ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಆಷಾಢ ಉತ್ಸವಕ್ಕೆ ಸಂಭ್ರಮದ ತೆರೆ

Last Updated 7 ಜುಲೈ 2017, 6:55 IST
ಅಕ್ಷರ ಗಾತ್ರ

ಸುರಪುರ: ನಾಲ್ಕು ದಿನಗಳಿಂದ ನಗರದ ಸುಪ್ರಸಿದ್ಧ ರುಕ್ಮಾಯಿ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿದ ಆಷಾಢ ಉತ್ಸವ ಗುರುವಾರ ರಂಗು ಪಡೆದುಕೊಂಡಿತು. ಉತ್ಸವದ ಮುಖ್ಯ ಆಕರ್ಷಣೆಯಾದ ಗೋಪಾಳ ಕಾವಲಿ (ಮೊಸರು ಗಡಿಗೆ ಒಡೆಯುವ ಸ್ಪರ್ಧೆ) ವೀಕ್ಷಿಸಲು ನೂರಾರು ಭಕ್ತರು ಸೇರಿದ್ದರು.

ಬೆಳಿಗ್ಗೆ ವಿಶೇಷ ಪೂಜೆ ನಡೆದ ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ಹರೇ ವಿಠಲ ಸೇವಾ ಸಮಿತಿಯ ಕಾರ್ಯಕರ್ತರು ಪಲ್ಲಕ್ಕಿ ಹೊತ್ತು ನಗರ ಪ್ರದಕ್ಷಿಣೆ ಮಾಡಿದರು. ಮುಖ್ಯ ಅರ್ಚಕ ಗುರುರಾಜಾಚಾರ್ಯ ಪಾಲ್ಮೂರ ಪಲ್ಲಕ್ಕಿಯ ಮುಂದಿದ್ದು ಪೂಜಾ ವಿಧಿ ವಿಧಾನ ನಡೆಸಿದರು.

ಪ್ರತಿ ಮನೆಯ ಮುಂದೆ ಮಹಿಳೆಯರು, ಉತ್ಸವ ಮೂರ್ತಿಗೆ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಕೆಲವರು ಅರ್ಚಕರ ಪಾದ ತೊಳೆದು ನಮಿಸಿದರು. ಮೆರವಣಿಗೆಯುದ್ದಕ್ಕೂ ಭಜನೆ ಆಕರ್ಷಕವಾಗಿತ್ತು. ಭಜನೆಗೆ ತಕ್ಕ ಕುಣಿತ ಕಣ್ಮನ ಸೆಳೆಯಿತು. ‘ಹರೇ ವಿಠಲ’ ಮಂತ್ರಘೋಷ ಮೊಳಗಿತು.

ಪಲ್ಲಕ್ಕಿ ಉತ್ಸವ ಮತ್ತೆ ದೇವಸ್ಥಾನಕ್ಕೆ ಬಂದ ನಂತರ ವಿಶೇಷ ಮಂಗಳಾರತಿ ನಡೆಸಲಾಯಿತು. ರಂಗವಲ್ಲಿಯಿಂದ ಚಿತ್ತರಿಸಿದ ಮೊಸರು ಮಡಿಕೆಯನ್ನು ಪೂಜಿಸಿ ದೇವಸ್ಥಾನದ ನವರಂಗದಲ್ಲಿ ಇಡಲಾಯಿತು. ಮಹಿಳೆಯರು ಆಗಮಿಸಿ ಮೊಸರನ್ನು ಮಡಿಕೆಯಲ್ಲಿ ಭಕ್ತಿಯಿಂದ ಹಾಕುವ ದೃಶ್ಯ ಕಂಡು ಬಂತು.

ನಂತರ ಮಡಿಕೆಯನ್ನು ದೇವಸ್ಥಾನದ ಮುಂದುಗಡೆ ಎತ್ತರದ ಸ್ಥಳದಲ್ಲಿ ಎರಡು ಕಡೆಯಿಂದ ಹಗ್ಗ ಬಿಗಿದು ಹಿಡಿಯಲಾಯಿತು. ಗೋಪಾಳ ಕಾವಲಿಗೆ ಮುಂಚೆ ಯುವಕರು ರಂಗಿನಾಟದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಂತರ ಒಬ್ಬರ ಮೇಲೊಬ್ಬರು ಹತ್ತಿ ಮಡಿಕೆಯನ್ನು ಒಡೆಯಲು ಯತ್ನಿಸಿದರು.

ಅವರ ಮೇಲೆ ಕೆಳಗಿದ್ದ ಯುವಕರು ಬಣ್ಣ ಎರಚುವುದು ನಡೆದೇ ಇತ್ತು. ಇನ್ನೇನು ಯುವಕರು ಮಡಿಕೆ ಹತ್ತಿರ ಬಂದರು ಎನ್ನುವಾಗಲೇ ಮಡಿಕೆಯನ್ನು ಹಗ್ಗದಿಂದ ಹಿಡಿದಿದ್ದ ಯುವಕರು ಮೇಲಕ್ಕೆತ್ತುತ್ತಿದ್ದರು. ಮೇಲೆರಿದ್ದ ಯುವಕರು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ಸೇರಿದ್ದ ಜನರಲ್ಲಿ ಮನರಂಜನೆ ಒದಗಿಸಿತು.

ಕೊನೆಗೂ ಒಬ್ಬರ ಸಹಾಯದಿಂದ ಇನ್ನೊಬ್ಬರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿ ಮೇಲೆ ಏರಿ ಮಡಿಕೆ ಒಡೆಯಲು ಯಶಸ್ವಿಯಾದರು. ಸೇರಿದ್ದ ಭಕ್ತ ಸಮೂಹ ಹೋ.. ಹೇ..ಎಂದು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಭಕ್ತರು ಮಡಿಕೆಯಿಂದ ಸಿಡಿದ ಮೊಸರನ್ನು ಕೈಯಲ್ಲಿ ಹಿಡಿದು ಸೇವಿಸಿದರು. ಮಹಿಳೆಯರು ಒಡೆದ ಮಡಿಕೆಯ ಚೂರುಗಳನ್ನು ಆಯ್ದು ತಮ್ಮ ಮನೆಗೆ ಒಯ್ದರು.

ನಂತರ ಪುಷ್ಕರಣಿಯಲ್ಲಿ ಯುವಕರು ಅವಭೃತ ಸ್ನಾನ ಕೈಗೊಂಡರು. ನೀರಿನಲ್ಲಿ ನೆಗೆದು, ಸುರಂಗ ಹೊಡೆದು ಸಂಭ್ರಮಿ ಸಿದರು. ಒದ್ದೆ ಬಟ್ಟೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿ ರುಕ್ಮಾಯಿ ಪಾಂಡುರಂಗನ ದರ್ಶನ ಪಡೆದರು.  ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

ಬಿ. ತಿಮ್ಮಣ್ಣ ಗುತ್ತೇದಾರ, ಶ್ರೀನಿವಾಸ ದೇವರು,  ಶ್ರೀನಿವಾಸ ಪ್ರತಿನಿಧಿ, ವೀರೆಂದ್ರ ಕೋಸ್ಗಿ, ರಾಘವೇಂದ್ರ ಗೆದ್ದಲಮರಿ, ರವಿಚಂದ್ರ ಗುತ್ತೇದಾರ, ರಾಘವೇಂದ್ರ ಶಾರದಳ್ಳಿ, ಪ್ರಕಾಶ ಕುಲ್ಕರ್ಣಿ, ಶ್ರೀಪಾದ ದೇಶಪಾಂಡೆ, ಶ್ರೀನಿವಾಸ ದೇವಡಿ, ಅಮೃತಗೌಡ ಪಾಟೀಲ, ರಮೇಶ ಕುಲ್ಕರ್ಣಿ, ಸುಭಾಸ ಕೋಸ್ಗಿ, ಓಂಕಾರಭಟ್ ಜೋಷಿ, ವಿರೇಶ ಕೋಸ್ಗಿ, ಪ್ರವೀಣ ಲಾಯದಹುಣಸಿ, ಪವನ ವಿಶ್ವಕರ್ಮ, ಮಿಥುನ ಬಾಡಿಹಾಳ, ಶ್ರೀಕರ ಐಜಿ, ಕೃಷ್ಣ ಪಾಟೀಲ, ಮಹೇಶ ಜಾಲಗಾರ, ವೆಂಕಟೇಶ ಹುದ್ದಾರ, ರಾಘವೇಂದ್ರ ಗುತ್ತೇದಾರ, ಮಲ್ಲಕಾರ್ಜುನ ಆನೇಗುಂದಿ,ಶಿವು ಬಿರಾದಾರ, ನವೀನಕೃಷ್ಣ ಸಿಂಧಗಿರಿ, ವಿಶಾಲ ಮಸ್ಕಿ, ಪವನ ಕುಲಕರ್ಣಿ, ಓಂಕಾರಭಟ್ ಜೋಷಿ, ಅವಿನಾಶ ಮುನಮುಟಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT