ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

430 ವಿದ್ಯಾರ್ಥಿಗಳಿಗೆ 3 ಶಿಕ್ಷಕರಿಂದ ಪಾಠ!

Last Updated 12 ಜುಲೈ 2017, 6:03 IST
ಅಕ್ಷರ ಗಾತ್ರ

ವಾಡಿ: ಕೊಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೇರಿದಂತೆ ಗಣಿತ, ವಿಜ್ಞಾನ, ಹಿಂದಿ, ಕನ್ನಡ, ದೈಹಿಕ ಶಿಕ್ಷಣ ಹಾಗೂ ಕಂಪ್ಯೂಟರ್ ಶಿಕ್ಷಕ ಸಹಿತ ಒಟ್ಟು ಎಂಟು ಹುದ್ದೆಗಳು ಖಾಲಿ ಇವೆ. ಇದರಿಂದ 430 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮಸುಕಾಗಿದೆ.

ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಶಾಲೆ ಆರಂಭದಿಂದ ಶಿಕ್ಷಕರ ಸಮಸ್ಯೆ ಎದುರಿಸುತ್ತಿದ್ದು, ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗಿದೆ. 8ರಿಂದ 10ನೇ ತರಗತಿಯವರೆಗೆ ಒಟ್ಟು 430 ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಮೂವರು ಶಿಕ್ಷಕರು ಮಾತ್ರ ಪಾಠ ಮಾಡುತ್ತಿದ್ದಾರೆ!

ರಾಂಪೂರಹಳ್ಳಿ, ಶಾಂಪೂರಹಳ್ಳಿ, ತರಕಸ್ ಪೇಟ್, ಹೋತಿನಮಡು, ಸನ್ನತಿ, ಬನ್ನೇಟಿ, ಹುಳಂಡಗೇರಾ, ಮಾರಡಗಿ, ಕನಗನಹಳ್ಳಿ ಸೇರಿದಂತೆ ಹಲವು ತಾಂಡಾಗಳ ವಿದ್ಯಾರ್ಥಿಗಳು ಇಲ್ಲಿಗೆ ಅಭ್ಯಾಸಕ್ಕಾಗಿ ಬರುತ್ತಾರೆ. ಆದರೆ, ತೀವ್ರವಾಗಿ ಕಾಡುತ್ತಿರುವ ಶಿಕ್ಷಕರ ಸಮಸ್ಯೆಯು ಇಲ್ಲಿನ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.

‘ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಷಯವಾರು ಪಾಠ ಮಾಡಲು 11 ಹುದ್ದೆಗಳ ಮಂಜೂರಾತಿಯಿದೆ. ಆದರೆ, 8 ಜನ ಶಿಕ್ಷಕರ ಹುದ್ದೆ ಖಾಲಿ ಇದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳ ಅಭ್ಯಾಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ’ ಎಂದು ಗ್ರಾಮಸ್ಥರಾದ ಅರುಣಕುಮಾರ, ಪ್ರವೀಣಕುಮಾರ ಹಾಗೂ ಅಬ್ಬಾಸಲಿ ಗಂವ್ಹಾರ ಆರೋಪಿಸುತ್ತಾರೆ.

‘ಮಕ್ಕಳ ಕಲಿಕಾ ದೃಷ್ಟಿಯಿಂದ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕು. ಅದರಲ್ಲೂ ಮಕ್ಕಳ ಭವಿಷ್ಯ ನಿರ್ಮಿಸುವ ಪ್ರೌಢಶಿಕ್ಷಣ ಹಂತದಲ್ಲಿ ಕಡ್ಡಾಯವಾಗಿ ವಿಷಯವಾರು ಶಿಕ್ಷಕರು ಬೇಕು ಎಂದು ಹೇಳುವ ಸರ್ಕಾರ, ಹಲವು ವರ್ಷಗಳಿಂದ ನಮ್ಮ ಶಾಲೆಗೆ ಕಾಯಂ ಶಿಕ್ಷಕರ ನೇಮಕಾತಿ ಮಾಡಿಲ್ಲ. ಶಿಕ್ಷಕರಿಲ್ಲದೇ ನಮ್ಮ ಮಕ್ಕಳು ಕಲಿಯುವುದಾದರೂ ಏನೂ?’ ಎಂದು ಪ್ರಶ್ನಿಸುತ್ತಾರೆ ಗ್ರಾಮಸ್ಥರಾದ ಬಸವರೆಡ್ಡಿ ರಾಂಪೂರಹಳ್ಳಿ ಹಾಗೂ ಶಿವು ಕುಲ್ಕುಂದಿ.

‘ಕಳೆದ ಬಾರಿ ಶಿಕ್ಷಕರ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಾಗ ಶಿಕ್ಷಣ ಇಲಾಖೆ ವರ್ಷಾಂತ್ಯದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಕೈತೊಳೆದುಕೊಂಡಿತ್ತು. ಆದರೆ, ಈ ಬಾರಿ ಸಮಸ್ಯೆ ಗಂಭೀರವಾಗಿದೆ. ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳು ಗತಿಸಿದರೂ ಶಿಕ್ಷಕರ ಸಮಸ್ಯೆ ಪರಿಹಾರವಾಗಿಲ್ಲ.

ಶಾಲೆಗೆ ಅಭ್ಯಾಸಕ್ಕಾಗಿ ದಾಖಲಾತಿಗಳು ಹರಿದು ಬರುತ್ತಿವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರು ಇಲ್ಲದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇರುವ ಮೂರು ಜನ ಶಿಕ್ಷಕರು ಬರಿ ಮಕ್ಕಳನ್ನು ನಿಭಾಯಿಸುವಂತಾಗಿದೆ’ ಎನ್ನುತ್ತಾರೆ ಪಾಲಕರು.

‘ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಇನ್ನೂ ಕೂಡ ಪಠ್ಯಪುಸ್ತಕ ವಿತರಿಸಿಲ್ಲ. ಪಠ್ಯಪುಸ್ತಕ ಇಲ್ಲದೇ ನಮ್ಮ ಮಕ್ಕಳು ಏನು ಕಲಿಯಬೇಕು?’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಬಿಸಿಯೂಟ ಕಾಣದ ವಿದ್ಯಾರ್ಥಿಗಳು: ಶಾಲೆ ಆರಂಭದಿಂದ ವಿದ್ಯಾರ್ಥಿಗಳು ಬಿಸಿಯೂಟ ಭಾಗ್ಯದಿಂದ ವಂಚಿತರಾಗಿದ್ದಾರೆ. ಬಹುತೇಕ ಬಡ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಇಲ್ಲಿ ಬಿಸಿಯೂಟ ಪೂರೈಕೆಯಾಗದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಆಹಾರಧಾನ್ಯ ಪೂರೈಕೆಯಾಗದ ಕಾರಣ ಬಿಸಿಯೂಟ ನೀಡಿಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪ್ರಭಾರಿ ಮುಖ್ಯಶಿಕ್ಷಕ ಬಸ್ಸಪ್ಪ ಮುಗಳಖೋಡ ತಿಳಿಸಿದರು.

‘ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನಮ್ಮೂರು ಶಾಲೆಗೆ ವಿಷಯವಾರು ಶಿಕ್ಷಕರು ಸೇರಿದಂತೆ ಒಟ್ಟು16 ಶಿಕ್ಷಕರ ಹುದ್ದೆ ಮಂಜೂರು ಮಾಡಿ, ತಕ್ಷಣವೇ ಕಾಯಂ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಸುತ್ತಲಿನ ಗ್ರಾಮಸ್ಥರನ್ನು ಸಂಘಟಿಸಿ ಶಾಲೆ ಬೀಗ ಹಾಕಿ ಹೋರಾಟ ನಡೆಸಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

* * 

ಪ್ರತಿವರ್ಷ ಪ್ರೌಢಶಾಲೆಗೆ ಶಿಕ್ಷಕರ ಸಮಸ್ಯೆ ಕಾಡುತ್ತಿದೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಿಕ್ಷಣ ಇಲಾಖೆ ತಕ್ಷಣ ಅಗತ್ಯ ಶಿಕ್ಷಕರನ್ನು ನೇಮಿಸಬೇಕು.
ರಾಚಯ್ಯ ಸ್ವಾಮಿ ನಪೂರ
ಮುಖಂಡ, ಕೊಲ್ಲೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT