ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣಕ್ಕೆ ಸ್ಥಳಾಂತರಗೊಂಡ ಗ್ರಾ.ಪಂ ಆಡಳಿತ

ಮರೀಚಿಕೆಯಾದ ಗ್ರಾಮ ಸ್ವರಾಜ್‌ ಕನಸು: ಜನರ ಪರದಾಟ
ಅಕ್ಷರ ಗಾತ್ರ

ಲಿಂಗಸುಗೂರು: ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬ ಉದ್ದೇಶದಿಂದ ಸ್ಥಾಪನೆಗೊಂಡ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣ ಪ್ರದೇಶಗಳಿಗೆ ಸ್ಥಳಾಂತರಗೊಂಡಿದೆ. ಇದರಿಂದ ಸಾಮಾನ್ಯ ಜನರು ಪರದಾಡುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಕೆಲಸ ಕಾರ್ಯ ನೆಟ್‌ವರ್ಕ್‌ ಸಮಸ್ಯೆ ಕಾರಣದಿಂದ ಪಟ್ಟಣ ಪ್ರದೇಶಗಳಿಗೆ ಸ್ಥಳಾಂತರಗೊಂಡಿದೆ. ಕೇಂದ್ರ ಸ್ಥಳದಲ್ಲಿದ್ದು ಕೆಲಸ ಮಾಡಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮಗಳತ್ತ ಮುಖ ಮಾಡುತ್ತಿಲ್ಲ.

‘ಕುಡಿವ ನೀರು ಮತ್ತು ನೈರ್ಮಲ್ಯ ಯೋಜನೆ, ಸ್ವಚ್ಛಭಾರತ ಅಭಿಯಾನ, 14ನೇ ಹಣಕಾಸು ಯೋಜನೆ, ಉದ್ಯೋಗ ಖಾತರಿ, ಪಡಿತರ ಚೀಟಿ, ವಸತಿ ಯೋಜನೆ ಸೌಲಭ್ಯ, ಬಾಪೂಜಿ ಕೇಂದ್ರಗಳ ಮೂಲಕ 100 ದಾಖಲೆ ನೀಡುವುದು, ಎನ್‌ಆರ್‌ಎಲ್‌ಎಂ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಸೌಲಭ್ಯ ನೀಡುವ ಕನಸು ಇದರಿಂದ ಸಾಕಾರಗೊಳ್ಳುತ್ತಿಲ್ಲ’ ಎಂದು ಗುಂತಗೋಳದ ಯಲ್ಲಪ್ಪ ದೂರುತ್ತಾರೆ.

‘ಈ ಎಲ್ಲಾ ಯೋಜನೆಗಳು ಗ್ರಾಮ ಸಭೆ ಮೂಲಕವೆ ಕ್ರಿಯಾಯೋಜನೆ ಸಿದ್ಧಗೊಳ್ಳಬೇಕು. ಆದರೆ, ಅನಗತ್ಯ ಕಾರಣ ಮುಂದಿಟ್ಟುಕೊಂಡು ಹೋಟೆಲ್‌, ವಸತಿ ಗೃಹ, ಮನೆಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸುತ್ತಿದ್ದಾರೆ. ಕಾಟಾಚಾರಕ್ಕೆ ಗ್ರಾಮ ಸಭೆ ನಡೆಸಿ ಜಾಗೃತ ಸಮಿತಿ ಹೆಸರಿನಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಅಮರೇಶ  ಆರೋಪಿಸುತ್ತಾರೆ.

ಆಡಳಿತ ವ್ಯವಸ್ಥೆ ಪಟ್ಟಣಗಳಿಗೆ ಸ್ಥಳಾಂತಗೊಂಡಿದ್ದರಿಂದ ಗುಂತಗೋಳ ಸೇರಿದಂತೆ ಬಹುತೇಕ ಪಂಚಾಯಿತಿಗಳ ಕಟ್ಟಡಗಳು ಹಾಳುಬಿದ್ದಿವೆ. ಕೆಲ ಕಟ್ಟಡಗಳು ಅಪೂರ್ಣಾವಸ್ಥೆಯಲ್ಲಿವೆ.

‘ರಾಜ್ಯದಲ್ಲಿ 1887ರಿಂದ 1994ರ ಅವಧಿಯಲ್ಲಿ ಮಂಡಳ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಸಂವಿಧಾನ ತಿದ್ದುಪಡಿ ಆಧರಿಸಿ ಪಂಚಾಯತ್‌ ರಾಜ್‌ ಕಾಯ್ದೆಯಡಿ 1995ರಿಂದ ಗ್ರಾಮ ಪಂಚಾಯಿತಿ ಆಡಳಿತ ಜಾರಿಗೆ ಬಂದಿದೆ. ಸುಸಜ್ಜಿತ ಕಟ್ಟಡಗಳು ನಿರ್ಮಿಸಿದ್ದರೂ ಆಡಳಿತ ವ್ಯವಸ್ಥೆ ಪಟ್ಟಣ ಪ್ರದೇಶಗಳಲ್ಲಿ ಸೀಮಿತಗೊಂಡಿವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.

‘ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿರುವುದು ಬಗ್ಗೆ ಗಮನಕ್ಕೆ ಬಂದಿದೆ. ನೆಟ್‌ವರ್ಕ್‌ ನೆಪದಲ್ಲಿ ಪಟ್ಟಣ ಪ್ರದೇಶಗಳಲ್ಲಿ ಕೆಲಸ ಮಾಡುವ ಪಂಚಾಯಿತಿ ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಪಂಚಾಯಿತಿ ಕೇಂದ್ರ ಸ್ಥಳದಲ್ಲಿಯೆ ಗ್ರಾಮೀಣ ಜನತೆಗೆ ಸೇವೆ ನೀಡುವಂತೆ ಸೂಚಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಬಾಬು ರಾಠೋಡ ತಿಳಿಸಿದರು.

‘ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳ ಪೈಕಿ 35 ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಜೋಡಣೆ ಮಾಡಲಾಗಿದೆ. ಬಹುತೇಕ ಪಂಚಾಯಿತಿ ಅಧಿಕಾರಿಗಳು ಬಳಸಿದ ಬಿಲ್‌ ಪಾವತಿಸದೆ ಹೋಗಿದ್ದರಿಂದ ರದ್ದಾಗಿದೆ. ಈಗ ನಮ್ಮ ಇಲಾಖೆ ಬಗ್ಗೆ ದೂರುತ್ತಾರೆ’ಎಂದು ಹೆಸರು ಹೇಳಲಿಚ್ಛಿಸದ ಬಿಎಸ್‌ಎನ್‌ಎಲ್‌ ಅಧಿಕಾರಿ ಮಾಹಿತಿ ನೀಡಿದರು.
ಬಿ.ಎ. ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT