ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದಿಗೂ ಕುಲ ಕಸುಬನ್ನು ಕಳೆದುಕೊಳ್ಳಬೇಡಿ

ಶಿವಸಿಂಪಿ ಸಮುದಾಯದವರಿಗೆ ಶಿವಮೂರ್ತಿ ಮುರುಘಾ ಶರಣರ ಸಲಹೆ
Last Updated 10 ಜುಲೈ 2017, 5:56 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬಟ್ಟೆ ಹೊಲಿಯುವ, ಕೈಮಗ್ಗ ನೇಯುವ ಶಿವಸಿಂಪಿ ಸಮುದಾಯದವರು ತಮ್ಮ ಕುಲ ಕಸುಬನ್ನು ಎಂದಿಗೂ ಕಳೆದುಕೊಳ್ಳಬೇಡಿ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಲಗುರು ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಗೌರವ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಸಮುದಾಯದ ಕುಲ ಕಸುಬಿಗೆ ಜಾಗತೀಕರಣದ ಪ್ರಭಾವ ಬಹುದೊಡ್ಡ ಪೆಟ್ಟು ನೀಡಿದೆ. ನೇಯ್ಗೆ ಕೆಲಸದ ಜಾಗದಲ್ಲಿ ಯಂತ್ರಗಳು, ಕೈಗಾರಿಕೆಗಳು ಬಂದು ಕುಳಿತಿವೆ. ಆದರೂ ನೀವುಗಳು ಎದೆಗುಂದುವುದು ಬೇಡ. ನಿಮ್ಮ ಮುಂದಿನ ಪೀಳಿಗೆಗೆ ತೋರಿಸಲಾದರೂ ಕಸುಬನ್ನು ಮುಂದುವರಿಸಿ’ ಎಂದು ತಿಳಿಸಿದರು.

ಇದು ಚಿಕ್ಕ ಸಮುದಾಯವಾಗಿದ್ದರೂ ವರ್ಷದಿಂದ ವರ್ಷಕ್ಕೆ ಸಂಘಟಿತರಾಗುತ್ತಿರುವುದು ಸಂತಸದ ಸಂಗತಿ. ಶಿವಸಿಂಪಿಯಲ್ಲಿ ಮಹಿಳಾ ಘಟಕ ಸ್ಥಾಪಿಸಿದಂತೆ ಮುಂದೆ ಪುರುಷರ ಘಟಕ ಸ್ಥಾಪಿಸಿಕೊಂಡು  ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ ಎಂದರು.

12ನೇ ಶತಮಾನದ ಶಿವದಾಸಿಮಯ್ಯ ಬಸವಣ್ಣ ಅವರಂತೆ ಸ್ವಾಭಿಮಾನ, ಗೌರವದಿಂದ ಬದುಕಿದವರು. ಶಿಸ್ತು, ಸಂಸ್ಕಾರ, ಸನ್ನಡತೆ ಶಿವಸಿಂಪಿ ಸಮಾಜದ ಶ್ರೀಮಂತಿಕೆ. ಈ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಸಮಕಾಲೀನ ಘಟನಾವಳಿಗಳನ್ನು ತಿಳಿದುಕೊಂಡಿರಬೇಕು ಎಂದರು.

‘ತಾಳಿ ಸಂಸಾರದ ಸಂಕೇತ, ಲಿಂಗ ಸಂಸ್ಕಾರದ ಸಂಕೇತ. ಯಾವುದೋ ಗಾಳಿ ಸುದ್ದಿಗೆ ಕಿವಿಗೊಟ್ಟು ಮಹಿಳೆಯರು ತಾಳಿಯಲ್ಲಿನ ಕೆಂಪು ಹವಳ ಕುಟ್ಟಿ ಹಾಕುತ್ತಿರುವುದು ಸರಿಯಲ್ಲ. ಹವಳ ಕುಟ್ಟಿದರೆ ವೈಯಕ್ತಿಕವಾಗಿ ನಿಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಲಿಂಗಾಯತ ಶಿವಸಿಂಪಿ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯರನ್ನು ಗೌರವಿಸಿ ಪುರಸ್ಕರಿಸಲಾಯಿತು. ಶಿವಸಿಂಪಿ ಸಮುದಾಯದ ಮುಖಂಡರಾದ ದಾವಣಗೆರೆಯ ಚಿಂದೋಡಿ ಚಂದ್ರಧರ್, ಗುರುಬಸಪ್ಪ ಬೂಸನೂರ್, ಚನ್ನಬಸಪ್ಪ ವಿ.ಅಥಣಿ, ಡಾ.ಮಲ್ಲಿಕಾರ್ಜುನ ಜವಳಿ, ಕುಮಾರ ಎಸ್.ಎನ್.ಭರತ್, ಕವಿತಾ ಸುರೇಶ್ ಇದ್ದರು.

ಶೋಭಾ ಜಗದೀಶ್ ಪ್ರಾರ್ಥಿಸಿದರು. ಎಸ್.ವಿ.ಕೊಟ್ರೇಶ್ ಸ್ವಾಗತಿಸಿದರು. ನಿರ್ಮಲಾ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ‘ಘಾಟಿ ಅತ್ತೆ ನಾಟಿ ಅಳಿಯ’ ಹಾಸ್ಯಭರಿತ ನಾಟಕ ಪ್ರದರ್ಶಿಸಲಾಯಿತು.

***

ಅದ್ದೂರಿ ಮೆರವಣಿಗೆ
ಶಿವದಾಸಿಮಯ್ಯ ಜಯಂತ್ಯುತ್ಸವದ ಅಂಗವಾಗಿ ಸುಂದರ ಸಾರೋಟಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ನಡೆಯಿತು. ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸಮುದಾಯದ ನೂರಾರು ಮಹಿಳೆಯರು, ಪುರುಷರು, ಹಿರಿಯರು ಹಾಗೂ ಕಿರಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

***

ಸತ್ಯ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಾಯಕ ತತ್ವಕ್ಕೆ ಒತ್ತು ನೀಡಿದ ಶಿವದಾಸಿಮಯ್ಯ ಅವರ ಆದರ್ಶ ಅಳವಡಿಸಿಕೊಂಡು ಮೂಲ ಸಂಸ್ಕೃತಿ ಉಳಿಸಿಕೊಳ್ಳಿ.
ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT