ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ವಾರ್ಡ್‌ಗಳ ಪೈಕಿ 22 ಡೆಂಗಿ ಪೀಡಿತ

Last Updated 7 ಜುಲೈ 2017, 11:09 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಡೆಂಗಿ ಸಾಂಕ್ರಾಮಿಕ ಜ್ವರಕ್ಕೆ ನಿಯಂತ್ರಣ ಹಾಕುವಲ್ಲಿ ವಿಫಲವಾಗಿರುವ ಬೆನ್ನಲ್ಲೆ, ಜಿಲ್ಲೆಯಲ್ಲಿ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 44 ಗ್ರಾಮಗಳನ್ನು ಡೆಂಗಿ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು  ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ತುಮಕೂರು ನಗರದಲ್ಲಿ ಜ್ವರ ವ್ಯಾಪಕವಾಗಿದ್ದು, 35 ವಾರ್ಡ್‌ಗಳಲ್ಲಿ  22 ವಾರ್ಡ್‌ಗಳನ್ನು ಡೆಂಗಿ ಪೀಡಿತ ವಾರ್ಡ್‌ಗಳೆಂದು ಘೋಷಿಸಲಾಗಿದೆ. 

ಸರ್ಕಾರದ ಸುತ್ತೋಲೆ ಪ್ರಕಾರ ಯಾವುದಾದರೂ ಗ್ರಾಮದಲ್ಲಿ ಅಥವಾ ಪ್ರದೇಶಗಳಲ್ಲಿ ಶೇ 5ರಷ್ಟು ಜ್ವರ ಪೀಡಿತರದಲ್ಲಿ ಡೆಂಗಿ ದೃಢಪಟ್ಟರೆ ಇಡೀ ಗ್ರಾಮ ಅಥವಾ ಪ್ರದೇಶವನ್ನು ಡೆಂಗಿ ಪೀಡಿತ ಗ್ರಾಮ ಎಂದು ಪರಿಗಣಿಸಬೇಕು.  ಜ್ವರಪೀಡಿತ ಎಲ್ಲರಿಗೂ ಡೆಂಗಿ ಚಿಕಿತ್ಸೆ ನೀಡಬೇಕಾಗಿದೆ.

ಅದರಂತೆ ಜಿಲ್ಲೆಯ 44 ಗ್ರಾಮಗಳು ಹಾಗೂ ನಗರದ 22 ವಾರ್ಡ್‌ಗಳನ್ನು ಡೆಂಗಿ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಗ್ರಾಮಗಳು ಹಾಗೂ ವಾರ್ಡ್‌ಗಳ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಬೇಕಾಗಿದೆ. ಎಲ್ಲ ಕಡೆಯೂ ಜ್ವರ ತಾಂಡವಾಡುತ್ತಿದೆ. ತಹಬದಿಗೆ ತರಲು ಸಾಧ್ಯವಾಗುತ್ತಿಲ್ಲ. ನಿಯಂತ್ರಣಕ್ಕೂ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಯಾವ ತಾಲ್ಲೂಕು ಆಸ್ಪತ್ರೆಯಲ್ಲೂ ಡೆಂಗಿ ಕಾರ್ಡ್‌, ಮ್ಯಾಕ್‌ ಎಲಿಸಾ ಪರೀಕ್ಷೆ ಸೌಲಭ್ಯ ಇಲ್ಲವಾಗಿದೆ. ಪ್ಲೇಟ್‌ಲೆಟ್‌ ನೋಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.  ಕೆಲವು ಕಡೆಗಳಲ್ಲಿ ಫಿಜಿಶಿಯನ್ ಇಲ್ಲದ ಕಾರಣ ಚಿಕಿತ್ಸೆ ನೀಡದೆ ಬೇರೆ ಕಡೆ ತೋರಿಸಿಕೊಳ್ಳುವಂತೆ ಹೇಳಲಾಗುತ್ತಿದೆ ಎಂದು  ತಿಳಿದುಬಂದಿದೆ.

‘ನಮ್ಮಲ್ಲಿ ಫಿಜಿಶಿಯನ್ ಇಲ್ಲ. ಡೆಂಗಿ ಪೀಡಿತರನ್ನು ನೋಡಿಕೊಳ್ಳಲು ಫಿಜಿಶಿಯನ್ ಬೇಕು. ಡೆಂಗಿ ರಕ್ತ ಪರೀಕ್ಷೆಯ ಸೌಲಭ್ಯವೂ ಇಲ್ಲ. ಹೀಗಾಗಿ  ಒಂದೆರಡು ದಿನ ಚಿಕಿತ್ಸೆ ನೀಡಿ ತಹಬದಿಗೆ ಬರದಿದ್ದರೆ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸುತ್ತಿದ್ದೇವೆ’ ಎಂದು ಪಾವಗಡ ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್ವರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪಾವಗಡ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಫಿಜಿಶಿಯನ್‌ ಇಲ್ಲ. ಆದರೂ ಅಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ರೋಗ ತೀವ್ರವಾದಾಗ ರೋಗಿಗಳ ರಕ್ತದೊತ್ತಡ ಹಾಗೂ ಹೃದಯಬಡಿತವನ್ನು ಎರಡು ಗಂಟೆಗೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ’ ಎಂದು ಡಾ.ರಂಗಸ್ವಾಮಿ ತಿಳಿಸಿದರು.

‘ಪ್ರತಿ ದಿನ 100ರಿಂದ 120 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10ರಿಂದ 12 ಮಂದಿ ಡೆಂಗಿ ಜ್ವರ ಪೀಡಿತರು ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ.  ಇದು ತುಂಬಾನೆ ಜಾಸ್ತಿಯಾಯಿತು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡ ಯಾವ ರೋಗಿಯನ್ನು ಬೇರೆ ಕಡೆಗೆ ಶಿಫಾರಸು ಮಾಡಿಲ್ಲ. ಇಲ್ಲಿಯೇ ಚಿಕಿತ್ಸೆ ನೀಡಿ ವಾಸಿ ಮಾಡಲಾಗಿದೆ. ಆದರೆ ಈವರೆಗೂ ನಮ್ಮಲ್ಲಿ ದಾಖಲಾದ ಯಾವ ರೋಗಿಗೂ ಪ್ಲೇಟ್‌ಲೆಟ್‌ ಹಾಕಿಲ್ಲ. ಅದರ ಅಗತ್ಯತೆ ಬಂದಿಲ್ಲ’ ಎಂದು ಮಾಹಿತಿ ನೀಡಿದರು.

‘ಸಿದ್ಧಾರ್ಥ ಹಾಗೂ ಶ್ರೀದೇವಿ ವೈದ್ಯಕೀಯ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಗತ್ಯಬಿದ್ದರೆ ಅಲ್ಲಿಂದ ಪ್ಲೇಟ್‌ಲೆಟ್ ತರಲಾಗುವುದು’ ಎಂದು ಹೇಳಿದರು.
‘ಹದಿನೈದು ದಿನಕ್ಕೊಮ್ಮೆ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಲಾರ್ವಾ ಪರೀಕ್ಷೆ ನಡೆಸಬೇಕು. ತಾಯಿ, ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಡೆಂಗಿ ಬಗ್ಗೆ ಹೆಚ್ಚು ಗಮನಹರಿಸಿದಂತೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸೌಲಭ್ಯಗಳು ಹಾಗೂ ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಬೇರೆ ಕಡೆ ತೋರಿಸಿಕೊಳ್ಳುವಂತೆ ರೋಗಿಗಳಿಗೆ ಹೇಳುತ್ತಿದ್ದೇವೆ. ಬಹುತೇಕ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ತೋರಿಸಿಕೊಳ್ಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ತಾಲ್ಲೂಕು  ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚುವರಿ ಹಣ
ಡೆಂಗಿ ಕಾರ್ಡ್ ಪರೀಕ್ಷೆಗೆ ಸರ್ಕಾರ ₹ 500 ನಿಗದಿಪಡಿಸಿದೆ. ಆದರೆ ನಗರದ ಖಾಸಗಿ ಡಯಾಗ್ನೊಸ್ಟಿಕ್ ಕೇಂದ್ರಗಳಲ್ಲಿ ₹900ರಿಂದ ₹ 1000 ಪಡೆಯಲಾಗುತ್ತಿದೆ. ಇದರ ನಿಯಂತ್ರಣಕ್ಕೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ದೂರು ವ್ಯಾಪಕವಾಗಿದೆ

ಐದು ದಿನ ಬೇಕು
ಜ್ವರ ಪೀಡಿತರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಿದರೂ ಅದರ ವರದಿ ಬರಲು ಐದು ದಿನ ಕಾಯಬೇಕು ಎಂದು ತಾಲ್ಲೂಕು ಆಸ್ಪತ್ರೆಗಳ ವೈದ್ಯರು ಹೇಳುತ್ತಿದ್ದಾರೆ.

‘ರಕ್ತ ಮಾದರಿ ಪರೀಕ್ಷೆ ವರದಿ ನೀಡಲು ನಾಲ್ಕೈದು ದಿನ ಆಗುತ್ತಿದೆ. ಆದರೆ ಚಿಕಿತ್ಸೆಗೂ, ಇದಕ್ಕೂ ಸಂಬಂಧ ಇಲ್ಲ. ಬಿಳಿರಕ್ತ ಕಣಗಳು (ಪ್ಲೇಟ್‌ಲೆಟ್‌) ಕಡಿಮೆ ಇದೆ ಎಂದು ಗೊತ್ತಾದ ತಕ್ಷಣವೆ ಚಿಕಿತ್ಸೆ ಆರಂಭಿಸಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸ ಡಾ. ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಣ ವಾಪಸ್ ವಸೂಲಿ
ಡೆಂಗಿ, ಮಲೇರಿಯಾ, ಚಿಕೂನ್‌ ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗಳನ್ನು ನಿಯಂತ್ರಣ ಕಾರ್ಯಕ್ರಮದಡಿ ಆಶಾ ಕಾರ್ಯಕರ್ತೆಯರಿಗೆ  ಪ್ರೋತ್ಸಾಹ ಧನವಾಗಿ ನೀಡಿದ್ದ  ₹31.67 ಲಕ್ಷವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯೆ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ವಂಚನೆಯ ಪ್ರಕರಣವೂ ನಡೆದಿರುವುದು ಬೆಳಕಿಗೆ ಬಂದಿದೆ.

‘ಇಲಾಖೆಯ ಲೆಕ್ಕ ಪರಿಶೋಧನಾ ತಂಡದ ವರದಿಯಂತೆ ಆರೋಪಿತ ಸಿಬ್ಬಂದಿಯಿಂದ ಹಣವನ್ನು ವಾಪಸ್‌ ಕಟ್ಟಿಸಿಕೊಳ್ಳಲಾಗಿದೆ. ಅದನ್ನು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ ತಿಳಿಸಿದರು.

ಪ್ರಕರಣಗಳು ಹೆಚ್ಚುತ್ತಿವೆ
‘ನಗರ ವ್ಯಾಪ್ತಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇದೇ  ಶನಿವಾರ, ಭಾನುವಾರ ವಿಶೇಷ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಹಾ ನಗರದ ಪಾಲಿಕೆಗೂ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ವೀಣಾ ತಿಳಿಸಿದರು.

‘ಜನರು ಭಯ, ಗಾಬರಿ ಬೀಳುವುದು ಬೇಡ. ತಕ್ಷಣವೇ ಪ್ಲೇಟ್‌ಲೆಟ್‌ ಕಡಿಮೆಯಾಗುವುದಿಲ್ಲ. ಪ್ರಥಮ ಹಂತದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದರೆ ಯಾವುದೆ ಸಮಸ್ಯೆಯಾಗುವುದಿಲ್ಲ. ಜ್ವರ ಪೀಡಿತರು ಆತಂಕಕ್ಕೆ ಒಳಗಾಗುವುದರಿಂದ ಹೆಚ್ಚು ಸಮಸ್ಯೆಯಾಗುತ್ತದೆ’ ಎಂದು ಅವರು ಹೇಳಿದರು.

‘ನೀರು ತುಂಬಿದ ಪಾತ್ರೆಗಳು, ಬಿಂದಿಗೆ, ತೊಟ್ಟಿ, ಡ್ರಮ್‌ಗಳನ್ನು ತೊಳೆಯುವುದರಿಂದ ಡೆಂಗಿ ಸೊಳ್ಳೆಗಳ ಉತ್ಪತ್ತಿ ತಡೆಯಲು ಸಾಧ್ಯವಿಲ್ಲ. ವಾರಕ್ಕೊಂದು ದಿನ ಇವುಗಳನ್ನು ಒಣಗಿಸುವುದರಿಂದ ಮಾತ್ರ ಸೊಳ್ಳೆಗಳ ಮೊಟ್ಟೆ ನಾಶಪಡಿಸಬಹುದು. ಇದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದು ಹೇಳಿದರು.

ಊರು ಬಿಟ್ಟ ಮಹಿಳೆ: ನನಗೆ, ನನ್ನ ಇಬ್ಬರು ಮಕ್ಕಳು, ಮೈದುನ, ಮಾವ ಎಲ್ಲರಿಗೂ ಡೆಂಗಿ ಜ್ವರ ಬಂದಿದೆ. ಎಲ್ಲರನ್ನು ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆ. ಹೆದರಿಕೊಂಡು ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿರುವುದಾಗಿ ಗೂಳೂರು ಸಮೀಪದ ಹಳ್ಳಿಯೊಂದರ ಮಂಜುಳಾ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT