ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ಸಮೀಕ್ಷೆಗೆ ಶಾಸಕರಿಂದ ಸೂಚನೆ

Last Updated 7 ಜುಲೈ 2017, 6:27 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿವಿಧ ವಸತಿ ಯೋಜನೆಗಳಡಿ ಮನೆಗಳ ಹಂಚಿಕೆಗೆ ಮುನ್ನ ಸಮೀಕ್ಷೆ ನಡೆಸಿ ಬಿಡುಗಡೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಇದನ್ನು ಬಗೆಹರಿಸಲು ಪುನಃ ಸಮೀಕ್ಷೆ ನಡೆಸುವಂತೆ ಆಶ್ರಯ ಯೋಜನೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಅರ್ಜಿದಾರರು, ಫಲಾನುಭವಿಗಳ ಅಹವಾಲು ಸ್ವೀಕರಿಸಿದ ನಂತರ ಪೌರಾಯುಕ್ತ, ತಹಶೀಲ್ದಾರರೊಂದಿಗೆ ಚರ್ಚಿಸಿ, ಪುನರ್ ಸಮೀಕ್ಷೆಗೆ ಸೂಚಿಸಿದರು. ಆಗಸ್ಟ್ 20ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ನಗರಸಭೆ ಸಿಬ್ಬಂದಿಗೆ ಗಡುವು ನೀಡಿದರು.

‘ಕಳೆದ ಬಾರಿ ನಡೆಸಿರುವ ಸಮೀಕ್ಷೆ ಸಮರ್ಪಕವಾಗಿಲ್ಲ. ಹೀಗಾಗಿ ಮರು ಸಮೀಕ್ಷೆ ಅಗತ್ಯವಾಗಿದೆ. ಇದರಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಆರೇಳು ವರ್ಷಗಳಿಂದ ವಿವಿಧ ಕಾರಣಕ್ಕೆ ಮನೆ ನಿರ್ಮಾಣ, ಹಂಚಿಕೆ ನನೆಗುದಿಗೆ ಬಿದ್ದಿದೆ. ಶೀಘ್ರ ಈ ಕಾರ್ಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪುನಃ ನಗರಸಭೆ ಅಧಿಕಾರಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಅರ್ಜಿ ಪರಿಶೀಲಿಸಬೇಕು ಎಂದರು.

‘ರಾಜೀವ್ ಗಾಂಧಿ ಆವಾಸ್ ಯೋಜನೆ, ವಾಜಪೇಯಿ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗಾಂಧಿನಗರ, ಸಾದಿಕ್ ನಗರ, ಬಾಬು ಜಗಜೀವನ್ ರಾಂ ನಗರ, ಕಂದಾಯಗಿರಿ ನಗರ, ಕವಾಡಿಗರಹಟ್ಟಿ ಆಶ್ರಯ ಬಡಾವಣೆ –1  ಮತ್ತು 2ನೇ ಹಂತದಲ್ಲಿ ಮನೆಗಳನ್ನು ವಿತರಿಸಲಾಗಿತ್ತು. ಆದರೆ ಕೆಲವರು ಅಕ್ರಮವಾಗಿ  ಬಾಡಿಗೆ, ಭೋಗ್ಯಕ್ಕೆ ನೀಡಿದ್ದಾರೆ. ಇನ್ನೂ ಕೆಲವರು ಮಾರಾಟ ಮಾಡಿರುವ ಸಾಧ್ಯತೆಗಳಿವೆ. ಈ ಎಲ್ಲ ಅಂಶಗಳು ಸಮೀಕ್ಷೆ ವೇಳೆ ತಿಳಿದುಬಂದಿವೆ’ ಎಂದು ಹೇಳಿದರು.

‘ಸುಮಾರು 170 ಮನೆಗಳು ಹೀಗೆ ಅಕ್ರಮವಾಗಿ ಬಾಡಿಗೆ ನೀಡಿರುವುದು ಸಮೀಕ್ಷೆ ವೇಳೆ ಗೊತ್ತಾಗಿದೆ. ಅವುಗಳನ್ನು ಹೆದ್ದಾರಿ ನಿರ್ಮಾಣದ ವೇಳೆ ಮನೆ ಕಳೆದುಕೊಂಡ 12 ಮಂದಿಗೆ ಮನೆ ಕೊಡುತ್ತಿದ್ದೇವೆ. ಜತೆಗೆ ಮಾರುತಿ ನಗರ ಹಾಗೂ ಕವಾಡಿಗರಹಟ್ಟಿಯಲ್ಲಿ ಹೆದ್ದಾರಿ ಹಾಗೂ ರೈಲ್ವೆ ಹಳಿ ವಿಸ್ತರಣೆಯಿಂದ ನಿವೇಶನ ಕಳೆದುಕೊಳ್ಳುವವರಿಗೂ
ಈ ಮನೆಗಳ ಬೀಗದ ಕೀ ನೀಡಲಾಗುವುದು’ ಎಂದರು.

35 ವಾರ್ಡ್‌ಗಳಲ್ಲಿ ನಗರಸಭೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಅರ್ಜಿದಾರರ ಮಾಹಿತಿ ಸಂಗ್ರಹಿಸಲಿದ್ದಾರೆ. ಒಟ್ಟು 13,261 ಅರ್ಜಿಗಳಲ್ಲಿ  ಸದ್ಯಕ್ಕೆ 4219 ಮಾತ್ರ ಅರ್ಹವಾಗಿವೆ. ತಪ್ಪು ಮಾಹಿತಿ ನೀಡಿದ 6726 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ 2316 ಜನರು ಸಮೀಕ್ಷೆ ವೇಳೆ ನಗರಸಭೆ ಅಧಿಕಾರಿಗಳಿಗೆ ಸಿಕ್ಕಿಲ್ಲ. ಇವುಗಳನ್ನು ಮರು ಸಮೀಕ್ಷೆ ವೇಳೆ ಪತ್ತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪುನರ್ ಸಮೀಕ್ಷೆ ನಂತರ ಜಾತಿವಾರು ಅರ್ಜಿ ವಿಂಗಡಿಸಲಾಗುವುದು. ಯಾವ ಸಮುದಾಯಕ್ಕೆ ಎಷ್ಟು ಮನೆಗಳನ್ನು ನೀಡಬೇಕೋ ಅಷ್ಟನ್ನು ಲಾಟರಿ ಮೂಲಕ ಮೂಲಕ ಆಯ್ಕೆ ಮಾಡಲಾಗುವುದು. ನಂತರ ರೋಸ್ಟರ್ ಪದ್ಧತಿ ಮೂಲಕ ಹಂತ ಹಂತವಾಗಿ ಉಳಿದವರಿಗೆ ನೀಡಲಾಗುವುದು ಎಂದು ತಿಳಿಸಿದರು. ನಗರ ಆಶ್ರಯ ಸಮಿತಿ ಸದಸ್ಯ ಕಾರ್ಯದರ್ಶಿ, ಪೌರಾಯುಕ್ತ ಚಂದ್ರಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT