ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ಜಮೀನು ತೆರವಿಗೆ ಸೂಚನೆ

Last Updated 7 ಜುಲೈ 2017, 10:13 IST
ಅಕ್ಷರ ಗಾತ್ರ

ಮಡಿಕೇರಿ: ‘ಸರ್ಕಾರಿ ಭೂಮಿ ಒತ್ತುವರಿ ಪರಿಶೀಲಿಸಿ ತೆರವುಗೊಳಿಸಬೇಕು’ ಎಂದು ರಾಜ್ಯ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ವಿ. ಪ್ರಸಾದ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಮೀನುಗಳ ನ್ಯಾಯಾಲಯ ಪ್ರಕರಣಗಳು ಮತ್ತು ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 

‘ಸರ್ಕಾರಿ ಭೂಮಿಗೆ ಬೇಲಿ ಹಾಕುವ ಕೆಲಸ ಮಾಡಬೇಕು. ಅದಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಜಿಲ್ಲೆಯಲ್ಲಿ ಇರುವ ಸರ್ಕಾರಿ ಭೂಮಿಯನ್ನು ಸಂರಕ್ಷಣೆ ಮಾಡುವತ್ತ ವಿಶೇಷ ಗಮನ ಹರಿಸಬೇಕು’ಎಂದು ನಿರ್ದೇಶನ ನೀಡಿದರು.

‘ಸರ್ಕಾರಿ ಭೂಮಿಯನ್ನು ಸಂರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂಗನವಾಡಿ, ಶಾಲೆ, ಆಸ್ಪತ್ರೆ, ವಿದ್ಯಾರ್ಥಿ ನಿಲಯ ಸ್ಥಾಪನೆಗೂ ಜಮೀನು ಸಿಗುವುದಿಲ್ಲ. ಭೂಮಿ ಕೊಡಲು ಸಹ ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ, ಸರ್ಕಾರಿ ಭೂಮಿ ಸಂರಕ್ಷಣೆ ಮಾಡಿಕೊಳ್ಳುವುದು ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿ’ ಎಂದು ಪ್ರಸಾದ್‌ ಎಚ್ಚರಿಸಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ‘ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿರುವ ಪ್ರಕರಣ ಇತ್ಯರ್ಥಪಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಭೂವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಮಾಡುವುದು, ಸರ್ಕಾರಿ ಜಮೀನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಭೂವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ದಾಖಲಾಗಿವೆ’ ಎಂದು ನಿಗಮದ ವಿಶೇಷ ಅಧಿಕಾರಿ ಆರ್. ನಾಗರಾಜ ಶೆಟ್ಟಿ ಮಾಹಿತಿ ನೀಡಿದರು. 

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ತಹಶೀಲ್ದಾರರಾದ ಕುಸುಮಾ, ಮಹೇಶ್, ಗೋವಿಂದರಾಜು, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್, ಭೂಮಾಪನ ಇಲಾಖೆಯ ಉಪ ನಿರ್ದೇಶಕಿ ವಿದ್ಯಾಯಿನಿ, ಸಹಾಯಕ ನಿರ್ದೇಶಕ ಷಂಶುದ್ದೀನ್, ಶಿರಸ್ತೇದಾರ್ ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT