ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾದಿಂದ ಸಮುದಾಯ ಕಾಮಗಾರಿ ಕಡ್ಡಾಯ

Last Updated 12 ಜುಲೈ 2017, 5:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಮೂಲಕ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ  ಒಂದೊಂದು ಬೃಹತ್ ಸಮುದಾಯ ಆಧಾರಿತ ಕಾಮಗಾರಿ ಕೈಗೊಳ್ಳುವಂತೆ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಜೀವ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬರ ಪರಿಹಾರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿರುವ 189 ಗ್ರಾಮ ಪಂಚಾಯ್ತಿಗಳಲ್ಲೂ ಮುಖ್ಯಮಂತ್ರಿ ಯವರ ನಿರ್ದೇಶನದಂತೆ ನರೇಗಾ ಕಾಮಗಾರಿಗಳನ್ನು ಕೈಗೊಂಡು, ಜನರಿಗೆ ಉದ್ಯೋಗ ನೀಡಬೇಕು. ಒಂದು ಕಾಮಗಾರಿ ಸಮುದಾಯ ಆಧಾರಿತವಾಗಿ ಚಾಲ್ತಿಯಲ್ಲಿರಬೇಕು’ ಎಂದು ಸೂಚಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿತೇಶ್ ಪಾಟೀಲ್, ‘ನರೇಗಾ ಕಾಮಗಾರಿಯಲ್ಲಿ ಚಿತ್ರದುರ್ಗ ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. ಪ್ರತಿ ತಾಲ್ಲೂಕಿನಲ್ಲೂ ನರೇಗಾ ಕೆಲಸ ನಡೆಯುತ್ತಿದೆ. ಪ್ರತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸರಾಸರಿ ಐದು ಸಾವಿರದಿಂದ 10 ಸಾವಿರದವರೆಗೆ ಮಾನವ ದಿನಗಳನ್ನು ಸೃಜಿಸಿದ್ದಾರೆ. 500 ಮಾನವ ದಿನಗಳನ್ನು ಸೃಜಿಸಿದ ಹೊಳಲ್ಕೆರೆ ತಾಲ್ಲೂಕಿನ ಇಬ್ಬರು ಪಿಡಿಒಗಳನ್ನು ಅಮಾನತುಗೊಳಿಸಿದ್ದೇವೆ’ ಎಂದು ತಿಳಿಸಿದರು.

ಈ ವೇಳೆ ಸಭೆಗೆ ಬಂದ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ, ‘ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು ನಡೆಯುತ್ತಿಲ್ಲ. ನಡೆಯುತ್ತಿದ್ದರೆ, ಎಲ್ಲಿವೆ ತೋರಿಸಿ’ ಎಂದು ಸಿಇಒ ಮತ್ತು ಇಒ ಅವರನ್ನು ಪ್ರಶ್ನಿಸಿದರು.

ಕಾರ್ಯನಿರ್ವಹಣಾಧಿಕಾರಿ ಸತೀಶ್ ರೆಡ್ಡಿ, ‘ಜೆ.ಎನ್‌ ಕೋಟೆ ಭಾಗದಲ್ಲಿ 834 ಮಂದಿ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಒಪ್ಪದ ಶಾಸಕರು, ‘ಎಲ್ಲೂ ಏನೂ ನಡೆಯುತ್ತಿಲ್ಲ. ಸುಮ್ಮನೆ ಹೇಳುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿತೇಶ್ ಪಾಟೀಲ್, ‘ಕೃಷಿ ಮತ್ತಿತರ ಇಲಾಖೆಗಳಲ್ಲಿ ನರೇಗಾ ಜತೆಗೆ ಬೇರೆ ಬೇರೆ ಯೋಜನೆಯಿಂದಲೂ ಕಾಮಗಾರಿ ನಡೆಯುತ್ತಿರುತ್ತದೆ. ಚಿತ್ರದುರ್ಗ ತಾಲ್ಲೂಕಿನ ಕೆಲವು ಕಡೆ ಹೀಗೆ ಕಾಮಗಾರಿ ಚಾಲ್ತಿಯಲ್ಲಿವೆ’ ಎಂದು ವಿವರಿಸಿದರು.

ಚರ್ಚೆಗೆ ಮಧ್ಯಪ್ರವೇಶಿಸಿದ ಉಸ್ತುವಾರಿ ಕಾರ್ಯದರ್ಶಿ, ‘ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಎಲ್ಲ ಪ್ರಮುಖ ಅಧಿಕಾರಿ ಮತ್ತು ಜನಪ್ರತಿನಿಧಿಗಳ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪ್ರಸ್ತುತಪಡಿಸಿ’ ಎಂದು ಸಲಹೆ ನೀಡಿದರು.

ಸಭೆಗೆ ಬಂದ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ‘ತಾಲ್ಲೂಕಿನಲ್ಲಿ 600 ಕಿ.ಮೀ ಕಾಂಕ್ರೀಟ್ ರಸ್ತೆ  ಆಗಬೇಕಾಗಿದೆ. ಸದ್ಯ 20 ಕಿ.ಮೀ ಪೂರ್ಣಗೊಂಡಿದೆ. ಇದನ್ನೇ ಸಾಧನೆ ಎನ್ನುತ್ತಿದ್ದಾರೆ. ಸಾಮಾಜಿಕ ಲೆಕ್ಕಪರಿಶೋಧನೆಯ ವೇಳೆ ಗ್ರಾಮ ಪಂಚಾಯ್ತಿ ನರೇಗಾ ಕಾಮಗಾರಿಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಯಾವ ಗ್ರಾಮ ಪಂಚಾಯ್ತಿಗಳಲ್ಲಿಯೂ ನರೇಗಾ ಕಾಮಗಾರಿ ಆರಂಭಿಸಲು ಪಿಡಿಒಗಳು ಮುಂದಾಗುತ್ತಿಲ್ಲ. ಇದನ್ನು ಸರಿಪಡಿಸಬೇಕು’ ಎಂದು ಕಾರ್ಯದರ್ಶಿಗೆ ತಿಳಿಸಿದರು.

ಇದೇ ವೇಳೆ ನಿತೇಶ್ ಪಾಟೀಲ್, ‘ಆಡಿಟ್‌ನಿಂದಾಗಿ ಪಿಡಿಒಗಳು ಕಿರುಕುಳ ಅನುಭವಿಸುತ್ತಿದ್ದು, ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು. ಇದಕ್ಕೆ ಗೋವಿಂದಪ್ಪ ‘ಅವರೂ ಸತ್ಯ ಹರಿಶ್ಚಂದ್ರರಲ್ಲ, ಅವರಲ್ಲೂ ನ್ಯೂನತೆಗಳಿವೆ’ ಎಂದು ಮಾತು ಮುಂದುವರಿಸಿದರು.

ಈ ಮಾಹಿತಿಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಯವರು, ‘ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯೇ ಅಂತಿಮವಾಗುವುದಿಲ್ಲ. ವರದಿ ಮೇಲೆ ಜಿಲ್ಲಾ ಪಂಚಾಯ್ತಿ ಸಿಇಒ ಪರಿಶೀಲಿಸಿದ ನಂತರ ತೀರ್ಮಾನವಾಗಲಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ. ಸಾಮಾಜಿಕ ಲೆಕ್ಕಪರಿಶೋಧನಾ ವರದಿಯನ್ನು ಏಕಾಏಕಿ ಒಪ್ಪಲಾಗದು’ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿರುವ ಕುಡಿಯುವ ನೀರು, ಮೇವಿನ ಸಮಸ್ಯೆ ವಿವರಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ‘ಕೊಳವೆಬಾವಿಗಳಲ್ಲಿ ನೀರು ಆಳಕ್ಕೆ ಇಳಿದಿದೆ. ಆ ನೀರು ಎತ್ತಲು 10 ಎಚ್.ಪಿ ಮೋಟಾರ್ ಬೇಕು. ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ಹಣವಿಲ್ಲ. ತುರ್ತಾಗಿ ಹಣದ ವ್ಯವಸ್ಥೆಯಾದರೆ, ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬಹುದು’ ಎಂದು ಕಾರ್ಯದರ್ಶಿಗೆಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT