ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞವೈದ್ಯರ ಕೊರತೆಗೆ ಕಾರಣಗಳೇನು?

ಸಂಗತ
ಅಕ್ಷರ ಗಾತ್ರ

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ತಜ್ಞವೈದ್ಯರು ದೊರೆಯುತ್ತಿಲ್ಲವಾದ ಕಾರಣ, ಖಾಲಿ ಇರುವ 1,200 ಹುದ್ದೆಗಳಿಗೆ ಆಸಕ್ತ ತಜ್ಞವೈದ್ಯರನ್ನು ಆನ್‌ಲೈನ್ ಬಿಡ್ಡಿಂಗ್ ಮೂಲಕ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ (ಪ್ರ.ವಾ., ಜುಲೈ 4).

ಸರ್ಕಾರ ಏನೆಲ್ಲ ಸೌಲಭ್ಯಗಳನ್ನು ಕೊಡುತ್ತೇನೆಂದರೂ ಸೇವೆ ಸಲ್ಲಿಸಲು ಹಿಂದೇಟು ಹಾಕುವ ವೈದ್ಯರು, ಖಾಸಗಿ ಕ್ಷೇತ್ರದತ್ತಲೇ ಮುಖ ಮಾಡುತ್ತಿದ್ದಾರೆ.  ಈ ಪ್ರವೃತ್ತಿಗೆ ಸರ್ಕಾರದ ನಿಲುವುಗಳೇ ಪ್ರಮುಖ ಕಾರಣವಾಗಿವೆ. ಸರ್ಕಾರಕ್ಕೆ ಸೇವೆಗಿಂತ ಹೆಚ್ಚಾಗಿ ಅಂಕಿಸಂಖ್ಯೆಗಳು ಅಗತ್ಯ. ಯಾವ ವೈದ್ಯರು ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದರು, ಯಾವ ಚಿಕಿತ್ಸೆ ನೀಡಿದರು, ಯಾವ ಜಾತಿಯವರಿಗೆ ನೀಡಿದರು ಇವೆಲ್ಲವನ್ನೂ ದಾಖಲೀಕರಣ ಮಾಡಬೇಕಾಗುತ್ತದೆ. ವೈದ್ಯರು ತಮ್ಮ ಜ್ಞಾನವನ್ನು ಆಡಳಿತಾತ್ಮಕ ವಿಷಯಗಳಿಗಾಗಿಯೇ ಹೆಚ್ಚು ಮೀಸಲಿಡಬೇಕಾಗುತ್ತದೆ. ಬಹಳಷ್ಟು  ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ.  ಇದರಿಂದಾಗಿ  ಸಮಯಾನುಸಾರ ಅಗತ್ಯ ಮಾಹಿತಿಯನ್ನು ಕ್ರೋಡೀಕರಿಸಿ ದಾಖಲೀಕರಣ ಮಾಡುವುದು ದುಸ್ತರವಾಗುತ್ತದೆ.

ಅಲ್ಲದೇ  ಇಲಾಖೆಯ ಲಿಪಿಕ ವರ್ಗದ ನೌಕರರು, ಹಿರಿಯ ಅಧಿಕಾರಿಗಳು ಈ ವೈದ್ಯರನ್ನು ಅವರ ವಿದ್ವತ್ತು, ಗೌರವ, ಬುದ್ಧಿಮತ್ತೆಯ ಪರಿಗಣನೆ ಇಲ್ಲದೆ ತುಚ್ಛವಾಗಿ ನಡೆಸಿಕೊಳ್ಳುತ್ತಾರೆ. ಒಬ್ಬ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯು ತನಗಿಂತ ಹೆಚ್ಚಿನ ತಜ್ಞತೆಯನ್ನು ಪಡೆದ ವೈದ್ಯರನ್ನು ಸಭೆಯಲ್ಲಿ ಎದ್ದು ನಿಲ್ಲಿಸಿ, ಮಾಹಿತಿಯನ್ನು ನೀಡುವಂತೆ ಆದೇಶಿಸುತ್ತಾನೆ.  ಕೆಲವು ಅಧಿಕಾರಿಗಳಂತೂ ಬಾಯಿಗೆ ಬಂದಂತೆ ಮಾತನಾಡಿ, ತಜ್ಞವೈದ್ಯರಿಗೆ ಅವಮಾನ ಮಾಡುವುದೂ ಇದೆ.  ಪ್ರಶ್ನಿಸಿದರೆ, ‘ನಮಗೂ ಉನ್ನತ ಸಭೆಗಳಲ್ಲಿ ಇಂಥದೇ ಅನುಭವವಾಗಿರುತ್ತದೆ’ ಎಂದು ಸಮಜಾಯಿಷಿ ಬೇರೆ ಕೊಡುತ್ತಾರೆ!

ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗಿಂತ ಕಡಿಮೆ ಸಂಬಳ-ಭತ್ಯೆಗಳನ್ನು ಪಡೆದು, ಇಪ್ಪತ್ತೆಂಟು ನಿಯಮಗಳ ಅಡಿಯಲ್ಲಿ ಕೆಲಸ ಮಾಡುವುದಕ್ಕಿಂತ, ಆರಂಭಿಕ ವೇತನವಾಗಿ ತಿಂಗಳಿಗೆ ಕನಿಷ್ಠ ₹ 2 ಲಕ್ಷ  ಪಡೆದು, ಯಾವುದೇ ದಾಖಲೆ, ಪ್ರಭಾವ, ಜಾತಿ, ರಾಜಕೀಯಗಳ ನಂಟಿಲ್ಲದೆ, ಶಹರಗಳ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಸುಲಭವೆಂಬ ಭಾವ ಎಲ್ಲರಲ್ಲಿಯೂ ಮೂಡುತ್ತದೆ. ಅಪರಾತ್ರಿಯಲ್ಲಿ, ಅವೇಳೆಯಲ್ಲಿ ನೀಡುವ ಚಿಕಿತ್ಸೆಗಳಿಗೆ ಹೆಚ್ಚುವರಿ ಸಂಭಾವನೆಯೂ ದೊರೆಯುತ್ತದೆ. ಇಲ್ಲಿ ಇನ್ನೊಂದು ಅಂಶದ ಬಗ್ಗೆ ಹೇಳಲೇಬೇಕು. ವೈದ್ಯಕೀಯ ಪದವಿ ಪಡೆಯುವುದಕ್ಕೆ ಬಹಳಷ್ಟು ಹಣವನ್ನು ಸುರಿಯುವ ಸನ್ನಿವೇಶವನ್ನು ಸರ್ಕಾರಗಳೇ ಸೃಷ್ಟಿಸಿವೆ.  ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗಳಿಸಿದ ಪದವಿಗೆ ಸರ್ಕಾರ ನೀಡುವ ಸಂಬಳ ಹೇಗೆ ಸಾಕಾಗುತ್ತದೆ?

ಸಾಲದ್ದಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರ ಮೇಲೆ ಹಲ್ಲೆ ಮಾಡಿ,  ಅನಾಗರಿಕರಂತೆ ವರ್ತಿಸುವ ಜನರನ್ನು ಮತಬ್ಯಾಂಕ್‌ಗಾಗಿ ರಾಜಕಾರಣಿಗಳು ಓಲೈಸುತ್ತಾರೆ. ಅವರನ್ನು ಕಾನೂನು ಕ್ರಮಗಳಿಂದ ರಕ್ಷಿಸಲು ಪ್ರಯತ್ನಿಸುತ್ತಾರೆ. ಇಷ್ಟೆಲ್ಲ ಒತ್ತಡಗಳಿಗೆ ಈಡಾಗಿ  ಕಾರ್ಯ ನಿರ್ವಹಿಸುವ ಜರೂರತ್ತು ಈ ತಜ್ಞವೈದ್ಯರಿಗಂತೂ ಇಲ್ಲ.

ರೋಗ ರುಜಿನಗಳು, ತುರ್ತು ಸಂದರ್ಭಗಳು ಯಾರಿಗೂ ಹೇಳಿ ಕೇಳಿ ಬರುವುದಿಲ್ಲ.  ವೈದ್ಯರು ಸಮಯಾನುಸಾರವಾಗಿ ರೋಗಿಗೆ ಚಿಕಿತ್ಸೆ ನೀಡುವಲ್ಲಿ ಆಕಸ್ಮಿಕವಾಗಿ ಸ್ವಲ್ಪ ವಿಳಂಬವಾದರೂ ಸಾರ್ವಜನಿಕರಿಂದ ಏಟು ತಿನ್ನಬೇಕಾಗುತ್ತದೆ.  ಸರ್ಕಾರಿ ಆಸ್ಪತ್ರೆಗಳ ವೈದ್ಯರು ಎಂದರೆ ಯಮದೂತರೆಂಬಂತೆ ಕೆಲವು ದೃಶ್ಯಮಾಧ್ಯಮಗಳು ಬಿಂಬಿಸುವುದಷ್ಟೇ ಅಲ್ಲ, ಅದೇ ವಿಷಯವನ್ನು  ದಿನವಿಡೀ ಬಿತ್ತರಿಸುತ್ತವೆ.  ಸಾರ್ವಜನಿಕರಿಗೆ ತಿಳಿಹೇಳುವ ಸ್ಥಾನದಲ್ಲಿರಬೇಕಾದ ಮಾಧ್ಯಮಗಳು ಪರೋಕ್ಷವಾಗಿ ಜನರನ್ನು ರೊಚ್ಚಿಗೆಬ್ಬಿಸುವಂತೆ, ಕಾನೂನು ಕೈಗೆ ತೆಗೆದುಕೊಳ್ಳಲು ಪ್ರೇರೇಪಣೆ ನೀಡುತ್ತವೆ.  ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಕರ್ತವ್ಯನಿರತ ಸ್ಥಾನಿಕ ವೈದ್ಯರು ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ,  ನಂತರವಷ್ಟೇ ಅದನ್ನು ಹಿರಿಯ- ತಜ್ಞವೈದ್ಯರ ಗಮನಕ್ಕೆ ತರುತ್ತಾರೆ.  ಆ ಬಳಿಕವೇ ವಿಶೇಷ ಚಿಕಿತ್ಸೆ ಉಪಕ್ರಮಗಳಿಗೆ ಅಡಿಯಿಡುತ್ತಾರೆ. ಇಲ್ಲಿನ ಈ ವಿಳಂಬ ಯಾರ ಗಮನಕ್ಕೂ ಬರುವುದಿಲ್ಲ.

ಸರ್ಕಾರವು ಆರೋಗ್ಯ ಸೇವೆಗಳನ್ನು ಸೇವಾದೃಷ್ಟಿಯಿಂದ ಮಾತ್ರ ಪರಿಗಣಿಸಿ, ಅನುಕೂಲ ಕಲ್ಪಿಸಿಕೊಡಬೇಕು.  ಇಲ್ಲಿ ರಾಜಕೀಯ ಸುಳಿಯದಂತೆ ನೋಡಿಕೊಳ್ಳಬೇಕು.  ತನ್ನ ಬಳಿ ಬರುವ ರೋಗಿಯ ಚಿಕಿತ್ಸೆ ವೈದ್ಯರ ಆದ್ಯತೆಯಾಗಿರುತ್ತದೆ.  ಯಾವ ವೈದ್ಯನೂ, ಎಂದಿಗೂ ರೋಗಿಯ ಜಾತಿಯನ್ನು ಆಧರಿಸಿ ಚಿಕಿತ್ಸೆಯನ್ನು ನೀಡುವುದಿಲ್ಲ.  ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಪ್ರತಿಯೊಬ್ಬ ರೋಗಿಯ ಹೆಸರಿನ ಜೊತೆಗೆ, ಜಾತಿಯನ್ನೂ ನಮೂದಿಸುವ ಕೆಟ್ಟ ಪರಂಪರೆಯನ್ನು ಬೆಳೆಸಿಕೊಂಡು ಬರಲಾಗುತ್ತಿದೆ.  ಇದು ನೋಡಲಿಕ್ಕೆ ಅತ್ಯಂತ ನಗಣ್ಯ ಸಂಗತಿಯಾಗಿ ಕಂಡರೂ, ವೈದ್ಯರಿಗೆ ರೋಗಿಯ ಜಾತಿ ಯಾವುದೆಂದು ಕೇಳುವಾಗ ವಿಪರೀತ ಹಿಂಸೆಯಾಗುತ್ತದೆ.  ವೈದ್ಯಕೀಯದಲ್ಲಿ ಲಿಂಗ, ಜಾತಿ, ವಯಸ್ಸು, ವರ್ಗಗಳನ್ನು ನೋಡಿ ಚಿಕಿತ್ಸೆ ನೀಡುವ ಪರಿಪಾಠವಿಲ್ಲ.  ವೈದ್ಯರಿಗೆ ಎಲ್ಲ ರೋಗಿಗಳೂ ಸಮಾನರು!

ಜನಸಾಮಾನ್ಯರ ಸೇವೆಗೆಂದು ಆಸಕ್ತಿಯಿಂದ ಸರ್ಕಾರಿ ಸೇವೆ ಸೇರುವ ವೈದ್ಯರನ್ನು ಗೌರವದಿಂದ ನಡೆಸಿಕೊಳ್ಳುವುದು ಸರ್ಕಾರಕ್ಕೆ ಇನ್ನೂ ಗೊತ್ತಾಗಿಲ್ಲ.  ತನ್ನ ಕೆಲವು ನೀತಿಗಳನ್ನು ಕೂಡಲೇ ಮಾರ್ಪಾಡು ಮಾಡಿಕೊಳ್ಳದಿದ್ದರೆ ಭವಿಷ್ಯದ ದಿನಗಳಲ್ಲಿ ವೈದ್ಯರನ್ನು ನೇಮಕ ಮಾಡುವುದು ಇನ್ನೂ ಕಷ್ಟವಾಗಲಿದೆ.  ಒಂದೇ ಕಡೆ ಹತ್ತು  ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡುವ ಜರೂರತ್ತು ಏನಿತ್ತು?  ಯಾವುದೇ ವೈದ್ಯನು ಒಂದು ಕಡೆ ಸಮರ್ಪಕ ಸೇವೆ ಸಲ್ಲಿಸುತ್ತಿಲ್ಲವಾದರೆ ಸ್ಥಳೀಯರೇ ಅವನನ್ನು ಓಡಿಸಲು ಧರಣಿ, ಪ್ರತಿಭಟನೆ ಇತ್ಯಾದಿ ಆರಂಭಿಸುತ್ತಾರೆ.  ಹತ್ತು ವರ್ಷ ಒಬ್ಬ ವೈದ್ಯನು ಸೇವೆ ಸಲ್ಲಿಸುತ್ತಿದ್ದಾನೆ, ಅವನ ವಿರುದ್ಧ ಯಾವುದೇ ದೂರುಗಳಿಲ್ಲವೆಂದರೆ ಅಂಥವರನ್ನೇಕೆ ವರ್ಗಾಯಿಸಬೇಕು? ಸುಸೂತ್ರವಾಗಿ ಆಸ್ಪತ್ರೆಗಳು ನಡೆದುಕೊಂಡು ಹೋದರೆ ಸಾಕೆನ್ನುವ ಸ್ಥಿತಿ ಇರುವಾಗ ಇಂಥ ನಿಲುವು ಅಗತ್ಯವಿತ್ತೇ?

ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂದು ನಿರೀಕ್ಷಿಸುವ ಸರ್ಕಾರ, ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು.  ಸೋರುವ ಕಟ್ಟಡಗಳು, ನೀರಿದ್ದರೆ ವಿದ್ಯುತ್ ಇಲ್ಲ, ವಿದ್ಯುತ್ ಇದ್ದರೆ ಕಿಟಕಿ ಇಲ್ಲ, ಎಲ್ಲವೂ ಇದ್ದರೆ ಸಿಬ್ಬಂದಿಯೇ ಇರುವುದಿಲ್ಲ.  ರಾಜ್ಯದ ಜನಸಂಖ್ಯೆ ಒಂದು  ಕೋಟಿ ಇದ್ದಾಗ, ಸೃಜಿಸಲಾದ ಹುದ್ದೆಗಳ ಸಂಖ್ಯೆಯೇ ಸುಮಾರು ಆರು ಲಕ್ಷ, ಅದರಲ್ಲಿಯೇ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಇವೆ. ಆದರೆ ಇಂದು ಜನಸಂಖ್ಯೆಯೇ ಆರು ಕೋಟಿಗೆ ತಲುಪಿರುವಾಗ ಅದಕ್ಕನುಗುಣವಾಗಿ ಸಿಬ್ಬಂದಿ ಒದಗಿಸಬೇಕಿತ್ತು. ಜನಸಂಖ್ಯೆ ಐದು ಪಟ್ಟು ಹೆಚ್ಚಿದ್ದು, ಸಿಬ್ಬಂದಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ಸೇವೆ ಮಾತ್ರ ಸಮರ್ಪಕವಾಗಿ ಸಿಗಬೇಕೆಂದು ನಿರೀಕ್ಷಿಸುವುದು ಎಷ್ಟು ಸಮರ್ಥನೀಯ?

ಸರ್ಕಾರದ ಇತರೆ ಇಲಾಖೆಗಳಲ್ಲಿ ಒಂದು ಹುದ್ದೆಗೆ ನೂರು ಆಕಾಂಕ್ಷಿಗಳಿರುತ್ತಾರೆ.  ಆದರೆ ವೈದ್ಯರನ್ನು ಅವರ ವಿದ್ವತ್ತು, ಪರಿಣತಿ, ಲಭ್ಯತೆ, ಮಹತ್ವಗಳನ್ನು ಆಧರಿಸಿ, ಆದರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವೈದ್ಯರ ನೇಮಕಾತಿಯೇ ಒಂದು ಜಟಿಲ ಸಮಸ್ಯೆಯಾಗಲಿದೆ.  ವೈದ್ಯರನ್ನು ಇತರೆ ಸಾಮಾನ್ಯ ನೌಕರರಂತೆ ಪರಿಗಣಿಸಿ, ನಿಯಮಗಳ ಮೇಲೆ ನಿಯಮಗಳನ್ನು ಹೇರುತ್ತ, ವಿಪರ್ಯಾಸದ ನೀತಿಗಳನ್ನು ಜಾರಿಗೊಳಿಸುತ್ತ ಹೋದರೆ, ಬಡಬಗ್ಗರಿಗೆ ಸರ್ಕಾರದಿಂದ ಆರೋಗ್ಯ ಸೇವೆಗಳು ದೊರೆಯುವುದು ಕಷ್ಟವಾಗಲಿದೆ.  ವೈದ್ಯರಿಗೆ ಕೇವಲ ಚಿಕಿತ್ಸಾ ಸಂಬಂಧವಾದ ಕರ್ತವ್ಯಗಳನ್ನು ನಿಗದಿಗೊಳಿಸಿ, ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ಅನ್ಯ ವ್ಯವಸ್ಥೆಗೊಳಪಡಿಸಲು ಸರ್ಕಾರ ಪ್ರಯತ್ನಿಸಿದಲ್ಲಿ ಮಾತ್ರ ಈ ಸಮಸ್ಯೆಗೆ ಒಂದು ಪರಿಹಾರ ಲಭಿಸಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT