ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ಕಚ್ಚಿಸಿಕೊಳ್ಳದ ರಾತ್ರಿಯ ಅವಿಸ್ಮರಣೀಯ ನೆನಪು

ಸಿಂಗಪುರ ಪ್ರವಾಸಕ್ಕೆ ಹೋಗಿ ಬಂದಿರುವ ಶಿರಸಿಯ ಪೌರ ಕಾರ್ಮಿಕರ ಹೇಳಿಕೆ: ಸ್ವರ್ಗಕ್ಕೆ ಹೋಗಿ ಬಂದ ಅನುಭವ
Last Updated 11 ಜುಲೈ 2017, 12:01 IST
ಅಕ್ಷರ ಗಾತ್ರ

ಶಿರಸಿ: ‘ಒಂದೇ ಒಂದು ಸೊಳ್ಳೆ ಕಚ್ಚಿಸಿಕೊಳ್ಳದೇ ಆ ನಾಲ್ಕು ರಾತ್ರಿಗಳನ್ನು ಕಳೆದ ದಿನಗಳು ಅವಿಸ್ಮರಣೀಯ. ಜೀವನದಲ್ಲಿ ಮೊದಲ ಬಾರಿಗೆ ಸ್ವರ್ಗಕ್ಕೆ ಹೋಗಿ ಬಂದ ಅನುಭವವಾಯಿತು. ನಮ್ಮೂರಿನಲ್ಲಿ ಈ ಸ್ವರ್ಗ ಸೃಷ್ಟಿಸಲು ಸಾಧ್ಯವಾ ಎಂದು ಪರಸ್ಪರ ಚರ್ಚಿಸಿದೆವು’ – ಹೀಗೆಂದು ಉದ್ಘಾರ ಹೇಳಿದವರು ಸಿಂಗಪುರ ಪ್ರವಾಸಕ್ಕೆ ಹೋಗಿದ್ದ ನಗರದ ಪೌರಕಾರ್ಮಿಕರು.

ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಸಿಂಗಪುರದ ಘನತ್ಯಾಜ್ಯ ವಿಲೇವಾರಿ, ನಗರ ನೈರ್ಮಲ್ಯೀಕರಣ ಅಧ್ಯಯನಕ್ಕೆ ಹೋಗಿದ್ದ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆಗಳ ಆಯ್ದ 38 ಪೌರಕಾರ್ಮಿಕರು ಭಾನುವಾರ ಬೆಂಗಳೂರಿಗೆ ಮರಳಿ ಬಂದಿದ್ದಾರೆ.

ಸೋಮವಾರ ಬೆಳಿಗ್ಗೆ ಮನೆ ತಲುಪಿರುವ ಶಿರಸಿ ನಗರಸಭೆಯ ಪೌರಕಾರ್ಮಿಕರಾದ ಅಣ್ಣಪ್ಪ ಶಂಕರ ರಾಜಾ ಹಾಗೂ ಮಾಸ್ತಿ ರಾಮಾ ಭಂಗಿ ‘ಪ್ರಜಾವಾಣಿ’ ಕಚೇರಿಗೆ ಬಂದು ತಮ್ಮ ಅನುಭವ ಹೇಳಿಕೊಂಡರು.

‘ಇಬ್ಬರು ಅಧಿಕಾರಿಗಳ ಜೊತೆಗೂಡಿ ನಾವು 36 ಪುರುಷ ಹಾಗೂ ಇಬ್ಬರು ಮಹಿಳಾ ಪೌರ ಕಾರ್ಮಿಕರು ಸಿಂಗಪುರಕ್ಕೆ ಹೋಗುವ ವಿಮಾನ ಹತ್ತಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಿದ ಭಜನ್‌ ಸಿಂಗ್ ನೇತೃತ್ವದ ತಂಡ ರಾಜಾತಿಥ್ಯ ನೀಡಿತು. ಮೊದಲ ಬಾರಿಗೆ ಐಷಾರಾಮಿ ಹೋಟೆಲ್‌ನಲ್ಲಿ ಉಳಿದ ಕ್ಷಣವಂತೂ ಮರೆಯಲಾಗದ ನೆನಪು.

ಮರುದಿನ ಬೆಳಿಗ್ಗೆ ಸಿಂಗಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ವರ್ಡ್ ಟಾಯ್ಲೆಟ್ ಆರ್ಗನೈಸೇಷನ್‌’ ಚಟುವಟಿಕೆ ಕುರಿತು ಪಿಪಿಟಿ ದೃಶ್ಯಾವಳಿ ವೀಕ್ಷಿಸಿದೆವು. ಅಲ್ಲಿಯ ಭಾಷೆ ನಮಗೆ ಅರ್ಥವಾಗದಿದ್ದರೂ ಕರ್ನಾಟಕದಿಂದ ಹೋಗಿದ್ದ ಅಧಿಕಾರಿಗಳು ಕನ್ನಡಕ್ಕೆ ಅನುವಾದಿಸಿ ನಮಗೆ ತಿಳಿಸಿದರು’ ಎಂದು ಅಣ್ಣಪ್ಪ ರಾಜಾ ಹೇಳಿದರು.

‘ವಿವೋಲಿಯಾದಲ್ಲಿರುವ ಕಸ ವಿಂಗಡಣೆ ಮಾಡುವ ಸ್ಥಳಕ್ಕೆ ನಾವು ಭೇಟಿ ನೀಡಿದ್ದೆವು. ಅಲ್ಲಿದ್ದ ಯಂತ್ರವು ಮೊದಲ ಎರಡು ಪೆಟ್ಟಿಗೆಗಳಲ್ಲಿ ದೊಡ್ಡ, ಸಣ್ಣ ಬಾಟಲಿಗಳು, ಮೂರನೇ ಪೆಟ್ಟಿಗೆಯಲ್ಲಿ ರಟ್ಟು, ಕಾಗದ ಹಾಗೂ ನಾಲ್ಕನೇ ಪೆಟ್ಟಿಗೆಯಲ್ಲಿ ಕಬ್ಬಿಣದ ವಸ್ತುಗಳನ್ನು ಪ್ರತ್ಯೇಕಿಸಿದ್ದನ್ನು ಕಂಡು ಅಚ್ಚರಿಯಾಯಿತು. ಪ್ರತ್ಯೇಕಗೊಳ್ಳುವ ಕಸ ಬೆಲ್ಲದ ಅಚ್ಚಿನ ಮಾದರಿಯಲ್ಲಿ ದೊಡ್ಡ ರಾಶಿಯಾಗಿ ರೂಪುಗೊಳ್ಳುತ್ತದೆ. ಅದರಲ್ಲಿ ಶೇ 70ರಷ್ಟು ಮರುಬಳಕೆಯಾಗುತ್ತದೆ.

ಉಳಿದ ತ್ಯಾಜ್ಯದಿಂದ ವಿದ್ಯುತ್ ಮತ್ತು ಗ್ಯಾಸ್ ಉತ್ಪಾದನೆಯಾಗುತ್ತದೆ ಎಂದು ಅಲ್ಲಿನ ಮುಖ್ಯಸ್ಥರು ಮಾಹಿತಿ ನೀಡಿದಾಗ ನಮಗೆ ಇನ್ನೂ ಕೇಳಿರದ ಹೊಸದೊಂದು ಲೋಕ ಕಣ್ಣೆದುರು ತೆರೆದುಕೊಂಡಿತು’ ಎಂದು ಮಾಸ್ತಿ ರಾಮಾ ಭಂಗಿ ಅನುಭವ ಬಿಚ್ಚಿಟ್ಟರು.

ಮಳೆ ನೀರಿಗೆ ತಡೆ: ‘ಸಿಂಗಪುರದಲ್ಲಿ ಬೀಳುವ ಶೇ 80ರಷ್ಟು ಮಳೆ ನೀರನ್ನು ಅಲ್ಲಿನ ಜನರು ಶೇಖರಿಸಿಟ್ಟುಕೊಳ್ಳುತ್ತಾರೆ. ನಾವು ಸ್ನಾನ ಮಾಡಿರುವ ನೀರನ್ನು ಸಹ ಮರುಬಳಕೆ ಮಾಡಲಾಗುತ್ತದೆ ಎಂದು ಕೇಳಿದಾಗ ನಂಬಲಾಗಲಿಲ್ಲ. ಅಲ್ಲಿ ವಾರಕ್ಕೊಮ್ಮೆ ಪಾದಚಾರಿ ಮಾರ್ಗ ಸ್ವಚ್ಛಗೊಳಿಸುತ್ತಾರೆ. ತಿಂಡಿ ತಿನಿಸುಗಳನ್ನು ತೆರೆದಿಟ್ಟರೂ ಒಂದು ನೊಣ ಕಾಣಸಿಗದು. ಯಂತ್ರಗಳ ಬಳಕೆ ಹೆಚ್ಚಿದರೆ ನಮ್ಮ ನಗರದಲ್ಲಿ ಅಲ್ಲಿನ ಅರ್ಧದಷ್ಟಾದರೂ ಸ್ವಚ್ಛತೆ ಕಾಪಾಡಬಹುದು.

ಆದರೆ ಜನರಲ್ಲಿ ಜಾಗೃತಿ ಮೂಡಬೇಕು. ಎಲ್ಲೆಂದರಲ್ಲಿ ಕಸ ಚೆಲ್ಲಿ ಹೋಗುವ ದುರಭ್ಯಾಸ ನಿಲ್ಲಬೇಕು ಜೊತೆಗೆ ನಮ್ಮನ್ನು ಕಳುಹಿಸಿರುವ ಸ್ಥಳೀಯ ಸಂಸ್ಥೆಗಳು ಯಂತ್ರ ಬಳಕೆಯ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಅವರು ಹೇಳಿದರು. ಇವರಿಬ್ಬರ ಜೊತೆ ದಿನೇಶ ನಾಣು ಹರಿಜನ ಹಾಗೂ ಚಂದ್ರುಕಾಂತ ಗುಡೇಅಂಗಡಿ ಸಹ ಪ್ರವಾಸಕ್ಕೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT