ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟವೋ.. ದಾಖಲಾತಿಯೋ?

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಚರ್ಚೆ
Last Updated 12 ಜುಲೈ 2017, 6:52 IST
ಅಕ್ಷರ ಗಾತ್ರ

ಬಳ್ಳಾರಿ: ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಮುಖ್ಯವೋ ಅಥವಾ ಗುಣಮಟ್ಟದ ಕೊರತೆ ಇದ್ದರೂ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು ಮುಖ್ಯವೋ ಎಂಬ ಕುರಿತು ನಗರದ ವಿಜಯನಗರ ಶ್ರೀಕೃಷ್ಣದೇವ ರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು.

ಪದವಿ ಹಂತದಲ್ಲಿ ಸಾರ್ವಜನಿಕ ಆಡಳಿತ ಅಧ್ಯಯನವನ್ನು ಕಡ್ಡಾಯ ಗೊಳಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಯ ಪ್ರಸ್ತಾವನೆ ಉಲ್ಲೇಖವಾದಾಗ ಈ ಚರ್ಚೆ ಆರಂಭವಾಯಿತು.

‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಹಲವು ಕಾಲೇಜುಗಳಲ್ಲಿ ಅಗತ್ಯ ಸಂಖ್ಯೆಯ ಬೋಧಕರಿಲ್ಲ. ಮೂಲ ಸೌಕರ್ಯಗಳಿಲ್ಲ. ವಿಜ್ಞಾನ ಪ್ರಯೋಗಾಲಯಗಳಿಲ್ಲ. ಇಂಥ ಸಂದರ್ಭದಲ್ಲಿ ಹೊಸ ವಿಷಯಗಳನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಗುಣಮಟ್ಟದ ಶಿಕ್ಷಣ ನೀಡದ ಕಾಲೇಜುಗಳನ್ನು ಮುಚ್ಚಿದರೆ ಇನ್ನೂ ಒಳ್ಳೆಯದು’ ಎಂದು ಪರಿಷತ್‌ ಸದಸ್ಯ ಕೆ.ಎಚ್‌.ಶಿವಪ್ರಸಾದ್‌ ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನದ ಪಾಲನ್ನೇ ನೆಚ್ಚಿ ಕೊಂಡು ಹಲವು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ವಿದ್ಯಾರ್ಥಿಗಳು ತರಗತಿಗಳಿಗೆ ಬರುವುದೇ ಇಲ್ಲ. ಬನ್ನಿ ಎಂದು ಕಾಲೇಜುಗಳು ಕರೆಯುವುದೂ ಇಲ್ಲ’ ಎಂದು ಆಕ್ಷೇಪಿಸಿದರು.

ದಾಖಲಾತಿ ಅಗತ್ಯ:  ಅವರ ಮಾತನ್ನೂ ಒಪ್ಪಿದರೂ, ತಮ್ಮದೇ ವಾದ ಮಂಡಿಸಿದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌, ‘ಗುಣಮಟ್ಟ ಮತ್ತು ಮೂಲಸೌಕರ್ಯದ ಕೊರತೆಯ ಹೆಸರಿನಲ್ಲಿ ಕಾಲೇಜುಗಳನ್ನು ಮುಚ್ಚಿಬಿಟ್ಟರೆ ಬಳ್ಳಾರಿಯಂಥ ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಸಂಖ್ಯೆ ಇನ್ನಷ್ಟು ಕುಸಿಯುತ್ತದೆ’ ಎಂದು ಪ್ರತಿಪಾದಿಸಿದರು.

‘ಕಾಲೇಜುಗಳು ಸರಿ ಇಲ್ಲ. ಹೀಗಾಗಿ ಹೊಸ ಕಾಲೇಜುಗಳನ್ನು ಆರಂಭಿಸ ಬಾರದು ಎಂಬ ವಾದವೂ ಸರಿಯಲ್ಲ. ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸ ಬೇಕಾದ ಕಾಲೇಜು ಅಭಿವೃದ್ಧಿ ಸಮಿತಿ ಗಳು ಏನು ಮಾಡುತ್ತಿವೆ’ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದರು.

‘ಪ್ರತಿ ಕಾಲೇಜಿನ ವಸ್ತುಸ್ಥಿತಿ ಕುರಿತು ಸಮಿತಿಗಳಿಂದ ಅಧ್ಯಯನ ವರದಿ ತರಿಸಿಕೊಂಡು, ಅಗತ್ಯಕ್ಕೆ ಅನುಗುಣ ವಾಗಿ ಅನುದಾನ ಕೋರಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಬೇಕು. ಅನು ದಾನ ದೊರೆತರೆ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವುದು ಕಷ್ಟವೇನಲ್ಲ’ ಎಂದು ಅಭಿಪ್ರಾಯಪಟ್ಟರು.

ಸಂಚಾಲಕರ ನೇಮಕ: ಪೂರ್ಣಾವಧಿ ಸಿಬ್ಬಂದಿ ಇಲ್ಲದ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ಪೂರ್ಣಾವಧಿ ಸಂಚಾಲಕರನ್ನಾಗಿ ನೇಮಿಸಬೇಕು. ಆಯಾ ವಿಭಾಗಕ್ಕೆ ಸಂಬಂಧಿಸಿದವರನ್ನೇ ನೇಮಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪ್ರೊ.ಕೆ.ವಿ.ಪ್ರಸಾದ್ ಮತ್ತು ಶಿವಪ್ರಸಾದ್‌ ಆಗ್ರಹಿಸಿದರು. ಆಡಿಟ್‌ ಅಭಿಪ್ರಾಯಕ್ಕೆ ಒಳಪಟ್ಟು ಕೂಡಲೇ ನೇಮಕಾತಿ ಆದೇಶ ನೀಡುವು ದಾಗಿ ಕುಲಸಚಿವ ಪ್ರೊ.ಟಿ.ಎಂ.ಭಾಸ್ಕರ್‌ ಹೇಳಿದರು.

***

4 ಸ್ನಾತಕೋತ್ತರ ಕೋರ್ಸ್
ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್‌ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಶಿಕ್ಷಣ, ಸಮಾಜಶಾಸ್ತ್ರ ಮತ್ತು ಸಮೂಹ ಮಾಧ್ಯಮ ವಿಷಯಗಳ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಪರಿಷತ್‌ ಅನುಮೋದಿಸಿತು.

ಅಲ್ಲಿಯೇ ಭೌತಶಾಸ್ತ್ರ ಸ್ನಾತಕೋತ್ತರ ಆರಂಭಿಸಲು ಅನುಮತಿ ನೀಡುವ ಮುನ್ನ ಸಮಿತಿ ಭೇಟಿ ನೀಡಿ ವರದಿ ಸಲ್ಲಿಸಲಿ ಎಂದು ಕುಲಪತಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT