ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ಅನಿರ್ದಿಷ್ಟಾವಧಿ ಧರಣಿ ಅಂತ್ಯ

Last Updated 8 ಜುಲೈ 2017, 11:03 IST
ಅಕ್ಷರ ಗಾತ್ರ

ರಾಮನಗರ: ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಕಳೆದ 45 ದಿನಗಳಿಂದ ಆದಿವಾಸಿಗಳು ಹಕ್ಕುಪತ್ರಕ್ಕಾಗಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ಶುಕ್ರವಾರ ಸಂಜೆ ಹಿಂದಕ್ಕೆ ಪಡೆಯಲಾಯಿತು.

‘ಬೆಂಗಳೂರಿನ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅಧ್ಯಕ್ಷತೆಯಲ್ಲಿ ಕಳೆದ 45 ದಿನಗಳಿಂದ ಹಕ್ಕುಪತ್ರಕ್ಕಾಗಿ ಆದಿವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ ಜಿಲ್ಲೆಯ ಪರಿಶಿಷ್ಟ ಪಂಗಡದ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಕ್ಕುಪತ್ರ ವಿತರಣೆ ಕುರಿತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು’ ಎಂದು ಇರುಳಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

‘ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಎಲ್ಲಾ ಅಧಿಕಾರಿಗಳು ಆದಿವಾಸಿಗಳಿಗೆ ನೀಡುವ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ನೀಡಿದ ಉತ್ತರಗಳಿಗೆ ಸಚಿವ ಆಂಜನೇಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

‘45 ದಿನಗಳಿಂದ ಧರಣಿ ಕೂತಿರುವ ಗೊಲ್ಲರದೊಡ್ಡಿ, ವಡ್ಡರಹಳ್ಳಿ, ಬುಡಗಯ್ಯನದೊಡ್ಡಿ, ಜೋಡಗಟ್ಟೆಯ ಇರುಗಳಿಗ ಕಾಲೊನಿಯ ಆದಿವಾಸಿಗಳಿಗೆ ಇನ್ನು ಹದಿನೈದು ದಿನದ ಒಳಗೆ ಹಕ್ಕುಪತ್ರ ವಿತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಂತರ ಜಿಲ್ಲೆಯಲ್ಲಿ ಆದಿವಾಸಿಗಳು ವಾಸಿಸುತ್ತಿರುವ ಸ್ಥಳಗಳ ಸರ್ವೆ ನಡೆಸಿ ಎಲ್ಲಾ ಆದಿವಾಸಿ ಕುಟುಂಬಗಳಿಗೂ ಹಕ್ಕುಪತ್ರ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು’ ಎಂದು ಮಾಹಿತಿ ನೀಡಿದರು.

‘ರಾಮನಗರ ಜಿಲ್ಲಾಡಳಿತ ಸಚಿವರು ಹೇಳಿದ ಹಾಗೆ ಇದೇ 22ರ ಒಳಗೆ ನಮಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲದಿದ್ದರೆ ಇದೇ 24ರಿಂದ ಉಗ್ರವಾದ ಹೋರಾಟವನ್ನು ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.

ಮಣಿವಣ್ಣನ್‌ ಅಸಮಾಧಾನ: ‘ಆದಿವಾಸಿ ಸಮುದಾಯಗಳ ಬಗ್ಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್‌ ಅಸಮಾಧಾನ ವ್ಯಕ್ತಪಡಿಸಿದರು. ಸೌಲಭ್ಯಗಳ ಬಗ್ಗೆ ಧರಣಿ ಕುಳಿತಾಗಲೆ ಸಮಸ್ಯೆಯನ್ನು ಬಗೆಹರಿಸಬೇಕಿತ್ತು.

ಆದರೆ ನಿಮ್ಮ ಬೇಜವಾಬ್ದಾರಿತನದಿಂದ ಧರಣಿ 45ದಿನಗಳ ವರೆಗೆ ನಡೆದಿದೆ. ಇನ್ನು ಮುಂದಾದರೂ 2006ರ ಅರಣ್ಯ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ತಿಳಿದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು’ ಎಂದು ಆದಿವಾಸಿ ಹೋರಾಟಗಾರ ಮಹದೇವಯ್ಯ ಹೇಳಿದರು.

ಆದಿವಾಸಿ ಹೋರಾಟಗಾರ ಶಿವರಾಜು ಮಾತನಾಡಿ ‘310 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಉಳಿದ ಅರ್ಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದೆ. ಸರ್ವೆ ಕಾರ್ಯ ನಡೆದು ಆರೇಳು ತಿಂಗಳು ಕಳೆದರೂ ಇನ್ನೂ ಹಕ್ಕುಪತ್ರ ವಿತರಿಸಿಲ್ಲ’ ಎಂದು ತಿಳಿಸಿದರು.

‘ತಲತಲಾಂತರಗಳಿಂದ ಅನುಭವಿಸಿ-­ಕೊಂಡು ಬಂದಿರುವ ಅರಣ್ಯ ಭೂಮಿ­ಯನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಈ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಿ ವೈಯ­ಕ್ತಿಕ ಹಕ್ಕು ಪತ್ರ ಮತ್ತು ಸಮುದಾಯಿಕ ಹಕ್ಕು ಪತ್ರ ಒದಗಿಸಬೇಕು.

ಅರಣ್ಯ ಭೂಮಿಯಿಂದ ಹಾಗೂ ಮೂಲ ನೆಲೆಯಿಂದ ಅರಣ್ಯ­ವಾಸಿಗಳನ್ನು ಒಕ್ಕಲೆಬ್ಬಿ­ಸ­ಬಾರದು. ಈಗಾಗಲೇ ಒಕ್ಕಲೆ­ಬ್ಬಿಸಿ­­ರುವ ಅರಣ್ಯವಾಸಿಗಳಿಗೆ ಪುನರ್‌­ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ಸಮುದಾಯದ ಹೋರಾಟಗಾರರಾದ ಅಟ್ಟಬರಿಯಪ್ಪ, ಪುಟ್ಟಮಾದಯ್ಯ, ರಾಜು, ಗಿರಿಯಪ್ಪ, ಮುನಿಯಪ್ಪ, ಚಿನ್ನ ಎಳಿಯಪ್ಪ, ಮುತ್ತಮ್ಮ, ಬೈರಮ್ಮ, ಎಳಿಯಮ್ಮ, ಶಿವಮಾದಮ್ಮ, ದೊಡ್ಡಬೈರಮ್ಮ, ಹಲಗಮ್ಮ ಇದ್ದರು.

ಬಾರದ ಮಹಿಳಾ ಅಧಿಕಾರಿಗಳು
ಜೋಡುಗಟ್ಟೆಯ ಇರುಳಿಗ ಕಾಲೊನಿಯ ಮಹಿಳೆ ಬರಗಮ್ಮ ಮಾತನಾಡಿ ‘ಮಹಿಳೆಯರೇ ಜಿಲ್ಲಾಡಳಿತ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಮಳೆ, ಚಳಿ, ಬಿಸಿಲು ಎನ್ನದೆ ಇಪ್ಪತ್ತೈದಕ್ಕೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಳೆದ 45 ದಿನಗಳಿಂದ ಇಲ್ಲಿ ಧರಣಿ ಕುಳಿತಿದ್ದೇವೆ. ಈ ಮಹಿಳಾ ಅಧಿಕಾರಿಗಳು ಒಬ್ಬರೂ ಇಲ್ಲಿಗೆ ಬರಲಿಲ್ಲ, ನಮ್ಮ ಸಮಸ್ಯೆ ಏನೂ ಎಂದು ಕೇಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಧರಣಿ ಕೂತಿರುವ ಸ್ಥಳದಲ್ಲಿ ನಾವು ನೂರಾರು ಸಮಸ್ಯೆಗಳನ್ನು ಎದುರಿಸಿದೆವು. ಕೆಲವು ಅಧಿಕಾರಿಗಳು ಬಂದು ಉಡಾಫೆ ಉತ್ತರವನ್ನು ನೀಡಿ, ಹೋರಾಟದ ಕೆಚ್ಚನ್ನು ಮತ್ತಷ್ಟು ಹೆಚ್ಚಿಸಿದರು. ಇನ್ನು ಮುಂದಾದರೂ ಪ್ರತಿಭಟನಾಕಾರರಿಗೆ ಸ್ಪಂದಿಸುವುದನ್ನು ಜಿಲ್ಲಾಡಳಿತ ಕಲಿತುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT