ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಂದ ರೈತರಿಗೆ ಸುಳ್ಳು ಮಾಹಿತಿ: ಪಾಟೀಲ

ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ವಿಚಾರ
Last Updated 12 ಜುಲೈ 2017, 5:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರೈತರ ಬೆಳೆಗೆ ಲಾಭದಾಯಕ ಬೆಲೆ ಖಾತ್ರಿಪಡಿಸುವುದಕ್ಕೆ ಸಂಬಂಧಿಸಿದ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಆದರೆ, ಸಂಸದ ಪ್ರಹ್ಲಾದ ಜೋಶಿ ಅವರು, ಇದೆಲ್ಲ ಸುಳ್ಳು ಎಂದು ಹೇಳುವ ಮೂಲಕ ರೈತರಿಗೆ ಮಂಕುಬೂದಿ ಎರಚುತ್ತಿದ್ದಾರೆ’ ಎಂದು ಜೆಡಿಎಸ್‌ ರೈತ  ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮಾಣಪತ್ರವನ್ನು ಪ್ರದರ್ಶಿಸಿದ ಅವರು, ‘ಲಾಭದಾಯಕ ಬೆಲೆ ನಿಗದಿ ಖಾತ್ರಿಗೆ ಕೋರಿ, ಭಾರತೀಯ ರೈತ ಸಂಘಟನೆಗಳ ಒಕ್ಕೂಟ (ಸಿಫಾ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದಕ್ಕೆ ಪ್ರತಿಯಾಗಿ 2014ರ ನವೆಂಬರ್‌ನಲ್ಲಿ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ, ಶಿಫಾರಸುಗಳನ್ನು ಜಾರಿ ಮಾಡಿದರೆ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಿದೆ’ ಎಂದು ಗಮನ ಸೆಳೆದರು.

‘ರಾಜ್ಯ ರೈತರ ವಿಷಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅದಕ್ಕೆ ನದಿ ಜೋಡಣೆ, ನೀರು ಹಂಚಿಕೆ ಹಾಗೂ ಸಾಲ ಮನ್ನಾ ವಿಚಾರಗಳೇ ಸಾಕ್ಷಿ. ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ರೈತರ ಹಿತ ಕಾಯಬಲ್ಲ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಿ’ ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ವಿಕಾಸ್ ಸೊಪ್ಪಿನ ಮಾತನಾಡಿ, ‘ಬೆಂಗಳೂರಿನಲ್ಲಿ ಜುಲೈ 14ರಂದು 30 ಜಿಲ್ಲೆಗಳ ಜೆಡಿಎಸ್‌ ಜಿಲ್ಲಾ ರೈತರ ಘಟಕದ ಅಧ್ಯಕ್ಷರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಪಕ್ಷದ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ರೈತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ, ಸರ್ಕಾರ ಕೋರ್ಟ್‌ಗೆ ಸಲ್ಲಿಸಿರುವ ರೈತ ವಿರೋಧಿ ಪ್ರಮಾಣಪತ್ರವನ್ನು ಎಲ್ಲರಿಗೂ ತಲುಪಿಸಲಾಗುವುದು’ ಎಂದರು.

***

ಅಹೋರಾತ್ರಿ ಪ್ರತಿಭಟನೆ
‘ಕಳಸಾ– ಬಂಡೂರಿ ಯೋಜನೆ ಜಾರಿ ಹೋರಾಟದ ಭಾಗವಾಗಿ, ಶಾಸಕ ಎನ್‌.ಎಚ್. ಕೋನರಡ್ಡಿ ನೇತೃತ್ವದಲ್ಲಿ ಸವದತ್ತಿಯ ಜೋಗುಳಬಾವಿ ಬಳಿ ಜುಲೈ 12ರಂದು ಒಂದು ದಿನ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಪಕ್ಷದ ಮುಖಂಡ ರಾಜಣ್ಣ ಕೊರವಿ ಇದೇ ವೇಳೆ ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶಗೌಡ ಸಿ. ಪಾಟೀಲ, ತಾಲ್ಲೂಕು ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಫೆಹಮಿದಾ ಕಿಲ್ಲೇದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT