ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಲಾರ್‌ ತೆರವು ಕಾರ್ಯಾಚರಣೆ ಆರಂಭ

Last Updated 8 ಜುಲೈ 2017, 7:21 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ವಾಣಿಜ್ಯ ಪ್ರದೇಶಗಳಲ್ಲಿನ ಕಟ್ಟಡಗಳಲ್ಲಿ ಅನ್ಯ ಉದ್ದೇಶಕ್ಕೆ ಬಳಕೆಯಾಗಿದ್ದ ಸೆಲ್ಲಾರ್‌ಗಳನ್ನು (ನೆಲಮಾಳಿಗೆ) ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೊನೆಗೂ ಕೈಗೊಂಡಿರುವ ನಗರಪಾಲಿಕೆ ಅಧಿಕಾರಿಗಳು, ಮಾಲೀಕರು ಹಾಗೂ ಮಳಿಗೆ ಇಟ್ಟಿದ್ದವರಿಗೆ ಬಿಸಿ ಮುಟ್ಟಿಸಿದೆ.

ಖಡೇಬಜಾರ್‌, ಮಾರುತಿಗಲ್ಲಿ ಹಾಗೂ ಗಣಪತಿ ಗಲ್ಲಿಯಲ್ಲಿ 65ಕ್ಕೂ ಹೆಚ್ಚು ಸೆಲ್ಲಾರ್‌ಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಪೊಲೀಸ್‌ ಭದ್ರತೆಯಲ್ಲಿ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. 5 ಜೆಸಿಬಿಗಳನ್ನು ಬಳಸಲಾಯಿತು.

ಸೆಲ್ಲಾರ್‌ಗಳನ್ನು ವಾಹನಗಳ ನಿಲುಗಡೆಗೆ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಟ್ಟಡ ಮಾಲೀಕರು ಕಟ್ಟಡ ನಿರ್ಮಿಸಲು ಅನುಮತಿ ಪಡೆಯುವಾಗಲೂ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ. ಆದರೂ ಸೆಲ್ಲಾರ್‌ಗಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ವ್ಯಾಪಕವಾಗಿ ಕಂಡುಬಂದಿದೆ.

ಇದರಿಂದ ಸಾರ್ವಜನಿಕರು ವಾಹನ ನಿಲುಗಡೆ ಮಾಡಲು ತೀವ್ರ ತೊಂದರೆಯಾಗಿತ್ತು. ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಕಾರ್ಯಾಚರಣೆಯನ್ನು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ನೇತೃತ್ವದಲ್ಲಿ ಆರಂಭಿಸಲಾಗಿದೆ.

ಬಟ್ಟೆ, ಮೊಬೈಲ್‌ ಅಂಗಡಿ: ಸೆಲ್ಲಾರ್‌ಗಳಲ್ಲಿಯೇ ಬಟ್ಟೆ ಅಂಗಡಿ, ಮೊಬೈಲ್‌ ಮಳಿಗೆಗಳನ್ನು ಹಾಕಿಕೊಂಡಿದ್ದು ಗಮನಕ್ಕೆ ಬಂದಿತು. ಅಕ್ರಮವಾಗಿ ನಿರ್ಮಿಸಲಾಗಿದ್ದ ಗೋಡೆಗಳನ್ನೂ ಕೆಡವಲಾಯಿತು. ಕೆಲವರು ತಾವೇ ತೆರವುಗೊಳಿಸುವುದಾಗಿ ಮುಂದೆ ಬಂದರು.

ಖಡೇಬಜಾರ್‌ನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ, ಅಧಿಕಾರಿಗಳೊಂದಿಗೆ ವ್ಯಾಪಾರಿಗಳು ಹಾಗೂ ಕಟ್ಟಡಗಳ ಮಾಲೀಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರತಿರೋಧದ ನಡುವೆಯೂ ಕಾರ್ಯಾಚರಣೆ ನಡೆಯುತ್ತಿದ್ದುದ್ದನ್ನು ಗಮನಿಸಿದ ಕೆಲವರು, ಅಂಗಡಿ, ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದರು.

‘ಮೊದಲ ದಿನ 65ಕ್ಕೂ ಹೆಚ್ಚು ಸೆಲ್ಲಾರ್‌ಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ. ಸಂಬಂಧಿಸಿದವರಿಗೆ 3 ಬಾರಿ ನೋಟಿಸ್‌ ನೀಡಲಾಗಿತ್ತು. ಅವರು ತೆರವುಗೊಳಿಸದೆ ಇದ್ದಿದ್ದರಿಂದ ನಾವೇ ಕ್ರಮ ಕೈಗೊಂಡಿದ್ದೇವೆ.

ಒಟ್ಟು 280 ಸೆಲ್ಲಾರ್‌ಗಳ ಪಟ್ಟಿ ಸಿದ್ಧವಿದೆ. ಹಂತಹಂತವಾಗಿ ಎಲ್ಲ ಕಡೆಯೂ ತೆರವು ಮಾಡಲಾಗುವುದು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅವರಾಗಿಯೇ ತೆರವುಗೊಳಿಸುವುದಕ್ಕೂ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಶಾಸಕರ ಮಾತಿಗೆ ಜಗ್ಗದೆ ಕಾರ್ಯಾಚರಣೆ
ಬೆಳಗಾವಿ: ನಗರದ ವಿವಿಧೆಡೆ ಶುಕ್ರವಾರ ಆರಂಭಿಸಲಾಗಿರುವ ಸೆಲ್ಲಾರ್‌ಗಳ ತೆರವು ಕಾರ್ಯಾಚರಣೆಯನ್ನು ಶಾಸಕ ಫಿರೋಜ್‌ಸೇಠ್‌ ಮಧ್ಯಪ್ರವೇಶದ ನಡುವೆಯೂ ಮುಂದುವರಿಸಲಾಯಿತು.

ಖಡೇಬಜಾರ್‌ನಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬಂದ ಶಾಸಕರು, ‘ಜಿಲ್ಲಾ ಉಸ್ತುವಾರಿ ಸಚಿವರು, ನನ್ನ ಗಮನಕ್ಕೂ ತಾರದೆ ತೆರವು ಮಾಡುತ್ತಿದ್ದೀರಿ. ಕಟ್ಟಡಗಳ ಮಾಲೀಕರು, ಅಂಗಡಿ, ಮಳಿಗೆಯವರು ಸಮಯ ಕೇಳುತ್ತಿದ್ದಾರೆ. ನಿಮ್ಮ ಮನಸ್ಸಿಗೆ ಬಂದಂತೆ ಮಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಶಶಿಧರ ಕುರೇರ, ‘ಈಗಾಗಲೇ ಬಹಳ ಸಮಯ ಕೊಡಲಾಗಿದೆ. 3– 4 ಬಾರಿ ನೋಟಿಸ್‌ ಜಾರಿಗೊಳಿಸಲಾಗಿದೆ. ಅನಧಿಕೃತವಾಗಿರುವ ಅಂಗಡಿಗಳನ್ನಷ್ಟೇ ತೆರವುಗೊಳಿಸುತ್ತಿದ್ದೇವೆ’ ಎಂದು ಹೇಳಿದರು. ನಂತರ ಕಾರ್ಯಾಚರಣೆ ಮುಂದುವರಿಯಿತು.

ಅಂಕಿ ಅಂಶ
280 ತೆರವುಗೊಳಿಸಲು ಗುರುತಿಸಲಾದ ಸೆಲ್ಲಾರ್‌ಗಳು

60 ಶುಕ್ರವಾರ ತೆರವುಗೊ ಳಸಲಾದ ಸೆಲ್ಲಾರ್‌ಗಳ ಸಂಖ್ಯೆ

3 ಕಟ್ಟಡಗಳ ಮಾಲೀಕರಿಗೆ ನೀಡಿದ್ದ ನೋಟಿಸ್‌ಗಳು

* * 

ಸೆಲ್ಲಾರ್‌ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ವಾಹನ ನಿಲುಗಡೆಗೆ ಉಂಟಾಗಿರುವ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ
ಶಶಿಧರ ಕುರೇರ
ಆಯುಕ್ತರು, ಮಹಾನಗರಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT