ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನಿಂದ ಪಕ್ಷ ಸಂಘಟಿಸಿ

Last Updated 6 ಜುಲೈ 2017, 8:54 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪಕ್ಷದ ಎಲ್ಲ ಕಾರ್ಯಕರ್ತರು ಒಂದುಗೂಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ಸಾಮರ್ಥ್ಯ ತೋರಿಸಬೇಕು ಎಂದು  ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಹೇಳಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌  ಇಲ್ಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸವಾಗಬೇಕು. ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವತ್ತ ಪ್ರತಿಯೊಬ್ಬರು ಹೆಜ್ಜೆ ಇಡಬೇಕು. ಜಿಲ್ಲೆಯ ಎಲ್ಲ ಭಾಗದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಮುಂದಿನ  ವಿಧಾನಸಭಾ ಚುನಾವಣೆಯಲ್ಲಿ  ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾವಿರಾರೂ ಕೋಟಿ ಹಣವನ್ನು ಖರ್ಚು ಮಾಡಿದೆ. ಇದರ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ₹50 ಸಾವಿರ ಕೃಷಿ ಸಾಲವನ್ನು ಕಾಂಗ್ರೆಸ್ ಸರ್ಕಾರ ಮನ್ನಾ ಮಾಡುವ ಮೂಲಕ ರೈತರ ಆರ್ಥಿಕ ಸ್ಥಿತಿ ಸುಧಾರಿಸುವಂತೆ ಮಾಡಿದೆ.

ಇದರಲ್ಲಿ ಜಿಲ್ಲೆಯ ರೈತ ಕುಟುಂಬಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಇದನ್ನು ಮನಗಂಡು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮತದಾರರು ಬೆಂಬಲ ನೀಡಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಪಕ್ಷದ ಮುಖಂಡರು ಮುಂದಿನ ಚುನಾವಣೆಯಲ್ಲಿ  ಗೆಲುವಿಗೆ  ಬೆಂಬಲ ನೀಡಬೇಕು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹೆಸರಿಗೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು. ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರವನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಕೈ ಜೋಡಿಸಬೇಕು ಎಂದರು.

ಮುಖಂಡ ಲಾಲಾ ಅಯ್ಯಪ್ಪ ಮಾತನಾಡಿ, ಬಿರುನಾಣಿ ರಸ್ತೆಗೆ ಮಾಜಿ ಸಂಸದ ವಿಶ್ವನಾಥ್ ಅವರು ಗ್ರಾಮ ಸಡಕ್ ಯೋಜನೆಯಡಿಯಲ್ಲಿ  ₹5.50 ಕೋಟಿ ಅನುದಾನ ನೀಡಿದ್ದರು.  ಆದರೆ, ಬಿಜೆಪಿ ಸಂಸದ ಹಾಗೂ ಶಾಸಕರು ಇದು ಬಿಜೆಪಿ ಸರ್ಕಾರದ ಅನುದಾನ ಎಂದು ಹೇಳುತ್ತಿದ್ದಾರೆ.  ಇದರ ಬಗ್ಗೆ ಜನತೆಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ ಎಂದರು,

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಮಾತನಾಡಿದರು.
ಮುಕ್ಕಾಟೀರ ಶಿವುಮಾದಪ್ಪ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ  ಆಯ್ಕೆಯಾ ಗಿರುವ ಜಮ್ಮಡ ಸೋಮಣ್ಣ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಕೆ. ಕುಸುಮಾ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಕೆ ಪೊನ್ನಪ್ಪ, ಅಹಮ್ಮದ್, ಕಾರ್ಯದರ್ಶಿ ವಾಸು ಕುಟ್ಟಪ್ಪ,  ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಕೊರಕುಟ್ಟೀರ ಸರಚಂಗಪ್ಪ, ಪರಿಶಿಷ್ಟ ಜಾತಿ ಹಾಗೂ ಪಂಗಡ ವಿಭಾಗದ ಅಧ್ಯಕ್ಷ ಮುರುಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT