ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಎಪಿಪಿ ಸ್ಪರ್ಧೆ

Last Updated 12 ಜುಲೈ 2017, 5:57 IST
ಅಕ್ಷರ ಗಾತ್ರ

ಬೀದರ್‌: ‘2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ  ಎಪಿಪಿ ಎಲ್ಲ ಕ್ಷೇತ್ರಗಳಲ್ಲೂ  ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಪಕ್ಷ ಈಗಿನಿಂದಲೇ ಚುನಾವಣೆ ಸಿದ್ಧತೆ ಆರಂಭಿಸಿದೆ’ ಎಂದು ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿ (ಎಪಿಪಿ) ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮಾರುತಿರಾವ್‌ ಜಂಬಗಾ ಹೇಳಿದರು.

ನಗರದ ಬರೀದ್‌ಶಾಹಿ ಹೋಟೆಲ್‌ನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕ್‌ ಆಗಿ ಬಳಸಿಕೊಂಡಿವೆ. ಅಸ್ಪೃಶ್ಯ ರ ಅಭಿವೃದ್ಧಿಗೆ ಪ್ರಾಮುಖ್ಯ ನೀಡಿಲ್ಲ. ಹೀಗಾಗಿ ಅಸ್ಪೃಶ್ಯರು ಇಂದಿಗೂ ಕಡು ಬಡವರಾಗಿಯೇ ಉಳಿದಿದ್ದಾರೆ’ ಎಂದು ತಿಳಿಸಿದರು.

‘ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪರ್ಶ ಜಾತಿಗಳು ಅಸ್ಪೃಷ್ಯರ  ಸೌಲಭ್ಯಗಳನ್ನು ಕಬಳಿಸಿವೆ. ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ನಾಲ್ಕು ಜಾತಿಗಳನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಿದ ನಂತರ ಅಸ್ಪೃಶ್ಯರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಜಾತಿವಾರು ಫಲಾನುಭವಿಗಳ ಅಂಕಿಅಂಶಗಳನ್ನು ಗಮನಿಸಿದರೆ ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಸ್ಪ ರ್ಶ ಜಾತಿಯವರೇ ಪಡೆದುಕೊಂಡಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌  ಅಸ್ಪೃಶ್ಯರ ಏಳಿಗೆಗೆ ಶ್ರಮಿಸಿಲ್ಲ. ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪರ್ಶ ಜಾತಿಯ ಮುಖಂಡರಿಗೆ ಮಾತ್ರ ರಾಜಕೀಯ ಅಧಿಕಾರ ಕೊಟ್ಟಿವೆ. ಕೆಳ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ರಾಜಕೀಯ ಅಧಿಕಾರವನ್ನು ಪಡೆಯಲು ಎಪಿಪಿ ಹೋರಾಟ ನಡೆಸಲಿದೆ’ ಎಂದು ತಿಳಿಸಿದರು.

‘ಸರ್ಕಾರದ ಅಂಕಿಅಂಶಗಳ ಪ್ರಕಾರ 6 ಲಕ್ಷ ನಕಲಿ ಜಾತಿ ಪ್ರಮಾಣಪತ್ರ ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ 40 ಸಾವಿರ ಬ್ಯಾಕ್‌ಲಾಗ್‌ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಕ್ರಮಕೈಗೊಂಡಿಲ್ಲ. ದಲಿತರು ನಿರುದ್ಯೋಗ ಸಮಸ್ಯೆಯಿಂದ ಅಲೆದಾಡುತ್ತಿದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆರೋಪಿಸಿದರು.

‘ಪರ್ಯಾಯ ಇಲ್ಲದ ಕಾರಣ ಅಸ್ಪೃಶ್ಯರು ಇಷ್ಟು ವರ್ಷಗಳ ವರೆಗೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸಹ ಅಧಿಕಾರದ ಚುಕ್ಕಾಣಿ ಹಿಡಿಯಲು ಅಸ್ಪೃಶ್ಯರನ್ನು  ಬಳಸಿಕೊಂಡಿವೆ. ಬಿಜೆಪಿ ಮುಖಂಡರು ದಲಿತರ ಮನೆಯಲ್ಲಿ ಊಟ, ತಿಂಡಿ ಮಾಡುವ ನೆಪದಲ್ಲಿ ಮತಗಳನ್ನು ಸೆಳೆಯಲು ತಂತ್ರಗಾರಿಕೆಗೆ ನಡೆಸಿದ್ದಾರೆ. ಈ ನಾಟಕ ಬಹಳ ದಿನಗಳ ಕಾಲ ನಡೆಯದು. ಬರುವ ಚುನಾವಣೆಯಲ್ಲಿ ಅಸ್ಪೃಶ್ಯರ ಮತಗಳು ನಿರ್ಣಾಯಕವಾಗಲಿವೆ’ ಎಂದು ಹೇಳಿದರು.

‘2013ರಲ್ಲಿ ಸ್ಥಾಪನೆಯಾಗಿರುವ ಎಪಿಪಿ ಇದೀಗ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸ ತೊಡಗಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರ ಪಡೆ ಕಟ್ಟಿ ಗ್ರಾಮ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡಲಾಗುವುದು. ಎಪಿಪಿ ಗೆಲುವಿಗೆ ಸಿದ್ಧತೆ ನಡೆಸಲಾಗುವುದು’ ಎಂದು ತಿಳಿಸಿದರು. ಎಪಿಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್, ಸೂರ್ಯಕಾಂತ ಜ್ಯೋತಿ, ಮಹಾಂತೇಶಕುಮಾರ ಮಿತ್ರಾ, ಮನೋಜ್‌ರಾಜ ಅತಿವಾಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT