ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಮರಳು ತೆಗೆದರೆ ಕ್ರಮ

Last Updated 7 ಜುಲೈ 2017, 8:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದರು. ಬೆಳಿಗ್ಗೆ 10.30ರಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಮುಂಭಾಗ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಸಂಜೆ ವೇಳೆಗೆ ಸಾರ್ವಜನಿಕರ 70 ಅರ್ಜಿಗಳ ವಿಚಾರಣೆಯನ್ನು ಜಿಲ್ಲಾಧಿಕಾರಿ ನಡೆಸಿದರು.

ಕಡೂರು ತಾಲ್ಲೂಕಿನ ವಕ್ಕಲಗೆರೆ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮದ ಹತ್ತಿರದಲ್ಲಿರುವ ವೇದಾವತಿ ನದಿಯಿಂದ ಮರಳು ತೆಗೆದುಕೊಳ್ಳಲು ಅನುಮತಿ ನೀಡುವಂತೆ  ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ ಪ್ರತಿಕ್ರಿಯಿಸಿ ಭವನ ನಿರ್ಮಾಣಕ್ಕೆ ಎಂ ಸ್ಯಾಂಡ್ ಉಪಯೋಗಿಸಿ. ಮರಳು ನೀಡಲು ಅರ್ಜಿ ಹಾಕಿ. ಮೂಡಿಗೆರೆ ಮರಳು ತೆಗೆಯುವ ಕೇಂದ್ರವನ್ನು  ಮೂರು ತಿಂಗಳಲ್ಲಿ ಪುನರರಾಂಭಿಸಲಾಗುವುದು. ಆ ಸಮಯದಲ್ಲಿ ಮರಳು ನೀಡಲಾತ್ತೇವೆ. ಅಕ್ರಮವಾಗಿ ನದಿಯಿಂದ ಮರಳು ತೆಗೆಯಲು ಹೋದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಸಿಸಿಟಿವಿ ಮತ್ತು ಬಯೋಮೆಟ್ರಿಕ್ ಅಳವಡಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಶೀಘ್ರದಲ್ಲಿ ಸಿಸಿಟಿವಿ, ಬಯೋಮೆಟ್ರಿಕ್ ಅಳವಡಿಸಲಾಗುವುದು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು  ಈ ಸಮಯದಲ್ಲಿ ಏನಾದರೂ ಸಾಧನೆ ಮಾಡಬೇಕು. ಜೀವನದಲ್ಲಿ ಒಂದು ಹಂತಕ್ಕೆ ಬೆಳೆದು ನಂತರ ಸಂಘಟನೆ, ಪ್ರತಿಭಟನೆಗಳಲ್ಲಿ ಮುಂದುವರೆಯಿರಿ ಎಂದು  ಯುವ ಮೋರ್ಚಾದ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಮೂಡಿಗೆರೆ ತಾಲ್ಲೂಕಿನ ಎಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಅನಿತಾ  ಅವರು ನಾಗಲಮ್ಮ  ಸ್ತ್ರೀ ಶಕ್ತಿ ಸಂಘದ ಪುಸ್ತಕವನ್ನು ತಿದ್ದಿ ಅವ್ಯವಹಾರ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದು, ಸಿಡಿಪಿಒ ಕಚೇರಿಯಿಂದ ವಿಚಾರಣೆ ನಡೆಸಿ ₹18,000  ದುರ್ಬಳಕೆಯಾಗಿದೆ ಎಂದು ವರದಿ ನೀಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಮತ್ತೊಮ್ಮೆ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ಸಂಘದ ಆಧ್ಯಕ್ಷೆ ಹರ್ಷಿಣಿ  ಮನವಿ ಮಾಡಿದರು.  ಮತ್ತೊಮ್ಮೆ  ವಿಚಾರಣೆ ಮಾಡಿಸಿವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಕೆಂಕೆರೆ ಗ್ರಾಮದ ವೆನಿಲಾ ಎಂಬುವವರು ಉದ್ದೇಬೋರನಹಳ್ಳಿಯಲ್ಲಿ  ಸಿಮೆಂಟ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದಾರೆ. ರಸ್ತೆಗೆ ಕಾರ್ಖಾನೆಯ ತ್ಯಾಜ್ಯ ಹಾಗೂ  ಕಲುಷಿತ ನೀರನ್ನು ಬಿಟ್ಟು ರಸ್ತೆಯನ್ನು ಮುಚ್ಚಿಹಾಕಿದ್ದಾರೆ.  ಸರ್ಕಾರಿ ಕೆರೆಗೆ ನೀರು ಹರಿಯಲು ಇದ್ದ ಕಾಲುವೆಯನ್ನು ಮುಚ್ಚಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ತಹಶೀಲ್ದಾರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಬಿಳೇಕಲ್ಲು ಹಾಗೂ ಉದ್ದೇಬೋರನಹಳ್ಳಿ ಗ್ರಾಮಸ್ಥರು ತಿಳಿಸಿದರು.

ಸರ್ಕಾರಿ ಕೆರೆ ಒತ್ತುವರಿ ತೆರವುಗೊಳಿಸಲು ನಿಮಗೆಷ್ಟು ಸಮಯ ಬೇಕು? ಅಧಿಕಾರಿಗಳ ಮೇಲೆಯೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಅವರು ಕಡೂರು ತಹಶೀಲ್ದಾರ್‌ಗೆ ಗದರಿದರು. ನಾಳೆಯೆ ಒತ್ತುವರಿ ತೆರವುಗೊಳಿಸುತ್ತೇನೆ ಎಂದು ತಹಶೀಲ್ದಾರ್ ಪ್ರತಿಕ್ರಿಯಿಸಿದರು.

ಜಾಗರ ಹೋಬಳಿಯ ತೊಗರಿಹಂಕಲ್ ಗ್ರಾಮದಲ್ಲಿ 45 ಎಕರೆ ಕಾಫಿ ತೋಟವಿದ್ದು, ಈ ಜಾಗವನ್ನು ಇಲಾಖೆಯಿಂದ ಸರ್ವೇ ಮಾಡಿಸಿ ಹದ್ದುಬಸ್ತು ಕಲ್ಲುಗಳನ್ನು ಹಾಕಲಾಗಿದೆ. ಪಕ್ಕದ ತೋಟದವರು  ಕಲ್ಲುಗಳನ್ನು ಕಿತ್ತುಹಾಕಿ ದೌರ್ಜನ್ಯ ನಡೆಸುತ್ತಿದ್ದಾರೆ. 3 ವರ್ಷದಿಂದ ಬಾರದ ಸರ್ವೇಯರ್‌  ಹಣ ನೀಡಿದ ಮೇಲೆ ಇತ್ತೀಚೆಗೆ ಬಂದು ಸರ್ವೇ ಮಾಡಿಕೊಟ್ಟರು ಎಂದು ಕಾಫಿ ತೋಟದ ಮಾಲೀಕರಾದ ಸಿ.ನಲಿಮಾ ಕಾರ್ಯಪ್ಪ  ಅವರು ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಟ್ಟರು.

ಹಣ ಪಡೆದ ಸರ್ವೇ ಅಧಿಕಾರಿಯನ್ನು ಅಮಾನತು ಮಾಡಿ, ಜಮೀನಿಗೆ ಹದ್ದುಬಸ್ತು   ಮಾಡಿಸಿಕೊಡಿ ಎಂದು ಡಿಡಿಎಲ್ಆರ್ ದೇವರಾಜ ಹಾಗೂ ತಹಶೀಲ್ದಾರ್‌ ಶಿವಣ್ಣ ಅವರಿಗೆ ಸೂಚನೆ ನೀಡಿದರು.ಲಕ್ಯಾ ಹೋಬಳಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಕಸ್ತೂರಿ ಬಾ ಸದನದ ಮೋಹಿನಿ ಸಿದ್ದಪ್ಪಗೌಡ ಹಾಗೂ ಗ್ರಾಮಸ್ಥರು ಮನವಿ ಮಾಡಿದರು.

ಕಾನೂನುಬದ್ಧ ಮದ್ಯದಂಗಡಿಗಳನ್ನು ತೆರವು ಮಾಡಲು ಸಾಧ್ಯವಿಲ್ಲ. ಬಂದ್ ಮಾಡಿದರೆ ಅಕ್ರಮವಾಗಿ ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಲು ಆರಂಭಿಸುತ್ತಾರೆ. ಅನಧಿಕೃತವಾಗಿ ಮಧ್ಯದಂಗಡಿ ತೆರೆದಿದ್ದರೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT