ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ನೀತಿಗೆ ಖಂಡನೆ: 21ಕ್ಕೆ ಬೃಹತ್ ಸಮಾವೇಶ

Last Updated 12 ಜುಲೈ 2017, 5:07 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಮುಂದಿನ ಹೋರಾಟದ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜುಲೈ 21ರಂದು ಬೆಳಿಗ್ಗೆ 11ಕ್ಕೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ರಬಕವಿ-–ಬನ್ನಹಟ್ಟಿಯ ಎಂ.ವಿ. ಪಟ್ಟಣ ಸಂಯುಕ್ತ ಪದವಿ
ಪೂರ್ವ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಈ ಹಿಂದೆ ನರಗುಂದ-, ನವಲಗುಂದ ರೈತರ ಮೇಲೆ ಪೊಲೀಸರಿಂದ ಅಮಾನುಷ ದೌರ್ಜನ್ಯ ನಡೆದಿತ್ತು. ಈ ಶೋಷಣೆ ವಿರುದ್ಧ ರೈತ ಸಮುದಾಯವು ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಆದರೆ, ರೈತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಇದುವರೆಗೂ 40,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರಗಳೇ ಮುಖ್ಯ ಕಾರಣ. ಮಹಾದಾಯಿ ಹೋರಾಟ ನಡೆಸುತ್ತಾ ಹಲವು ದಿನಗಳೇ ಕಳೆದಿವೆ. ಆದರೆ, ಪಕ್ಷಗಳು ಇದನ್ನು ರಾಜಕಾರಣಕ್ಕೆ ಬಳಸಿಕೊಂಡು ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಪೀಡಿತ ಪ್ರದೇಶದ ರೈತರಿಗೆ ಒಂದು ಎಕರೆಗೆ ಕನಿಷ್ಠ ₹ 20 ಸಾವಿರ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಿಮ್ಮನೆ ಕ್ಷಮೆಯಾಚಿಸಲಿ: ‘ಶಾಸಕ ಕಿಮ್ಮನೆ ರತ್ನಾಕರ ಅವರು ಸಾಮಾಜಿಕ ಹೋರಾಟಗಾರ ವಕೀಲ ಶ್ರೀಪಾಲ್ ಅವರನ್ನು ಎತ್ತುವಳಿ ಹೋರಾಟಗಾರ ಎಂದು ದೂರಿರುವುದು ಸರಿಯಲ್ಲ. ಜನಪರ ಹೋರಾಟದಲ್ಲಿ ವಕೀಲ ಶ್ರೀಪಾಲ್ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಉದ್ದೇಶದಿಂದ ಹೇಳಿಕೆ ನೀಡಿರುವುದು ಸರಿಯಲ್ಲ. ಕೂಡಲೇ ಕಿಮ್ಮನೆ ಶ್ರೀಪಾಲ್ ಅವರ ಕ್ಷಮೆಯಾಚಿಸಬೇಕು’ ಎಂದು ಬಸವರಾಜಪ್ಪ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ, ಪ್ರಮುಖರಾದ ಹಿಟ್ಟೂರು ರಾಜು, ರಾಘವೇಂದ್ರ, ರಾಮಚಂದ್ರಪ್ಪ, ಶಿವಮೂರ್ತಿ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT