ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಶ್ರದ್ಧಾ–ಭಕ್ತಿಯ ಗುರು ಪೂರ್ಣಿಮೆ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸ್ವಾಮೀಜಿಗಳಿಂದ ಪ್ರವಚನ; ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಸಂಭ್ರಮ
Last Updated 10 ಜುಲೈ 2017, 10:47 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಗುರು ಪೂರ್ಣಿಮೆಯನ್ನು ಭಾನುವಾರ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ಗುರು ಪೂರ್ಣಿಮೆ ಪ್ರಯುಕ್ತ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾದರು. ವಿಶೇಷ ಪೂಜೆ, ಅಭಿಷೇಕದ ಜೊತೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾಧು–ಸಂತರು ಪ್ರವಚನ ನೀಡುವ ಮೂಲಕ ಗುರುಪೂರ್ಣಿಮೆ ಮಹತ್ವ ತಿಳಿಸಿದರು.

ನಗರದ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಮುಂಜಾನೆಯಿಂದ ವಿಶೇಷ ಪೂಜೆ ಮತ್ತು ಅಭಿಷೇಕ ನಡೆಯಿತು.  ಭಕ್ತರು ಮಠಕ್ಕೆ ಭೇಟಿ ನೀಡಿ, ಸಿದ್ಧಾರೂಢರ ದರ್ಶನ ಪಡೆದು ಪುನೀತರಾದರು. ವಿವಿಧೆಡೆಯಿಂದ ಬಂದಿದ್ದ ಮಠಾಧೀಶರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಪ್ರವಚನ ನೀಡಿದರು.

ಮೊಸರಿನ ಗಡಿಗೆ ಪ್ರಸಾದ: ಗುರು ಪೂರ್ಣಿಮೆ ಪ್ರಯುಕ್ತ ಮಠದ ಆವರಣದಲ್ಲಿ ಮೊಸರಿನ ಗಡಿಗೆಯನ್ನು ಗಣ್ಯರ ಸಮ್ಮುಖದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಧರಣೇಂದ್ರ ಜವಳಿ ಒಡೆದರು. ನೆರೆದಿದ್ದ ಸಹಸ್ರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು. ಗಡಿಗೆಯಲ್ಲಿದ್ದ ಮೊಸರು, ಅವಲಕ್ಕಿ, ಚುರುಮುರಿ ಪ್ರಸಾದವನ್ನು ಸವಿಯಲು ಭಕ್ತರು ಮುಂದಾದಾಗ ನೂಕುನುಗ್ಗಲು ಉಂಟಾಯಿತು. ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಾಡನಕೊಪ್ಪ ಪೂರ್ಣಾನಂದ ಆಶ್ರಮದ ವೇದಾಂತ ದಯಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕನಂದಿ ಸಿದ್ಧಾರೂಢ ದರ್ಶನ ಪೀಠದ ಸಹಜಾನಂದ ಸ್ವಾಮೀಜಿ, ಕೈವಲ್ಯಾರೂಢ ಸ್ವಾಮೀಜಿ, ಯೋಗಿರಾಜ ಸದಾಶಿವ ಗುರೂಜಿ ಇದ್ದರು.

‘ಸಾಯಿಮಂದಿರ ಸರ್ವಧರ್ಮ ಪೀಠ’
ಹುಬ್ಬಳ್ಳಿ:
  ‘ಎಲ್ಲ ಧರ್ಮೀಯರು ಸಾಯಿ ಬಾಬಾರಿಗೆ ನಡೆದುಕೊಳ್ಳುತ್ತಾರೆ. ಶಿರಡಿ ಸಾಯಿ ಮಂದಿರ ಸರ್ವಧರ್ಮಗಳ ಶಕ್ತಿಪೀಠವಾಗಿದೆ’ ಎಂದು ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕೋರ್ಟ್‌ ವೃತ್ತದಲ್ಲಿರುವ ಶಿರಡಿ ಸಾಯಿಮಂದಿರದಲ್ಲಿ ಭಾನುವಾರ ನಡೆದ ಗುರುಪೂರ್ಣಿಮೆಉತ್ಸವದ ಸಾನ್ನಿಧ್ಯ ವಹಿಸಿ  ಮಾತನಾಡಿದರು.

‘ಬ್ರಹ್ಮ, ವಿಷ್ಣು, ಮಹೇಶ್ವರರು ಭಕ್ತಾಧಿಗಳನ್ನು ಅನುಗ್ರಹಿಸಲು ಭೂಮಿಗೆ ಬಂದ ಈ ಸಂದರ್ಭವನ್ನು ಗುರುಪೂರ್ಣಿಮೆಎಂದು ಆಚರಿಸಲಾಗುತ್ತದೆ. ಗುರು ಯಾವುದಾದರು ರೂಪದಲ್ಲಿ ಅನುಗ್ರಹಿಸಲು ಬರುತ್ತಾನೆ ಎಂಬುದರ ಸಂಕೇತ ಇದು’ ಎಂದು ಹೇಳಿದರು.

‘ಭಕ್ತಾದಿಗಳು ಸ್ವತಃ ಬಂದು, ಜಾತ್ರೆ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ. ಎಂಥವರನ್ನೂ ಆಕರ್ಷಿಸುವ ಶಕ್ತಿ ಸಾಯಿಬಾಬಾರಲ್ಲಿದೆ’ ಎಂದು ಸ್ವಾಮೀಜಿ ಹೇಳಿದರು.
ಕೆ.ಎಂ.ಎಫ್. ಹುಬ್ಬಳ್ಳಿ ಧಾರವಾಡ ಅಧ್ಯಕ್ಷ ನೀಲಕಂಠ ಅಸೂಟಿ ಮಾತನಾಡಿ, ‘ನೆನೆದವರ ಮನದಲ್ಲಿ ಬರುವ ದೇವರು ಸಾಯಿಬಾಬಾ. ಎಲ್ಲರ ಇಷ್ಟಾರ್ಥಗಳನ್ನೂ ಬಾಬಾ ನೆರವೇರಿಸುತ್ತಾರೆ’ ಎಂದರು.

‘ಏಳು ದಿನಗಳವರೆಗೆ ಸಾಯಿ ನಾಮ ಪಾರಾಯಣ ಮಾಡಿ ತಮ್ಮ ಸಂಕಷ್ಟಗಳನ್ನು ಬಾಬಾನಿಗೆ ಅರ್ಪಿಸುವ ಮೂಲಕ ಸದ್ಗತಿ ಹೊಂದುತ್ತಾರೆ’ ಎಂದರು.
‘ನಾನು 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಸಾಯಿದೇವರ ಕೃಪೆಯಿಂದ ಹಲವು ಜಯ ಸಾಧಿಸಿದ್ದೇನೆ. ನಾನು ಶಿರಡಿ ಸಾಯಿಬಾಬಾರ ಪರಮ ಭಕ್ತ’ ಎಂದು ಅಸೂಟಿ ಹೇಳಿದರು.

ಗುರುಪೂರ್ಣಿಮೆಉತ್ಸವ ಸಮಿತಿ ಅಧ್ಯಕ್ಷ ಸುರೇಶ ಪಂಡಿತ್‌ ಮಾತನಾಡಿದರು. ಶಿರಡಿ ಸಾಯಿ ಸದ್ಭಕ್ತಮಂಡಳಿಯ ಅಧ್ಯಕ್ಷ ಅಶೋಕ ಕವಳೇಕರ ಅಧ್ಯಕ್ಷತೆ ವಹಿಸಿದ್ದರು.

ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಸಲಹಾ ಸಮಿತಿಯ ಸದಸ್ಯ ಆರ್.ಎಂ. ಹಿರೇಮಠ, ವೀರೇಶ ಸಂಗಳದ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸುಮಂಗಲಾ ಹಿರೇಮಠ, ಆರ್.ಎನ್. ಅಗರವಾಲ್‌, ಸತೀಶ ಪಾಟೀಲ, ಉಮೇಶ ಪಾಟೀಲ, ಸಿ.ಎಸ್. ನಾಡಗೌಡರ, ರಮೇಶ ಕಾಲಿರಾ, ಪಾರ್ವತಿ ವಾಳ್ವೇಕರ್‌ ಇದ್ದರು. ಕುಂಕುಮಾರ್ಚನೆ:
ಗುರುಪೂರ್ಣಿಮೆಅಂಗವಾಗಿ ಭಾನುವಾರ ಬೆಳಿಗ್ಗೆಯಿಂದಲೇ ಸಾಯಿ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಮಹಾಭಿಷೇಕ, ರುದ್ರಾಭಿಷೇಕ,  ಸಹಸ್ರಬಿಲ್ವಾರ್ಚನೆ ಮತ್ತು ಕುಂಕುಮಾರ್ಚನೆ ನಡೆಯಿತು. ಸಾವಿರಾರು ಭಕ್ತರು ಮಂದಿರಕ್ಕೆ ಬಂದು ಸಾಯಿಬಾಬಾರ ದರ್ಶನ ಪಡೆದರು. ಸುಮಾರು ಏಳು ಸಾವಿರಕ್ಕೂ ಹೆಚ್ಚು ಜನ ಅನ್ನಪ್ರಸಾದ ಸ್ವೀಕರಿಸಿದರು.

ರಥೋತ್ಸವ:  ಸಂಜೆ ಸಾಯಿ ರಥೋತ್ಸವ ಜರುಗಿತು. ಮಂದಿರದಿಂದ ಹೊರಟು, ದಾಜಿಬಾನಪೇಟೆ ಮಾರ್ಗವಾಗಿ ಮೂರುಸಾವಿರಮಠ ರಸ್ತೆಯಿಂದ ಅಂಚಟಗೇರಿ ಓಣಿ, ಚನ್ನಮ್ಮವೃತ್ತ ಮಾರ್ಗವಾಗಿ ಸಾಗಿ ಸಾಯಿಮಂದರದಲ್ಲಿ ರಥೋತ್ಸವ ಮುಕ್ತಾಯವಾಯಿತು.
***
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT