ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯೂರು ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

Last Updated 6 ಜುಲೈ 2017, 9:36 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಬ್ರಹ್ಮರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ತೇರು ಎಳೆದು ಪುನೀತರಾದರು. ನೂರಾರು ಹೊಸ ಜೋಡಿಗಳು ತೇರು ಎಳೆದು ಹರಕೆ ತೀರಿಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರತಿಯಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು.  

ದೇವಸ್ಥಾನದಿಂದ ಹೊರಟ ರಥೋತ್ಸವವು  ತೇರು ಬೀದಿ ಹಾಗೂ ಅರಳೇಪೇಟೆಯ ಮೂಲಕ ಸಾಗಿಬಂತು. ನೆಹರೂ ವೃತ್ತದ ಬಳಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಭಕ್ತರು ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯಲು ಮುಗಿಬಿದ್ದರು. ಗೊರವಯ್ಯ, ದಾಸಪ್ಪ  ಸಾವಿರಾರು ಮಹಿಳೆಯರು ರಥೋತ್ಸವಕ್ಕೆ ಹಣ್ಣು, ಕಾಯಿ ಪೂಜೆ ಸಲ್ಲಿಸಿದರು. 

ವಿಶೇಷ: ಆಷಾಢದಲ್ಲಿ ನಡೆಯುವ ಈ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ನವದಂಪತಿ ಬಂದು ತೇರು ಎಳೆಯುವ ಮೂಲಕ ದಾಂಪತ್ಯ ಜೀವನಕ್ಕೆ ಮುಂದಾಗುವುದು ವಿಶೇಷ. ಸಂಘ ಸಂಸ್ಥೆಗಳು ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು ಜಾತ್ರೆಗೆ ಮೆರುಗು ತಂದಿದೆ.

ಶಾಸಕ ಸಿ.ಬಿ.ಸುರೇಶ್‌ಬಾಬು, ತಹಶೀಲ್ದಾರ್ ಗಂಗೇಶ್,ಧರ್ಮದರ್ಶಿ ಸಿ.ಪಿ.ಚಂದ್ರಶೇಖರಶೆಟ್ಟಿ, ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರಾದ ಸಿ.ಎಸ್.ರಮೇಶ್, ಎಂ.ಕೆ.ರವಿಚಂದ್ರ, ಡಿವಿಪಿ ಶಾಲಾ ಕಾರ್ಯದರ್ಶಿ ಸಿ.ಎಸ್.ನಟರಾಜು ಇದ್ದರು.

ಪುರಸಭಾ ಮುಂಭಾಗ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕನ್ನಡ ಸಂಘದ ವೇದಿಕೆಯಲ್ಲಿ ಅನ್ನಪೂಣೇಶ್ವರಿ ಕಲಾಸಂಘ ಹಾಗೂ ಸಿ.ಬಿ.ಎಸ್ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಮಟ್ಟದ ನೃತ್ಯ ಕಾರ್ಯಕ್ರಮ ನಡೆಯಿತು.

ಸಂಭ್ರಮದ ಲಕ್ಷ್ಮಿನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ
ಮಧುಗಿರಿ: ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಲಕ್ಷ್ಮಿನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಜರುಗಿತು.ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ  ಮೆರವಣಿಗೆ ಮೂಲಕ ತಂದು, ರಥದಲ್ಲಿ ಪ್ರತಿಷ್ಠಾಪಿಸಿದರು. ಭಕ್ತರು ತೇರಿನ ಕಳಸಕ್ಕೆ  ಹೂ ಮತ್ತು ಬಾಳೆಹಣ್ಣು ಎರಚುವ ಮೂಲಕ ಹರಕೆ ತೀರಿಸಿದರು.

ಬ್ರಹ್ಮರಥೋತ್ಸವ ಆಷಾಢ ಮಾಸದಲ್ಲಿ ನಡೆಯುವುದರಿಂದ ರಾಜ್ಯ ಮತ್ತು ನೆರೆ ರಾಜ್ಯದ ಸೀಮಾಂಧ್ರ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ  ನೂತನ ವಧು- ವರರು ಜಾತ್ರೆಗೆ ಬಂದಿದ್ದರು.

ಜಾತ್ರೆಗೆ ಬಂದ ಭಕ್ತರಿಗೆ ಜಾತ್ರೆಯ ಆಚರಣಾ ಸಮಿತಿ, ಮುಖಂಡ ಆರ್.ಎಲ್.ಜಾಲಪ್ಪ ಕುಟುಂಬದವರಿಂದ ಅನ್ನಸಂತರ್ಪಣೆ ಹಾಗೂ ದಾನಿಗಳಿಂದ ಪ್ರಸಾದ, ಪಾನಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಕೆ.ಎನ್.ರಾಜಣ್ಣ , ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಂತಲಾ,  ಎಚ್.ಕೆಂಚಮಾರಯ್ಯ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ತಹಶೀಲ್ದಾರ್ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಮುಖಂಡರಾದ ಎನ್.ಗಂಗಣ್ಣ, ಆಧಿನಾರಾಯಣರೆಡ್ಡಿ, ದೇವಾಲಯದ ಉಪ ಅರ್ಚಕರಾದ ಎನ್.ಆರ್.ಮಧುಸೂಧನ ಭಟ್ಟರು ಹಾಗೂ ಕೆ. ಶ್ರೀನಿವಾಸಭಟ್ಟರು ಇದ್ದರು.

ಗುಬ್ಬಿ: ಏಕಾದಶಿ ರಥೋತ್ಸವ
ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಮೂಗನಾಯಕನಕೋಟೆಯ ಏಕಾದಶಿ ಪ್ರಯುಕ್ತ ಲಕ್ಷ್ಮಿರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.

ಮೂಗನಾಯಕನಕೋಟೆ ಗ್ರಾಮದ ಕೊಲ್ಲಾಪುರದಮ್ಮದೇವಿ ಮತ್ತು ಸಾಗಸಂದ್ರಗ್ರಾಮದ ಕೆಂಪಮ್ಮದೇವಿಯೊಂದಿಗೆ ಲಕ್ಷ್ಮಿರಂಗನಾಥಸ್ವಾಮಿಯನ್ನು ಮೆರವಣಿಗೆ ನಡೆಸಲಾಯಿತು. ಹೂವಿನಿಂದ ಸಿಂಗರಿಸಿದ್ದ ರಥೋತ್ಸವದಲ್ಲಿ ಕುಳ್ಳಿರಿಸಲಾಯಿತು. ತೇರಿನ ಕಳಸ ಮತ್ತು ತೇರಿಗೆ ದವನ ಸಿಕ್ಕಿಸಿದ ಬಾಳೆಹಣ್ಣು, ಹೂವುಗಳನ್ನು ಎರಚಿ ಭಕ್ತರು ತಮ್ಮ ಭಕ್ತಿ ಮೆರೆದರು. ನವ ವಿವಾಹಿತ ಜೋಡಿಗಳು ಬಂದು ಬಾಳು ಬಂಗಾರವಾಗಲಿ ಎಂದು ಹರಸಿದರು.

ಜಾತ್ರಾ ಮಹೋತ್ಸವ ಆಚರಣಾ ಸಮಿತಿ ಮತ್ತು ದಾನಿಗಳು ಭಕ್ತರಿಗೆ ಪ್ರಸಾದ, ಪಾನಕ ವ್ಯವಸ್ಥೆ ಮಾಡಿದ್ದರು. ತಾಲ್ಲೂಕಿನ ನಿಟ್ಟೂರು, ಸಾಗಸಂದ್ರ, ಬೆಟ್ಟದಹಳ್ಳಿ, ಹಲಸಿನಮರದನಾಗೇನಹಳ್ಳಿ, ಹಾಗಲವಾಡಿ, ಚೇಳೂರು ಹೋಬಳಿಯ ಭಕ್ತರು ಭಕ್ತಿಮೆರೆದರು.

ಲಕ್ಷ್ಮಿರಂಗನಾಥಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ಮಾರುತಿಕುಮಾರ್, ಮುಖಂಡ ವಸಂತ್ ಕುಮಾರ್, ಅರ್ಚಕ ರಾಘವೇಂದ್ರಾಚಾರ್, ಗ್ರಾಮಪಂಚಾಯಿತಿ ಸದಸ್ಯ ಎಂ.ವಿ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT