧಿಕಾರಿಗಳಿಗೆ ದೂರು : ಶಕ್ತಿನಗರದಿಂದ ಮದ್ಯದಂಗಡಿ ಯನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸು ವವರ ಗುಂಪು ಮತ್ತು ತೆರವುಗೊಳಿಸಬಾರದೆಂದು ಒತ್ತಾಯಿಸುವವರ ಗುಂಪುಗಳು ಸೋಮವಾರ ಪ್ರತ್ಯೇಕ ಬಸ್‌ಗಳಲ್ಲಿ ಚಿಕ್ಕಮಗಳೂರಿಗೆ ತೆರಳಿ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಡಿಸಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT