ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ್ಯವಲ್ಲದ ಜಾಗದಲ್ಲಿ ಕಾಲೇಜು ಕಟ್ಟಡ!

ಜಿಲ್ಲಾಧಿಕಾರಿಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ
Last Updated 11 ಜುಲೈ 2017, 9:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶದಲ್ಲಿ ಸಸ್ಯೋದ್ಯಾನಕ್ಕೆ ಮೀಸಲಿಟ್ಟ ಜಾಗ ಕಟ್ಟಡಗಳನ್ನು ನಿರ್ಮಿಸಲು ಯೋಗ್ಯವಲ್ಲ ಎಂದು ಎಂಟು ವರ್ಷಗಳ ಹಿಂದೆಯೇ ಕರ್ನಾಟಕ ಗೃಹ ಮಂಡಳಿ ಮುಖ್ಯ ಎಂಜಿನಿಯರ್‌ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸೂಕ್ತವಲ್ಲದ ಆ ಜಾಗದಲ್ಲಿಯೇ ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸುವ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿವೆ.

ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ವೈದ್ಯಕೀಯ ಕಾಲೇಜಿಗೆ 22 ಎಕರೆ ಮಂಜೂರು ಮಾಡಿರುವ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ಈಗಾಗಲೇ ಲೋಕಾಯುಕ್ತ ದಲ್ಲಿ ಕಾನೂನು ಸಮರ ನಡೆಸಿದೆ.

ಈ ನಡುವೆಯೇ ಆರೋಗ್ಯ ಇಲಾಖೆ ಜಾಗದ ಪೂರ್ವಾಪರ ವಿಚಾರಿಸದೆ ‘ಯೋಗ್ಯವ ಲ್ಲದ ಜಾಗದಲ್ಲಿ’ ಕಟ್ಟಡ ನಿರ್ಮಿಸಲು ಹೊರಟಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಮ್ಮ ನಿರ್ಧಾರ ಗಳನ್ನು ಪುನರ್‌ ಪರಿಶೀಲಿಸಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಏನಾಗಿತ್ತು ಹಿಂದೆ?: ಕೆರೆ ಪ್ರದೇಶದಲ್ಲಿ ಸಸ್ಯೋದ್ಯಾನಕ್ಕೆ ಮೀಸಲಿಟ್ಟ 70 ಎಕರೆ ಜಾಗದ ಪೈಕಿ ವೈದ್ಯಕೀಯ ಕಾಲೇಜಿಗೆ ಜಾಗ ನೀಡಲಾಗಿದೆ. ಆದರೆ 2007ರ ಡಿಸೆಂಬರ್ 10 ರಂದು ರಾಜ್ಯ ಸರ್ಕಾರ ಆ ಜಾಗವನ್ನು ಮೊದಲು ಜಿಲ್ಲಾ ಕಚೇರಿ ನಿರ್ಮಾಣಕ್ಕಾಗಿ ನೀಡಿ ಅಧಿಸೂಚನೆ ಹೊರಡಿಸಿತ್ತು. 2009ರ ಸೆಪ್ಟೆಂಬರ್‌ 15 ರಂದು ಆ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಅವರಿಂದ ಚಾಲನೆ ಕೊಡಿಸಲು ಮುಹೂರ್ತ ಕೂಡ ನಿಗದಿಯಾಗಿತ್ತು. ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಆ ಕಾರ್ಯಕ್ರಮ ರದ್ದಾಗಿತ್ತು.

ಅದೇ ತಿಂಗಳ 29 ರಂದು ಜಿಲ್ಲಾಡಳಿತ ಭವನ ನಿರ್ಮಿಸಲು ಗುರುತಿಸಿದ ಜಾಗಕ್ಕೆ ಭೇಟಿ ನೀಡಿದ ಕರ್ನಾಟಕ ಗೃಹ ಮಂಡಳಿ ಮುಖ್ಯ ಎಂಜಿನಿಯರ್‌ ಅವರು ‘ಉದ್ದೇಶಿತ ಜಾಗಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇಲ್ಲಿನ ಮಣ್ಣಿನ ಗುಣಮಟ್ಟ ಸರಿಯಾಗಿಲ್ಲ. ಒಂದೊಮ್ಮೆ ಕಟ್ಟಡ ಕಟ್ಟಿದರೆ ಕೆರೆಗೆ ನೀರು ಬರುವ ಫೀಡರ್‌ ಚಾನೆಲ್‌ಗಳ ಮಾರ್ಗ ಬದಲಾಯಿಸಬೇಕಾಗುತ್ತದೆ.

ತಗ್ಗು ಪ್ರದೇಶವನ್ನು ಎತ್ತರಿಸುವುದ ಕ್ಕಾಗಿಯೇ ಸುಮಾರು ₹ 40 ಕೋಟಿ ಖರ್ಚು ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕೆರೆಯಲ್ಲಿ ಕಟ್ಟಡ ಕಟ್ಟುವ ವಿಚಾರದಲ್ಲಿ ಪರಿಸರವಾದಿಗಳು ನ್ಯಾಯಾಲಯದಲ್ಲಿ ದಾವೆ ಹೂಡ ಬಹು ದಾದ್ದರಿಂದ ಇದು ಕಟ್ಟಡ ಕಟ್ಟಲು ಯೋಗ್ಯ ಜಮೀನಲ್ಲ. ಆದ್ದರಿಂದ ಕಟ್ಟಡಕ್ಕೆ ಗುರುತಿಸಿರುವ ಜಾಗ ಬದಲಾ ವಣೆ ಮಾಡುವ ಅಗತ್ಯವಿದೆ’ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದರು.

ಇದೇ ವರದಿ ಉಲ್ಲೇಖಿಸಿ 2009ರ ಅಕ್ಟೋಬರ್‌ 6 ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದ ಅಂದಿನ ಜಿಲ್ಲಾಧಿಕಾರಿ ಅನ್ವರ್‌ ಪಾಷಾ ಅವರು, ಕೆರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸುವುದು ಯೋಗ್ಯವಲ್ಲವೆಂದು ಎಂಜಿನಿಯರ್‌ ಅಭಿಪ್ರಾಯಪಟ್ಟಿರುವ ಕಾರಣಕ್ಕೆ ಉದ್ದೇಶಿತ ಕಟ್ಟಡಕ್ಕೆ ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂಬರ್ 158 ರಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 10 ಎಕರೆ 20 ಗುಂಟೆ ಜಾಗ ಮತ್ತು ಅದಕ್ಕೆ ಹೊಂದಿಕೊಂಡಿದ್ದ 11 ಖಾಸಗಿ ಜಮೀನು ಎಕರೆ ಸೇರಿದಂತೆ 21 ಎಕರೆ 20 ಗುಂಟೆ ಪಡೆದುಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕಾರ್ಯ ದರ್ಶಿ ಅವರ ಅವಗಾಹನೆಗೆ ತಂದಿದ್ದರು.

ಜಿಲ್ಲಾಡಳಿತ ಭವನಕ್ಕೆ ಜಾಗ ನೀಡಿದ್ದಕ್ಕೆ ಪ್ರತಿಯಾಗಿ ತೋಟಗಾರಿಕೆ ಇಲಾಖೆಗೆ ಕೆರೆ ಪ್ರದೇಶದಲ್ಲಿನ ಜಾಗವನ್ನು ಸರ್ಕಾರ ವರ್ಗಾಯಿಸಿತ್ತು. 2015ರ ಆಗಸ್ಟ್‌ 14 ರಂದು ಆರೋಗ್ಯ ಸಚಿವರು ಪತ್ರ ಬರೆದು ಸಸ್ಯೋದ್ಯಾನಕ್ಕೆ ಮೀಸಲಿಟ್ಟ ಜಾಗದ ಪೈಕಿ ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಜಮೀನು ಮಂಜೂರು ಮಾಡುವಂತೆ ಪತ್ರ ಬರೆದಿದ್ದರು. ಬಳಿಕ ಕಂದಾಯ ಇಲಾಖೆ ವೈದ್ಯಕೀಯ ಕಾಲೇಜಿನ ಕಟ್ಟಡ, ವಸತಿ ಗೃಹಗಳ ನಿರ್ಮಾಣಕ್ಕೆ ಅಗತ್ಯವಾದ 22 ಎಕರೆ ಜಮೀನನ್ನು ಉಚಿತವಾಗಿ ವೈದ್ಯಕೀಯ  ಶಿಕ್ಷಣ ಇಲಾಖೆಗೆ ಮಂಜೂರು ಮಾಡಿತ್ತು.

‘ಕೆರೆ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸ್ಪಷ್ಟ ಆದೇಶ ನೀಡಿವೆ. ಆದ್ದರಿಂದ ಕೆರೆಯಲ್ಲಿ ಉದ್ಯಾನ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮಾಡಿರುವ ಭೂ ಮಂಜೂರಾತಿ ರದ್ದುಪಡಿಸಿ, ಕೆರೆ ಪುನಶ್ಚೇತನಗೊಳಿಸ ಬೇಕು’ ಎಂಬುದು  ಜಿಲ್ಲಾಡಳಿತದ ಕ್ರಮದ ವಿರುದ್ಧ ಕಾನೂನು ಸಮರ ನಡೆಸಿರುವ ಜನಾಧಿ ಕಾರ ಸಂಘರ್ಷ ಪರಿಷತ್ತಿನ ಸದಸ್ಯ ಬಿ.ಎಸ್.ನಾರಾಯಣ ಅವರ ಆಗ್ರಹ.

‘ಸದ್ಯ ಗುರುತಿಸಿರುವ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಿಸಬೇಕೇ, ಬೇಡವೇ ಎನ್ನುವುದು ಆರೋಗ್ಯ ಇಲಾಖೆ ಎಂಜಿನಿಯರ್‌ಗಳಿಗೆ ಬಿಟ್ಟ ವಿಚಾರ. ಲೋಕಾಯುಕ್ತ ನ್ಯಾಯಾಲಯ ನೀಡುವ ಆದೇಶದಂತೆ  ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್.

***

ಮಣ್ಣು ಪರೀಕ್ಷೆಗೂ ಮುನ್ನವೇ ವಿನ್ಯಾಸ!

ಉದ್ದೇಶಿತ ಜಾಗ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾಗಿದೆಯೇ ಎನ್ನುವ ಕುರಿತು ಆರೋಗ್ಯ ಇಲಾಖೆ ಎಂಜಿನಿಯರ್‌ ವಿಭಾಗ ಇಲ್ಲಿಯವರೆಗೆ ಮಣ್ಣು ಪರೀಕ್ಷೆ ನಡೆಸಿಲ್ಲ. ಜಿಲ್ಲಾಡಳಿತ ತೋರಿಸಿದ ಜಾಗವನ್ನು ಸಮೀಕ್ಷೆ ನಡೆಸಿದ ಎಂಜಿನಿಯರ್‌ಗಳು ಕಾಲೇಜು ಕಟ್ಟಡ ವಿನ್ಯಾಸ ಸಿದ್ಧಪಡಿಸಿಕೊಡುವಂತೆ ರಾಜ್ಯ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ ಅವರಿಗೆ ಜಾಗದ ನಕ್ಷೆ ಕಳುಹಿಸಿದ್ದಾರೆ!

‘ಕಾಲೇಜು ಕಟ್ಟಡ ನಿರ್ಮಿಸಲು ಗುರುತಿಸಿರುವ ಜಾಗ ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತದೆ. ಅದು ಯೋಗ್ಯವಲ್ಲದ ಜಾಗ ಎಂದು ಈ ಹಿಂದೆ ಗೃಹ ಮಂಡಳಿ ಎಂಜಿನಿಯರ್ ವರದಿ ನೀಡಿದ್ದು ಈವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕಟ್ಟಡ ಕಟ್ಟುವ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಆರೋಗ್ಯ ಇಲಾಖೆ ಕೋಲಾರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ಎನ್.ಕೃಷ್ಣಮೂರ್ತಿ ತಿಳಿಸಿದರು.

***

ಕೆರೆ ಪ್ರಾಧಿಕಾರದಿಂದಲೂ ಆಕ್ಷೇಪ

ಕರ್ನಾಟಕ ಗೃಹ ಮಂಡಳಿ ಆಯುಕ್ತರು 2009ರ ಸೆಪ್ಟೆಂಬರ್ 10 ರಂದು ಅಮಾನಿ ಗೋಪಾಲಕೃಷ್ಣ ಕೆರೆ ಅಂಗಳದಲ್ಲಿ ಜಿಲ್ಲಾಡಳಿತ ಕಚೇರಿ ಕಟ್ಟಡ ನಿರ್ಮಿಸಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವಂತೆ ಕೋರಿ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಅಕ್ಟೋಬರ್‌ 3 ರಂದು ಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು ‘ಉದ್ದೇಶಿತ ಜಾಗವು ಕೆರೆಗೆ ಸೇರಿದ್ದಲ್ಲ. ಜವುಗು ಭೂಮಿಯಾಗಿದೆ.

ಹೆದ್ದಾರಿಗೆ ಕೂಡ ಕೆರೆ ಭೂಮಿ ಬಳಕೆಯಾಗಿದೆ. ಜತೆಗೆ ರೈತರಿಂದ ಒತ್ತುವರಿಯಾಗಿದೆ. ಆದ್ದರಿಂದ ಇಲ್ಲಿ ಕಟ್ಟಡ ನಿರ್ಮಿಸುವುದು ಬೇಡ. ಇದಕ್ಕೆ ಪರ್ಯಾಯವಾಗಿ ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಗೆ ಸೇರಿದ ಜಾಗ ಪಡೆಯಿರಿ’ ಎಂದು ಅಕ್ಟೋಬರ್‌ 13ರಂದು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರು.

***

ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜಾಗದ ಯೋಗ್ಯತೆ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳಬೇಕು.
ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT