ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಪೂರ್ವಕ ಪಾಠವೇ ಮಕ್ಕಳ ಭವಿಷ್ಯಕ್ಕೆ ನಾಂದಿ

ಬುಗುಡನಹಳ್ಳಿ ಸರ್ಕಾರಿ ಶಾಲೆಯ 75ನೇ ವಾರ್ಷಿಕೋತ್ಸವದಲ್ಲಿ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿಕೆ
Last Updated 11 ಜುಲೈ 2017, 9:24 IST
ಅಕ್ಷರ ಗಾತ್ರ

ತುಮಕೂರು: ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಮಾರ್ಕ್ಸ್‌ವಾದಿಗಳಾಗಬಾರದು. ಶಾಲೆಯಲ್ಲಿರುವ ಮಕ್ಕಳು ತಮ್ಮ ಮಕ್ಕಳೇ ಎಂದು ಭಾವಿಸಿ ಶಿಕ್ಷಕರು ಕಾಳಜಿಪೂರ್ವಕವಾಗಿ ಪಾಠ ಮಾಡಿದಾಗ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.

ತಾಲ್ಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವಾರ್ಷಿಕೋತ್ಸವ ಹಾಗೂ ಶಾಲೆಯ ನೂತನ ಕೊಠಡಿ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸರ್ಕಾರಿ ಶಾಲೆ ಪುನರುಜ್ಜೀವನ ಮಾಡುವುದು ಅಹಲ್ಯೊದ್ಧಾರ ಮಾಡಿದಂತೆ. ಶಾಸಕರು ಶಾಸಕರ ನಿಧಿ, ದಾನಿಗಳ ನೆರವಿನಿಂದ ₹ 95 ಲಕ್ಷ ಖರ್ಚು ಮಾಡಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಗ್ರಾಮಸ್ಥರು ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ಆದರೆ, ಶಾಲೆ ಎಂದರೆ ಬರೀ ಕಟ್ಟಡ, ಮೂಲಸೌಕರ್ಯ, ಪರಿಕರಗಳಿದ್ದರಷ್ಟೇ ಸಾಲದು. ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡುವ ಮನೋಭಾವ ಶಿಕ್ಷಕರಿಗೆ ಇರಬೇಕು ಎಂದು ಹೇಳಿದರು.

ಮಕ್ಕಳಿಗೆ ಹೊಡೆದು ಬಡಿದರೆ ಬುದ್ಧಿವಂತರಾಗುವುದಿಲ್ಲ. ಹೊಡೆದು ಕಲಿಸುವುದಕ್ಕಿಂತ ಹೊಡೆಯದೇ ಕಲಿಸಿದರೆ ಹೆಚ್ಚಿನ ಬುದ್ಧಿವಂತರಾಗುತ್ತಾರೆ. ಪೋಷಕರಾಗಲಿ, ಶಿಕ್ಷಕರಾಗಲಿ ಮಕ್ಕಳಿಗೆ ನೀಡುವ ಪೆಟ್ಟು ದೇಹಕ್ಕೆ ಶಿಕ್ಷೆಯಾಗುತ್ತದೆಯೇ ಹೊರತು ಮಕ್ಕಳ ಮನಸ್ಸು ಬದಲಾಗುವುದಿಲ್ಲ. ಪ್ರೀತಿಯಿಂದ ಮಾತ್ರ ಮಕ್ಕಳ ಮನಸ್ಸು ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಶಿಕ್ಷಕರು ಎಂದಿಗೂ ಕಟುವಾಗಿ ವರ್ತಿಸಬಾರದು. ಅಮ್ಮನ ಪ್ರೀತಿಯ ಒಂದು ಅಂಶದಷ್ಟಾದರೂ ಶಾಲೆಯ ಮಕ್ಕಳಿಗೆ ಪ್ರೀತಿ ತೋರಿಸಬೇಕು. ಒಳ್ಳೆಯ ಬೀಜ ಹಾಕಿದರೆ ಒಳ್ಳೆಯ ಗಿಡ, ಮರವಾಗಿ ಒಳ್ಳೆಯ ಹಣ್ಣುಗಳೇ ಸಿಗುತ್ತವೆ. ಹಾಗೆಯೇ ನಿಮ್ಮ ಒಳ್ಳೆಯ ಮಾತುಗಳಿಂದ ಮಕ್ಕಳೂ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ  ಎಂದು ಕಿವಿಮಾತು ಹೇಳಿದರು.

ಪೋಷಕರೂ ಮಕ್ಕಳ ಮುಂದೆ ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡಬಾರದು. ಶಿಕ್ಷಕರ ಬಗ್ಗೆ ಉಡಾಫೆ ವರ್ತನೆ ಇರಬಾರದು. ಶಿಕ್ಷಕರನ್ನು ಸಣ್ಣವರನ್ನಾಗಿಸಿ ನೀವು ದೊಡ್ಡರಾಗುವುದು ಬೇಡ ಎಂದು ಪೋಷಕರಿಗೆ ಸಲಹೆ ನೀಡಿದರು.

ಒಳ್ಳೆಯ ವ್ಯಕ್ತಿತ್ವವೇ ಯಶಸ್ಸು: ಹಣ, ಅಧಿಕಾರ, ದೈಹಿಕ ಬಲ , ಖ್ಯಾತಿ ಯಾವುದೂ ಯಶಸ್ಸು ಅಲ್ಲ. ಪ್ರಧಾನಿಯಾದರೂ, ಜಗತ್ತನ್ನೇ ಗೆದ್ದರೂ ಜನರು ಹೆಸರು ನೆನಪಿಡುವುದಿಲ್ಲ. ಒಳ್ಳೆಯ ವ್ಯಕ್ತಿತ್ವ, ಮಾನವೀಯತೆ, ಜನಪರ ಕಾಳಜಿ ಮಾತ್ರ ಸದಾ ನೆನಪಿನಲ್ಲಿರುತ್ತವೆ ಎಂದು ತಿಳಿಸಿದರು.

ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿ, ‘ಮಕ್ಕಳನ್ನು ಬಹಳ ದೊಡ್ಡ ಮನುಷ್ಯರನ್ನಾಗಿ, ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಗಳನ್ನಾಗಿ ರೂಪಿಸುವ ಶಕ್ತಿ ತಾಯಂದಿರಿಗೆ ಇದೆ’ ಎಂದರು.

ಮಗುವಿನ ಮುಂದೆ ತಾಯಿ ಕುಳಿತು ಅಕ್ಷರ ಕಲಿಸಿದರೆ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಸಿಗುತ್ತದೆ. ಕುಟುಂಬದ ಜವಾಬ್ದಾರಿಯ ಜತೆಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ತಾಯಂದಿರು ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ಟಿ.ವಿಯಲ್ಲಿ ಪ್ರಸಾರವಾಗುವ ಯಾವ ಧಾರಾವಾಹಿಗಳೂ ನಿಮಗೆ ಒಳ್ಳೆಯದನ್ನು ಕಲಿಸುವುದಿಲ್ಲ. ಅವುಗಳಿಂದ ದೂರವಿರಿ ಎಂದು ಸಲಹೆ ನೀಡಿದರು.

ಇಂಗ್ಲಿಷ್ ಮಾಧ್ಯಮ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆಗಳ ಬಣ್ಣದ ಕಟ್ಟಡಗಳಿಗೆ ಪೋಷಕರು ಮಾರು ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳ ಶೈಕ್ಷಣಿಕ ಏಳಿಗೆಗೆ ಚಿಂತನೆ ಮಾಡಿ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಿರುವ ಇಂತಹ ಶಾಸಕರು ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಕೊಠಡಿ, ಸೌಕರ್ಯ ಬಳಸಿಕೊಂಡು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಎಸ್‌ಡಿಎಂಸಿ ಅಧ್ಯಕ್ಷ ಕೆಂಪನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಸುರೇಶ್‌ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ಡಯಟ್ ಪ್ರಾಂಶುಪಾಲರಾದ ಎಸ್.ಮಮತಾ ವೇದಿಕೆಯಲ್ಲಿದ್ದರು. ಶಾಲೆಯ ಮುಖ್ಯಶಿಕ್ಷಕ ಸಿ.ಬಿ.ಪಾಲಾಕ್ಷಯ್ಯ ಸ್ವಾಗತಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯರಾದ ರಾಜೇಗೌಡ, ಶಿವಮ್ಮ ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಾಂತಕುಮಾರ್,  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೆಂಪಣ್ಣ, ಉಪಾಧ್ಯಕ್ಷ ಮೋಹನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತಾ ರಮೇಶ್, ಶಿವಣ್ಣ ಉಪಸ್ಥಿತರಿದ್ದರು.

***

ಶಿಕ್ಷಕರು ಯುದ್ಧ ಸೋತವರಂತೆ ಇರಬಾರದು
ಮಕ್ಕಳ ಮನಸ್ಸು ಗೆಲ್ಲುವ ರೀತಿ ಶಿಕ್ಷಕರು ಪಾಠ ಮಾಡಬೇಕು. ಉತ್ಸಾಹದಿಂದ ಪಾಠ ಮಾಡಿದರೆ ಅರ್ಥವಾಗುತ್ತದೆ. ಯಾವುದೋ ಮಹಾಯುದ್ಧ ಸೋತವರಂತೆ ತರಗತಿಗೆ ಹೋದರೆ ಮಕ್ಕಳಿಗೆ ಪಾಠ ಅರ್ಥವಾಗಲು ಹೇಗೆ ಸಾಧ್ಯ? ವೈಯಕ್ತಿಕ ಸಮಸ್ಯೆಗಳನ್ನು ಹೊತ್ತು ತರಗತಿಗೆ ಕಾಲಿಡಬಾರದು ಎಂದು ಕರ್ಜಗಿ ಹೇಳಿದರು.

***

ನೂರು ಜನ್ಮವಾದರೂ ಮತದಾರರ ಋಣ ತೀರಿಸುವುದು ಕಷ್ಟ
‘ನೂರು ಜನ್ಮವೆತ್ತಿದರೂ ಮತದಾರರ ಋಣ ತೀರಿಸಲು ಆಗುವುದಿಲ್ಲ. ನನ್ನ ಮತ ಕ್ಷೇತ್ರದ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು ಎಂಬ ಉದ್ದೇಶದಿಂದ ₹ 95 ಲಕ್ಷ ಖರ್ಚು ಮಾಡಿ ಗ್ರಾಮದ ಶಾಲೆಯ ನೂತನ ಕೊಠಡಿ ನಿರ್ಮಾಣ ಮಾಡಲಾಗಿದೆ’ ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ಬುಗುಡನಹಳ್ಳಿಯಲ್ಲಿ  ನೂತನ ಶಾಲಾ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಜನಪ್ರತಿನಿಧಿಗಳಾದವರು ಜನಸೇವಕರಾಗಿರಬೇಕು. ರಾಜಕೀಯ ಅಧಿಕಾರ ಎಂದರೆ ಸಿಂಹಾಸನವಲ್ಲ. ಜನರನ್ನು ಗುಲಾಮರನ್ನಾಗಿ ಮಾಡುವುದಲ್ಲ.  ಹಣ ಸಾಲ ಪಡೆದರೆ ಅದನ್ನು ವಾಪಸ್‌ ನೀಡಿ ಋಣ ತೀರಿಸಬಹುದು. ಆದರೆ ಮತದಾರರ ಋಣ ತೀರಿಸಲು ಆಗುವುದಿಲ್ಲ ಎಂದರು.

ರಾಜಕೀಯ ಎಂದರೆ ನಿಂತ ನೀರಲ್ಲ. ಶಾಸಕನಾಗಿ ಇಂದು ನಾನು ಇರಬಹುದು. ನಾಳೆ ಇನ್ನೊಬ್ಬರು ಬರಬಹುದು. ನಾವು ಮಾಡುವ ಅಭಿವೃದ್ಧಿ ಕೆಲಸ ಸಮಾಜ ನೆನಪಿಟ್ಟುಕೊಳ್ಳುವಂತಿರಬೇಕು. ಈ ಆಶಯದಿಂದ ಈ ಹಳೆಯ ಶಾಲೆಯ ಶಿಥಿಲ ಕಟ್ಟಡ ತೆರವುಗೊಳಿಸಿ ₹ 95 ಲಕ್ಷ ಮೊತ್ತದಲ್ಲಿ 6 ಕೊಠಡಿ ನಿರ್ಮಾಣ ಮಾಡಲಾಗಿದೆ.

ಶಾಸಕರ ನಿಧಿಯ ₹ 60 ಲಕ್ಷ ಅನುದಾನ, ದಾನಿಗಳ ಸಹಕಾರದಿಂದ ಕಟ್ಟಡ ರೂಪುಗೊಂಡಿದೆ ಎಂದರು. ಸುಸಜ್ಜಿತ ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಹೀಗೆ ಅನೇಕ ಸೌಕರ್ಯಗಳು ಇವೆ. ಶಿಕ್ಷಕರು ಮಕ್ಕಳಿಗೆ ಉತ್ತಮ ರೀತಿ ಪಾಠ ಮಾಡಬೇಕು ಎಂದು ಮನವಿ ಮಾಡಿದರು.

***

ನಯಾಪೈಸೆ ಖರ್ಚು ಮಾಡಿಲ್ಲ
‘ಗ್ರಾಮದ ಜನರು ಕಾರ್ಯಕ್ರಮಕ್ಕೆ ನನ್ನ ಜೇಬಿನಿಂದ ನಯಾಪೈಸೆಯನ್ನೂ ಖರ್ಚು ಮಾಡಿಸಿಲ್ಲ. ಶಾಮಿಯಾನ, ಧ್ವನಿವರ್ಧಕಗಳನ್ನು ಗ್ರಾಮದಲ್ಲಿರುವ ಶಾಮಿಯಾನ್, ಮೈಕ್‌ಸೆಟ್ ಮಾಲೀಕರೆ ಉಚಿತವಾಗಿ ಕೊಟ್ಟಿದ್ದಾರೆ. ಪ್ರತಿ ಮನೆಯವರೂ ಕೈಲಾದಷ್ಟು ಹಣ ಸೇರಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ.  ಈ ದಿನ ಗ್ರಾಮದ ಹಬ್ಬದಂತೆ ಗೋಚರಿಸಿರುವುದು ಅವಿಸ್ಮರಣೀಯ ಕ್ಷಣ’ ಎಂದು ಶಾಸಕರು ಹೇಳಿದರು.

ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ: ಉದ್ಘಾಟನೆಗೊಂಡ ಶಾಲೆಯ ನೂತನ ಕಟ್ಟಡದ ಮೇಲ್ಭಾಗದಲ್ಲಿ ₹ 50 ಲಕ್ಷ ಮೊತ್ತದಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅತಿಥಿಗಳು ಶಂಕುಸ್ಥಾಪನೆ ನೆರವೇರಿಸಿದರು.

***

ಊರ ಹಬ್ಬವಾದ ವಾರ್ಷಿಕೋತ್ಸವ 
ಗ್ರಾಮದ  ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಬಾಳೆ ಗಿಡ, ಮಾವಿನ ತಳಿರು ತೋರಣ... ವಿದ್ಯುತ್ ದೀಪಾಲಂಕಾರ...
ವಾದ್ಯವೃಂದದ ನಾದ... ಹಬ್ಬದ ಸಂಭ್ರಮದಲ್ಲಿ ಹೊಸ ಬಟ್ಟೆ ತೊಟ್ಟು ಅತ್ತಿಂದಿತ್ತ ಓಡಾಡುತ್ತಿದ್ದ ಜನರು. ಪೂರ್ಣಕುಂಭ ಹೊತ್ತು ಅತಿಥಿಗಳ ಸ್ವಾಗತಕ್ಕೆ ನಿಂತ ಮಕ್ಕಳು.

ಸೋಮವಾರ ಬುಗುಡನಹಳ್ಳಿ ಗ್ರಾಮದಲ್ಲಿ ಕಂಡ ನೋಟವಿದು. ಶಾಲೆಯ ವಾರ್ಷಿಕೋತ್ಸವದ  ಅಂಗವಾಗಿ ಇಡೀ ಗ್ರಾಮವೆ ಸಿಂಗಾರಗೊಂಡಿತ್ತು. ಸರ್ಕಾರಿ ಕಾರ್ಯಕ್ರಮವಾದರೂ ಗ್ರಾಮಸ್ಥರು ತಮ್ಮೂರಿನ ಹಬ್ಬದಂತೆ ಸಂಭ್ರಮಿಸಿದರು

ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಶಾಸಕರಿಗೆ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಆಳೆತ್ತರದ ಗುಲಾಬಿ ಮಾಲೆ ಹಾಕಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT