ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಮಾಟಗಾತಿಯರು!

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಇವತ್ತು ಎಂಥ ಸಾಂಬಾರು?’
‘ಹುತ್ತದ ಅಣಬೆಯದು’
‘ಹೌದಾ, ನಮ್ಮನೆಯಲ್ಲಿ ಕಲ್ಲಣಬೆ ಪಲ್ಯ’
ಮುಂಗಾರಿನ ಆಗಮನದೊಂದಿಗೆ ಬಂಟ್ವಾಳ ತಾಲ್ಲೂಕಿನ ಕಾಡಂಚಿನ ಹಳ್ಳಿಗಳ ಸಂಭಾಷಣೆ ಸ್ವರೂಪದಲ್ಲಿ ಬದಲಾಗುವ ಪರಿಯಿದು. ಹೌದು, ಅಡುಗೆ ಏನೆಂಬ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ‘ಅಣಬೆ’ ಪ್ರಸ್ತಾಪ ಇದ್ದೇ ಇರುತ್ತದೆ. ಎಲ್ಲರ ಮನೆಯ ಮೆನುವಿನಲ್ಲೂ ಮಳೆಗಾಲದ ಈ ವಿಶೇಷ ಅತಿಥಿ ಇರುವ ಕುರಿತು ಯಾರಿಗೂ ಸಂಶಯವಿಲ್ಲ. ‘ಪಕ್ಕದ ಮನೆಯವರಿಗೆ ನಿನ್ನೆ ಸಿಕ್ಕಿರುವುದು ಯಾವ ವಿಧದ ಅಣಬೆ’ ಎನ್ನುವುದಷ್ಟೇ ಅವರನ್ನು ಕಾಡುವ ಪ್ರಶ್ನೆ.

ಈ ಅಣಬೆಗಳ ಲೋಕವಾದರೂ ಎಂಥದು ಅಂತೀರಿ? ಕವಿ ಬೇಂದ್ರೆಯವರು ‘ಹಸಿರು ಹಚ್ಚಿ ಚುಚ್ಚಿ, ಮೇಲಕರಿಸಿಣ ಹಚ್ಚಿ, ಹೊನ್ನ ಚಿಕ್ಕಿ ಚಿಕ್ಕಿ, ಇಟ್ಟು ಬೆಳ್ಳಿ ಅಕ್ಕಿ...’ ಎಂದು ಪಾತರಗಿತ್ತಿಯನ್ನು ವರ್ಣಿಸುತ್ತಾರಲ್ಲ, ನಾವೂ ಭಾವಲೋಕಕ್ಕೆ ಜಾರಿ ಅಣಬೆಗಳ ಮೇಲೆ ಇಂತಹದ್ದೇ ಪದ ಕಟ್ಟಬೇಕು ಎನಿಸುತ್ತದೆ!

ವೃತ್ತಾಕಾರದ ಸೊಳ್ಳೆ ಪರದೆಯನ್ನು ತೂರಿಬಿಟ್ಟಂತೆ ಒಂದು ಪೋಸು ನೀಡಿದರೆ, ಬಿಚ್ಚಿದ ಕೊಡೆಯಂತೆ ಮತ್ತೊಂದು. ಹೂವಿನಂತೆ ಒಂದು ಅರಳಿ ನಿಂತರೆ, ಬೀಸಣಿಕೆ ಸೋಗಿನಲ್ಲಿ ಮತ್ತೊಂದು. ಅಯ್ಯೋ ಮರೆತೇಬಿಟ್ಟಿದ್ದೆ; ಗಂಟೆ ಯಾಕಾರದ ಅಣಬೆ ಕೂಡ ಇದೆ ಕಣ್ರಿ. ಈ ಮಾಟಗಾತಿಯರ ರೂಪ–ಲಾವಣ್ಯ ವರ್ಣಿಸಲು ನಮ್ಮಿಂದ ಸಾಧ್ಯವಿಲ್ಲ ಬಿಡಿ. ಅದಕ್ಕೆ ಬೇಂದ್ರೆ ಅವರಂತಹ ಶಬ್ದ ಗಾರುಡಿಗರೇ ಬೇಕು.

ತಂಪಾದ ವಾತಾವರಣದಲ್ಲಿ ತಣ್ಣಗೆ ತಲೆ ಎತ್ತಿ ನಿಲ್ಲುವ ಅಣಬೆಗಳು ಮನುಷ್ಯನ ಆರೋಗ್ಯಕ್ಕೆ ಪ್ರಕೃತಿಮಾತೆ ನೀಡಿದ ಬಹುದೊಡ್ಡ ಕೊಡುಗೆಯೇ ಸರಿ. ಮಳೆಗಾಲ ಶುರುವಾಯಿತೆಂದರೆ ಹಳ್ಳಿಗಳಲ್ಲಿ ಯಾರ ಮನೆಯಲ್ಲಿ ಕೇಳಿದರೂ ಅಣಬೆ ಸಾಂಬಾರು, ಅಣಬೆ ಪಲ್ಯ ಎಂಬಿತ್ಯಾದಿ ಖಾದ್ಯಗಳದ್ದೇ ಹೆಸರು. ತರಕಾರಿಯಂತೆ ಬಳಕೆಯಲ್ಲಿರುವ ಇವುಗಳು ಮರದ ಪೊಟರೆಗಳಲ್ಲಿ, ತಂಪಾದ ಜಾಗಗಳಲ್ಲಿ ಹುಟ್ಟಿಕೊಳ್ಳುತ್ತವೆ.

ನಿನ್ನೆ ಹೋದ ಜಾಗದಲ್ಲೇ ಇವತ್ತು ಹೋಗಿ ನೋಡುವಾಗ ಮುದ್ದಾದ ಅಣಬೆಗಳು ದಿಢೀರನೆ ತಲೆ ಎತ್ತಿ ನಿಂತಿರುತ್ತವೆ. ಯಾರ ಅನುಮತಿಯನ್ನು ಕೇಳದೇ ಹುಟ್ಟಿಕೊಳ್ಳುತ್ತವೆ. ಯಾರ ಅನುಮೋದನೆಗೂ ಕಾಯದೆ ಮತ್ತೆ ಮಣ್ಣಲ್ಲಿ ಮಣ್ಣಾಗುತ್ತವೆ.ಕೊಳೆಯುತ್ತಿರುವ ಸಾವಯುವ ವಸ್ತುಗಳ ಮೇಲೆ ಬೆಳೆಯುವ, ಸ್ವತಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯಗಳ ವರ್ಗಗಳಲ್ಲಿ ಅಣಬೆಯೂ ಒಂದು. ಮೈಕೋಟ ಸಾಮ್ರಾಜ್ಯದ ಯೂಕಾರ್ಯೋಟ (eukaryota) ಕುಟುಂಬಕ್ಕೆ ಸೇರಿದ ಫಂಗೈನ ಒಂದು ವಿಧವಿದು. ಮುಂಗಾರು ಮಳೆಗಾಗಿ ರೈತ ಕಾದಂತೆಯೇ ಈ ಅಣಬೆಗಳು ಮಳೆ ಸಿಡಿಲನ್ನೇ ಕಾಯುತ್ತಿರುತ್ತವೆ.

ಮಳೆ ಬಂದು ನೆಲ ಇನ್ನೇನು ತೇವಭರಿತವಾಗುತ್ತಿದ್ದಂತೆ, ಅಲ್ಲಲ್ಲಿ, ಕಾಡುಗಳಲ್ಲಿ, ತುಂಡಾದ ಮರದ ದಿಮ್ಮಿಗಳ ಮೇಲೆ, ವರ್ಣಿಸಲಾಗದ ಆಕಾರಗಳಲ್ಲಿ, ಹೆಸರಿಡದ ಬಣ್ಣಗಳಲ್ಲಿ ವೈಶಿಷ್ಟ್ಯಪೂರ್ಣವಾಗಿ ಗೋಚರಿಸತೊಡಗುತ್ತವೆ. ಕ್ಷಣಮಾತ್ರದಲ್ಲಿ ನಮ್ಮ ಕಣ್ಣುಗಳನ್ನು ಆಕರ್ಷಿಸಬಲ್ಲ ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಿಂದ ಕೂಡಿದ ಅಣಬೆಗಳಲ್ಲಿ ಎಲ್ಲವೂ ಆಹಾರವಾಗಿ ನಮ್ಮ ಹೊಟ್ಟೆಯನ್ನು ಸೇರಲು ಸಾಧ್ಯವಿಲ್ಲ. ಆಹಾರವಾಗಿ ಬಳಸಬಲ್ಲವುಗಳ ಜೊತೆಗೆ ತಿನ್ನಲು ಸಾಧ್ಯವಾಗದ ವಿಷಕಾರಿ ಅಣಬೆಗಳೂ ಸಿಗುತ್ತವೆ.

ಹಳ್ಳಿಯ ಜನರಿಗೆ ಎಷ್ಟು ಮಳೆ ಬಿದ್ದಾಗ ಯಾವ ರೀತಿ ಅಣಬೆಗಳು ಹುಟ್ಟಿಕೊಳ್ಳುತ್ತವೆ ಎಂಬ ಮಾಹಿತಿ ಇರುತ್ತದೆ. ಹಾಗಾಗಿ ಮಳೆ ಶುರುವಾದ ದಿನದಿಂದ ಲೆಕ್ಕಮಾಡಿ ಅಣಬೆ ಗಳನ್ನು ಅರಸಿ ಕಾಡಿನಲ್ಲಿ, ಬೆಟ್ಟಗಳಲ್ಲಿ, ಬಯಲಿನಲ್ಲಿ ಅಲೆಯುವವರು ಇದ್ದಾರೆ. ಪೂರ್ಣ ಮಾಹಿತಿ ಇದ್ದವರು ಅವುಗಳನ್ನು ತರಲು ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಗುಡ್ಡ–ಕಾಡುಗಳಿಗೆ ತೆರಳುವುದು ಅಪಾಯವೂ ಹೌದು.

ಮರದಡಿಯ ತರಗೆಲೆಗಳೆಲ್ಲ ಕೊಳೆತು ಹೋಗಿರುತ್ತವೆ. ಸೊಳ್ಳೆಗಳು, ಹುಳುಗಳು ಮತ್ತು ಕೀಟಗಳು ಹುಟ್ಟಿಕೊಂಡಿರುತ್ತವೆ. ಆ ಸೊಳ್ಳೆಗಳ ನಡುವೆ ಅಣಬೆಗಳನ್ನು ಹುಡುಕಿ ತರುವುದು ಒಂದು ರೀತಿಯ ಸಾಹಸವೇ ಸರಿ. ಅವುಗಳು ಹುಟ್ಟಲು ಬೇಕಾಗಿರುವುದು ತೇವಾಂಶಭರಿತ ಜಾಗ, ಕೊಳೆತ ಪ್ರದೇಶ ಹಾಗೂ ಗೊಬ್ಬರದಂತಹ ವಸ್ತುಗಳು. ವಾತಾವರಣದಲ್ಲಿ ದೊರೆಯುವ ಉಷ್ಣಾಂಶ, ಮಣ್ಣಿನಲ್ಲಿರುವ ತೇವಾಂಶ ಮತ್ತು ಕೊಳೆತ ರಾಸಾಯನಿಕ ಅಂಶಗಳು ಅಣಬೆಗಳ ಬೆಳವಣಿಗೆಗೆ ಬಹುಮುಖ್ಯ.

ಈ ಅಣಬೆಗಳಲ್ಲಿ ತಾಜಾ ತರಕಾರಿಯಲ್ಲಿರುವ ಎಲ್ಲ ಪೌಷ್ಟಿಕಾಂಶ ತುಂಬಿರುತ್ತದೆ. ಆದರೆ ಇತ್ತೀಚಿನ ದಿನ ಗಳಲ್ಲಿ ಕೃತಕವಾಗಿ ಬೆಳೆಯುವ ಪದ್ಧತಿಯೂ ಚಾಲ್ತಿಯಲ್ಲಿದೆ. ತನಗೆ ಬೇಕಾದ ಮಾರುಕಟ್ಟೆಯನ್ನು ಇದು ಸೃಷ್ಟಿಸಿಕೊಂಡಿದೆ. ಪ್ರತಿ ದಿನ ದೊರೆಯುವ ಅಣಬೆಗಳಿಗಿಂತ ವರ್ಷಪೂರ್ತಿ ಕಾದು ಕುಳಿತು ಮಳೆಗಾಲ ದಲ್ಲಿ ಸಿಗುವ ಅಣಬೆಗಳನ್ನು ತಿಂದಾಗಲೇ ಅದರ ರುಚಿ ನಾಲಗೆಗೆ ಸಿಗುವುದು.

ಬಾಲ್ಯದಿಂದಲೂ ಅಣಬೆ ಎಂದರೆ ನಾಯಿ ಕೊಡೆ ಎಂದೇ ನಮ್ಮಂಥವರಿಗೆ ಪರಿಚಿತ. ಅದೇ ಕಣ್ಣಿಗೆ ಕಾಣುವ ಭಾಗದಲ್ಲಿ ಮೇಲುಗಡೆ ಛತ್ರಿಯಾಕಾರ, ಕೆಳಭಾಗದಲ್ಲಿ ಒಂದು ತೊಟ್ಟು, ಟೋಪಿಯಾಕಾರ. ಅದರೊಳಗೆ ಹಲವು ಪದರಗಳು. ನೋಡಲು ಶಾಲೆಗೆ ಹೋಗುವಾಗ ಕೊಂಡೊಯ್ಯುತ್ತಿದ್ದಂತಹ ಕೊಡೆಯಂತೆಯೇ ಕಾಣುತ್ತಿದ್ದವು. ಆಗ ಈ ಮಾಟಗಾತಿಯರಲ್ಲಿ ಅಷ್ಟೊಂದು ವೈವಿಧ್ಯವಿದೆ ಎಂದು ಗೊತ್ತೇ ಇರಲಿಲ್ಲ.

ಕಾಡಂಚಿನ ಹಳ್ಳಿಗಳಲ್ಲಿ ಸುಮಾರು 16 ಜಾತಿಯ ಅಣಬೆಗಳನ್ನು ತಿನ್ನಲು ಬಳಸುತ್ತಾರೆ. ಹುತ್ತದ ಅಣಬೆ, ಮೊದಲ ಮಳೆ ಬಿದ್ದಾಗ ಹುಟ್ಟುವ ಪಟ್ಟ ಅಣಬೆ, ಮರದಡಿ ಬೆಳೆಯುವ ಅಣಬೆ, ಮರದ ದಿಮ್ಮಿಗಳಲ್ಲಿ ಬೆಳೆಯುವ ಅಣಬೆ, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವಂತೆ ಬೋಗಿ ಅಣಬೆ, ಮರದ ಅಣಬೆ, ಮರಳು ಅಣಬೆ, ಕಲ್ಲಣಬೆ... ಅವುಗಳನ್ನು ಹುಡುಕುವ ಸೊಗಸೇ ಬೇರೆ.

ಮಳೆ ಬಿದ್ದ ಕೂಡಲೇ ಅಣಬೆಗಳನ್ನು ಹುಡುಕಲು ಗೆಳೆಯರ ಬಳಗದೊಂದಿಗೆ ಹೋಗುವ ಖುಷಿಯೇ ಖುಷಿ. ಹುತ್ತದ ಅಣಬೆಯ ವಿಶೇಷವೇ ಬೇರೆ. ಎಲ್ಲೆಂದರಲ್ಲಿ ಅದು ಬೆಳೆಯುವುದಿಲ್ಲ. ಹುತ್ತದ ಅಣಬೆ ಬೆಳೆದಿದೆ ಎಂದರೆ ಅದರ ಕೆಳಗಡೆ ಹಾವು ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ‘ಈ ಅಣಬೆ ಹುಟ್ಟುವ ಜಾಗದಲ್ಲಿ ವಿಷಜಂತುಗಳ ಓಡಾಟ ಜಾಸ್ತಿ. ಹೀಗಾಗಿ ಅದನ್ನು ಕೀಳುವ ಮುಂಚೆ ಅಣಬೆ ಎದ್ದಿದೆ ಎಂಬ ಕೂಗನ್ನು ಹಾಕುವ ಸಂಪ್ರದಾಯವಿದೆ’ ಎನ್ನುತ್ತಾರೆ ಹೊಸಮೊಗ್ರುವಿನ ಸುಮತಿ.

ಹುತ್ತದ ಅಣಬೆಯನ್ನು ಇವತ್ತು ಹೋಗಿ ಕೊಯ್ದು ಬಂದರೆ ಮತ್ತೆ ಅದೇ ಜಾಗದಲ್ಲಿ ನಾಳೆಯೂ ಹುಟ್ಟಿರುತ್ತದೆ. ಹೀಗೆ ಮೂರು ದಿನಗಳವರೆಗೆ ಮಾತ್ರ ಅದು ಹುಟ್ಟುತ್ತದೆ. ಅದರ ಸಾಂಬಾರು ತುಂಬಾ ರುಚಿ. ಉಳಿದ ತಿನ್ನುವ ಅಣಬೆಗಳಿಗಿಂತ ಆಕಾರ, ರುಚಿ ಎಲ್ಲದರಲ್ಲೂ ಅದು ವಿಭಿನ್ನ. ನಂತರದ ಸ್ಥಾನ ಕಲ್ಲಣಬೆಗೆ. ಅದು ಕಲ್ಲುಗಳ ಆಕಾರದಲ್ಲಿಯೇ ಇರುತ್ತದೆ. ಮಣ್ಣಿನ ಜೊತೆ ಕಲ್ಲುಗಳು ಬೆರೆತಿರುವಂತೆಯೇ ಈ ಅಣಬೆ ಕೂಡ ಮಣ್ಣಿನ ಜೊತೆ ಮಿಶ್ರಣಗೊಂಡಂತೆ ಕಾಣುತ್ತದೆ. ಹೊರಗಡೆಯಿಂದ ಕವಚವಿದ್ದು ಒಳಗಿನ ಭಾಗ ಮೃದುವಾಗಿರುತ್ತದೆ. ಗುಡುಗು, ಮಿಂಚು ಜೋರಾದರೆ ಮರುದಿನವೇ ಹಳ್ಳಿಗರು ಕಲ್ಲಣಬೆ ಬೇಟೆಗೆ ಹೊರಟುಬಿಡುತ್ತಾರೆ.

ಬೋಧಿವೃಕ್ಷಗಳಿರುವ ಕಾಡಿನಲ್ಲಿ ಈ ಅಣಬೆ ಹೆಚ್ಚಾಗಿ ಸಿಗುತ್ತದೆ. ವಿಶೇಷ ಅಡುಗೆಗಳಲ್ಲಿ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಈಗೀಗ ಅದು ಸಿಗುವ ಪ್ರಮಾಣವೂ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಬಜಕ್ಕಳದ ತೇಜಾಕ್ಷಿ ಕುಶಲ್‌.

ಮರಳುಮಿಶ್ರಿತ ಗುಡ್ಡದ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುವ ಈ ಕಲ್ಲಣಬೆಗಳು ಮಳೆ ಬಂದ ಕೆಲ ದಿನಗಳಲ್ಲಿ ಕಾಣಿಸುತ್ತವೆ. ಅವುಗಳು ಸಿಡಿಲಿನ ಹಿಂದೆಯೇ ಭೂಮಿಗಿಳಿಯುತ್ತವೆ. ಭೂಮಿಯು ಬಾಯಿ ತೆರೆದುಕೊಂಡು ಆಕಾಶ ನೋಡ ಹೊರಟಾಗಲೇ ಆ ಅಣಬೆಗಳನ್ನು ಆಯ್ದು ತರಬೇಕು. ಬದಲಾಗಿ ಎರಡು ದಿನಗಳು ಕಳೆದು ತರುತ್ತೇನೆಂದರೆ, ಒಳಗಿನ ಮೃದುಭಾಗ ಕಪ್ಪಾಗಲು ಶುರುವಾಗಿರುತ್ತದೆ.

ಒಳಗಿನ ಭಾಗ ಕಪ್ಪಾಯಿತೆಂದರೆ ನಂತರ ಅವುಗಳು ಆಹಾರವಾಗಿ ಬಳಸಲು ಅಸಾಧ್ಯ. ಮಾರಾಟ ಮಾಡುವ ಉದ್ದೇಶದಿಂದಲೇ ಕಲ್ಲಣಬೆಯನ್ನು ಹುಡುಕಿ ತರುವವರಿದ್ದಾರೆ. ಪಟ್ಟಣಿಗರಿಗೆ ಇದು ವಿಶೇಷ ತರಕಾರಿ. ಮಾಂಸಾಹಾರದಷ್ಟೇ ವಿಶೇಷ ಇದು. ಕೆ.ಜಿಗೆ ₹200 ರಿಂದ ₹300 ರವರೆಗೆ ಕೊಟ್ಟು ಖರೀದಿಸುವ ಜನ ಇದ್ದಾರೆ.

ಬೇರೆ ಬೇರೆ ಅಣಬೆಗಳು ಅದರದ್ದೇ ಆದ ರುಚಿಯನ್ನು ಹೊಂದಿವೆ. ಒಂದಕ್ಕಿಂತ ಒಂದು ಮಿಗಿಲು. ಲಿಲ್ಲಿಪುಟ್ ಲಲನೆಯನ್ನು ಆಹಾರವಾಗಿ ಯಾವ ಮಾದರಿಯಲ್ಲಿ ಜನರು ಇಷ್ಟ ಪಡುತ್ತಾರೋ ಅದೇ ರೀತಿ ಇದು ತನ್ನ ಔಷಧೀಯ ಗುಣಗಳಿಂದಲೂ ಜನರ ಗಮನ ಸೆಳೆದಿದೆ. ತನ್ನೊಳಗೆ ಹೇರಳವಾದ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿರುವ ಅಣಬೆಯು ಮಧುಮೇಹಿಗಳಿಗೆ, ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಮತ್ತು ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಹೊಂದಿರುವುದರಿಂದ ಹೃದ್ರೋಗಿಗಳಿಗೆ ಉತ್ತಮ ಆಹಾರ. ಇದರಿಂದ ಶುಗರ್, ಕೊಲೆಸ್ಟೆರಾಲ್‌ನ ಭಯವಿಲ್ಲ. ಅಣಬೆಯಲ್ಲಿ ಕಬ್ಬಿಣಾಂಶ, ತರಕಾರಿ ಮಾಂಸಕ್ಕಿಂತ ಹೆಚ್ಚಾಗಿದೆ. ಕೊಬ್ಬು, ಸಕ್ಕರೆ ಮತ್ತು ಕ್ಯಾಲೊರಿ ಅಂಶ ಕಡಿಮೆ ಇದೆ.

ಅಣಬೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಟಿ2 ಹಾಗೂ ಡಿ ಜೀವಸತ್ವ ಹೇರಳವಾಗಿದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಶುದ್ಧ ಸಸ್ಯಾಹಾರಿ ಆಗಿರುವ ಅಣಬೆಯನ್ನು ಮಾಂಸಾಹಾರಿಗಳೇ ಹೆಚ್ಚು ಇಷ್ಟ ಪಡುತ್ತಾರೆ. ವಿಶೇಷ ಪರಿಮಳ ಹೊಂದಿರುವ ಅಣಬೆ ಖಾದ್ಯ ಸ್ವಾದಿಷ್ಟ ರುಚಿಯೊಂದಿಗೆ ದೇಹಕ್ಕೆ ಬೇಕಾಗಿರುವ ನಾರಿನಂಶವನ್ನೂ ಒದಗಿಸುತ್ತದೆ. ಜೀರ್ಣಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಪ್ರೊಟೀನ್ ಖಜಾನೆ ಎನ್ನಲಾಗುವ ಅಣಬೆಯನ್ನು ವಾರಕ್ಕೆರಡು ಸಲ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮಾಂಸಾಹಾರಿ ಸ್ವರೂಪದಲ್ಲಿ ಸಿದ್ಧಪಡಿಸಿದ ಇದರ ಖಾದ್ಯಗಳು ಮಾಂಸದ ಅಡುಗೆಗಿಂತ ರುಚಿ. ಉಪ್ಪಿನಕಾಯಿ, ಸೂಪ್‌, ಚಟ್ನಿಪುಡಿ, ಪಾನೀಯ, ಔಷಧ ಹೀಗೆ ಎಲ್ಲದಕ್ಕೂ ಸೈ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆಗಳನ್ನು ಹುಡುಕಲು ಚಾರಣ ನಡೆಸುತ್ತಾ, ಹುಡುಕಿ ತಂದು ಬಗೆ–ಬಗೆಯ ಭಕ್ಷ್ಯ ಮಾಡುತ್ತಾ ತಿನ್ನುವ ಜನ ಆರೋಗ್ಯವಂತ ಜೀವನ ನಡೆಸುವುದರಲ್ಲಿ ಎರಡು ಮಾತಿಲ್ಲ, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT