ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ವೈದ್ಯಕೀಯ ಸಾಹಿತ್ಯ ರಚನೆ ಕಷ್ಟ: ಕಣವಿ

ಆರ್.ಕೆ. ಪ್ರತಿಷ್ಠಾನ ಹಾಗೂ ಮಕ್ಕಳ ಅಕಾಡೆಮಿ ಕಾರ್ಯಕ್ರಮ; ಮೂರು ಮಕ್ಕಳ ಪುಸ್ತಕ ಬಿಡುಗಡೆ
Last Updated 10 ಜುಲೈ 2017, 10:49 IST
ಅಕ್ಷರ ಗಾತ್ರ

ಧಾರವಾಡ: ‘ಮಕ್ಕಳ ವೈದ್ಯಕೀಯ ಸಾಹಿತ್ಯ ರಚನೆ ತುಂಬಾ ಕಷ್ಟಕರ ಹಾಗೂ ಅತ್ಯಂತ ವಿರಳವಾಗಿದ್ದು, ಅಪಾರ ಅನುಭವದ ಮೂಲಕ ಇಂತಹ ಸಾಹಿತ್ಯ ರಚನೆ ಸಾಧ್ಯ’ ಎಂದು ನಾಡೋಜ ಡಾ. ಚೆನ್ನವೀರ ಕಣವಿ ಹೇಳಿದರು.

ಇಲ್ಲಿನ ವಿಠಲ ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಯ ತೇಜ ಸಭಾಭವನದಲ್ಲಿ  ಆರ್.ಕೆ. ಪ್ರತಿಷ್ಠಾನ ಹಾಗೂ ಮಕ್ಕಳ ಅಕಾಡೆಮಿ ಆಯೋಜಿಸಿದ್ದ ಡಾ. ರಾಜನ್‌ ದೇಶಪಾಂಡೆ, ಡಾ, ರಮಾ ನಾಯಕ, ಡಾ. ವೆಂಕಮ್ಮ ಗಾಂವಕರ, ಡಾ. ಎಂ.ವೈ.ಸಾವಂತ ಅವರ ‘ಮಗು ನೀ ನಗು’, ‘ಶಿಕ್ಷೆ’ ಮತ್ತು ‘ಯು ಆರ್‌ ಮೈ ಗ್ರೇಟ್‌ ಡ್ಯಾಡಿ’ ಮೂರು ಮಕ್ಕಳ ಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿ  ಮಾತನಾಡಿದರು.

‘ಉಳಿದ ಸಾಹಿತ್ಯ ರಚನೆಗಿಂತ ಮಕ್ಕಳ ವೈದ್ಯಕೀಯ ಸಾಹಿತ್ಯ ರಚನೆ ಕಷ್ಟ. ಆದರೂ ಅಪಾರ ಅನುಭವದ ಮೂಲಕ ಈ ಸಾಹಿತ್ಯ ರಚಿಸಬಹುದು. ನಾಲ್ಕು ದಶಕಗಳಿಂದ ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ. ರಾಜನ್ ದೇಶಪಾಂಡೆ ಇಂಥ ಕಾರ್ಯ ಮಾಡಿರುವುದು ಶ್ಲಾಘನೀಯ. ಡಾ. ರಾಜನ್ ದೇಶಪಾಂಡೆ  ಆರ್.ಕೆ. ಪ್ರತಿಷ್ಠಾನದ ಮೂಲಕ ಈಗಾಗಲೇ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಮಗು ಹುಟ್ಟಿನಿಂದ ಅದರ ಬೆಳವಣಿಗೆ, ವಿಕಾಸ, ವ್ಯಕ್ತಿತ್ವದ ಪರಿಕಲ್ಪನೆ ಇತ್ಯಾದಿಗಳನ್ನು ಪಠ್ಯದ ಮೂಲಕ ಕಟ್ಟಿಕೊಟ್ಟ ಕಾರ್ಯ ಅದ್ಭುತ. ಅಲ್ಲದೇ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಶ್ರೇಯೋಭಿವೃದ್ಧಿಗೆ ಅವರು ಶ್ರಮಿಸುತ್ತಿರುವುದು ಎಲ್ಲರಿಗೂ ಮಾದರಿ’ ಎಂದರು.

‘ಹಿಂದೆ ಮಗುವಿನ ತಿಳಿವಳಿಕೆ ಮಟ್ಟ ಹೆಚ್ಚಿಸಲು ದಂಡಿಸಿ  ಕಲಿಸುವ ಪರಿಪಾಠವಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳನ್ನು ದಂಡಿಸುವಂತಿಲ್ಲ. ಹಾಗೇ ದಂಡಿಸಿದರೆ ಅದು ಅಪರಾಧ. ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಅವರ ಅಭಿವೃದ್ಧಿಗೆ ಬೇಕಾದ ಪೂರಕ ವಾತಾವರಣವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ’ ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಡಾ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ವೈದ್ಯರ ಮತ್ತು ಪಾಲಕರ ಮಧ್ಯದ ಸಂವಾದವನ್ನು ಪ್ರಶ್ನೋತ್ತರಗಳ ಮಾದರಿಯ ಮೂಲಕ ಸಾಹಿತ್ಯ ರಚಿಸಬಹುದು ಎಂಬುದಕ್ಕೆ ಡಾ. ರಾಜನ್ ದೇಶಪಾಂಡೆ ಅವರು ಬರೆದ ‘ಮಗು ನೀ ನಗು’ ಕೃತಿ ಉತ್ತಮ ನಿದರ್ಶನ’ ಎಂದು ಹೇಳಿದರು.

ಸಾಹಿತಿ ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮಕ್ಕಳ ಕುರಿತ ‘ಯೂ ಆರ್ ಗ್ರೇಟ್ ಡ್ಯಾಡಿ’ ‘ಮಗು ನೀ ನಗು’ ಹಾಗೂ ‘ಶಿಕ್ಷೆ’ ಪುಸ್ತಕಗಳನ್ನು ಗೃಹಸ್ಥಾಶ್ರಮಕ್ಕೆ ಕಾಲಿಡಲಿರುವ ಯುವಕ ಹಾಗೂ ಯುವತಿಯರು ಓದುವುದು ಒಳಿತು. ಸಮಾಜದಲ್ಲಿ ಉತ್ತಮ ಪಾಲಕರೆನಿಸಿಕೊಳ್ಳಲು ಈ ಮೂರು ಪುಸ್ತಕಗಳು ತುಂಬಾ ಸಹಕಾರಿಯಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT