ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲಾತಿ: ಸುವರ್ಣಸೌಧಕ್ಕೆ ಮುತ್ತಿಗೆ’

ವಾಲ್ಮೀಕಿ- ನಾಯಕ ಸಮಾಜದ ಜಿಲ್ಲಾ ಮಟ್ಟದ ‘ಜನ ಜಾಗೃತಿ ಸಭೆ’: ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ
Last Updated 12 ಜುಲೈ 2017, 5:51 IST
ಅಕ್ಷರ ಗಾತ್ರ

ಹಾವೇರಿ: ‘ವಾಲ್ಮೀಕಿ -ನಾಯಕ ಸಮಾಜಕ್ಕೆ ಶೇ 7.5 ಮೀಸಲಾತಿ ನೀಡದೇ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ. ಡಿಸೆಂಬರ್ ಒಳಗಾಗಿ ಘೋಷಿಸದಿದ್ದರೆ, ಅಧಿವೇಶನ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ವಾಲ್ಮೀಕಿ -ನಾಯಕ ಸಮಾಜದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ನಡೆದ ‘ಜನಜಾಗೃತಿ ಸಭೆ’ಯಲ್ಲಿ ಅವರು ಮಾತನಾಡಿದರು. ‘ವಾಲ್ಮೀಕಿ -ನಾಯಕ ಸಮಾಜಕ್ಕೆ ಸರ್ಕಾರ ಡಿಸೆಂಬರ್ ಒಳಗಾಗಿ ಮೀಸ ಲಾತಿ ಘೋಷಿಸದಿದ್ದರೆ, ರಾಜ್ಯದ ಪ್ರತಿ ಹೋಬಳಿಯಲ್ಲಿ ಹೋರಾಟ ಪ್ರಾರಂಭಿಸಲಾಗುವುದು.

ರಾಜ್ಯದ ಕೆಲವೆಡೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರು, ನೈಜ ಅಭ್ಯರ್ಥಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಸಿದುಕೊಂಡಿದ್ದಾರೆ. ಬೀದರ್‌, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಪಂಚಾಯ್ತಿ ಗಳಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿವೆ. ಕೆಲವರು ರಾಜಕೀಯ ಪ್ರಭಾವ ಬಳಿಸಿಕೊಂಡು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ’ ಎಂದರು.

‘ಕೆಲವು ದುಷ್ಟಶಕ್ತಿಗಳು ಪರೋಕ್ಷವಾಗಿ ವಾಲ್ಮೀಕಿ ಸಮಾಜದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿಸುತ್ತಿದ್ದಾರೆ. ಈ ಬಗ್ಗೆ ನಾವು ಜಾಗೃತರಾಗಿರಬೇಕಿದೆ’ ಎಂದರು.

ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ ಮಾತನಾಡಿ, ‘ವಾಲ್ಮೀಕಿ ನಾಯಕ ಸಮಾಜಕ್ಕೆ ಸತತ ಅನ್ಯಾಯವಾಗುತ್ತಲೇ ಬಂದಿದೆ. ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಮಾಜ ವಂಚನೆಗೆ ಒಳಗಾಗಿದೆ. 1952ರಲ್ಲಿ ಸಿದ್ಧಪಡಿಸಿ ಪರಿಶಿಷ್ಟ ವರ್ಗಗಳ ಪಟ್ಟಿಯಲ್ಲಿ ಕೇವಲ ನಾಯಕ ಎಂಬ ಪದದ ಜಾತಿಯವರನ್ನು ಮಾತ್ರ ಸೇರಿಸಲಾಗಿದೆ. ನಾಯಕ ಪದದ ಪರ್ಯಾಯ ಪದಗಳಾದ ವಾಲ್ಮೀಕಿ, ಬೇಡರು, ಬೇಡ, ತಳವಾರ, ಪರಿವಾರ ಮತ್ತಿತರ ಪದಗಳನ್ನು ಸೇರಿಸಬೇಕಾಗಿದೆ’ ಎಂದರು.

‘ಧ್ವನಿ ಇಲ್ಲದ ವಾಲ್ಮೀಕಿ ಸಮಾಜ ವನ್ನು ಯಾರೂ ಕೇಳುವವರಿಲ್ಲ ಎಂದು ಕೊಂಡ ಕೆಲವು ಶಕ್ತಿಗಳು ದೌರ್ಜನ್ಯ ಮಾಡುತ್ತಲೇ ಬಂದಿವೆ. ಅವು ಗಳ ಬಗ್ಗೆ ನಾವೆಲ್ಲ ಜಾಗೃತರಾಗಬೇಕಿದೆ. ರಾಜ್ಯ ಸರ್ಕಾರ ಮೀಸಲಾತಿ ನೀಡುವಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿ ಸುತ್ತಿದೆ’ ಎಂದರು.

‘ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ನೀಡುವಲ್ಲಿ ಆಗಿರುವ ನ್ಯೂನ್ಯತೆಯನ್ನು ಸರಿಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ಆದೇಶ ನೀಡಿತ್ತು. ಈ ಆದೇಶವು ಸಮಾಜ ಕಲ್ಯಾಣ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಆದರೆ, ಆ ಬಳಿಕ ನಾಪತ್ತೆಯಾಗಿದೆ. ಇದನ್ನು ಪ್ರಶ್ನಿಸುವವರು ಯಾರು?’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಎಂ.ಈಟೇರ ಮಾತನಾಡಿ, ‘ವಾಲ್ಮೀಕಿ ಸಮಾಜಕ್ಕೆ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಜಿಲ್ಲಾಮಟ್ಟದಲ್ಲಿ ಬೃಹತ್ ಸಮಾವೇಶ ಮಾಡಿ ಹಕ್ಕೊತ್ತಾಯ ಮಾಡಲಾಗುವುದು’ ಎಂದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಹಾದಿಮನಿ, ಡಾ.ಬಿ.ಎಚ್.ವೀರಣ್ಣ, ಪ್ರಕಾಶ ಹಾದಿಮನಿ, ಶ್ರೀಧರ ದೊಡ್ಡಮನಿ, ಅಶೋಕ ತಳವಾರ, ಸೋಮನಗೌಡ ಪಾಟೀಲ, ಚಂದ್ರಣ್ಣ ಬೇಡರ, ಬಸವರಾಜ ತಳವಾರ, ಶಿವಣ್ಣ ಜವಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT