ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಪಾಡಲು ಎಲ್ಲರೂ ಕೈಜೋಡಿಸಿ

ಸ್ವಚ್ಛ ಭಾರತ ಅಭಿಯಾನ ಭಾಗವಾಗಿ ‘ಯುಗ ಪುರುಷ ಮಹಾತ್ಮರ ಮಹಾತ್ಮ’ ನಾಟಕ ಪ್ರದರ್ಶನ
Last Updated 11 ಜುಲೈ 2017, 9:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ಮಹಾತ್ಮಾ ಗಾಂಧೀಜಿ ಅವರ ಆಧ್ಯಾತ್ಮಿಕ ಮಾರ್ಗದರ್ಶಕರಾದ ರಾಜಚಂದ್ರಜೀ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಗುಜರಾತಿನ ಧರ್ಮಾಪುರದ ರಾಜಚಂದ್ರ ಮಿಷನ್‌ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಪ್ರದರ್ಶಿಸುತ್ತಿರುವ ‘ಯುಗ ಪುರುಷ ಮಹಾತ್ಮರ ಮಹಾತ್ಮ’ ನಾಟಕವನ್ನು ‘ಸ್ವಚ್ಛ ಭಾರತ ಅಭಿಯಾನ’ದ ಭಾಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಲಾಗಿತ್ತು.

ನಾಟಕಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ‘ಸ್ವಚ್ಛತಾ ಪ್ರತಿಜ್ಞಾ ವಿಧಿ’ ಬೋಧಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಜಿಲ್ಲೆಯನ್ನು ಅತಿ ಶೀಘ್ರದಲ್ಲಿಯೇ ಬಯಲು ಬರ್ಹಿದೆಸೆ ಮುಕ್ತಗೊಳಿಸಲು ಪ್ರತಿಯೊಬ್ಬರೂ ಜಿಲ್ಲಾ ಪಂಚಾಯಿತಿಯೊಂದಿಗೆ ಕೈಜೋಡಿಸಬೇಕು’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಗುರಿಗೆ ಬೆಂಬಲವಾಗಿ ರಾಜ್ಯ ಸರ್ಕಾರ ಕೂಡ ರಾಜ್ಯವನ್ನು 2018ರ ಒಳಗೆ ಬಯಲು ಬರ್ಹಿದೆಸೆ ಮುಕ್ತಗೊಳಿಸಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಪ್ರೇರಣೆ ಮೂಡಿಸಲು ರಾಜ್ಯದಾದ್ಯಂತ ಈ ನಾಟಕ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕೇವಲ ಶೇ24 ರಷ್ಟು ಮನೆಗಳಲ್ಲಿ ಮಾತ್ರ ವೈಯಕ್ತಿಕ ಶೌಚಾಲಯವಿತ್ತು. ಸದ್ಯ ಅದರ ಪ್ರಮಾಣ ಶೇ79ಕ್ಕೆ ಏರಿಕೆಯಾಗಿದೆ. ಆದಷ್ಟು ಬೇಗ ನಾವು ಕೂಡ ಜಿಲ್ಲೆಯಲ್ಲಿ ಶೇ100 ರಷ್ಟು ಪ್ರಗತಿ ಸಾಧಿಸಲು ಶ್ರಮಿಸಬೇಕಾಗಿದೆ’ ಎಂದರು.

‘ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಶೇ 100 ಪ್ರಗತಿ ಸಾಧಿಸಲು ಕೆಲವೇ ಶೌಚಾಲಯಗಳನ್ನು ನಿರ್ಮಿಸುವ ಕೆಲಸ ಬಾಕಿ ಇದೆ. ಗುರಿ ಸಾಧಿಸಲು ಪ್ರತಿಯೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಳ್ಳಿಯೊಂದು ಬಯಲು ಬರ್ಹಿದೆಸೆ ಮುಕ್ತವಾದರೆ ಹೆಣ್ಣು ಮಕ್ಕಳು, ಮಕ್ಕಳು ನಿತ್ಯ ಎದುರಿಸುವ ತೊಂದರೆಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ’ ಎಂದರು.

ಕೇಶವರೆಡ್ಡಿ ಮಾತನಾಡಿ, ‘ಪ್ರತಿ  ಪಂಚಾಯಿತಿಯಲ್ಲಿ 70–80 ರಷ್ಟು ಶೌಚಾಲಯ ನಿರ್ಮಾಣ ಪ್ರಗತಿಯಾಗಿದೆ. ಅದನ್ನು ಶೇ100ರಷ್ಟು ಮಾಡಲು ಶ್ರಮಿಸಬೇಕಾಗಿದೆ. ಜಿಲ್ಲೆಯನ್ನು ಬಯಲು ಬರ್ಹಿದೆಸೆ ಮುಕ್ತಗೊಳಿಸಿ ನಾವು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆಯಬೇಕು’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ಜಿ.ಪಂ ಸದಸ್ಯ ರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಪ್ರಕಾಶ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಸಿದ್ದರಾಮಯ್ಯ, ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್.ನಾಗೇಶ್ ಉಪಸ್ಥಿತರಿದ್ದರು.

***

ಅಧ್ಯಾತ್ಮ ಸಂಬಂಧದ ರೂಪಕ
ಕಥೆಗಾರ ಉತ್ತಮ್ ಗಡಾ ಅವರ ಕಥೆಯನ್ನು ಆಧರಿಸಿದ ‘ಯುಗ ಪುರುಷ ಮಹಾತ್ಮರ ಮಹಾತ್ಮ’ ನಾಟಕ ಮೋಹನ್‌ದಾಸ್ ಗಾಂಧಿ ಅವರನ್ನು ಮಹಾತ್ಮರನ್ನಾಗಿ ಪರಿವರ್ತಿಸಿದ ಒಂದು ಆಧ್ಯಾತ್ಮಿಕ ಸಂಬಂಧದ ರೂಪಕವಾಗಿದೆ.

ಮೂಲ ರಾಜೇಶ್ ಜೋಶಿ ಅವರ ನಿರ್ದೇಶನದ ಈ ನಾಟಕವನ್ನು ನಿರ್ದೇಶಕ ಕೃಷ್ಣ ಹೆಬ್ಬಾಳೆ ಅವರು ಕನ್ನಡಕ್ಕೆ ಅನುವಾದಿಸಿ ನಿರ್ದೇರ್ಶಿಸಿದ್ದಾರೆ. ನಾಟಕಕ್ಕೆ ಸಚಿನ್ ಜಿಗರ್‌ ಅವರ ಸಂಗೀತವಿದೆ. ಈಗಾಗಲೇ ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ ಭಾಷೆಗಳಲ್ಲಿ ಭಾಷಾಂತರಗೊಂಡು ಪ್ರದರ್ಶನ ಕಾಣುತ್ತಿರುವ ಈ ರೂಪಕ ಇಂಗ್ಲಿಷ್‌, ತಮಿಳು ಸೇರಿದಂತೆ ಇನ್ನೂ ಹಲವು ಭಾಷೆಗಳಿಗೆ ಭಾಷಾಂತರಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT