ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸರಳ ‘ಮೊಟ್ಟೆ’ಯ ಕಥೆ

Last Updated 7 ಜುಲೈ 2017, 13:12 IST
ಅಕ್ಷರ ಗಾತ್ರ

ಒಂದು ಮೊಟ್ಟೆಯ ಕಥೆ
ನಿರ್ದೇಶನ:
ರಾಜ್ ಬಿ. ಶೆಟ್ಟಿ
ನಿರ್ಮಾಣ: ಪವನ್ ಕುಮಾರ್ ಸ್ಟುಡಿಯೋಸ್
ಸಂಗೀತ: ಮಿಧುನ್ ಮುಕುಂದನ್
ತಾರಾಗಣ: ರಾಜ್ ಬಿ. ಶೆಟ್ಟಿ, ಅಮೃತಾ ನಾಯ್ಕ್, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತೂಮಿನಾಡು

***

ಇದು ಹೊಸಬರ ಸಿನಿಮಾ. ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಂದ ಆರಂಭಿಸಿ ಸಿನಿಮಾದಲ್ಲಿನ ಬಹುಪಾಲು ಜನ ಹೊಸಬರು. ಇಡೀ ತಂಡ ಹೊಸದು ಇರುವ ಕಾರಣಕ್ಕೇ ತಾಜಾ ಅನಿಸುವ ಒಂದು ಸಿನಿಮಾವನ್ನು ಮಾಡಲು ಸಾಧ್ಯವಾಗಿರಬೇಕು! ಸಿನಿಮಾದಲ್ಲಿ ‘ಮೊಟ್ಟೆ’ಯನ್ನು ಒಂದು ರೂಪಕವನ್ನಾಗಿ ಬಳಸಿಕೊಂಡು, ಸಿನಿಮಾದ ಸಿದ್ಧಸೂತ್ರಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆಯೇ ಬದುಕಿಗೆ ಬೇಕಿರುವ ಸಂದೇಶವೊಂದನ್ನು ನೀಡಿದೆ ಸಿನಿತಂಡ.

ಮಂಗಳೂರಿನ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕ ಆಗಿರುವ ಜನಾರ್ದನ ಎನ್ನುವ ಬೊಕ್ಕತಲೆಯ ಯುವಕ ಇದರ ಕಥಾವಸ್ತು. ಈ ಪಾತ್ರವನ್ನು ರಾಜ್‌ ಅವರೇ ನಿಭಾಯಿಸಿದ್ದಾರೆ – ಪಾತ್ರಕ್ಕೆ ಬೇರೆ ಯಾರೂ ಸಿಗದ ಕಾರಣ! ತನ್ನಲ್ಲಿನ ಕೊರತೆ ನೀಗಿಸಿಕೊಳ್ಳಲು ಜನಾರ್ದನ ಸಣ್ಣ–ಪುಟ್ಟ ಪ್ರಯತ್ನಗಳನ್ನು ನಡೆಸುತ್ತಾನೆ. ಇದರ ನಡುವೆಯೇ, ಜನಾರ್ದನನಿಗೆ ಕನ್ಯೆ ಹುಡುಕುವ ಯತ್ನ ಮನೆಯವರಿಂದ ನಡೆದಿರುತ್ತದೆ.

ಬೊಕ್ಕತಲೆಯ ಕಾರಣದಿಂದಾಗಿ ಹೆಣ್ಣು ಸಿಗದಿದ್ದಾಗ, ತಾನೇ ಏಕೆ ಪ್ರೀತಿಸಿ ಮದುವೆಯಾಗಬಾರದು ಅನಿಸುತ್ತದೆ ಜನಾರ್ದನನಿಗೆ. ಆ ಕೆಲಸಕ್ಕೂ ಮುಂದಾಗುತ್ತಾನೆ ಸಂಕೋಚ ಸ್ವಭಾವದ ಜನಾರ್ದನ. ಆಗ ಏನಾಗುತ್ತದೆ ಎಂಬುದನ್ನು ವಿವರಿಸಿದರೆ ಸಿನಿಮಾದ ಕಥೆಯನ್ನು ಪೂರ್ತಿಯಾಗಿ ಹೇಳಿದಂತೆ ಆಗಿಬಿಡುತ್ತದೆ. ಹಾಗಾಗಿ ಅದರ ಗೊಡವೆ ಬೇಡ!

ಸರಳವಾದ ಕಥೆಯನ್ನು, ಸಹಜ ರೂಪದಲ್ಲಿ, ತೀರಾ ಕಸರತ್ತುಗಳನ್ನು ಮಾಡದೆ ತೆರೆಗೆ ತಂದಿದೆ ಸಿನಿತಂಡ. ಅದರ ಜೊತೆಯಲ್ಲೇ ಈ ಸಿನಿಮಾವನ್ನು ಬೇರೆ ಬೇರೆ ರೀತಿ ಅರ್ಥೈಸಿಕೊಳ್ಳುವ ಅವಕಾಶಗಳೂ ಮುಕ್ತವಾಗಿವೆ. ಸಿನಿಮಾದ ಕೊನೆಯಲ್ಲಿ ಜನಾರ್ದನ, ‘ನಾನು ಅಂದದ ಹುಡುಗಿಯನ್ನು ಹುಡುಕುತ್ತಿದ್ದೆ. ಆದರೆ ಅಂದ– ಚಂದ ಅಂದರೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಲಿಲ್ಲ’ ಎನ್ನುತ್ತಾನೆ. ಸುಂದರಿಯನ್ನು ಹುಡುಕುವ ಜೊತೆಯಲ್ಲೇ, ವ್ಯಕ್ತಿಯಲ್ಲಿರುವ ಅಂತರಂಗದ ಸೌಂದರ್ಯವನ್ನೂ ಗುರುತಿಸಿ ಎನ್ನುತ್ತದೆ ಸಿನಿಮಾ.

(ಸಿನಿಮಾದ ಒಂದು ದೃಶ್ಯ)

ಅದೇ ರೀತಿಯಲ್ಲಿ, ‘ನನ್ನ ತಲೆ ಬೋಳು, ನಾನು ಡುಮ್ಮಿ’ ಎನ್ನುವ ಕೀಳರಿಮೆಗಳು ಬೇಡ. ಡುಮ್ಮಗಾಗಿರುವುದರಲ್ಲಿ, ಬೊಕ್ಕ ತಲೆ ಹೊಂದಿರುವುದರಲ್ಲೂ ಒಂದು ಸೌಂದರ್ಯವಿದೆ, ಅದನ್ನು ಗುರುತಿಸುವ ಗುಣ ಇರಬೇಕು ಎಂದೂ ಸಿನಿಮಾದ ದೃಶ್ಯಗಳು ಧ್ವನಿಸುತ್ತವೆ. ಈ ಯಾವ ಸಂದೇಶಗಳನ್ನೂ ಸಿನಿಮಾ ತೀರಾ ಗಂಭೀರ ಮಾದರಿ ಅನುಸರಿಸಿ ಹೇಳಿಲ್ಲ. ಪ್ರೇಕ್ಷಕರಲ್ಲಿ ಮಂದಹಾಸ, ಆಗಾಗ ಸಶಬ್ದ ನಗುವಿನ ಅಲೆ ಮೂಡಿಸುತ್ತಲೇ ಕಥೆ ಮುಂದುವರಿಯುತ್ತದೆ.

ಜನಾರ್ದನನಿಗೆ ಪ್ರೀತಿ ಮತ್ತು ಸೌಂದರ್ಯ ಕುರಿತ ತನ್ನ ಗ್ರಹಿಕೆ ತಪ್ಪು ಎಂದು ಅರಿವಾಗಿ, ಜೀವನದ ಬಗೆಗಿನ ದೃಷ್ಟಿಕೋನವನ್ನೇ ಬದಲಿಸುವ ಭಾವುಕ ದೃಶ್ಯ ಇಡೀ ಚಿತ್ರದ ಹೈಲೈಟ್‌. ಜನಾರ್ದನನಂತೇ ಪ್ರೇಕ್ಷಕನನ್ನೂ ಬಹುವಾಗಿ ಕಾಡುವ ಸಂಬುದ್ಧ ಕ್ಷಣವಿದು.

ಆದರೆ ಸಿನಿಮಾದಲ್ಲಿ ಮಾತು, ಗದ್ದಲ ಕಡಿಮೆ. ಅಷ್ಟರಮಟ್ಟಿಗೆ ಚಿತ್ರತಂಡ ಮೌನದ ಮಹತ್ವವನ್ನು ಅರ್ಥ ಮಾಡಿಕೊಂಡಿದೆ. ಕೆಲವು ಸನ್ನಿವೇಶಗಳಲ್ಲಿ ಪಾತ್ರಗಳು ಯಾವುದೇ ಮಾತು ಆಡದೆ, ಮುಖಭಾವದಿಂದಲೇ ಪ್ರೇಕ್ಷಕರ ಮುಖದಲ್ಲಿ ನಗೆಯುಕ್ಕಿಸುತ್ತವೆ. ನಗೆಯ ಜೊತೆಯಲ್ಲೇ ಈ ಸಿನಿಮಾದ ನೆವದಲ್ಲಿ ಮಂಗಳೂರಿನ ಕನ್ನಡವನ್ನು ತುಸುಮಟ್ಟಿಗೆ ಸವಿಯಬಹುದು. ‘ಇದು ಬೇಕಿತ್ತಾ’ ಎನ್ನುವ ಸನ್ನಿವೇಶಗಳು ಈ ಚಿತ್ರದಲ್ಲೂ ಇವೆ. ಆದರೆ, ಮನೆಮಂದಿಯೆಲ್ಲ ಕುಳಿತು ನೋಡಲು ಅಡ್ಡಿಯಿಲ್ಲದ ಸಿನಿಮಾ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT