ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರುಚಿ’ ಕೆಡಿಸಿದ ಚಿಕನ್ ಬೆಲೆ ಏರಿಕೆ

ಕೋಳಿ ಸಾಕಾಣಿಕೆ ವೆಚ್ಚ ದುಬಾರಿ, ಪೂರೈಕೆ ಕಡಿಮೆ
Last Updated 11 ಜುಲೈ 2017, 10:53 IST
ಅಕ್ಷರ ಗಾತ್ರ

ಚಾಮರಾಜನಗರ: ಸಾಕಣೆ ವೆಚ್ಚ ಅಧಿಕವಾಗಿರುವ ಪರಿಣಾಮ ಕೋಳಿ ಮಾಂಸದ ಧಾರಣೆ ಏರಿಕೆಯಾಗಿದೆ. ಇದು ಬಿರಿಯಾನಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

ಮಾಂಸದ ಕೋಳಿ (ಬಾಯ್ಲರ್‌ ಕೋಳಿ) ಸಾಕಾಣಿಕೆ ದುಬಾರಿಯಾಗಿದೆ. ಸರ್ಕಾರದಿಂದ ಸೂಕ್ತ ನೆರವು ಸಿಗುತ್ತಿಲ್ಲ. ಇನ್ನೊಂದೆಡೆ ಸಾಕಾಣಿಕೆ ಕೇಂದ್ರಗಳಲ್ಲಿ ನೀರು ಹಾಗೂ ಮೇವಿನ ಕೊರತೆ ಎದುರಾಗಿದೆ. ದುಬಾರಿ ವಿದ್ಯುತ್‌ ವೆಚ್ಚ ಕೂಡ ಸಂಕಷ್ಟ ಹೆಚ್ಚಿಸಿದೆ ಎನ್ನುವುದು ಸಾಕಾಣಿಕೆದಾರರ ನೋವು. 

ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಇದರಿಂದ ಸಹಜವಾಗಿಯೇ ದರ ಏರಿದ್ದು, ಗ್ರಾಹಕರು ತತ್ತರಿಸುವಂತಾಗಿದೆ.

ಜಿಲ್ಲೆಯಲ್ಲಿ ಮೊಟ್ಟೆ ಕೋಳಿ ಮಾರಾಟ, ಸಾಕಾಣಿಕೆ ಅತ್ಯಲ್ಪ. ಬಾಯ್ಲರ್‌ ಕೋಳಿಗಳ ಮಾರಾಟ ಹೆಚ್ಚು. ಒಂದು ತಿಂಗಳ ಹಿಂದೆ 1 ಕೆ.ಜಿ ಕೋಳಿ ಮಾಂಸಕ್ಕೆ ₹ 140 ದರ ಇತ್ತು. ಈಗ ₹ 180ರಿಂದ 200ಕ್ಕೆ ಮುಟ್ಟಿದೆ.

1 ಕೆ.ಜಿ ಸ್ಕಿನ್‌ಲೆಸ್‌ ಕೋಳಿ ಮಾಂಸದ ಬೆಲೆ ₹ 160 ಇತ್ತು. ಅದು ಈಗ ₹ 200ರಿಂದ ₹ 220ಕ್ಕೆ ಮುಟ್ಟಿದೆ. ಕೋಳಿ ಪೂರೈಕೆ ಕಡಿಮೆ ಯಾದರೆ ಬೆಲೆ ಮತ್ತಷ್ಟು ಏರಿಕೆಯಾಗು ವುದು ನಿಶ್ಚಿತ ಎನ್ನುತ್ತಾರೆ ವ್ಯಾಪಾರಿಗಳು.

ಜಿಲ್ಲಾ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಕೋಳಿ ಮಾಂಸ ಮಾರಾಟದ ಅಂಗಡಿಗಳಿವೆ. ಪ್ರತಿ ಅಂಗಡಿಯಲ್ಲೂ ದಿನವೊಂದಕ್ಕೆ ಸರಾಸರಿ 300ರಿಂದ 600 ಕೆ.ಜಿ.ವರೆಗೆ ಮಾಂಸ ಮಾರಾಟ ವಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಪ್ರತಿದಿನ 8ರಿಂದ 10 ಟನ್‌ನಷ್ಟು ಕೋಳಿ ಮಾಂಸ ಮಾರಾಟವಾಗುತ್ತದೆ. ಬೇಡಿಕೆ ದಿನಗಳಲ್ಲಿ ಈ ಪ್ರಮಾಣ ದುಪ್ಪಟ್ಟಾಗುತ್ತದೆ ಎಂದು ವ್ಯಾಪಾರಿ ರಾಜೇಶ್‌ ತಿಳಿಸಿದರು.

ಪೂರೈಕೆ ಇಳಿಕೆ: ಬಾಯ್ಲರ್‌ ಕೋಳಿಯು 42 ದಿನಕ್ಕೆ ಮಾರಾಟಕ್ಕೆ ಬರುತ್ತದೆ. ಜಿಲ್ಲೆಯ ವಿವಿಧೆಡೆ ಕೋಳಿ ಸಾಕಾಣಿಕೆ ಕೇಂದ್ರಗಳಿವೆ. ಸುಗುಣ ಕಂಪೆನಿಯು ಸಾಕಾಣಿಕೆ ದಾರರಿಗೆ ಕೋಳಿ ಮರಿ, ಆಹಾರ ಪೂರೈಸುತ್ತದೆ. ಬಳಿಕ ಅವರಿಂದ ನೇರವಾಗಿ ಖರೀದಿಸಿ ಮಾರುಕಟ್ಟೆಗೆ ಪೂರೈಸುತ್ತದೆ.

ಆದರೆ, ದುಬಾರಿ ಉತ್ಪಾದನಾ ವೆಚ್ಚ ಮತ್ತು ನಿರ್ವಹಣೆ ಸಮಸ್ಯೆಯಿಂದಾಗಿ ಸಾಕಾಣಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಸಾಕಾಣಿಕೆ ಕೇಂದ್ರಗಳು ಬಾಗಿಲು ಮುಚ್ಚಿವೆ. ಈಗ ನಂಜನಗೂಡು ಹಾಗೂ ತಮಿಳುನಾಡಿನಿಂದ ಜಿಲ್ಲೆಗೆ ಕೋಳಿ ಪೂರೈಕೆಯಾಗುತ್ತಿವೆ.

‘ಕಂಪೆನಿಯಿಂದಲೇ ವ್ಯಾಪಾರಿಗಳಿಗೆ 1 ಕೆ.ಜಿ. ಜೀವದ ಕೋಳಿಗೆ ₹ 125 ನೀಡುತ್ತಾರೆ. ಅದನ್ನು ಸ್ವಚ್ಛಗೊಳಿಸಿ ನಾವು ₹ 180ಕ್ಕೆ ಮಾರಾಟ ಮಾಡುತ್ತೇವೆ. ಮಾರಾಟದಲ್ಲಿ ಲಾಭವೂ ಸಿಗುವುದಿಲ್ಲ. ಕೋಳಿಗಳ ಪೂರೈಕೆ ಸಹ ಕಡಿಮೆಯಾಗಿದೆ’ ಎಂದು ಚಿಕನ್‌ ಸೆಂಟರ್‌ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

***

ನಾನು ವಾರಕ್ಕೆ 2 ಬಾರಿ ಕೋಳಿ ಮಾಂಸ ಕೊಳ್ಳುತ್ತಿದ್ದೆ. ಆದರೆ, ಈಗ ದರ ಏರಿಕೆಯಾಗಿರುವುದರಿಂದ ವಾರಕ್ಕೊಮ್ಮೆ ಚಿಕನ್‌ ಖರೀದಿಸುತ್ತಿದ್ದೇನೆ
ಮಹೇಶ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT