ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಿಂದ ಈಜುಕೊಳ ನಿರ್ಮಾಣ

ಕಲಬುರ್ಗಿ: ಶೇ 90ರಷ್ಟು ಒಳಚರಂಡಿ ಕಾಮಗಾರಿ ಪೂರ್ಣ
Last Updated 11 ಜುಲೈ 2017, 6:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಡಾ.ಎಸ್‌.ಎಂ.ಪಂಡಿತ ರಂಗಮಂದಿರದ ಪಕ್ಕ ಅಂದಾಜು ₹3 ಕೋಟಿ ವೆಚ್ಚದಲ್ಲಿ ಪಾಲಿಕೆಯಿಂದ ಈಜುಕೊಳ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ನಗರಾಭಿವೃದ್ಧಿ ಮತ್ತು ಹಜ್‌ ಸಚಿವ ಆರ್‌. ರೋಷನ್‌ ಬೇಗ್‌ ಹೇಳಿದರು.

ಸೋಮವಾರ ಇಲ್ಲಿ  ಕಲಬುರ್ಗಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಡೆಂಗಿ, ಮಲೇರಿಯಾದಂತಹ ರೋಗ ತಡೆಗೆ ಅನುವಾಗುವಂತೆ ನಗರದಲ್ಲಿ ₹350 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ  ಕೈಗೊಂಡಿದ್ದು, ಶೇ 90ರಷ್ಟು ಪೂರ್ಣಗೊಂಡಿದೆ. ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ಹಾಗೂ ಎಚ್.ಕೆ.ಆರ್.ಡಿ.ಬಿ.ಯ ಒಟ್ಟು ₹141 ಕೋಟಿ, ಅಮೃತ ಯೋಜನೆಯ ₹192 ಕೋಟಿ ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ₹27 ಕೋಟಿ ಬಳಸಿಕೊಳ್ಳಲಾಗುತ್ತಿದೆ’ ಎಂದರು.

‘ನಗರದಲ್ಲಿ ಈಗಾಗಲೇ 4 ವಾರ್ಡ್‌ಗಳಿಗೆ ಪೂರ್ಣ ಹಾಗೂ 7 ವಾರ್ಡ್‌ಗಳಿಗೆ ಭಾಗಶಃ ನಿರಂತರ ನೀರು ಸರಬರಾಜು ಯೋಜನೆ ಜಾರಿಯಲ್ಲಿದೆ. ವಿಶ್ವ ಬ್ಯಾಂಕ್‌ನ ₹500 ಕೋಟಿ ನೆರವಿನಿಂದ ಉಳಿದ 44 ವಾರ್ಡ್‌ಗಳಿಗೆ ನಿರಂತರ ನೀರು ಸರಬರಾಜು ಯೋಜನೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಪ್ಯಾಕೇಜ್‌–1ರಲ್ಲಿ ಕೈಗೆತ್ತಿಕೊಳ್ಳಲಾದ 41 ಕಾಮಗಾರಿಗಳ ಪೈಕಿ 40 ಪೂರ್ಣಗೊಂಡಿದ್ದು, ₹93.84 ಕೋಟಿ ಖರ್ಚಾಗಿದೆ. ಪ್ಯಾಕೇಜ್‌–2ರ ₹100 ಕೋಟಿಯಲ್ಲಿ 133 ಕಾಮಗಾರಿ ಪೂರ್ಣಗೊಳಿಸಿದ್ದು, ₹86.88 ಕೋಟಿ ಖರ್ಚಾಗಿದೆ.

ಪ್ಯಾಕೇಜ್‌–3ರ ₹100 ಕೋಟಿಯಲ್ಲಿ 10 ಕಾಮಗಾರಿ ಪೂರ್ಣಗೊಂಡಿದ್ದು, ₹24.01 ಕೋಟಿ ವೆಚ್ಚ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ 2015-16ರಿಂದ 2016–17ನೇ ಸಾಲಿನ ಅವಧಿಯಲ್ಲಿ ಎಸ್.ಎಫ್.ಸಿ. ಮತ್ತು 14ನೇ ಹಣಕಾಸು ನಿಧಿಯಲ್ಲಿ ಒಟ್ಟು 515 ಕಾಮಗಾರಿಗಳಿಗೆ ₹38.37 ಕೋಟಿ ವಿನಿಯೋಗಿಸಲಾಗಿದೆ’ ಎಂದರು.

ಜಿಲ್ಲೆಯ ಪಟ್ಟಣಗಳಲ್ಲಿ ಹಾಗೂ ಕಲಬುರ್ಗಿ ನಗರದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಮೇಯರ್ ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಹ್ಮದ್ ಅಸಗರ್ ಚುಲ್‌ಬುಲ್, ಜಿಲ್ಲಾಧಿಕಾರಿ ಉಜ್ವಲಕುಮಾರ್‌ ಘೋಷ್, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್‌, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಸಾಗರ,  ಕೂಡಾ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ. ಜಾಧವ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT