ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳು ಸಾಕಷ್ಟಿವೆ! ಆದರೆ ಟೈಮೆಲ್ಲಿದೆ?

Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

‘ಏನು? ಈಗಷ್ಟೆ ಎದ್ದ ಹಾಗೆ ಉಂಟು? ಒಳ್ಳೆ ನಿದ್ರೆಯಾ?’ – ಎಂದು ಮಧ್ಯಾಹ್ನ ಊಟಕ್ಕೆ ಬಂದವರು ಗೇಲಿ ಮಾಡುತ್ತಾರೆ. ಮೊನ್ನೆ ಮಗಳು ‘ಅಮ್ಮ, ನೀನು ಲಕ್ಕಿ. ಇಡೀ ದಿನಾ ಮನೇಲೇ ಇರ‍್ತೀಯಾ’ (ನಾನೂ ಅಮ್ಮಂಗೆ ಮೊದಲು ಇದನ್ನೇ ಹೇಳುತ್ತಿದ್ದೆ!) – ಎಂದದ್ದು ನೆನಪಾಗಿ ಸರಿ, ‘ನಾಳೆ ನಾನು ಮಲಗಿಯೇ ಇರ್ತೇನೆ’ – ಎಂದೆ, ಮುನಿಸಿನಿಂದ.

ಬೆಳಿಗ್ಗೆ ನಾಲ್ಕು ಗಂಟೆಗೆ ಇಟ್ಟ ಅಲಾರಾಂ ತನ್ನ ಕೆಲಸ ಪಾಲಿಸುವ ಮುಂಚೆಯೇ ನೈಸರ್ಗಿಕ ಸುಪ್ತ ಅಲಾರಾಂ ಐದು ನಿಮಿಷ ಮೊದಲೇ ಎಚ್ಚರಿಸಿ ಬಿಡುತ್ತದೆ. ಮನೆಯ ನಾಲ್ಕು ಜನರಿಗೆ ಮೂರು ಬಗೆ  - ಹೋಟೆಲಿನ ಕೋಂಬೋ ಆಫರ್ ಪ್ರತಿನಿತ್ಯ. ಒಂಬತ್ತು ಗಂಟೆಗೆ ಮನೆ ಖಾಲಿಯಾಯಿತು ಎಂದು ಖುಷಿ ಪಡುವಂತಿಲ್ಲ; ನಿಜವಾದ ಆರಂಭ ಈಗಲೇ! ಬೇಸಿನ್‌ನಲ್ಲಿ ಎಂಜಿಲು, ಮುಸುರೆ ಪಾತ್ರೆಗಳು ನೀರಿನಲ್ಲಿ ಅರ್ಧ ಕಂತಿ ‘ಕಾಪಾಡಿ, ಕಾಪಾಡಿ’ ಎನ್ನುತ್ತಿರುತ್ತವೆ. ಹಾಲ್‌ನಲ್ಲಿ ಚೆಲ್ಲಾಪಿಲ್ಲಿಯಾದ ಕ್ರೇಯಾನ್‌ಗಳು, ಆಟಿಕೆಗಳು, ಕಾಫಿಲೋಟಗಳು ಕೈಯಡಿ, ಕಾಲಡಿ ಸಿಕ್ಕಿ ನರಳುತಿರು. ಬೆಡ್‌ಶೀಟ್‌ಗಳು, ದಿಂಬುಗಳು ಹಾಸಿಗೆಯಿಂದ ಬೇರಾಗಿ ಅನಾಥವಾಗಿರುತ್ತವೆ. ಎಲ್ಲವನ್ನೂ ಒಂದೆಡೆ ಸೇರಿಸುತ್ತ ಬಂದಂತೆ, ನೆನ್ನೆ ಶೂ ಒಳಗೇ ಇಟ್ಟ ಸಾಕ್ಸ್ ಬೆಳಿಗ್ಗೆ ಕೈಗೆ ಸಿಗದೆ - ಬೇರೆ ಸಾಕ್ಸ್ ಹಾಕಿಕೊಂಡ ಹೋದ ಮಗ - ಈಗ ಅದು ಸೋಫಾದ ಕೆಳಗೆ ಬೆಚ್ಚಗೆ ಮಲಗಿದ್ದು ಕಣ್ಣಿಗೆ ಬೀಳುತ್ತದೆ. ಕೊನೆಯ ಕ್ಷಣದ ತಳಮಳ ನೆನಪಾಗಿ ನಗು ಬರುತ್ತದೆ. ಹೀಗೆ ಸಾಮಾನ್ಯವಾಗಿ ಕಣ್ಣಿಗೆ ಕಾಣದ - ಲೆಕ್ಕಕ್ಕೆ ಸಿಗದ ಅದೆಷ್ಟೋ ಮನೆಯ ಒತ್ತರೆಯ ಕೆಲಸಗಳು ನಗಣ್ಯವಾಗಿ ಮುಗಿಯುವಾಗ ಗಡಿಯಾರದ ಮುಳ್ಳು ಹತ್ತಿರತ್ತಿರ 10.30 ತೋರಿಸುತ್ತಿರುತ್ತದೆ. (ಎಲ್ಲ ಕೆಲಸಕ್ಕೂ ಬಾವಿಯ ನೀರನ್ನು ಸೇದಿ ತರುತ್ತಿದ್ದ ಅಮ್ಮನ ಕೆಲಸದ ಎದುರು ಇದೇನೂ ಅಲ್ಲ!) ಮುಗಿಯಿತೇ? ಇಲ್ಲ. ಮತ್ತೆ ಮಧ್ಯಾಹ್ನದ ಊಟಕ್ಕೆ ತಯಾರಿ. ಮತ್ತೊಂದು ಘಂಟೆ. ಅಂತೂ ಎಲ್ಲಾ ಮುಗೀತು ಅನ್ನುವಷ್ಟರಲ್ಲಿ ಬಿಟ್ಟನೆಂದರೂ ಬಿಡದೀ ಮಾಯೆ ಎಂದಂತೆ ವ್ಯಾಟ್ಸ್‌ಆಪ್, ಫೇಸ್‌ಬುಕ್‌ಗಳ ಬೀಪ್ ಶಬ್ದಗಳು ಕಿಂದರಿಜೋಗಿಯ ಕಿನ್ನರಿಯಂತೆ ಸೆಳೆದು ಮತ್ತೆ ಅರ್ಧ ಗಂಟೆ ಖೋತಾವಾಗುತ್ತದೆ. (ಇದು ಮಾತ್ರ ಸ್ವಯಂಕೃತ ಅಪರಾಧ!)

ಈಗ ಅಲ್ಲೇ ಮೇಜಿನ ಮೇಲೆ, ನಾಲ್ಕು ದಿನದ ಹಿಂದೆ ಅರ್ಧ ಓದಿ ಇಟ್ಟ ‘ದುರ್ಗಾಸ್ತಮಾನ’ ಕಣ್ಣಿಗೆ ಬೀಳುತ್ತದೆ. ಛೇ, ಓದಲು ಹಿಡಿದು ಆಗಲೇ 15 ದಿನವಾಯಿತಲ್ಲವೇ! ‘ಉತ್ತರಕಾಂಡ’ ಮುಗಿಯುತ್ತ ಬಂದಿದೆ. ‘ಶನಿವಾರ ತರುತ್ತೇನೆ’ ಎಂದಿದ್ದ ಅಣ್ಣ. ‘ಪರ್ವತದಲ್ಲಿ ಪವಾಡ’ ಕೂಡ ಇದೆ ಅಂದಿದ್ದ. ಮೂರು ದಿನದಲ್ಲಿ ಓದಿ ಮುಗಿಸಲು ಸಾಧ್ಯವೇ? ‘ಇನ್ನೂ ಎಷ್ಟು ಪುಟಗಳಿವೆ’ ಎಂದು ಪುಸ್ತಕದ ಮೇಲೆ ಕೈಬೆರಳಾಡಿಸುತ್ತೇನೆ.

ಮಧ್ಯಾಹ್ನ ಮಕ್ಕಳನ್ನೆಲ್ಲಾ ಮಲಗಿಸಿ, ಹಾಸಿಗೆಯಲ್ಲಿ ಮೈಚೆಲ್ಲಿದರೆ - ‘ಪ್ರಜಾವಾಣಿ’ ಓದುಗರಿಗೆ ಆಹ್ವಾನ ನೀಡಿದ ಓಲೆಗಳು ನೆನಪಾಗಿ ಎಚ್ಚರಿಸುತ್ತವೆ. ಬಡಬಡನೆ ಎದ್ದು ನೇರವಾಗಿ ಹೋಗುವುದೇ? ದ್ರಾವಿಡ ಪ್ರಾಣಾಯಾಮವೇ? ಇಲ್ಲಿ ಕತ್ತರಿಸಿದ್ದು ಅಲ್ಲಿ ಜೋಡಿಸಿದರೆ ಹೇಗೆ? ಹೀಗೆಲ್ಲ ಅಂದುಕೊಳ್ಳುತ್ತಾ ಅಲ್ಲಿ, ಇಲ್ಲಿ ಹೊಡೆದು, ಬಡಿದು ಹಾಳೆಯ ತುಂಬೆಲ್ಲಾ ಕಾಗೆಕಾಲು ಗುಬ್ಬಿಕಾಲಿನ ಚಿತ್ತಾರ ಮೂಡುತ್ತದೆ. ಅಷ್ಟರಲ್ಲಿ ಮಗಳು ‘ವೀನಸ್ ಫ್ಲೈ ಟ್ರಾಪ್’ ಬಗ್ಗೆ ಬರೆದುಕೊಂಡು ಬರಲು ಹೇಳಿದ್ದಾರೆ ಅನ್ನುತ್ತಾಳೆ. ಹ್ಹಾಂ! ಅದೇನದು? ವಿಚಿತ್ರವಾಗಿದೆಯಲ್ಲ! ‘ಅನ್ಯಥಾ ಶರಣಂ ನಾಸ್ತಿ’ ಎಂದು ಗೂಗಲ್ ದೇವರನ್ನು ಒಲಿಸಿಕೊಳ್ಳಬೇಕು. ಬೇಕಾದ್ದು ಬೇಡಾದ್ದು ಕೊಟ್ಟವನಿಂದ ಮಗಳಿಗೆಷ್ಟು ಬೇಕೋ ಅಷ್ಟೇ ನೋಟ್ ಮಾಡಿಕೊಳ್ಳುತ್ತಿರಬೇಕಾದರೆ ಜ್ವರ ಬಂದು ಮಲಗಿದ್ದ, ಕನಸಿನಲ್ಲಿ ನರಳುವ ಚಿಕ್ಕವನನ್ನು ಸಮಾಧಾನ ಮಾಡಿ ಬರುವಷ್ಟರಲ್ಲಿ ಟಾಪ್ ತೆರೆದಿಟ್ಟ ಪೆನ್ನಿನ ಶಾಯಿ ಒಣಗಿರುತ್ತದೆ! ಮನಸ್ಸಿನಲ್ಲಿದ್ದುದು ಕೈಗೆ ಬರುವಾಗಿನ ಕಷ್ಟ ಗೊತ್ತಿದ್ದರೂ, ಬರೆದದ್ದೆಲ್ಲಾ ಪ್ರಿಂಟ್ ಆಗೋದಿಲ್ಲ ಎಂಬ ಸತ್ಯ ಹೊಸತೇನಲ್ಲ. ಗೆಳತಿ ಅಶ್ವಿನಿಯದ್ದಲ್ಲವೇ ವ್ಯಾಟ್ಸಾಪ್ ಸ್ಟೇಟಸ್ ‘ಕರ್ಮಣ್ಯೇವಾಧಿಕಾರಸ್ತೇ, ಮಾಫಲೇಷು ಕದಾಚನ’ (ವಿರಾಗಿಯಾದೆನೇ?!). ‘ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ’; ಇನ್‌ಪುಟ್ ಚೆನ್ನಾಗಿದ್ದರೆ ಔಟ್‌ಪುಟ್ ಚೆನ್ನಾಗಿರುತ್ತದೆ. ವೊಕ್ಯಾಬ್ಯುಲರಿ ಜಾಸ್ತಿ ಮಾಡ್ಕೋಬೇಕು ಎಂಬ ಅಪ್ಪನ ಮಾತು ಪಥ್ಯವಾಗುತ್ತದೆ.

ಸಮಯವಿಲ್ಲ ಎಂಬುದು ಸೋಮಾರಿಗಳ ಪಲಾಯನಾವಾದ ಸೂತ್ರ. ಮನಸ್ಸಿದ್ದಲ್ಲಿ ಮಾರ್ಗ ಎಂಬ ಸತ್ಯದ ಅರಿವುಂಟಾಗಿ ಸಿಗುವ ಅಲ್ಪ ಸಮಯದಲ್ಲಿ ಓದಬೇಕೆಂಬ ತಿಲ್ಲಾನ ಮನದಲ್ಲಿ ಮೂಡುತ್ತದೆ. ಮದುವೆಗೂ ಮುಂಚೆನೇ ಓದಿದ್ದ ಪುಸ್ತಕಗಳನ್ನು, ಮುಖ್ಯವಾಗಿ ಕೇಳಿದೊಡನೆ ಥಟ್ಟನೆ ಹೇಳುವಂತೆ ಒಂದೆರಡಾದರೂ ಷಟ್ಪದಿ, ರಗಳೆಗಳನ್ನು ಬಾಯಿಪಾಠ ಮಾಡಲೇಬೇಕು ಎಂಬ ತುಡಿತವಿದೆ. ಆದರೆ ನಿಮಿಷಕ್ಕೊಮ್ಮೆ, ಕುಳಿತಾಗ, ನಿಂತಾಗ ‘ಅಮ್ಮಾ, ಅಮ್ಮಾ’ ಎಂಬ ಮಕ್ಕಳ ಕರೆಯನ್ನು ಪ್ರಾಮಾಣಿಕವಾಗಿ ಓಗೊಡಲೇಬೇಕು ಎಂಬ ತಾಯಿಯ ಕರ್ತವ್ಯವೇ ಪಾರುಪತ್ಯ ಸಾಧಿಸುತ್ತದೆ.

ಉದ್ಯೋಗಸ್ಥ ಬಾಲ್ಯದ ಗೆಳತಿ ಮೊನ್ನೆ ಸಿಕ್ಕಿ, ‘ನೀನೇನು ಮನೇಲಿ ಆರಾಮಾಗಿದ್ದೀಯಾ; ನನ್ನ ತರಹ ಕೆಲಸದ ಗೋಳು ಇಲ್ವಲ್ಲ’ ಅಂದಿದ್ದಳು. ‘ಹೌದು, ನಾನು ಆರಾಮಾಗೇ ಇದ್ದೇನೆ. ಕತೆ–ಕಾದಂಬರಿಗಳನ್ನು ಓದ್ಕೊಂಡು’ ಅಂದೆ. ಸೈಕಲ್ ಹೊಡೆಯುತ್ತಾ ನನ್ನ ಮೆಚ್ಚಿನ ರಕ್ಷಿತ್ ಶೆಟ್ಟಿ ಹಾಡುವ ಹಾಡು ನಾಲಗೆ ತುದಿಗೆ ಬಂತು - ‘ಮಾಡುವ ಕೆಲಸ ನೂರಾರಿದೆ. ಆದರೆ ನಮಗೆ ಟೈಮೆಲ್ಲಿದೆ. ಇದಕ್ಕೆ ಓದಲು ಪುಸ್ತಕಗಳೂ ಸಾಕಷ್ಟಿವೆ’ ಸೇರಿಸಿದೆ. ಆದರೆ ಆ ಟ್ಯೂನ್‌ನಲ್ಲಿ ಹಾಡಲಿಲ್ಲ. ಅಷ್ಟೆ!

*

ಶ್ರೀರಂಜನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT