ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಗರವಳ್ಳಿ: ಮದ್ಯದ ಅಂಗಡಿ ತೆರವಿಗೆ ಆಗ್ರಹ

Last Updated 7 ಜುಲೈ 2017, 6:22 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ನಮ್ಮ ಕೇರಿಗೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತರಬೇಡಿ. ಅದರಿಂದ ನಮ್ಮ ಕುಟುಂಬಗಳು ಬೀದಿಗೆ ಬರಲಿವೆ. ಬಡವರನ್ನು ಬದುಕಲು ಬಿಡಿ’ ಎಂದು ಮೇಗರವಳ್ಳಿ ಬಾವಿಕೇರಿ ಮಹಿಳೆಯರು ಹಾಗೂ ಗ್ರಾಮಸ್ಥರು  ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಿದರು.

‘ವಸತಿ ಪ್ರದೇಶಕ್ಕೆ ಸ್ಥಳಾಂತರಗೊಂಡ ಮದ್ಯದಂಗಡಿಯನ್ನು ಮೊದಲು ತೆರವುಗೊಳಿಸಿ. ಯಾವ ಕಾನೂನು, ನಿಯಮದ ಅಡಿ ಅನುಮತಿ ನೀಡಿದ್ದೀರಿ ಎಂದು ತಿಳಿಸಿ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

‘ಮೇಗರವಳ್ಳಿ ಗ್ರಾಮದ ಬಾವಿಕೇರಿ ರಸ್ತೆಯ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಆರಂಭಕ್ಕೆ ಅನುಮತಿ ನೀಡಿರುವುದು ಪಂಚಾಯತ್‌ರಾಜ್‌, ಅಬಕಾರಿ ಕಾಯ್ದೆ ನಿಯಮಗಳಿಗೆ ವಿರುದ್ಧವಾಗಿದೆ. ಬಾವಿಕೇರಿಯಲ್ಲಿ ಪರಿಶಿಷ್ಟ ಜಾತಿ, ವರ್ಗದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿವೆ. ಸ್ಮಶಾನ, ಸ್ಮಾರಕ, ದೇವಸ್ಥಾನ, ಆಸ್ಪತ್ರೆ ಸಮೀಪದಲ್ಲಿವೆ. ಇಂಥ ಕಡೆ ಮದ್ಯದಂಗಡಿ ತೆರೆಯಬಹುದೇ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ಅವಕಾಶ ನೀಡಲಾಗಿದೆ. ತೆರವುಗೊಳಿಸಲು ಸಾಧ್ಯವಿಲ್ಲ. ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಅರ್ಜಿ ನೀಡಿ. ಪರಿಶೀಲನೆ ಮಾಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.

ಇದರಿಂದ ಕೆರಳಿದ ಗ್ರಾಮಸ್ಥರು, ‘ಅರ್ಜಿ ನೀಡಿ ಉತ್ತರ ಪಡೆಯುವ ಅಗತ್ಯವಿಲ್ಲ. ಮದ್ಯದಂಗಡಿಯನ್ನು ತೆರವುಗೊಳಿಸಿ’ ಎಂದು ಪಟ್ಟು ಹಿಡಿದರು. ಮದ್ಯದಂಗಡಿ ಸ್ಥಳಾಂತರಕ್ಕೆ 4 ದಿನ ಕಾಲಾವಕಾಶ ಬೇಕು ಎಂದು ಅದರ ಮಾಲೀಕರು ಕೋರಿದ್ದಾರೆ. ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ
ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT