ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಹಜ್ ಭವನ ಉದ್ಘಾಟನೆಗೆ ಸಿದ್ಧ

ಹಜ್‌ ಯಾತ್ರಿಗಳ ತರಬೇತಿ ಶಿಬಿರ: ಸಚಿವ ಆರ್‌. ರೋಷನ್‌ ಬೇಗ್‌ ಮಾಹಿತಿ
Last Updated 11 ಜುಲೈ 2017, 6:59 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬೆಂಗಳೂರಿನಲ್ಲಿ ₹10 ಕೋಟಿ ವೆಚ್ಚದ ಸುಸಜ್ಜಿತ ಹಾಗೂ ಬೃಹತ್ ಹಜ್‌ ಭವನದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ’ ಎಂದು ನಗರಾಭಿವೃದ್ಧಿ ಮತ್ತು ಹಜ್‌ ಸಚಿವ ಆರ್‌.ರೋಷನ್‌ ಬೇಗ್‌ ತಿಳಿಸಿದರು.

ಇಲ್ಲಿನ ಹುಮನಾಬಾದ್‌ ರಸ್ತೆಯ ಕೆಎನ್‌ಝಡ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಜ್‌ ಯಾತ್ರಿಗಳ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ‘ಭವನ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಶ್ರಮಿಸಿದೆ. ಒಳಾಂಗಣ ವಿನ್ಯಾಸದ ಕೆಲಸ ಮಾತ್ರ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲಿಯೇ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಹೇಳಿದರು.

‘ಹಜ್‌ಗೆ ತೆರಳುವ ರಾಜ್ಯದ ಯಾತ್ರಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಅಲ್ಲದೇ ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಶೈಕ್ಷಣಿಕ ತರಬೇತಿಗಾಗಿ ಬೆಂಗಳೂರಿಗೆ ಬರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಭವನದಲ್ಲಿ ಉಚಿತವಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದರು.

‘ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಇಲ್ಲಿಂದಲೇ ಹಜ್‌ ಯಾತ್ರೆಗೆ ವಿಶೇಷ ವಿಮಾನದ ಸೌಲಭ್ಯ ಕಲ್ಪಿಸಲಾಗುವುದು. ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಆಸಕ್ತಿ ಇದೆ. ಹಜ್‌ಗೆ ಭೇಟಿ ನೀಡುವುದು ಪವಿತ್ರ ಕಾರ್ಯ. ಇದು ಎಲ್ಲ ಮುಸ್ಲಿಮರ ಕನಸಾಗಿರುತ್ತದೆ. ದೇಶದ ಪ್ರಮುಖ ಮಹಾನಗರಗಳಿಂದ ಹಜ್‌ ಯಾತ್ರಿಗಳಿಗಾಗಿ ವಿಶೇಷ ವಿಮಾನದ ಸೇವೆಯನ್ನು ಆಯಾ ರಾಜ್ಯ ಸರ್ಕಾರಗಳು ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಹಿಂದೆ ದೇಶದ ನಾಲ್ಕು ಪ್ರಮುಖ ನಗರಗಳಿಂದ ಮಾತ್ರ ಮಾತ್ರ ಹಜ್‌ಗೆ ವಿಮಾನ ಸೇವೆ ಒದಗಿಸಲಾಗುತ್ತಿತ್ತು. ಅಸ್ಸಾಂ, ಮಣಿಪುರ, ಉತ್ತರಪ್ರದೇಶಗಳ ಯಾತ್ರಿಗಳು ದೆಹಲಿಗೆ ಬರಬೇಕಾಗಿತ್ತು. ಕರ್ನಾಟಕ, ಆಂಧ್ರಪ್ರದೇಶದದವರು ಮುಂಬೈಗೆ ತೆರಳಬೇಕಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ 21 ನಗರಗಳಿಂದ ವಿಮಾನ ಸೌಕರ್ಯ ಕಲ್‍ಪಿಸಲಾಯಿತು. ಇದರಿಂದ ಯಾತ್ರಿಗಳ ಶ್ರಮ ಹಾಗೂ ಸಮಯ ಉಳಿತಾಯ ಆಗುತ್ತಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮುಸ್ಲಿಮರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸಬೇಕು. ಕಲಬುರ್ಗಿಯ ಖಾಜಾ ಬಂದೇ ನವಾಜ್‌ ದರ್ಗಾದ ಅಭಿವೃದ್ಧಿಗೆ ನೆರವು ನೀಡಲಾಗಿದೆ’ ಎಂದರು.

‘ಮುಸ್ಲಿಮರನ್ನು ಸಂಶಯದ ದೃಷ್ಟಿಯಿಂದ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕಾಶ್ಮೀರದಲ್ಲಿ ಮುಸ್ಲಿಂ ಯುವಕರನ್ನು ಕೆಲ ದುಷ್ಕರ್ಮಿಗಳು ಪ್ರಚೋದಿಸುತ್ತಿದ್ದಾರೆ. ಇನ್ನೊಂದೆಡೆ ಗೋವುಗಳ ಸಾಗಣೆ ಕಾರಣಕ್ಕಾಗಿ ಹಲವೆಡೆ ಹಲ್ಲೆಗಳು ನಡೆಯುತ್ತಿವೆ. ಗೋರಕ್ಷಕರು ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ’ ಎಂದು ಅವರು ಆಪಾದಿಸಿದರು. ಮಾಜಿ ಮೇಯರ್ ಸೈಯದ್ ಅನ್ವರ್, ಹೈದರಾಬಾದ್ ಕರ್ನಾಟಕದ ಹಜ್ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT