ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಪದ ಕಲ್ಲಿನಲ್ಲಿ ಬೆಳಗಿದ ಬದುಕು

Last Updated 12 ಜುಲೈ 2017, 6:44 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಳಪದ ಕಲ್ಲಿಗೆ ಬಗೆ ಬಗೆಯ ದೇವರ ರೂಪಗಳನ್ನು ಕೊಟ್ಟು ಬದುಕು ಕಟ್ಟಿಕೊಂಡ ಕೃಷ್ಣ  ಎಂಬ ಶಿಲ್ಪಕಲೆಗಾರ ಇದ್ದಾರೆ. ಶಿಲ್ಪಕಲಾ ಸೌಂದರ್ಯಕ್ಕೆ ಮತ್ತು ಮರದ ಸೂಕ್ಷ್ಮ ಕುಸುರಿಯ ಕೆತ್ತನೆಯ ಕೆಲಸಕ್ಕೆ ವಿಶ್ವಕರ್ಮರು ನಾಡಿಗೆ ಕೊಡುಗೆ ನೀಡಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ವಿಗ್ರಹ ಕೆತ್ತುವುದು, ಕೃಷಿ ಉಪಕರಣ ಹಾಗೂ ಮರದ ತೇರುಗಳನ್ನು ತಯಾರು ಮಾಡುವುದರಲ್ಲಿ ಸಿದ್ಧ ಹಸ್ತರು.

ಪಟ್ಟಣದ ನಿವಾಸಿ ಕೃಷ್ಣ ಅವರದ್ದು 12 ಜನ ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬ. ಕೃಷ್ಣ ಅವರು ವಿಗ್ರಹಗಳನ್ನು ಮಾಡಲು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿಲ್ಲ. ಕೇವಲ ಭಾವಚಿತ್ರ ಆಧಾರದ ಮೇಲೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ವಿಗ್ರಹಗಳ ತಯಾರಿಕೆಗೆ  ಸ್ಥಳೀಯವಾಗಿ ರೈತರ ಜಮೀನಿನಲ್ಲಿ ದೊರೆಯುವ ಬಳಪದ ಕಲ್ಲುಗಳನ್ನು ಸಂಗ್ರಹಿಸುತ್ತಾರೆ.

ಈ ಬಳಪದ ಕಲ್ಲುಗಳು ಹೋಬಳಿಯ ಬೇಡಿಗನಹಳ್ಳಿ, ದೇವರಹಳ್ಳಿ, ಕೆ.ಕಾಳೇನಹಳ್ಳಿ, ಬೆಕ್ಕ, ಸುಂಡಹಳ್ಳಿ, ಹೊಸಹಳ್ಳಿ, ಮತ್ತು ಚಲ್ಯಾ ಗ್ರಾಮಗಳ ಜಮೀನಿನಲ್ಲಿ ದೊರೆಯುತ್ತದೆ.
ಈ ಕಲ್ಲಿನಿಂದ ಅನೇಕ ಬಗೆಯ ದೇವರುಗಳ ವಿಗ್ರಹಗಳನ್ನು ಸುಂದರವಾಗಿ, ಕಲಾತ್ಮಕವಾಗಿ ಕೆತ್ತನೆ ಮಾಡುತ್ತಾರೆ. ಬಹು ಬೇಡಿಕೆಯ ಈಶ್ವರ, ಲಿಂಗ, ಕುದುರೆ, ಗಣಪತಿ, ಬುದ್ಧ, ಮಹಾವೀರ ತೀರ್ಥಂಕರ, ಬಾಹುಬಲಿ, ಬಸವ, ಆಂಜನೇಯ, ಆನೆ, ಗ್ರಾಮ ದೇವತೆ ಮಾರಮ್ಮ, ಚಿಕ್ಕ ಮತ್ತು ದೊಡ್ಡ ದೀಪಗಳು, ಪ್ರಾಣಿ, ಪಕ್ಷಿಗಳು, ಮನೆಗಳಲ್ಲಿ ಅಲಂಕಾರಿಕವಾಗಿ ತೂಗು ಹಾಕುವ ಬಗೆ ಬಗೆಯ ವಸ್ತುಗಳನ್ನು ತಯಾರಿಸುತ್ತಾರೆ.

ಅಲ್ಲದೇ ನಿತ್ಯ ಮನೆ ಬಳಕೆಯ ಕಲ್ಲಿನ ದೋಸೆ ಹಂಚು, ಪಡ್ಡಿನ ಹಂಚು, ಕಲ್ಲಿನ ಕುಟ್ಟಣಿಗಳು, ಸಣ್ಣ ರುಬ್ಬುವ ಒಳಕಲ್ಲು, ಬೀಸುವ ಕಲ್ಲುಗಳನ್ನು ತಯಾರಿಸುತ್ತಾರೆ. ಬಯಲಿನಲ್ಲಿಯೇ ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4ರಿಂದ 8ರವರೆಗೆ ಕೈಗಳ ರಕ್ಷಣೆಗೆ ಬಟ್ಟೆ ಸುತ್ತಿಕೊಂಡು  ಕೆತ್ತನೆ ಕಾರ್ಯದಲ್ಲಿ ತೊಡಗುತ್ತಾರೆ.  

ಇವರು ತಯಾರಿಸಿದ ದೇವರ ವಿಗ್ರಹಗಳು, ಅಲಂಕಾರಿಕ ವಸ್ತುಗಳು ಮತ್ತು ಗೃಹ ಬಳಕೆಯ ವಸ್ತುಗಳನ್ನು ತನ್ನ ತಂದೆ ಗೋವಿಂದಯ್ಯ, ತಾಯಿ ಜಯಮ್ಮ , ಸಹೋದರಿ ರಾಜೇಶ್ವರಿ ವ್ಯಾಪಾರ ಮಾಡುತ್ತಾರೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರು ವಿಗ್ರಹ, ಅಲಂಕಾರಿಕ ವಸ್ತು ತೆಗೆದುಕೊಂಡು ಹೋಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT