ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗರಿ ಕರಿದ ತಿಂಡಿಗಳು

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ಬಸಳೆ ಸೊಪ್ಪಿನ ವಡೆ

ಬೇಕಾಗುವ ವಸ್ತುಗಳು: ಎಳೆ ಬಸಳೆಸೊಪ್ಪು ¼ ಕಪ್, 2 ಹಸಿಮೆಣಸಿನಕಾಯಿ, ¾ ಕಪ್ ಕಡ್ಲೆಬೇಳೆ, ½ ಕಪ್ ಅಕ್ಕಿ ಹಿಟ್ಟು, ¼ ಕಪ್ ಉದ್ದಿನ ಹಿಟ್ಟು, ¼ ಈರುಳ್ಳಿ ಚೂರು, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿ ಇಡಬೇಕು. ಕಡಲೆ ಬೇಳೆಯನ್ನು 3-4 ಗಂಟೆ ನೆನೆಸಿ ಸ್ವಲ್ಪ ತರಿಯಾಗಿ ರುಬ್ಬಿ. ಅದಕ್ಕೆ ಅಕ್ಕಿ ಹಿಟ್ಟು, ಉದ್ದಿನ ಹಿಟ್ಟು, ಬಸಳೆ ಚೂರು, ಉಪ್ಪು, ಹಸಿಮೆಣಸು ಚೂರು, ಈರುಳ್ಳಿ ಚೂರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಕೈಗೆ ಎಣ್ಣೆ ಹಚ್ಚಿಕೊಂಡು ವಡೆಯಂತೆ ತಟ್ಟಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ವಡೆ ಸವಿಯಲು ಸಿದ್ಧ.

***

ಸಾಬಕ್ಕಿ ಚಾಟ್

ಬೇಕಾಗುವ ವಸ್ತುಗಳು: 1 ಕಪ್ ಸಾಬಕ್ಕಿ, ¼ ಕಪ್ ಕೊಬ್ಬರಿ, 2 ಚಮಚ ನೆಲಕಡಲೆ, 2 ಚಮಚ ಗೋಡಂಬಿ, 2 ಚಮಚ ಹುರಿಕಡಲೆ, 1 ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಕೊಬ್ಬರಿ, ನೆಲಕಡಲೆ ಬೀಜ, ಗೋಡಂಬಿ, ಹುರಿಕಡಲೆ ಬೇರೆ ಬೇರೆಯಾಗಿ ಕರಿದು ತೆಗೆ ಯಿರಿ. ನಂತರ ಸಾಬಕ್ಕಿ ಹಾಕಿ ಕರಿದು ತೆಗಿಯಿರಿ. ನಂತರ ಕರಿದ ಸಾಬಕ್ಕಿಗೆ ಕರಿದ ಗೋಡಂಬಿ, ನೆಲಕಡಲೆ, ಹುರಿಕಡಲೆ, ಕಾರದ ಪುಡಿ, ಕೊಬ್ಬರಿ, ಉಪ್ಪು ಹಾಕಿ ಸರಿಯಾಗಿ ಬೆರೆಸಿ. ಈಗ ಸಾಬಕ್ಕಿ ಚಾಟ್ ತಿನ್ನಲು ಸಿದ್ಧ.

***

ಸುವರ್ಣಗಡ್ಡೆ ಚಿಪ್ಸ್

ಬೇಕಾಗುವ ವಸ್ತುಗಳು: ಸಿಪ್ಪೆ ತೆಗೆದು ಉದ್ದಕ್ಕೆ ತುಂಡು ಮಾಡಿದ ಸುವರ್ಣ ಗಡ್ಡೆ 10-12, ಕರಿಯಲು ಬೇಕಾದಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಕೆಂಪುಮೆಣಸಿನ ಪುಡಿ, ಚಿಟಿಕೆ ಇಂಗು.

ಮಾಡುವ ವಿಧಾನ: ಸುವರ್ಣ ಗಡ್ಡೆ ತುಂಡುಗಳನ್ನು ಚಿಪ್ಸ್ ತುಂಡು ಮಾಡುವ ಉಪಕರಣ ಉಪಯೋಗಿಸಿ ತುರಿಯಿರಿ. ನಂತರ ನೀರಿಗೆ ಹಾಕಿ. ಬಟ್ಟೆಯ ಮೇಲೆ ಹರಡಿ. ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ನಂತರ ಉಪ್ಪು ಕೆಂಪು ಮೆಣಸಿನ ಪುಡಿ, ಇಂಗು ಹಾಕಿ ಚೆನ್ನಾಗಿ ಕಲಸಿ. ಈಗ ಗರಂ ಗರಿ ಗರಿ ಚಿಪ್ಸ್ ತಿನ್ನಲು ಸಿದ್ಧ.

***

ಸ್ವೀಟ್‌ ಕಾರ್ನ್ ಬೋಂಡ

ಬೇಕಾಗುವ ವಸ್ತುಗಳು: 1-2 ಆಲೂ, 2 ಕಪ್ ಬೇಯಿಸಿದ ಸ್ವೀಟ್‌ ಕಾರ್ನ್, 1 ಕ್ಯಾಪ್ಸಿಕಂ, 2-3 ಈರುಳ್ಳಿ, 1 ಕಪ್ ಕಡಲೆ ಹಿಟ್ಟು, ¼ ಕಡಲೆ ಹಿಟ್ಟು, ¼ ಕಪ್ ಅಕ್ಕಿ ಹಿಟ್ಟು, 1 ಚಮಚ ಗರಂಮಸಾಲೆ, ¼ ಚಮಚ ಕರಿಮೆಣಸು ಪುಡಿ, 7-8 ಎಲೆ ಪುದೀನ, 2-3 ಹಸಿಮೆಣಸು, ಶುಂಠಿ ಚೂರು 2 ಚಮಚ, 2 ಚಮಚ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆರಸ ಉಪ್ಪು ರುಚಿಗೆ ತಕ್ಕಷ್ಟು, ¼ ಕಪ್ ಬ್ರೆಡ್ ಕ್ರಮ್ಸ್, ಕರಿಯಲು

ಎಣ್ಣೆ.ಮಾಡುವ ವಿಧಾನ: ಆಲೂ ಬೇಯಿಸಿ ಪುಡಿ ಮಾಡಿ. ಬೇಯಿಸಿದ ಸಿಹಿ ಜೋಳ ರುಬ್ಬಿ ಪಾತ್ರೆಗೆ ಹಾಕಿ. ನಂತರ ಬೇಯಿಸಿದ ಆಲೂ ಮಸೆದು ಹಾಕಿ. ಕ್ಯಾಪ್ಸಿಕಂ ಚೂರು, ಈರುಳ್ಳಿ ಚೂರು ಹಾಕಿ. ನಂತರ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಗರಂಮಸಾಲೆ, ಕರಿಮೆಣಸಿನ ಪುಡಿ, ಪುದೀನಾ ಚೂರು, ಹಸಿಮೆಣಸಿನ ಚೂರು, ಶುಂಠಿ ಚೂರು, ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆರಸ ಹಾಕಿ ಸರಿಯಾಗಿ ಕಲಸಿ. 10 ನಿಮಿಷ ಫ್ರಿಡ್ಜ್‌ನ ಲ್ಲಿಟ್ಟು ಉದ್ದಕ್ಕೆ ಉಂಡೆ ಮಾಡಿ. ಬ್ರೆಡ್ ಕ್ರಮ್ಸ್ ಅಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ಬೋಂಡ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT