ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಾಗಿಲ್ಲ ಎಂದು ಮರಗಳನ್ನು ಸಾಕಿದೆ: ತಿಮ್ಮಕ್ಕ

ಅಕ್ಕಿಮಠದ ಪರಿಸರ ಜಾತ್ರೆ: 2 ನಿಮಿಷದಲ್ಲಿ 12 ಸಾವಿರ ಸಸಿ ನೆಡುವ ಕಾರ್ಯಕ್ರಮ
Last Updated 10 ಜುಲೈ 2017, 11:10 IST
ಅಕ್ಷರ ಗಾತ್ರ

ಹಾವೇರಿ: ‘ಮದುವೆಯಾಗಿ 25 ವರ್ಷ ಕಳೆದರೂ, ನಮಗೆ ಮಕ್ಕಳಾಗಲಿಲ್ಲ. ಅಂದಿನಿಂದಲೇ ಸಸಿಗಳನ್ನು ನೆಟ್ಟು,   ಮರಗಳನ್ನು ಮಕ್ಕಳಂತೆ ಬೆಳೆಸಲು ಆರಂಭಿಸಿದೆವು’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

ಅಗಡಿಯ ಅಕ್ಕಿಮಠದ ‘ಪರಿಸರ ಜಾತ್ರೆ–2017’ಯ ಅಂಗವಾಗಿ ಇಲ್ಲಿ ಭಾನುವಾರ ಹಮ್ಮಿಕೊಂಡ ‘ತಾಲ್ಲೂಕಿನ 40 ಗ್ರಾಮಗಳಲ್ಲಿ 2 ನಿಮಿಷದಲ್ಲಿ 12 ಸಾವಿರ ಸಸಿ ನೆಡುವ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಪತಿ ರಸ್ತೆ ಬದಿಯಲ್ಲಿ ದಿನಕ್ಕೆ ಹತ್ತು ಗುಂಡಿಗಳನ್ನು ತೋಡುತ್ತಿದ್ದರು. ಅದರಲ್ಲಿ ಸಸಿಗಳನ್ನು ನೆಟ್ಟು, ಸುಮಾರು ಒಂದು ವರ್ಷ ಕಾಲ ಪ್ರತಿನಿತ್ಯ ನೀರು ಹೊತ್ತು  ಹಾಕಿ ಬೆಳೆಸಿದ್ದೇವೆ. ಅನಂತರ  ಐದಾರು ವರ್ಷಗಳವರೆಗೆ ಅವುಗಳನ್ನು ರಕ್ಷಣೆ ಮಾಡಿದ್ದೇವು. ಅವುಗಳು ಈಗ ದಟ್ಟವಾಗಿ ಬೆಳೆದಿವೆ’ ಎಂದರು.

‘ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಬೆಳೆಸಬೇಕು. ಆಗ ಮಾತ್ರ ನಾಡಿನಲ್ಲಿ ಉತ್ತಮ ಮಳೆಯಾಗಲು ಸಾಧ್ಯ. ಮರವಿಲ್ಲದಿದ್ದರೆ ಮಳೆ ಇಲ್ಲ. ಮಳೆ ಇಲ್ಲದಿದ್ದರೆ ಬೆಳೆ ಇಲ್ಲ’ ಎಂದರು.

‘ಹಾವೇರಿ ಜಿಲ್ಲೆಯ ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಬೆಳೆಸಬೇಕು. ಆಗ ಮಾತ್ರ ಕಾಲಕಾಲಕ್ಕೆ ಉತ್ತಮ ಮಳೆಯಾಗಲು ಸಾಧ್ಯ. ಎಲ್ಲರೂ ಸಮೃದ್ಧಿಯ ಜೀವನ ನಡೆಸಬಹುದು. ‘ಸರ್ಕಾರ ತಿಂಗಳಿಗೆ ₹ 500 ವೃದ್ಧಾಪ್ಯ ವೇತನ ನೀಡುತ್ತಿದೆ. ಬೇರೆ ಸೌಲಭ್ಯಗಳು ಇಲ್ಲ’ ಎಂದರು.

ಚಿತ್ರನಟ ಚೇತನ್‌ ಮಾತನಾಡಿ, ‘ಇಂಗಾಲದ ಡೈ ಆಕ್ಸೈಡ್‌ ಹೆಚ್ಚಳದಿಂದ ಪರಿಸರ ನಾಶದ ಕುರಿತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಾವು ಚಿಂತನೆ ನಡೆಸಬೇಕು. ಅಂತರ್ಜಲ  ಉಳಿಸಿಕೊಳ್ಳಲು ಜಲಾನಯನ ವ್ಯವಸ್ಥೆ, ಚೆಕ್ ಡ್ಯಾಂ ನಿರ್ಮಾಣ ಹಾಗೂ ಸಸಿ ನೆಡಬೇಕು’ ಎಂದರು.

‘ಮನೆ ಸುತ್ತಮುತ್ತ ಮರಗಳಿದ್ದರೆ ಎಷ್ಟೋ ಕಾಯಿಲೆಗಳು ವಾಸಿ ಆಗುತ್ತವೆ. ಮಾನಸಿಕ ನೆಮ್ಮದಿ ಸಿಗುತ್ತದೆ.  ಸಮಾಜದಲ್ಲಿ ಹಿಂಸೆ ಕಡಿಮೆಯಾಗುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ’ ಎಂದರು.

‘ಆದರೆ, ಪರಿಸರ ನಾಶದ ಮೂಲಕ ಅಭಿವೃದ್ಧಿ ಮಾಡಿದರೆ, ಅದು ಮನು­ಕುಲದ ವಿನಾಶಕ್ಕೆ ದಾರಿ ಆಗುತ್ತದೆ. ಸಾವಿರಾರು ಮರಗಳ ಮಾರಣ­ಹೋಮಕ್ಕೆ ಕಾರಣವಾಗುವ ‘ಉಕ್ಕಿನ ಸೇತುವೆ ಯೋಜನೆ’ಯನ್ನು ರಾಜ್ಯ ಸರ್ಕಾರವು ಹೋರಾಟದ ಬಳಿಕ ಕೈಬಿಟ್ಟಿತು. ಕೇಂದ್ರ ಸರ್ಕಾರವು ಹಸಿರು ನ್ಯಾಯಾಧಿಕರಣವನ್ನು (ಎನ್‌.ಜಿ.ಟಿ) ಆಡಳಿತದ ಭಾಗ ಮಾಡಲು ಯತ್ನಿಸುತ್ತಿದೆ. ಆ ಮೂಲಕ ಪರಿಸರ ಬಿಕರಿ ಮಾಡುವ ಹುನ್ನಾರ ನಡೆಸಿದೆ. ಗ್ರಾಮ ಸಭೆಯ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದೆ’ ಎಂದರು.

‘ದೇಶದಲ್ಲಿ ಶೇ 63ರಷ್ಟು ಯುವಜನತೆ ಇದ್ದಾರೆ. ನೀವೆಲ್ಲ ಹೋರಾಟದಲ್ಲಿ ಪಾಲ್ಗೊಳ್ಳಿ. ಅದಕ್ಕೆ ಸೈದ್ಧಾಂತಿಕ ನಿಲುವು ಹಾಗೂ ಸ್ಪಷ್ಟತೆ ಬೇಕು. ತಿಳಿವಳಿಕೆಗೆ ಬೆಲೆ ಕೊಡಬೇಕು. ಸೈದ್ಧಾಂತಿಕ ಸ್ಪಷ್ಟತೆ, ಸೂಕ್ತ ನಾಯಕತ್ವ, ಆದರ್ಶಗಳ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ತೋರಿಸಿದ ‘ಸಮಾನತೆ’ಯ ಮಾರ್ಗದಲ್ಲಿ ಸಾಗಬೇಕು’ ಎಂದರು.

ಅಲ್ಲದೇ, ಬಸವಣ್ಣನವರ ವಚನವನ್ನು ಉಲ್ಲೇಖಿಸಿದರು.  ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಹಾವೇರಿಯಲ್ಲಿ ಒಂದು ಲಕ್ಷ ಸಸಿ ನೆಟ್ಟು ಬೆಳೆಸುವ ಗುರಿ ಇದೆ. ಪರಿಸರ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ’ ಎಂದರು.

ಸವಣೂರ ದೊಡ್ಡಹುಣಸೆ ಮಠದ ಚನ್ನಬಸವ ಸ್ವಾಮೀಜಿ, ಅಕ್ಕಿಆಲೂರ ಮುತ್ತಿನ ಕಂತಿಮಠದ ಚಂದ್ರಶೇಖರ ಶಿವಾಚಾರ್ಯ, ನವದೆಹಲಿಯ ಮಹಾಂತ ದೇವರು, ಧಾರವಾಹಿ ನಟಿ ಸನ್ನಿಧಿ, ರೈತ ಮುಖಂಡ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಂಜುಳಾ ಅಕ್ಕಿ, ಉಮೇಶ್‌, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಎ.ಪಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಸಿ. ಹಾವೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

***

ಸಾರೋಟಿನಲ್ಲಿ ತಿಮ್ಮಕ್ಕನ ಮೆರವಣಿಗೆ

ಹಾವೇರಿ: ಪರಿಸರ ಜಾಗೃತಿ  ಹಾಗೂ 12 ಧಾರ್ಮಿಕ ವಿಶೇಷತೆಗಳ ಹಿನ್ನೆಲೆಯಲ್ಲಿ ಅಗಡಿ ಅಕ್ಕಿಮಠದಿಂದ ಹಮ್ಮಿಕೊಂಡ ‘ಪರಿಸರ ಜಾತ್ರೆ–2017’ಯ ನಿಮಿತ್ತ ಭಾನುವಾರ ಸಂಜೆ ನಗರದಲ್ಲಿ ಸಾಲುಮರದ ತಿಮ್ಮಕ್ಕನವರನ್ನು ಸಾರೋಟಿನಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಮಾಡಲಾಗಿತು.

ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದ ಮಾರ್ಗವಾಗಿ ನಗರದ ಮುನ್ಸಿಫಲ್‌ ಹೈಸ್ಕೂಲ್‌ ಮೈದಾನದವರೆಗೆ ಬಸವಣ್ಣನವರ ಭಾವಚಿತ್ರ ಹೊಂದಿದ ಸಾರೋಟಿನಲ್ಲಿ ಸಾಲುಮರದ ತಿಮ್ಮಕ್ಕನವರನ್ನು  ಕುಳ್ಳಿರಿಸಿಕೊಂಡು ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಡೊಳ್ಳು ಕುಣಿತ, ಝಾಂಜ್‌ ಮೇಳ, ವೀರಗಾಸೆ, ಪುರವಂತಿಕೆಯ ಸಮಾಳ ಮೆರುಗು ನೀಡಿತು.

ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಗಾಯಕ ರಾಜೇಶ್‌ ಕೃಷ್ಣನ್‌ ಹಾಗೂ ಸಾಲುಮರದ ತಿಮ್ಮಕ್ಕ, ಉಮೇಶ್,  ಮಹೇಶ ಚಿನ್ನಿಕಟ್ಟಿ, ಶಿವರಾಜ ಅಂಗಡಿ ಹಾಗೂ ಶಿವರಾಜ ಒಳಸಂಗದ ಮತ್ತಿತರರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT