ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಾಗಿ ಅಂಗಲಾಚುತ್ತಿರುವ ಗಿರಿಜನರು!

ಅಣಜೂರು – ಪ್ಯಾಟೆಹಿತ್ಲು ರಸ್ತೆ ಕೆಸರುಮಯ: ಜಿಲ್ಲಾಡಳಿತ ಸ್ಪಂದಿಸಲು ಆಗ್ರಹ
Last Updated 10 ಜುಲೈ 2017, 8:34 IST
ಅಕ್ಷರ ಗಾತ್ರ

ಮೂಡಿಗೆರೆ: ‘ಜೋಕ್ಲೆನಾ ಕಾರ್‌ ತುಲೆ ಎಂಚ ಆತ್‌ಂಡು! ಜೋಡು ಪಾಡ್‌ಂ ಡಲಾ ಕೆಸರ್‌ಡು ಬನ್ನಾಗ ಪೂರಾ ಕಜ್ಜಿ ಆತ್‌ಂಡ್‌’ (ಮಕ್ಕಳ ಕಾಲು ನೋಡಿ, ಚಪ್ಪಲಿ ಧರಿಸಿದರೂ ಕೆಸರಲ್ಲಿ ಬಂದು ಅಂಗಾಲು ಪೂರ್ತಿ ಕಜ್ಜಿ ಆಗಿವೆ) ಇದು ತಾಲ್ಲೂಕಿನ ಅಣಜೂರು ಸಮೀಪದ ಪ್ಯಾಟೆಹಿತ್ಲು ಗ್ರಾಮದ ಗಿರಿಜನ ಮಹಿಳೆ ಯೊಬ್ಬರು ‘ಪ್ರಜಾವಾಣಿ’ ಮುಂದೆ ತೋಡಿಕೊಂಡ ಅಳಲು.

2004ರಲ್ಲಿ ತತ್ಕೊಳ ಮೀಸಲು ಅರಣ್ಯದಿಂದ ತೆರವಾದ ಗಿರಿಜನ ಕುಟುಂಬಗಳಿಗೆ ಆಶ್ರಯ ಒದಗಿಸಿರುವ ಪ್ರದೇಶ ಪ್ಯಾಟೆಹಿತ್ಲು. ಗಿರಿಜನರನ್ನು ಈ ಭಾಗಕ್ಕೆ ಸ್ಥಳಾಂತರಿಸಿ 13 ವರ್ಷ ಕಳೆದರೂ ಗ್ರಾಮಕ್ಕೆ ಸರಿಯಾದ ರಸ್ತೆ ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ, ಗಿರಿಜನರು ಕೆಸರು ರಸ್ತೆಯಲ್ಲಿಯೇ ನಡೆದು ಸಾಗುವಂತಾಗಿದೆ.

ಬೇಲೂರು ರಸ್ತೆಯ ಅಣಜೂರು ಗ್ರಾಮದಿಂದ ಎರಡುವರೆ ಕಿ.ಮೀ. ದೂರದಲ್ಲಿರುವ ಪ್ಯಾಟೆಹಿತ್ಲಿನಲ್ಲಿ ಸುಮಾರು 25 ಗಿರಿಜನ ಕುಟುಂಬಗಳು ವಾಸಿಸುತ್ತಿದ್ದು, ಈ ಕುಟುಂಬಗಳ ಎಂಟಕ್ಕೂ ಅಧಿಕ ಮಕ್ಕಳು ಅಣಜೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ನಿತ್ಯ ಎರಡೂವರೆ ಕಿ.ಮೀ. ಕೆಸರು ರಸ್ತೆಯಲ್ಲಿ ನಡೆದು, ಬಹುತೇಕ ವಿದ್ಯಾರ್ಥಿಗಳ ಅಂಗಾಲಿನಲ್ಲಿ ಕೆಸರುಗಜ್ಜಿಯಾಗಿವೆ ಎಂಬುದು ಸ್ಥಳೀಯರ ಅಳಲು.

ಈ ರಸ್ತೆಯ 150 ಮೀ ಉದ್ದದವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಮಂಜೂರಾತಿ ದೊರಕಿದೆ. ಮೂರು ತಿಂಗಳ ಹಿಂದೆಯೇ ಗುತ್ತಿಗೆದಾ ರರು ಜಲ್ಲಿ, ಕಲ್ಲುಪುಡಿ ಸಂಗ್ರಹಿಸಿದ್ದರೂ, ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ.

ಜತೆಗೆ ಗ್ರಾಮದ ಸಮೀಪ ಜೆಸಿಬಿಯಿಂದ ರಸ್ತೆಯನ್ನು ಅಗೆದು ಬಿಟ್ಟಿದ್ದು, 150 ಮೀ ನಷ್ಟು ದೂರ ಸಂಪೂರ್ಣ ಕೆಸರಿನ ಹೊಂಡವಾಗಿದ್ದು, ಗ್ರಾಮಕ್ಕೆ ವಾಹನಗಳ ಬರದಂತಾಗಿದೆ. ಇದರಿಂದ ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಯಾದರೆ ಹೆಗಲ ಮೇಲೆ ಹೊತ್ತು ಸಾಗಿಸಬೇಕಾದ ಸ್ಥಿತಿ ಉಂಟಾಗಿದೆ.

‘ಈ ಹಿಂದೆ ಗ್ರಾಮದಲ್ಲಿ ಪೊಲೀಸ್‌ ಜನಸಂಪರ್ಕ ಸಭೆ ನಡೆಸಿದಾಗಲೂ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದೆವು. ರಸ್ತೆಯಿಲ್ಲದೇ ಜನರು ನ್ಯಾಯಬೆಲೆ ಅಂಗಡಿ, ಸಂತೆ ಮುಂತಾದ ಕಡೆಗಳಿಂದ ಮನೆಗೆ ಸಾಮಗ್ರಿಗಳನ್ನು ತಲೆಮೇಲೆ ಹೊತ್ತು ಸಾಗಿಸಬೇಕಾಗಿದೆ. ಈ ಭಾಗಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಎಂದು ಹಲವು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ.

ಕನಿಷ್ಠ ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನ್ನಾದರೂ ಗ್ರಾಮಕ್ಕೆ ಕಳುಹಿಸಿಲ್ಲ. ಅಣ ಜೂರಿನಿಂದ ಪ್ಯಾಟೆಹಿತ್ಲು ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡದಿದ್ದರೆ ಗಿರಿಜನ ಸಂಘಟನೆಗಳೊಂದಿಗೆ ಎಲ್ಲ ಸೇರಿ ಉಗ್ರ ಹೋರಾಟ ರೂಪಿಸುತ್ತೇವೆ.’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದು, ಕೂಡಲೇ 2 ಕಿ. ಮೀ ರಸ್ತೆ ನಿರ್ಮಿಸಿ ಗಿರಿಜನರಿಗಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು ಎಂಬುದು ಅವರ ಒತ್ತಾಯವಾಗಿದೆ.
ಕೆ. ವಾಸುದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT