ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಹಕ್ಕುಪತ್ರಕ್ಕಾಗಿ ಹೋರಾಟ: ಬೇಸರ

Last Updated 8 ಜುಲೈ 2017, 5:09 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಕಾಲದಲ್ಲಿ ಅರ್ಜಿಗಳ ಪರಿಶೀಲನೆಯಾಗದ ಕಾರಣ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಹೋರಾಟ ಮಾಡಬೇಕಾಗಿದೆ’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಆದಿವಾಸಿ ಒಕ್ಕೂಟ, ರಾಜ್ಯ ಅರಣ್ಯ ವಾಸಿಗಳ ಹೋರಾಟ ವೇದಿಕೆ ಅರಣ್ಯ ಹಕ್ಕು ಸಮಿತಿಗಳ ಜಿಲ್ಲಾ ಒಕ್ಕೂಟ, ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸಹಯೋಗದಲ್ಲಿ ಅರಣ್ಯ ಮತ್ತು ಬಗರ್‌ಹುಕುಂ ಭೂಮಿಯ ಹಕ್ಕಿಗಾಗಿ ಜಿಲ್ಲೆಯಲ್ಲಿ  24 ದಿನಗಳ ಕಾಲ ನಡೆದ ಜಾಥಾದ ಅಂತಿಮ ದಿನವಾದ ಶುಕ್ರವಾರ ನಗರದ ರೋಟರಿ ಬಾಲಭವನದ ಎದುರು ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಥಳೀಯ ಜಿಲ್ಲಾಧಿಕಾರಿ ಅರಣ್ಯ ಮತ್ತು ಬಗರ್‌ಹುಕುಂ ಭೂಮಿ ಸಾಗುವಳಿದಾರರ ಹಾಗೂ ಎಲ್ಲಾ ಅನುಷ್ಠಾನ ಇಲಾಖೆಗಳ, ಶಾಸಕರ ಹಾಗೂ ಸಚಿವರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಬಹುದು’ ಎಂದು ಸಲಹೆ ನೀಡಿದರು.

‘ಎಲ್ಲ ಸಂಘಟನೆಗಳು ಸೇರಿ, ಜಿಲ್ಲೆಯಲ್ಲಿ ಅರಣ್ಯ ಮತ್ತು ಬಗರ್ ಹುಕುಂ ಹಕ್ಕು ಕುರಿತು ಅರಿವು ಮೂಡಿಸಿದ್ದೀರಿ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸದಸ್ಯನಾಗಿ ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. 

ನಿಮ್ಮ ಮನವಿಯನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳಿಗೆ ಕಳಿಸುತ್ತೇನೆ. ಜಮೀನು ಪಡೆದುಕೊಳ್ಳಲು ಅರ್ಹತೆ ಇರುವವರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು’ ಎಂದು ಅಭಿಪ್ರಾಯಪಟ್ಟರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಅರಣ್ಯ ಭೂಮಿ ಮತ್ತು ಬಗರ್‌ಹುಕುಂ ಸಾಗುವಳಿದಾರರು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಶಾಂತಿ
ಯುತವಾಗಿರಲಿ. ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ. ನಿಮ್ಮ ಹಕ್ಕು ನಿಮಗೆ ಸಿಕ್ಕೆ ಸಿಗುತ್ತದೆ’ ಎಂದರು.

ರಾಜ್ಯ ಅರಣ್ಯ ವಾಸಿಗಳ ಹೋರಾಟಗಾರರ ವೇದಿಕೆ ಪ್ರಧಾನ ಸಂಚಾಲಕ ರವೀಂದ್ರನಾಯ್ಕ ಮಾತನಾಡಿ, ‘ಒಡಿಶಾ, ಛತ್ತೀಸ್‌ಗಡ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶಗಳಲ್ಲಿ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ.

ಹಕ್ಕುಪತ್ರ ನೀಡುವಲ್ಲಿ ಕರ್ನಾಟಕ ರಾಜ್ಯ 15ನೇ ಸ್ಥಾನದಲ್ಲಿದೆ. ಇದಕ್ಕೆ ರಾಜಕಾರಣಿಗಳು ಹಾಗೂ ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಕಾರಣ’ ಎಂದು ದೂರಿದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ದಲಿತಪರ ಹೋರಾಟಗಾರ ಎಂ.ಜಯಣ್ಣ ಮಾತನಾಡಿದರು.

ಕರ್ನಾಟಕ ಆದಿವಾಸಿ ಒಕ್ಕೂಟದ ಪ್ರಧಾನ ಸಂಚಾಲಕ ಪ್ರಜಾಶಕ್ತಿ ಬೋರಯ್ಯ, ‘24 ದಿನಗಳ ಕಾಲ ಜಾಥಾ ಮಾಡಿದ್ದೇವೆ. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಅಡುಗೆ ಮಾಡಿಕೊಂಡು ನಿರಂತರ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಆದಿವಾಸಿ ಒಕ್ಕೂಟದ ಅಧ್ಯಕ್ಷ ಪಿ.ಸಿ.ರಾಮು, ವಕೀಲರು ಮತ್ತು ಕಾನೂನು ಸಲಹೆಗಾರ ರಾಜಶೇಖರ ನಾಯಕ, ಬಗರ್‌ಹುಕುಂ ಹೋರಾಟ ಸಮಿತಿ ಜಿಲ್ಲಾ ಮುಖಂಡರಾದ ಎನ್.ಎಚ್.ಸೂರಪ್ಪ, ಎಂ.ನಾಗರಾಜ ಮಹಾಸ್ವಾಮಿ, ಎನ್.ಕೆ.ರುದ್ರಣ್ಣ, ದೊಡ್ಡಉಳ್ಳಾರ್ತಿ ಕರಿಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT