ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅಲಕ್ಷಿಸಿದರೆ ಶಿಸ್ತುಕ್ರಮಕ್ಕೆ ಶಿಫಾರಸು

Last Updated 12 ಜುಲೈ 2017, 9:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲಾಡಳಿತ ಮತ್ತು ಪ್ರತಿಯೊಂದು ಇಲಾಖೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಆಡಳಿತ ನಡೆಯಬೇಕು. ಉದ್ದೇಶಪೂರ್ವಕವಾಗಿ ಕನ್ನಡ ಕಡೆಗಣಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಒಕ್ಕೂಟ ವ್ಯವಸ್ಥೆಯಲ್ಲಿ ನೆಲದ ಭಾಷೆ ಗೌರವಿಸದಿರುವುದು ದೊಡ್ಡ ಅಪಾಯ. ಆದ್ದರಿಂದ ಕನ್ನಡ ಕಲಿಯದೆ ದರ್ಪ ತೋರುವ ಅಧಿಕಾರಿಗಳನ್ನು ವಾಪಸ್ ಕಳುಹಿಸುವ ಕೆಲಸವಾಗಬೇಕು.

ಹೊಸದಾಗಿ ನೇಮಕವಾಗುವ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ತರಬೇತಿ ಏರ್ಪಡಿಸುವ ಕೆಲಸವಾಗಬೇಕು’ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಸೂಚನೆ ನೀಡಿದರು.

‘ಜನಸಾಮಾನ್ಯರು ಕಚೇರಿಗೆ ಬಂದಾಗ ಅಧಿಕಾರಿಗಳು ಅವರೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಎಲ್ಲಾ ಬ್ಯಾಂಕ್‌ ಶಾಖೆಗಳಲ್ಲಿ ಚೆಕ್‌, ಚಲನ್‌, ಡಿ.ಡಿಗಳನ್ನು ಕನ್ನಡದಲ್ಲಿಯೇ ಭರ್ತಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಎಡೆ ಮಾಡಿಕೊಡದ ರೀತಿ ಆಡಳಿತ ನಡೆಯಬೇಕು. ಗ್ರಾಮೀಣ ಪ್ರದೇಶದ ಜನರೊಂದಿಗೆ ಅಧಿಕಾರಿಗಳು ಭಾಷೆ ಸೌಹಾರ್ದತೆಯ ದೃಷ್ಟಿಯಿಂದ ಸೌಜನ್ಯದಿಂದ ವರ್ತಿಸಬೇಕು’ ಎಂದು ತಿಳಿಸಿದರು.

‘ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮಳಿಗೆ, ಉದ್ಯಮದ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಫಲಕದಲ್ಲಿ ಕನ್ನಡಕ್ಕೆ ಶೇ60ರಷ್ಟು ಜಾಗ ಮೀಸಲಾಗಿಡಬೇಕು. ನಾಮಫಲಕ ಬದಲಾಯಿಸಲು ಒಪ್ಪದೆ ಉದ್ಧಟತನ ತೋರುವವರ ಉದ್ಯಮ ಪರವಾನಗಿ ನವೀಕರಿಸಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರು ನೇಮಕಗೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ ಪರೀಕ್ಷೆಗಳ ಕುರಿತು ತರಬೇತಿ ನೀಡುವ ಕೆಲಸವಾಗಬೇಕು. ತೆಲುಗು ಪ್ರಭಾವ ದಟ್ಟವಾಗಿರುವ ಭಾಗಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಬೇಕು. ಹೆಚ್ಚೆಚ್ಚು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ’ ಎಂದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಕನ್ನಡ ಜಾಗೃತಿ ಸಭೆ ನಡೆಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ‘ನಿಯಮಿತವಾಗಿ, ಕಡ್ಡಾಯವಾಗಿ ಸಭೆಗಳನ್ನು ನಡೆಸಬೇಕು. ಸಭೆಯ ನಡಾವಳಿ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಪ್ರಾಧಿಕಾರಕ್ಕೆ ಕಳುಹಿಸಿ ಕೊಡಬೇಕು’ ಎಂದು ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಉಪ ವಿಭಾಗಾಧಿಕಾರಿ ಶಿವಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್, ಸದಸ್ಯರಾದ ಪ್ರಭಾಕರ್ ಪಟೇಲ್, ಗಿರೀಶ್‌ ಪಟೇಲ್‌, ಪುಟ್ಟಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಜಾಲತಾಣದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ
ಜಿಲ್ಲಾಡಳಿತ, ನಗರಸಭೆ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯ ಜಾಲತಾಣಗಳಲ್ಲಿ ಕನ್ನಡ ಕಡೆಗಣಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ‘15 ದಿನಗಳ ಒಳಗೆ ಪ್ರತಿಯೊಂದು ಜಾಲತಾಣದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇತರೆ ಭಾಷೆಗಳ ಬಳಕೆಗೆ ಆಯ್ಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ, ನಗರಸಭೆ ಆಯುಕ್ತ ಉಮಾಕಾಂತ್, ಎಸ್ಪಿ ಕಾರ್ತಿಕ್‌ ರೆಡ್ಡಿ ಅವರಿಗೆ ಸೂಚನೆ ನೀಡಿದರು.

ಬ್ಯಾಂಕ್‌ ವ್ಯವಹಾರ ಕನ್ನಡಮಯವಾಗಲಿ
‘ಇವತ್ತು ಬ್ಯಾಂಕ್‌ ಅಧಿಕಾರಿಗಳು ಕಣ್ಮುಚ್ಚಿಕೊಂಡು ಗ್ರಾಹಕರ ಮೇಲೆ ಅನ್ಯಭಾಷೆಗಳನ್ನು ಹೇರುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ವಿರೋಧದ ನಡುವೆಯೂ ಅನ್ಯಭಾಷೆ ಹೇರಿಕೆ ಸಲ್ಲದು.

ಆದ್ದರಿಂದ ಪ್ರತಿಯೊಂದು ಬ್ಯಾಂಕ್‌ನ ಶಾಖೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹಾರ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷರು ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಶಂಕರ್ ನಾರಾಯಣ್ ಭಟ್ ಅವರಿಗೆ ಸಲಹೆ ನೀಡಿದರು.

ಪತ್ರಕ್ಕೆ ಉತ್ತರಿಸದವರಿಗೆ ತರಾಟೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬರೆದ ಪತ್ರಕ್ಕೆ ಉತ್ತರಿಸದೆ ನಿರ್ಲಕ್ಷ್ಯ ತೋರಿದ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶ್ವತ್ಥ್‌ರೆಡ್ಡಿ ಅವರನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಎಲ್ಲಾ ತಾಲ್ಲೂಕುಗಳ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಪ್ರಾಧಿಕಾರದ ಪತ್ರಕ್ಕೆ 8–10 ದಿನಗಳಲ್ಲಿ ಉತ್ತರಿಸದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅಶ್ವತ್ಥ್‌ರೆಡ್ಡಿ ಅವರನ್ನು ಕುರಿತು, ‘ತಪ್ಪಾಗಿದೆ ಎನ್ನುವುದು ಉತ್ತರವಲ್ಲ. ಬೇಜವಾಬ್ದಾರಿತನ. ಏಕೆ ಸರ್ಕಾರಿ ಶಾಲೆಗಳು ಕದ ಮುಚ್ಚುತ್ತಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಶೀಘ್ರದಲ್ಲಿಯೇ ಪ್ರಾಧಿಕಾರಕ್ಕೆ ಶಾಲಾ ಸಬಲೀಕರಣ ಸಮಿತಿ ಸಭೆ ಕುರಿತು ಉತ್ತರಿಸಿ’ ಎಂದು ಸೂಚಿಸಿದರು.

ಇಂಗ್ಲಿಷ್‌ ಶಾಲೆಗಳ ಮೇಲೆ ನೀಗಾ ಇಡಿ
‘ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಬೇಕು. ಆದರೆ ಕೆಲ ಶಾಲೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಆದ್ದರಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ 16 ಅಂಶಗಳನ್ನು ಪಾಲಿಸಬೇಕು.

ಕನ್ನಡ ಭಾಷೆಯ ಬಗ್ಗೆ ಗೌರವವಿಲ್ಲದೆ ನಡೆದುಕೊಳ್ಳುವ ಯಾವುದೇ ಶಾಲೆಗೆ ಮಾನ್ಯತೆ ನವೀಕರಿಸದೆ ರದ್ದುಪಡಿಸಬೇಕು. ಶಿಕ್ಷಣ ಇಲಾಖೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ, ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಪಾಲಿಸಿದ್ದರೆ ಇವತ್ತು ಕನ್ನಡ ಮತ್ತು ಸರ್ಕಾರಿ ಶಾಲೆಗಳಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ’ ಎಂದು ಡಿಡಿಪಿಐ ಅಶ್ವತ್ಥ್‌ರೆಡ್ಡಿ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದರು.

ತಪ್ಪಿಸಿಕೊಂಡವರಿಗೆ ನೋಟಿಸ್‌ ನೀಡಿ
ಸಭೆಗೆ ಕೆಲ ಇಲಾಖೆಗಳ ಹಿರಿಯ ಅಧಿಕಾರಿಗಳು ಗೈರಾಗಿದ್ದು ಗಮನಕ್ಕೆ ಬರುತ್ತಿದ್ದಂತೆ ಗರಂ ಆದ ಸಿದ್ದರಾಮಯ್ಯ ಅವರು ಸಭೆಗೆ ಬಂದಿದ್ದ ಕೆಳ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ತುರ್ತು ಕೆಲಸವಿದ್ದರೆ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು.

ಅದನ್ನು ಬಿಟ್ಟು ಏಕಾಏಕಿ ಯಾರನ್ನೋ ಸಭೆಗೆ ಕಳುಹಿಸಿದರೆ ಸಹಿಸಲಾಗದು. ಪ್ರಾಧಿಕಾರ ಕೇಳುವ ಪ್ರಶ್ನೆಗೆ ಜವಾಬ್ದಾರಿಯಿಂದ ಉತ್ತರ ನೀಡುವ ಉತ್ತರದಾಯಿತ್ವವುಳ್ಳ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಿರಬೇಕು. ಅನುಮತಿ ಪಡೆಯದೆ ಈ ಸಭೆಗೆ ಗೈರು ಹಾಜರಾದವರಿಗೆ ನೋಟಿಸ್ ನೀಡಿ’ ಎಂದು ಜಿಲ್ಲಾಧಿಕಾರಿ ಅವರಿಗೆ ಹೇಳಿದರು.

* * 

ಅನ್ಯ ಭಾಷಿಕ ಅಧಿಕಾರಿಗಳು ರಾಜ್ಯದ ಸರ್ಕಾರಿ ಸೇವೆಗೆ ಸೇರಿದ ಆರು ತಿಂಗಳ ಒಳಗೆ ಕಡ್ಡಾಯವಾಗಿ ಕನ್ನಡ ಕಲಿಯಲೇ ಬೇಕು. ಕನ್ನಡದಲ್ಲೇ ವ್ಯವಹರಿಸಬೇಕು.
ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT