ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ

Last Updated 8 ಜುಲೈ 2017, 7:28 IST
ಅಕ್ಷರ ಗಾತ್ರ

ಜಮಖಂಡಿ: ಜಮಖಂಡಿ ಉಪ ವಿಭಾಗದ ವ್ಯಾಪ್ತಿಯಲ್ಲಿನ ಜಿಎಲ್‌ಬಿಸಿ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಕಾರ್ಯಕರ್ತರು ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿ, ‘ದೂಪದಾಳ ಜಲಾಶಯದಿಂದ ಹರಿಸಿದ 2650 ಕ್ಯೂಸೆಕ್‌ ನೀರಿನ ಪೈಕಿ ರಾಯ ಬಾಗ ತಾಲ್ಲೂಕಿನ ಮುಗಳಖೋಡ ವರೆಗೆ 1400 ಕ್ಯೂಸೆಕ್‌ ನೀರು ಹರಿದು ಬಂದಿದೆ. ಆದರೆ, ಜಮಖಂಡಿ ಉಪ ವಿಭಾಗ ವ್ಯಾಪ್ತಿಯ ಕಾಲುವೆಗಳಿಗೆ ನೀರು ಏಕೆ ಹರಿದು ಬರುತ್ತಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಜಮಖಂಡಿ ಉಪವಿಭಾಗದ ಪಾಲಿನ ನೀರನ್ನು ಕೊಡಿಸದಿದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಏಕೆ ಇರಬೇಕು. ಜಮಖಂಡಿ ಉಪವಿಭಾಗದ ವ್ಯಾಪ್ತಿಯ ಮುಧೋಳ, ಬೀಳಗಿ ಹಾಗೂ ಜಮಖಂಡಿ ತಾಲ್ಲೂಕುಗಳ ರೈತರು ನೀರಿಲ್ಲದೆ ಪರಿತಪಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಮೂರು ತಾಲ್ಲೂಕುಗಳ ಶಾಸಕರು ಬರಲಿ, ಜಿಲ್ಲಾಧಿಕಾರಿ, ಮುಖ್ಯ ಎಂಜಿನಿಯರ್ ಸ್ಥಳಕ್ಕೆ ಬರಲಿ. ಪೊಲೀಸರ ರಕ್ಷಣೆಯಲ್ಲಿ ಜಿಎಲ್‌ಬಿಸಿ ಕಾಲುವೆಗೆ ಇಂದೇ ನೀರು ಹರಿಸುವ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.

ರೈತರ ಸಹನೆ ಮತ್ತು ತಾಳ್ಮೆ ಪರೀಕ್ಷಿಸಬಾರದು. ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆಯನ್ನು ಉಗ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಮಾತನಾಡಿ, ಗೋಕಾಕನ ಒಂದೇ ರಾಜಕೀಯ ಕುಟುಂಬದವರು ಹಿಡಕಲ್‌ ಜಲಾಶಯವನ್ನು ತಮ್ಮ ಸ್ವಂತ ಆಸ್ತಿ ಯನ್ನಾಗಿ ಮಾಡಿಕೊಂಡಿದ್ದಾರೆ. ಗೂಂಡಾಗಳ ಕೈಯಲ್ಲಿ ಹಿಡಕಲ್‌ ಜಲಾಶಯ ಸಿಕ್ಕಿದೆ. ಹಿಡಕಲ್‌ ಜಲಾಶಯಕ್ಕೆ ಯಾವಾಗ ಸ್ವಾತಂತ್ರ್ಯ ಕೊಡಿಸುತ್ತೀರಿ. ನೀರು ಯಾವಾಗ ಕೊಡು ತ್ತೀರಿ ಎಂದು ಸವಾಲು ಹಾಕಿದರು.

ಈರಪ್ಪ ಹಂಚಿನಾಳ, ವಕೀಲ ಸಿ.ಆರ್‌. ಸುತಾರ, ಗುಡೂಸಾಬ ಹೊನ ವಾಡ, ಶಂಕರ ಪೂಜಾರಿ ಮಾತನಾಡಿದರು. ರಾಜು ನದಾಫ, ಕಲ್ಲಪ್ಪ ಬಿರಾ ದಾರ ಭಾಗವಹಿಸಿದ್ದರು.
ಜಿಎಲ್‌ಬಿಸಿ ಇಇ ಪದ್ಮಾ ಜೋಶಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ‘ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳಿಂದ ಎಲ್ಲೆಡೆ ಓಡಾಡಿ ಕಾಲುವೆಗಳ ಗೇಟ್‌ಗಳನ್ನು ಅರ್ಧಕ್ಕೆ ಇಳಿಸಲಾಗಿದೆ. ಶನಿವಾರ ಬೆಳಿಗ್ಗೆಯಿಂದ 500 ಕ್ಯೂಸೆಕ್‌ ನೀರನ್ನು ಕಾಲುವೆಗೆ ಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಆದರೆ, ಪ್ರತಿಭಟನಾಕಾರರು ಪದ್ಮಾ ಜೋಶಿ ಅವರು ನೀಡಿದ ಉತ್ತರಕ್ಕೆ ತೃಪ್ತರಾಗಲಿಲ್ಲ. ಕನಿಷ್ಠ 1100 ಕ್ಯೂಸೆಕ್‌ ನೀರು ಹರಿಸುವಂತೆ ಒತ್ತಾಯಿಸಿದರು. ಮುಖ್ಯ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು. ತಹಶೀಲ್ದಾರ್‌ ಪ್ರಶಾಂತ ಚನ ಗೊಂಡ, ಪಿಎಸ್‌ಐ ಪಿ.ಎನ್‌. ಮನಗೂಳಿ ಘಟನಾ ಸ್ಥಳದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT