ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಉದ್ಯೋಗ ಮೇಳ ಆಯೋಜನೆ

Last Updated 6 ಜುಲೈ 2017, 5:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೌಶಲ ಅಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಂಡಿರುವವರಿಗೆ ಆಗಸ್ಟ್ 1ರಂದು ಉದ್ಯೋಗ ತರಬೇತಿ ಆರಂಭಿಸಲಾಗುತ್ತದೆ. ಸೆಪ್ಟೆಂಬರ್ ಮೊದಲ ಶನಿವಾರ ಮತ್ತು ಭಾನುವಾರ ಮುರುಘಾಮಠದ ಆವರಣದಲ್ಲಿ ಉದ್ಯೋಗ ಮೇಳವನ್ನೂ ಆಯೋಜಿಸಲಾಗುತ್ತದೆ’ ಎಂದು ಕೌಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರ ನಿವಾಸದಲ್ಲಿ ಕೌಶಲ ತರಬೇತಿ ಕುರಿತು ಜಿಲ್ಲಾಧಿಕಾರಿ ಜತೆ ಸುದೀರ್ಘ\ವಾಗಿ ಚರ್ಚಿಸಿ ತರಬೇತಿ ಮತ್ತು ಉದ್ಯೋಗ ಮೇಳಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೌಶಲ ಯೋಜನೆ ಕಾರ್ಯಾಗಾರಗಳು ಯಶಸ್ವಿಯಾಗಿವೆ. ಇದೇ 15ರಂದು ‘ವಿಶ್ವ ಕೌಶಲ ದಿವಸ್’ ಅಂಗವಾಗಿ ಮೈಸೂರಿನಲ್ಲಿ ಕೌಶಲ ಅಭಿವೃದ್ಧಿ ತರಬೇತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ’ ಎಂದು ವಿವರಿಸಿದರು.

ಪ್ರತಿ ತಾಲೂಕಿನಲ್ಲಿ ಕೂಡ ಕಾರ್ಯಾಗಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೌಶಲ ಅಭಿವೃದ್ದಿ ಯೋಜನೆಯಡಿ ನಿರುದ್ಯೋಗಿ­ಗಳಿಗೆ ತರಬೇತಿ ನೀಡಲು ರಾಜ್ಯದಾದ್ಯಂತ 230 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಈಗಿರುವ ಉದ್ಯೋಗ ವಿನಿಮಯ ಅಧಿಕಾರಿಗಳನ್ನೇ ನೇಮಿಸಿ ಕೇಂದ್ರದಲ್ಲಿ ಕನಿಷ್ಠ ಐವರು ಸಿಬ್ಬಂದಿ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗೆ ವಿವರಿಸಿದರು.

ಶ್ರೀರಂಗಯ್ಯ ಮಾತನಾಡಿ, ಕೌಶಲ ಅಭಿವೃದ್ದಿ ಯೋಜನೆಯಡಿ ನಿರುದ್ಯೋಗಿಗಳಿಗೆ ಸಿಗುವ ತರಬೇತಿ ಫಲಪ್ರದವಾಗಬೇಕಾದರೆ ವಿದ್ಯಾರ್ಥಿ ವೇತನ ನೀಡುವ ಬದಲು ವಸತಿಯುತ ತರಬೇತಿ ಒದಗಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುರಳಿ, ‘ಚಿತ್ರದುರ್ಗ ಜಿಲ್ಲೆಯಲ್ಲಿ 18,917 ಅಭ್ಯರ್ಥಿಗಳು, ರಾಜ್ಯದಲ್ಲಿ 6.50 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ’ ಎಂದರು.

ಗ್ರಾಮೀಣ ಯುವಕರಿಗೆ, ಬಡ ರೈತರ ಮಕ್ಕಳಿಗೆ ಕೌಶಲ ಅಭಿವೃದ್ದಿ ನಿಗಮದ ಮೂಲಕ ವಿದೇಶಕ್ಕೆ ಹೋಗುವ ಅವಕಾಶ ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ಯುರೋಪ್, ಇಟಲಿ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ದೇಶಗಳ ಜೊತೆ ಮಾತುಕತೆ ನಡೆದಿದೆ ಎಂದರು. ‘ಉದ್ಯೋಗ ತರಬೇತಿ ನೀಡುವುದಕ್ಕಾಗಿ ಪ್ರತಿಷ್ಠಿತ ಕಂಪೆನಿಗಳ ತರಬೇತು
ದಾರರನ್ನು ಬಳಸಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನೆರವು ಪಡೆದಿದ್ದೇವೆ’ ಎಂದು ಹೇಳಿದರು.

ಬೆಂಗಳೂರಿನ ಜಿಟಿಟಿಸಿ, ಚಿತ್ರದುರ್ಗದ ರುಡ್‌ಸೆಟ್ ಸಂಸ್ಥೆ, ಜೆಎಂಐಟಿ ಎಂಜಿನಿಯರಿಂಗ್ ಕಾಲೇಜು ಹಾಗೂ ಮತ್ತಿತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿನ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ ಕೊಡಿಸಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಶಿಷ್ಯವೇತನವಿಲ್ಲದೆ, ಅದೇ ವೆಚ್ಚದಲ್ಲಿ ವಾಸ್ತವ್ಯ ಕಲ್ಪಿಸಿಕೊಟ್ಟು, ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ ಉಚಿತವಾಗಿ ತರಬೇತಿ ನೀಡಲೂ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT