ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 400 ಕೋಟಿ ಪ್ರಸ್ತಾವಕ್ಕೆ ಗುಪ್ತ ಮತದಾನ

ಭದ್ರಾವತಿ: ಎಂಪಿಎಂ ಕಾರ್ಮಿಕ ಸಂಘದ ಸಭೆಯಲ್ಲಿ ನಿರ್ಧಾರ
Last Updated 11 ಜುಲೈ 2017, 6:29 IST
ಅಕ್ಷರ ಗಾತ್ರ

ಭದ್ರಾವತಿ:  ಸರ್ಕಾರ ಎಂಪಿಎಂ ಕಾರ್ಮಿಕರ ಸ್ವಯಂ ನಿವೃತ್ತಿ ಯೋಜನೆ ಸೇರಿದಂತೆ ಇನ್ನಿತರ ಸೌಲಭ್ಯ ವಿತರಣೆ ಸಂಬಂಧ ₹ 400 ಕೋಟಿ ಪ್ಯಾಕೇಜ್ ಪ್ರಸ್ತಾವ ಮುಂದಿಟ್ಟಿದ್ದು ಇದಕ್ಕೆ ಗುಪ್ತಮತದಾನ ಮೂಲಕ ಒಪ್ಪಿಗೆ ಪಡೆಯಲಾಗುವುದು ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್.ಶಿವಮೂರ್ತಿ ತಿಳಿಸಿದರು.

ಎಂಪಿಎಂ ಕಲ್ಯಾಣ ಮಂದಿರದಲ್ಲಿ ಸರ್ಕಾರದ ಹೊಸ ಪ್ರಸ್ತಾವ ಕುರಿತು ವಿವರ ನೀಡಲು ಸೋಮವಾರ ಕರೆದಿದ್ದ ಕಾರ್ಮಿಕ ಸಂಘದ ನೇತೃತ್ವದ ಸಭೆಯಲ್ಲಿ ಅವರು ಮಾತನಾಡಿದರು.

2015ರ ನವೆಂಬರ್ ತಿಂಗಳಲ್ಲಿ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಂಡಿತ್ತು. ಅಂದಿನಿಂದ ಒಂದಲ್ಲ ಒಂದು ಸಮಸ್ಯೆ ಇಟ್ಟುಕೊಂಡು ಹೋರಾಟ ಹಾಗೂ ಕಾನೂನು ಸಮರ ನಡೆಸಿರುವ ಕಾರ್ಮಿಕರ ಪಾಲಿಗೆ ಇದೀಗ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಓಡಾಟ, ಸಹಕಾರ, ಬೆಂಬಲ ಕಾರಣ ದಿಂದ ಹೊಸ ಪ್ರಸ್ತಾವದಲ್ಲಿ ಹೆಚ್ಚುವರಿಯಾಗಿ ₹215 ಕೋಟಿ ಪ್ರಸ್ತಾವ ಮಂಡಿಸಲಾಗಿದೆ ಎಂದು ಹೇಳಿದರು.

ಒಮ್ಮತ ಸಿಕ್ಕರೆ ಆದೇಶ: ‘ನಮಗೆ ಸಿಗಬೇಕಾದ ಸವಲತ್ತಿನ ಪ್ರಮಾಣದಲ್ಲಿ ಏರಿಕೆ ಸಿಕ್ಕಿದೆ, ಇದಕ್ಕೆ ಕಾರ್ಮಿಕ ಸಂಘದ ಒಪ್ಪಿಗೆ ಇದೆ ಎಂಬ ಅಭಿಪ್ರಾಯ ಪಡೆದು ತಂದರೆ ಅದನ್ನು ಜಾರಿ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ಕಾರ್ಮಿಕ ಸಂಘದ ಮುಖಂಡ ಜಿ.ಬಾಬು ಹೇಳಿದರು.

‘ಸ್ಥಳೀಯ ಶಾಸಕರಿಗೆ ಮಾನ್ಯತೆ ನೀಡಿ ಓಡಾಡಿದರೂ ಕೆಲಸ ಆಗಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮಾಜಿ ಶಾಸಕರ ಸಹಕಾರ ಪಡೆದು ಹೋರಾಟ ಮಾಡಬೇಕಾಯಿತು’ ಎಂದರು.

‘ಹೆಚ್ಚುವರಿ ಮೊತ್ತದ ಪ್ರಸ್ತಾವವನ್ನು ಸರ್ಕಾರ ನಮಗೆ ನೀಡಿದೆ. ಇದಕ್ಕೆ ಕಾರ್ಮಿಕರಿಂದ ಒಮ್ಮತಾಭಿಪ್ರಾಯ ಸಿಕ್ಕರೆ ಆದೇಶ ನೀಡುವುದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ’ ಎಂದು ಘೋಷಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ, ಕಾರ್ಮಿಕ ಮುಖಂಡರಾದ ಮಂಜಪ್ಪ, ದಾನಂ, ಶೇಖರ್, ಜಯಪ್ಪ, ಸೋಮಶೇಖರ್, ಲಿಂಗೋಜಿರಾವ್, ಕಮ್ಯುನಿಸ್ಟ್ ಮುಖಂಡ ಡಿ.ಸಿ.ಮಾಯಣ್ಣ, ಟಿ. ಚಂದ್ರೇಗೌಡ ಉಪಸ್ಥಿತರಿದ್ದರು.

***

‘ಶಾಸಕರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ..’

ಭದ್ರಾವತಿ:  ‘ಕ್ಷೇತ್ರದ ಶಾಸಕರು ಇಲ್ಲಿನ ಕಾರ್ಮಿಕರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿತ್ತು. ಅವರು ಮಾಡದ ಕಾರಣ ನಾನು ನನ್ನ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ’ ಎಂದು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.

‘ಕೇವಲ ₹ 185 ಕೋಟಿ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ ಉಳಿದ ನೆರವನ್ನು ಮುಂದಿನ ದಿನದಲ್ಲಿ ಒದಗಿಸುವ ಭರವಸೆ ನೀಡಿತ್ತು. ಆದರೆ ನನ್ನನ್ನು ಭೇಟಿಯಾದ ಕಾರ್ಮಿಕ ಮುಖಂಡರಿಗೆ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ನಾನು ಹಣ ಕೊಡಿಸಲು ಬದ್ಧನಿದ್ದೇನೆ. ಇಲ್ಲ ಊರು ಬಿಡುತ್ತೇನೆ, ಎಂದು ಘೋಷಿಸಿದ್ದೆ. ಈಗ ಯಶಸ್ವಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ’ ಎಂದು ನುಡಿದರು.

‘ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಅದು ಬಿಟ್ಟು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಹಸಿದವರ ಪಾಲಿಗೆ ನೆರವು ನೀಡಲು ಸಾಧ್ಯವಾಗದಿದ್ದಲ್ಲಿ ಅಧಿಕಾರ ಇದ್ದರೇನು, ಬಿಟ್ಟರೇನು’ ಎಂದು ಪರೋಕ್ಷವಾಗಿ ಶಾಸಕ ಎಂ.ಜೆ. ಅಪ್ಪಾಜಿ ಅವರನ್ನು ಟೀಕಿಸಿದರು.

‘ನನ್ನ ಬಳಿ ಎಂಪಿಎಂ ಕಾರ್ಮಿಕ ಸಂಘದ ಮುಖಂಡರು ಬಂದಾಗ ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದೇನೆ. ವಿಐಎಸ್ಎಲ್ ಕಾರ್ಖಾನೆಗೂ ಸಹ ಗಣಿ ಮಂಜೂರು ಮಾಡಿಸುವಲ್ಲಿ ಕೆಲಸ ಮಾಡಿದ್ದೇನೆ. ನನ್ನ ಈ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT