ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಪ್ರತಿ ಗ್ರಾಮಕ್ಕೂ 24X7 ನಿರಂತರ ನೀರು

Last Updated 8 ಜುಲೈ 2017, 5:15 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ದಿನವಿಡೀ ನಿರಂತರ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ತಿಳಿಸಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕ, ಕಗ್ಗಿ ಕೆರೆ, ಚನ್ನೇಶ್‌ ಕೆರೆ, ಸೂಳೆಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಮೂಲಕ ಪ್ರತಿ ಗ್ರಾಮಕ್ಕೂ ನಿರಂತರ ನೀರು ಒದಗಿಸಲಾಗುವುದು ಎಂದು ಅವರು ಜಿಲ್ಲಾ ವರದಿಗಾರರ ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭರವಸೆ ನೀಡಿದರು.

121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಸರ್ಕಾರ ₹ 470 ಕೋಟಿ ಮಂಜೂರು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲೇ ಇದಕ್ಕೆ ಶಂಕುಸ್ಥಾಪನೆ ನೆರವೇರಿಸುವರು. 28 ಗ್ರಾಮಗಳಿಗೆ ನೀರು ಒದಗಿಸುವ ಕಗ್ಗಿ ಕೆರೆ ಹಾಗೂ 18 ಗ್ರಾಮಗಳಿಗೆ ನೀರು ಒದಗಿಸುವ ಚನ್ನೇಶ ಕೆರೆ ಯೋಜನೆ ಈಗಾಗಲೇ ಆರಂಭವಾಗಿವೆ. ಅಲ್ಲದೇ, ಸೂಳೆಕೆರೆಯಿಂದ 130 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಗುರಿ ಇದೆ. ಈಗಾಗಲೇ 70 ಘಟಕಗಳು ಕಾರ್ಯಾರಂಭ ಮಾಡಿವೆ. 61 ಘಟಕಗಳು ನಿರ್ಮಾಣ ಅಂತಿಮ ಹಂತದಲ್ಲಿವೆ. ಮತ್ತೆ 30ಕ್ಕೆ ಮಂಜೂರಾತಿ ಸಿಕ್ಕಿದೆ. ಇನ್ನೂ 15 ಹಳ್ಳಿಗಳು ಬಾಕಿಯಾಗಲಿವೆ ಎಂದರು.

ಮೂರ್ನಾಲ್ಕು ಕಿ.ಮೀ. ಬಿಟ್ಟರೆ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಅಭಿವೃದ್ಧಿಪಡಿಸುವ ರಸ್ತೆ ಸದ್ಯಕ್ಕೆ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘₹ 135 ಕೋಟಿ ವೆಚ್ಚದಲ್ಲಿ ಚನ್ನಗಿರಿ–ಬೀರೂರು ಹೆದ್ದಾರಿ ರಸ್ತೆ ಕಾಮಗಾರಿ ಎರಡು ಪ್ಯಾಕೇಜ್‌ನಲ್ಲಿ ನಡೆದಿದೆ. ₹ 185 ಕೋಟಿ ವೆಚ್ಚದಲ್ಲಿ ಚನ್ನಗಿರಿ–ಬಾಡಾ–ಸಂತೇಬೆನ್ನೂರು ರಸ್ತೆ ಕಾಮಗಾರಿ ನಡೆದಿದ್ದು, ಇದೇ ಸೆಪ್ಟೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಚಿತ್ರದುರ್ಗ–ಚನ್ನಗಿರಿ–ಶಿವಮೊಗ್ಗ ರಸ್ತೆ ಅಭಿವೃದ್ಧಿ ಕಾಮಗಾರಿ ₹371 ಕೋಟಿ ವೆಚ್ಚದಲ್ಲಿ ಸಾಗಿದೆ. ಈ ವರ್ಷವೇ ಲೋಕೋಪಯೋಗಿ ಇಲಾಖೆ ₹ 70 ಕೋಟಿ ಅನುದಾನ ನೀಡಿದೆ. ರಸ್ತೆ ಅಭಿವೃದ್ಧಿಗೆ ಜಿಲ್ಲಾ ಪಂಚಾಯ್ತಿ ₹ 60 ಕೋಟಿ ಹಣ ನೀಡಿದೆ. ಚನ್ನಗಿರಿ ಪಟ್ಟಣಕ್ಕೆ ₹ 20 ಕೋಟಿ ಅನುದಾನ ಬಂದಿದೆ. ಕ್ಷೇತ್ರದಲ್ಲಿ ರೈತರಿಗೆ 450 ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ನೀಡಲಾಗಿದೆ ಎಂದರು.

‘ಶಾಸಕರ ಆದರ್ಶ ಗ್ರಾಮ ಯೋಜನೆಗೆ 5 ಗ್ರಾಮಗಳಿಗೆ ತಲಾ ₹ 25 ಲಕ್ಷ ಅನುದಾನ ನೀಡಲಾಗಿದೆ. ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿ 950 ಅರ್ಜಿಗಳಲ್ಲಿ 300 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 600 ಹಕ್ಕುಪತ್ರಗಳು ವಿತರಣೆಗೆ ಸಿದ್ಧವಾಗಿವೆ. ಬರಗಾಲ ಇದ್ದರೂ ದೇವಸ್ಥಾನ, ಮಠ, ಮಸೀದಿಗಳಿಗೆ ಅನುದಾನ ನಿಲ್ಲಿಸಿಲ್ಲ. ಶಾಸಕರ ಅನುದಾನ ಅಷ್ಟೂ ಖರ್ಚು ಮಾಡಿದ್ದೇನೆ’ ಎಂದು ಮಾಹಿತಿ ನೀಡಿದರು. ಸಂವಾದದಲ್ಲಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ್, ಪದಾಧಿಕಾರಿಗಳಾದ ಗುರುಶಾಂತಪ್ಪ, ಶಶಿಕುಮಾರ್ ಉಪಸ್ಥಿತರಿದ್ದರು.

ಕ್ಷೇತ್ರಕ್ಕೆ ದಾಖಲೆ ಅನುದಾನ
‘ಕ್ಷೇತ್ರದ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಅನುದಾನ ಈಗ ಹರಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಿರವಾದ ಸರ್ಕಾರ ನೀಡಿದ್ದಾರೆ. ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಈಗಲೇ ಹೇಳಲಾರೆ. ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ’ ಎಂದು ರಾಜಣ್ಣ ಹೇಳಿದರು.

ಉಳಿದ ಅವಧಿಯಲ್ಲಿ ಮಂತ್ರಿ ಆಗುವ ಆಸೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನೇನೂ ಸನ್ಯಾಸಿ ಅಲ್ಲ. ಅದೃಷ್ಟ ಇದ್ದರೆ ಏಕಾಗಬಾರದು? ಈಗಂತೂ ಅಂತಹ ಅವಕಾಶ ಇಲ್ಲ. ತಿರುಕನ ಕನಸು ಕಾಣಲ್ಲ’ ಎಂದು ತೀಕ್ಷ್ಣವಾಗಿ ನುಡಿದರು.

ಜೆಡಿಯು ಜತೆಗಿನ ಹೊಂದಾಣಿಕೆ ಬಗೆಗಿನ ಪ್ರಶ್ನೆಗೆ, ‘ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಬಗ್ಗೆ ಈ ತೀರ್ಮಾನ ಕೈಗೊಂಡರೆ ಆಶ್ಚರ್ಯ ಇಲ್ಲ. ಎದುರಾಳಿಗಳೆಲ್ಲ ಒಳ್ಳೆಯವರೇ ಇದ್ದಾರೆ’ ಎಂದು ಹೇಳಿದರು.

‘ರಾಜಕಾರಣದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರಿಂದ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT